ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಶ್ವೇತಭವನ ಪತ್ರಕರ್ತರ ಭೋಜನಕೂಟದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಭದ್ರತಾ ಸಿಬ್ಬಂದಿ ತಕ್ಷಣವೇ ದಾಳಿಕೋರನನ್ನು ಬಂಧಿಸಿದ್ದು, ಟ್ರಂಪ್ ಸೇರಿದಂತೆ ಎಲ್ಲಾ ಗಣ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದ ಶ್ವೇತಭವನ ಪತ್ರಕರ್ತರ ಭೋಜನಕೂಟಕ್ಕೆ ಏಕಾಏಕಿ ನುಗ್ಗಿದ ಶಸ್ತ್ರಧಾರಿ ವ್ಯಕ್ತಿಯೊಬ್ಬ ಮನಬಂದಂತೆ ಹಲವು ಸುತ್ತು ಗುಂಡು ಹಾರಿಸಿದ ಘಟನೆ ಅಮೆರಿಕ ಕಾಲಮಾನ ಶನಿವಾರ ರಾತ್ರಿ ನಡೆದಿದೆ. ಈ ವೇಳೆ ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ.

Add Asianetnews Kannada as a Preferred SourcegooglePreferred

ವಾಷಿಂಗ್ಟನ್‌ನ ಪ್ರತಿಷ್ಠಿತ ಹಿಲ್ಟನ್‌ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಸ್ವಲ್ಪ ಹೊತ್ತಿನಲ್ಲೇ ದಾಳಿಕೋರ ಕೋಲ್ಸ್ ಥಾಮಸ್‌ ಅಲೆನ್ (31) ಎಂಬಾತನನ್ನು ಬಂಧಿಸಲಾಗಿದೆ. ಆತ ಶಿಕ್ಷಕ ವೃತ್ತಿ ಮಾಡುತ್ತಿದ್ದ ಹಾಗೂ ಟ್ರಂಪ್‌ ವಿರೋಧಿ ಡೆಮಾಕ್ರಟಿಕ್‌ ಪಕ್ಷದ ಬೆಂಬಲಿಗನಾಗಿದ್ದ ಎಂದು ಗೊತ್ತಾಗಿದೆ. ಈ ಘಟನೆಯು ಅಧ್ಯಕ್ಷರ ಭದ್ರತೆಯ ಬಗ್ಗೆ ಕಳವಳ ಉದ್ಭವಿಸುವಂತೆ ಮಾಡಿದೆ. ದಾಳಿಕೋರ ಅಲ್ಲಿ ಏಕೆ ಬಂದಿದ್ದ? ಆತ ನಿಜವಾಗಿಯೂ ಟ್ರಂಪ್ ಹತ್ಯೆ ಉದ್ದೇಶ ಹೊಂದಿದ್ದನೇ ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ. ಆದಾಗ್ಯೂ ಟ್ರಂಪ್‌ ಈ ರೀತಿಯ ದಾಳಿಯಲ್ಲಿ ಬಚಾವಾಗಿದ್ದು 2 ವರ್ಷದಲ್ಲಿ 3ನೇ ಸಲವಾಗಿದೆ.

ದಾಳಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಗಣ್ಯರು ಆಘಾತ ವ್ಯಕ್ತಪಡಿಸಿದ್ದು, ‘ಪ್ರಜಾಸತ್ತಾತ್ಮಕ ದೇಶಗಳಲ್ಲಿ ಹಿಂಸೆಗೆ ಜಾಗವಿಲ್ಲ’ ಎಂದಿದ್ದಾರೆ.

ಆಗಿದ್ದೇನು?

ಪ್ರತಿ ವರ್ಷದಂತೆ ಶ್ವೇತಭವನದ ವರದಿಗಾರರ ಸಂಘ ಹಿಲ್ಟನ್‌ ಹೋಟೆಲ್‌ನಲ್ಲಿ ಭೋಜನ ಕೂಟ ಆಯೋಜಿಸಿದ್ದು, ಇದರಲ್ಲಿ ಮೊದಲ ಬಾರಿ ಅಧ್ಯಕ್ಷ ಟ್ರಂಪ್‌ ಭಾಗವಹಿಸಿದ್ದರು. ಜತೆಗೆ ಅವರ ಪತ್ನಿ ಮೆಲಾನಿಯಾ, ಉಪಾಧ್ಯಕ್ಷ ಜೆಡಿ ವ್ಯಾನ್ಸ್‌, ಉಷಾ ವ್ಯಾನ್ಸ್‌, ರಾಜಕೀಯ ನಾಯಕರು, ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್‌ ಲೆವಿಟ್‌, ಶ್ವೇತಭವನದ ವರದಿಗಾರರ ಸಂಘದ ಅಧ್ಯಕ್ಷೆ, ವೈಟ್‌ಹೌಸ್‌ ಸಂಬಂಧಿತ ಸುದ್ದಿಗಳನ್ನು ವರದಿ ಮಾಡುವ ಪತ್ರಕರ್ತರು ಸೇರಿದಂತೆ ಸಾವಿರಾರು ಜನ ಉಪಸ್ಥಿತರಿದ್ದರು.

ಕಾರ್ಯಕ್ರಮ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಇದ್ದಕ್ಕಿದ್ದಂತೆ ಹಲವು ಸುತ್ತು ಗುಂಡು ಹಾರಿದ ಸದ್ದು ಕೇಳಿಬಂದಿದ್ದು, ಆತಂಕ ಸೃಷ್ಟಿಯಾಯಿತು. ಹೋಟೆಲ್‌ನಲ್ಲಿ ಮೊದಲೇ ರೂಂ ಬುಕ್‌ ಮಾಡಿಕೊಂಡಿದ್ದ ದಾಳಿಕೋರ, ಟ್ರಂಪ್ ಇದ್ದ ಸಭಾಂಗಣದ ಹೊರಗೆ ಬಂದು ಗುಂಡು ಹಾರಿಸಿ ನುಗ್ಗಲು ಯತ್ನಿಸಿದ. ಆಗ ಚೆಕ್‌ಪಾಯಿಂಟ್‌ನಲ್ಲೇ ಆತನನ್ನು ಸಿಬ್ಬಂದಿ ತಡೆದು ಬಂಧಿಸಿದರು.

ದಾಳಿಯ ಬೆನ್ನಲ್ಲೇ ಭದ್ರತಾ ಸಿಬ್ಬಂದಿ ಸೂಚನೆ ಮೇರೆಗೆ ಟ್ರಂಪ್ ಸೇರಿ ಗಣ್ಯರೆಲ್ಲ ಟೇಬಲ್‌ ಕೆಳಗೆ ಅವಿತರು. ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಟ್ರಂಪ್‌ಗೆ ಅಡ್ಡಲಾಗಿ ನಿಂತು ರಕ್ಷಣೆ ನೀಡಿ, ವೇದಿಕೆ ಮೇಲಿದ್ದವರನ್ನೆಲ್ಲಾ ಸುರಕ್ಷಿತವಾಗಿ ಅಲ್ಲಿಂದ ಹೊರಗೆ ಕರೆದೊಯ್ದರು. ಉಳಿದ ಪತ್ರಕರ್ತರೆಲ್ಲಾ ಟೇಬಲ್‌ಗಳ ಕೆಳಗೆ ಅವಿತು ರಕ್ಷಣೆ ಪಡೆದುಕೊಂಡರು.

ಬಂಧನ ಘೋಷಿಸಿದ ಟ್ರಂಪ್‌

ಘಟನೆ ನಡೆದ ಸ್ವಲ್ಪ ಹೊತ್ತಿನ ಬಳಿಕ ದಾಳಿಕೋರನನ್ನು ಬಂಧಿಸಲಾಗಿದೆ ಎಂದು ಟ್ರಂಪ್‌ ಮಾಹಿತಿ ನೀಡಿದರು. ಜತೆಗೆ ಅವನ ಫೋಟೋಗಳನ್ನೂ ಟ್ರುತ್‌ನಲ್ಲಿ ಹಂಚಿಕೊಂಡರು.

ಅರ್ಧ ಗಂಟೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಟ್ರಂಪ್‌, ‘ಇದ್ದಕ್ಕಿದ್ದಂತೆ ಏನೋ ಶಬ್ದ ಕೇಳಿತು. ಯಾವುದೋ ತಟ್ಟೆ ಬಿದ್ದಿರಬಹುದು ಎಂದುಕೊಳ್ಳುವಷ್ಟರಲ್ಲಿ ದೂರದಲ್ಲಿ ಹಲವು ಬಾರಿ ಆ ಸದ್ದು ಕೇಳಿಸಿತು. ದಾಳಿಕೋರ ಕಾರ್ಯಕ್ರಮವನ್ನು ತಲುಪುವ ಮೊದಲೇ ಆತನನ್ನು ಬಂಧಿಸಲಾಗಿದೆ. ಆತ ಒಬ್ಬನೇ ಬಂದಂತಿತ್ತು’ ಎಂದರು.

ಜತೆಗೆ, ಓರ್ವ ಅಧಿಕಾರಿಗೆ ಗುಂಡು ತಗುಲಿತಾದರೂ ಅವರು ಗುಂಡು ನಿರೋಧಕ (ಬುಲೆಟ್‌ ಪ್ರೂಫ್‌) ಜ್ಯಾಕೆಟ್‌ ತೊಟ್ಟಿದ್ದರಿಂದ ಪ್ರಾಣಾಪಾಯವಾಗಿಲ್ಲ ಎಂದು ತಿಳಿಸಿದರು.

ಇದೇ ವೇಳೆ, ‘ನಾನು ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಮೊದಲಲ್ಲ’ ಎಂದೂ ಹೇಳಿದ ಅವರು, ‘ನಾನು ಈ ದಾಳಿಯ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಇಂತಹ ಸಂದರ್ಭಗಳನ್ನು ನಿಭಾಯಿಸಬಲ್ಲೆ ಎಂದು ನಾನು ಭಾವಿಸುತ್ತೇನೆ. (ದಾಳಿಕೋರನನ್ನು ಹಿಡಿದು) ಜಾರಿ ಅಧಿಕಾರಿಗಳು ಒಳ್ಳೆ ಕೆಲಸ ಮಾಡಿದರು. ಅವರು ಒಪ್ಪಿದರೆ ಕಾರ್ಯಕ್ರಮ ಮುಂದುವರೆಯುತ್ತದೆ’ ಎಂದರು.

ಒಳಬಂದದ್ದು ಹೇಗೆ?

ಪತ್ರಕರ್ತರ ಈ ಕಾರ್ಯಕ್ರಮ ನಡೆಯುವ ಹಿಲ್ಟನ್‌ ಹೋಟೆಲ್‌ಗೆ ಎಂದಿನಂತೆ ಜನ ಬರಲು ಅವಕಾಶವಿದ್ದು, ಭೋಜನ ಕೂಟ ಆಯೋಜಿಸಲಾಗುವ ಕೋಣೆಗೆ ಮಾತ್ರ ವಿಶೇಷ ಭದ್ರತೆಯನ್ನು ಒದಗಿಸಲಾಗಿರುತ್ತದೆ. ಹೋಟೆಲ್‌ಗೆ ಬರುವವರನ್ನೆಲ್ಲ ತಪಾಸಣೆ ಮಾಡಲ್ಲ. ಇದನ್ನೇ ಅವಕಾಶವಾಗಿ ಕಂಡುಕೊಂಡ ದಾಳಿಕೋರ ಕೋಲ್ಸ್ ಥಾಮಸ್‌ ಅಲೆನ್ (31), ಹೋಟೆಲ್‌ಗೆ ಮೊದಲೇ ಬಂದು ರೂಂ ಬುಕ್ ಮಾಡಿಕೊಂಡಿದ್ದ ಹಾಗೂ ಶಸ್ತ್ರಾಸ್ತ್ರ ತಂದಿಟ್ಟುಕೊಂಡಿದ್ದ.

ಟ್ರಂಪ್‌ ಔತಣ ಆರಂಭ ಆಗುತ್ತಿದ್ದಂತೆಯೇ ಲಾಬಿಯಲ್ಲಿ ಗನ್‌ ಹಾಗೂ ಚಾಕು ಹಿಡಿದು ಟ್ರಂಪ್‌ ಇದ್ದ ಸಭಾಂಗಣದತ್ತ ನಡೆದ. ಪ್ರವೇಶ ದ್ವಾರದ ಚೆಕ್‌ ಪಾಯಿಂಟ್‌ನಲ್ಲಿದ್ದ ಭದ್ರತಾ ಸಿಬ್ಬಂದಿಯ ಕಣ್ಣುತಪ್ಪಿಸಿ ಒಳಗೆ ನುಗ್ಗಿದಾಗ ಆತನ ಮೇಲೆ ಹಲವು ಸುತ್ತು ಗುಂಡುಗಳನ್ನು ಹಾರಿಸಲಾಯಿತು. ಆದರೆ ಅದರಿಂದ ಯಾವುದೇ ಹಾನಿಯಾಗಿಲ್ಲ. ಒಬ್ಬಂಟಿಯಾಗಿ ಬಂದಿದ್ದ ಆತ ಗುಂಡು ಹಾರಿಸತೊಡಗುತ್ತಿದ್ದಂತೆ ಬಂಧಿಸಲಾಗಿದೆ ಹಾಗೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಟ್ರಂಪ್‌ ಮೇಲೆ 3ನೇ ಸಲ ದಾಳಿ ಸಾಧ್ಯತೆ: ಹಿಂದೆಯೇ ಎಚ್ಚರಿಕೆ ನೀಡಿದ್ದ ಇರಾನಿಗ

ಅಮೆರಿಕ ಅಧ್ಯಕ್ಷ ಟ್ರಂಪ್‌ ಮೇಲೆ ಭಾನುವಾರ ಗುಂಡಿನ ದಾಳಿ ಯತ್ನ ನಡೆದ ಬೆನ್ನಲ್ಲೇ, ಈ ಹಿಂದೆ ಇರಾನ್‌ನ ನಾಯಕನೊಬ್ಬ ‘ಟ್ರಂಪ್‌ ಮೇಲೆ 2 ಬಾರಿ ದಾಳಿಯಾಗಿದೆ. 3ನೇ ಬಾರಿಯೂ ಆಗುವ ಸಾಧ್ಯತೆಯಿದೆ. ಹಾಗಾಗಿ ಅವರು ಎಚ್ಚರಿಕೆಯಿಂದಿರಬೇಕು’ ಎಂದಿದ್ದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್‌ ಆಗಿದೆ. ಆತ ಎಚ್ಚರಿಕೆ ಕೊಟ್ಟಂತೆಯೇ ಟ್ರಂಪ್‌ ಹತ್ಯೆಗೆ ಯತ್ನ ನಡೆದಿರುವುದರಿಂದ, ದಾಳಿಯ ಹಿಂದೆ ಇರಾನ್‌ ಕೈವಾಡವಿದೆಯೇ ಎಂಬ ಚರ್ಚೆ ಎದ್ದಿದೆ.

Scroll to load tweet…