ಕೊರೋನಾಗೆ ಭಾರತ ತತ್ತರಿಸಿದೆ. ಇದರ ನಡುವೆ ಭಾರತದ ಹಲವು ವೈದ್ಯಕೀಯ ಸಲಕರಣೆ, ಲಸಿಕೆ, ಆಕ್ಸಿಜನ್ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ನಡುವೆ ಅಮೆರಿಕ ಭಾರತಕ್ಕೆ ಲಸಿಕೆ ತಯಾರಿಕಾ ಕಚ್ಚಾ ವಸ್ತುಗಳನ್ನು ತಡೆ ಹಿಡಿದಿದೆ. ಜೋ ಬೈಡನ್ ಈ ನಡೆಗೆ ಭಾರತದಲ್ಲಿ ಮಾತ್ರವಲ್ಲ, ತಮ್ಮದೇ ಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಾಶಿಂಗ್ಟನ್(ಏ.25): ಕೊರೋನಾ ವೈರಸ್ ಭೀಕರತೆಗೆ ಭಾರತ ನಲುಗಿ ಹೋಗಿದೆ. ಇದೇ ವೇಳೆ ಸೋಂಕಿತರ ಚಿಕಿತ್ಸೆ ಸವಾಲಾಗಿದೆ. ಅತ್ತ ಅಮೆರಿಕ ಲಸಿಕೆ ತಯಾರಿಕೆಗೆ ಬೇಕಾದ ಕಚ್ಚಾ ಸಾಮಾಗ್ರಿಗಳನ್ನು ತಡೆ ಹಿಡಿದಿದೆ. 40 ಮಿಲಿಯನ್ ಲಸಿಕೆ ಡೋಸೇಜ್ ಶೇಖರಿಸಿಟ್ಟಿರುವ ಅಮೆರಿಕ ತುರ್ತು ಅಗತ್ಯವಿರುವ ಭಾರತಕ್ಕೆ ಬಿಡುಗಡೆ ಮಾಡಲು ನಿರಾಕರಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿರ್ಧಾರಕ್ಕೆ ಇದೀಗ ತಮ್ಮದೇ ಡೆಮಾಕ್ರಟಿಕ್ ಪಕ್ಷದ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಕ್ಸಿಜನ್ ಕೊರತೆಗೆ ಮೋದಿ ಪರಿಹಾರ; ಸರ್ಕಾರಿ ಆಸ್ಪತ್ರೆಗಳಲ್ಲಿ 551 ಉತ್ಪಾದಕ ಘಟಕ ಸ್ಥಾಪನೆ!

ಭಾರತ ಅತೀ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ. ಈ ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಬೈಡನ್ ಸರ್ಕಾರ ಶೇಖರಿಸಿಟ್ಟಿರುವ ಅಸ್ಟ್ರಾಜೆನೆಕಾ ಲಸಿಕೆಯನ್ನು ವಿತರಿಸಬೇಕು ಎಂದು ಇಂಡಿಯನ್-ಅಮೆರಿಕನ್ ಕಾಂಗ್ರೆಸ್‌ಮೆನ್ ರಾಜಾ ಕೃಷ್ಣಮೂರ್ತಿ ಅಮೆರಕವನ್ನು ಒತ್ತಾಯಿಸಿದ್ದಾರೆ.

ಭಾರತೀಯರಿನೆಗೆ ನೆರವು ಅಗತ್ಯವಿದೆ. ನಮ್ಮಲ್ಲಿ ಶೇಖರಿಸಿಟ್ಟಿರುವ ಲಸಿಕೆ ಒಂದು ಜೀವವನ್ನು ಉಳಿಸುತ್ತದೆ ಎಂದರೆ ಅದೇ ದೊಡ್ಡ ವಿಚಾರ. ಹೀಗಾಗಿ ಅಮೆರಿಕ ತಕ್ಷಣವೇ ಅಸ್ಟ್ರಾಜೆನೆಕಾ ಲಸಿಕೆಯನ್ನು ಭಾರತಕ್ಕೆ ವಿತರಿಸಬೇಕು ಎಂದು ರಾಜಾ ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ.

ಕಳೆದ ಕೆಲ ತಿಂಗಳುಗಳಲ್ಲಿ ಜೋ ಬೈಡನ್ ಸರ್ಕಾರ ಸಂಪಾದಿಸಿ ಉತ್ತಮ ಬಾಂಧವ್ಯವನ್ನು ಈಗ ಕಳೆದುಕೊಳ್ಳುತ್ತಿದೆ ಎಂದು ಅಮೆರಿಕ ಬ್ರೂಕಿಂಗ್ ಸಂಸ್ಥೆಯ ತಾನ್ವಿ ಮದನ್ ಟ್ವೀಟ್ ಮಾಡಿದ್ದಾರೆ. ಅಮೆರಿಕದ ಹಲವರು ಜೋ ಬೈಡನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಭಾರತದಲ್ಲೂ ಬೈಡೆನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.