Asianet Suvarna News Asianet Suvarna News

ರಷ್ಯಾ, ಚೀನಾ ನಂತರ ಅಮೆರಿಕದಲ್ಲೂ ಅಂತರಿಕ್ಷ ಸೇನೆ: ಬಾಹ್ಯಾಕಾಶ ಸಮರಕ್ಕೆ ಸಜ್ಜಾದ ಜಗತ್ತು!

ಜಗತ್ತಿನ ಅತ್ಯಂತ ಬಲಷ್ಠ ಸೇನಾಪಡೆ ಹೊಂದಿರುವ ಅಮೆರಿಕ| ತನ್ನ ಸೇನಾಪಡೆಗೆ ಮತ್ತೊಂದು ವಿಭಾಗ ಸೇರಿಸಿದ ಅಮೆರಿಕ| ಸ್ಪೇಸ್ ಫೋರ್ಸ್(ಬಾಹ್ಯಾಕಾಶ ಪಡೆ) ರಚಿಸಿದ ಅಮೆರಿಕ| ಜಗತ್ತಿನ ಮೊಟ್ಟ ಮೊದಲ ಬಾಹ್ಯಾಕಾಶ ಸೇನೆಗೆ ಚಾಲನೆ ನೀಡಿದ ಟ್ರಂಪ್|'ಬಾಹ್ಯಾಕಾಶದಲ್ಲಿ ಅಮೆರಿಕದ ಸರಹದ್ದು ಗುರುತಿಸಲು ಗೋಡೆ ನಿರ್ಮಾಣ'| ರಷ್ಯಾ, ಚೀನಾ ದೇಶದಲ್ಲೂ ಇದೆ ಬಾಹ್ಯಾಕಾಶ ಸೇನೆ| ಬಾಹ್ಯಾಕಾಶ ಸಮರಕ್ಕೆ ವೇದಿಕೆ ಸಿದ್ಧಗೊಳಿಸುತ್ತಿರುವ ಜಗತ್ತು| 

After Russia and China The United States To have Space Force
Author
Bengaluru, First Published Dec 24, 2019, 5:16 PM IST

ವಾಷಿಂಗ್ಟನ್(ಡಿ.24): ಬಾಹ್ಯಾಕಾಶ ಸಮರ ಎಂಬುದು ಹೊಸ ಯುದ್ಧ ವಿಧಾನ. ಮುಂದಿನ ದಿನಗಳಲ್ಲಿ ದೇಶ ದೇಶಗಳ ನಡುವೆ ಜಲ, ಭೂಮಿ, ವಾಯುವಿನಲ್ಲಿ ಉಂಟಾಗುವ ಸಮರದಂತೆ ಬಾಹ್ಯಾಕಾಶದಲ್ಲೂ ಸಮರ ಏರ್ಪಡಬಹುದು. ಅದಕ್ಕಾಗಿ ಈಗಾಗಲೇ ಹಲವು ದೇಶಗಳು ತಯಾರಿ ನಡೆಸಿದ್ದು, ಜಗತ್ತಿನ ದಿಗ್ಗಜ ರಾಷ್ಟ್ರ ಅಮೆರಿಕ ಕೂಡ ಇಂಥ ಸಮರಕ್ಕೆ ಸಿದ್ಧವಾಗಿದೆ. 

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮೊನ್ನೆಯಷ್ಟೇ ಅಮೆರಿಕದಲ್ಲಿ ‘ಬಾಹ್ಯಾಕಾಶ ಸೇನೆ’ಯನ್ನು ಆರಂಭಿಸುವ ಹೊಸ ಕಾನೂನಿಗೆ ಸಹಿ ಹಾಕಿದ್ದಾರೆ. ಸ್ಪೇಸ್‌ ಫೋರ್ಸ್‌ ಎಂದರೆ ಏನು, ಅದು ಹೇಗೆ ಕಾರ‍್ಯನಿರ್ವಹಿಸುತ್ತದೆ, ನೌಕಾಪಡೆ ಅಥವಾ ವಾಯುಪಡೆಗಿಂತ ಅದು ಹೇಗೆ ಭಿನ್ನ ಮತ್ತು ಈಗೇಕೆ ಒಂದಾದ ಮೇಲೊಂದು ದೇಶಗಳು ಸ್ಪೇಸ್‌ ಫೋರ್ಸ್‌ ಆರಂಭಿಸುತ್ತಿವೆ ಎಂಬ ಮಾಹಿತಿ ಇಲ್ಲಿದೆ.

ಸ್ಪೇಸ್‌ ಫೋರ್ಸ್‌ ಅಂದರೆ ಏನು?

ಸ್ಪೇಸ್‌ ಫೋರ್ಸ್‌ ಎಂದರೆ ಅಂತರಿಕ್ಷಕ್ಕೆ ಹೋಗಿ ಯುದ್ಧ ಮಾಡುವ ಸೇನಾಪಡೆಯಲ್ಲ. ಬದಲಿಗೆ, ಭೂಮಿಯಲ್ಲೇ ಕುಳಿತು ಅಂತರಿಕ್ಷದಲ್ಲಿರುವ ಇನ್ನೊಂದು ದೇಶದ ಬಾಹ್ಯಾಕಾಶ ಕೇಂದ್ರ ಮತ್ತು ಉಪಗ್ರಹಗಳ ಮೇಲೆ ಕಣ್ಣಿಡುವುದು, ತಮ್ಮ ದೇಶದ ಉಪಗ್ರಹಗಳನ್ನು ಕಾಪಾಡಿಕೊಳ್ಳುವುದು ಅಥವಾ ಸಂದರ್ಭ ಬಂದರೆ ವೈರಿ ದೇಶದ ಉಪಗ್ರಹಗಳನ್ನು ಹೊಡೆದುರುಳಿಸುವುದು ಇದರ ಕೆಲಸ. ಅಮೆರಿಕದ ಸ್ಪೇಸ್‌ ಫೋರ್ಸ್‌ನ ಸೈನಿಕರು ಇತರ ಸೈನಿಕರ ರೀತಿಯಲ್ಲೇ ಸೇನಾ ಸಮವಸ್ತ್ರ ಧರಿಸಿ, ಅಮೆರಿಕದ ದಿಕ್ಸೂಚಿ ಉಪಗ್ರಹಗಳು ಹಾಗೂ ಸಂಪರ್ಕ ಉಪಗ್ರಹಗಳನ್ನು ವೈರಿಗಳಿಂದ ಕಾಪಾಡುವ ಜವಾಬ್ದಾರಿ ಹೊಂದಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ವೈರಿಗಳು ಉಪಗ್ರಹಗಳನ್ನು ಜಾಮ್‌ ಮಾಡುವ ಅಥವಾ ಕಾರ‍್ಯನಿರ್ವಹಣೆಯನ್ನು ಸ್ಥಗಿತಗೊಳಿಸುವ ಭೀತಿ ಹೆಚ್ಚಾಗಿದೆ. ಸ್ಪೇಸ್‌ ಆರ್ಮಿ ಇಂಥ ಯತ್ನವನ್ನು ವಿಫಲಗೊಳಿಸಲು ಸಹಕಾರಿಯಾಗುತ್ತದೆ.

ಅಮೆರಿಕದ 6ನೇ ಮಿಲಿಟರಿ ಶಾಖೆ

ಅಮೆರಿಕ ಈಗಾಗಲೇ ಭೂ ಸೇನೆ, ವಾಯುಸೇನೆ, ನೌಕಾಸೇನೆ, ಕರಾವಳಿ ಸೇನೆ ಹಾಗೂ ಸಮುದ್ರ ಸೇನೆ ಎಂಬ 5 ಸೇನಾದಳವನ್ನು ಹೊಂದಿದೆ. ಬಾಹ್ಯಾಕಾಶ ಸೇನೆಯು 1947ರಲ್ಲಿ ಅಮೆರಿಕದ ವಾಯುಪಡೆ ಸ್ಥಾಪನೆಯಾದ 70 ವರ್ಷಗಳ ಬಳಿಕ ರಚನೆಗೊಂಡ ಆರನೇ ಹಾಗೂ ಅತ್ಯಂತ ಕಿರಿಯ ಮಿಲಿಟರಿ ಶಾಖೆಯಾಗಿದೆ.

ಅಮೆರಿಕದಲ್ಲಿ ಬಾಹ್ಯಾಕಾಶ ಸೇನೆ: ಹೇಗೆ ಸೈನಿಕರ ರವಾನೆ?

ಏಕೆ ಬೇಕು ಬಾಹ್ಯಾಕಾಶ ಸೇನೆ?

ರಷ್ಯಾ, ಚೀನಾ ಮತ್ತು ಉತ್ತರ ಕೊರಿಯಾ ಮತ್ತು ಇರಾನ್‌ನಿಂದ ಅಮೆರಿಕದ ಉಪಗ್ರಹಗಳಿಗೆ ಭೀತಿ ಇದೆ ಎಂಬ ಮಾಹಿತಿ ಇದೆ. ಈ ದೇಶಗಳು ಅಭಿವೃದ್ಧಿಪಡಿಸಿರುವ ಶಸ್ತ್ರಾಸ್ತ್ರಗಳು ಉಪಗ್ರಹಗಳನ್ನು ಜಾಮ್‌ ಅಥವಾ ನಾಶ ಮಾಡಬಲ್ಲವು. ಚೀನಾ ಮತ್ತು ರಷ್ಯಾ ಉಪಗ್ರಹಗಳ ಕಾರಾರ‍ಯಚರಣೆಯನ್ನು ಸ್ಥಗಿತ ಮಾಡುವ ವಿದ್ಯುನ್ಮಾನ ಅಸ್ತ್ರಗಳನ್ನು ಕಂಡುಹಿಡಿದಿವೆ. 2007ರಲ್ಲಿ ಪ್ರಯೋಗಾರ್ಥವಾಗಿ ಚೀನಾ ತನ್ನದೇ ಉಪಗ್ರಹವನ್ನು ಹೊಡೆದುರುಳಿಸಿತ್ತು. ಆಗಸದ ನಡುವೆಯೇ ವಿಮಾನದ ಮೂಲಕ ಕ್ಷಿಪಣಿ ಪ್ರಯೋಗಿಸಿ ಉಪಗ್ರಹಗಳನ್ನು ನಾಶಪಡಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿರುವುದಾಗಿ ಇತ್ತೀಚೆಗೆ ರಷ್ಯಾ ಹೇಳಿದೆ. ಇರಾನ್‌ ಮತ್ತು ಉತ್ತರ ಕೊರಿಯಾ ಕೂಡ ಬಾಹ್ಯಾಕಾಶದಲ್ಲಿ ಮಿಲಿಟರಿ ಕಾರಾರ‍ಯಚರಣೆಯನ್ನು ಹೆಚ್ಚು ಮಾಡಿವೆ.

ಇದಕ್ಕೆ ಎಷ್ಟುಹಣ ಬೇಕು?

ಅಮೆರಿಕದ ಉಪಾಧ್ಯಕ್ಷ ಪೆನ್ಸ್‌ 5 ವರ್ಷಗಳ ಬಾಹ್ಯಾಕಾಶ ಭದ್ರತಾ ವ್ಯವಸ್ಥೆಯ ಕಾರ‍್ಯನಿರ್ವಹಣೆಗೆ 8 ಬಿಲಿಯನ್‌ ಡಾಲರ್‌ ಬೇಕೆಂದು ಹೇಳಿದ್ದರು. ಆದರೆ ಅದಕ್ಕೂ ಹೆಚ್ಚಿನ ಹಣ ಬೇಕೆಂದು ಅಂದಾಜಿಸಲಾಗುತ್ತಿದೆ. ಮೊದಲ ವರ್ಷದಲ್ಲಿ ಸ್ಪೇಸ್‌ ಫೋರ್ಸ್‌ ಲಾಂಚ್‌ಗಾಗಿ ಅಮೆರಿಕದ ಸರ್ಕಾರ 4 ಲಕ್ಷ ಡಾಲರ್‌ ಹಣ ವ್ಯಯಿಸಲಿದೆ. ಇದರಲ್ಲಿ 16 ಸಾವಿರ ಸಿಬ್ಬಂದಿ ಇರಲಿದ್ದಾರೆ.

ಸ್ಪೇಸ್‌ ಕಮಾಂಡ್‌ ಹೊಸತೇನಲ್ಲ

1985ರಲ್ಲಿ ಅಮೆರಿಕ ಅಧ್ಯಕ್ಷ ರೇಗನ್‌ ಅವರು ಇದನ್ನು ಅಸ್ತಿತ್ವಕ್ಕೆ ತಂದಿದ್ದರು. 2002ರಲ್ಲಿ ಅಂದರೆ 2001ರ ಸೆಪ್ಟೆಂಬರ್‌ನಲ್ಲಿನ ಉಗ್ರರ ದಾಳಿ ಬಳಿಕ ಇದನ್ನು ಯುಎಸ್‌ ಸ್ಟ್ರಾಟೆಜಿಕ್‌ ಕಮಾಂಡ್‌ನೊಂದಿಗೆ ವಿಲೀನ ಮಾಡಲಾಗಿತ್ತು.

ಬೇರೆ ದೇಶಗಳಲ್ಲಿ ಸ್ಪೇಸ್‌ ಫೋರ್ಸ್‌ ಇದೆಯೇ?

ಇದೆ. ರಷ್ಯಾ 2015ರಲ್ಲಿ ಏರೋಸ್ಪೇಸ್‌ ಫೋರ್ಸ್‌ ರಚಿಸಿದೆ. ಚೀನಾ ಸ್ಪೇಸ್‌ ಪ್ರೋಗ್ರಾಮ್‌ಗಳು ಅದರ ಸೇನೆಯ ಭಾಗವಾಗಿವೆ. 2015ರಲ್ಲಿ ಪೀಪಲ್ಸ್‌ ಲಿಬರೇಶನ್‌ ಆರ್ಮಿಯು ಬಾಹ್ಯಾಕಾಶ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸ್ಟ್ರಾಟೆಜಿಕ್‌ ಸಪೋರ್ಟ್‌ ಫೋರ್ಸ್‌ ರಚಿಸಿದೆ. ರಷ್ಯಾ ಮತ್ತು ಚೀನಾ ಇವರೆರಡೂ ಈಗಾಗಲೇ ಬಾಹ್ಯಾಕಾಶ ಯುದ್ಧಕ್ಕೆ ಬೇಕಾದ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಈ ವರ್ಷ ಆರಂಭದಲ್ಲಿ ಅಮೆರಿಕ ಸ್ಪೇಸ್‌ ಫೋರ್ಸ್‌ ಆರಂಭಿಸುವ ಬಗ್ಗೆ ಮಾತನಾಡಿದ ಬಳಿಕ ಫ್ರಾನ್ಸ್‌ ಕೂಡ ಸ್ಪೇಸ್‌ ಫೋರ್ಸ್‌ ರಚನೆ ಮಾಡುವುದಾಗಿ ಘೋಷಿಸಿದೆ.

ಭಾರತ ಏನೂ ಕಮ್ಮಿ ಇಲ್ಲ

ಕಳೆದ ಮಾರ್ಚ್‌ನಲ್ಲಿ ಬಾಹ್ಯಾಕಾಶದ ಲೋ ಅಥ್‌ರ್‍ ಆರ್ಬಿಟ್‌ನಲ್ಲಿ ಎ-ಸ್ಯಾಟ್‌ ಆ್ಯಂಟಿ ಸ್ಯಾಟಲೈಟ್‌ ಕ್ಷಿಪಣಿ ಮೂಲಕ ಲೈವ್‌ ಸ್ಯಾಟಲೈಟನ್ನು ಯಶಸ್ವಿಯಾಗಿ ಹೊಡೆದುರುಳಿಸುವ ಮೂಲಕ ಭಾರತ ಕೂಡ ಬಾಹ್ಯಾಕಾಶ ಯುದ್ಧದಲ್ಲಿ ತಾನು ಕಮ್ಮಿ ಇಲ್ಲ ಎನ್ನುವುದನ್ನು ಜಗತ್ತಿಗೆ ಸಾರಿದೆ. ಅಮೆರಿಕ, ರಷ್ಯಾ, ಚೀನಾದ ಬಳಿಕ ಉಪಗ್ರಹ ನಾಶಪಡಿಸುವ ಅಸ್ತ್ರವನ್ನು ಹೊಂದಿದ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಗುರಿಯನ್ನು ನೋಡಿಕೊಂಡು ಗುಂಡಿನ ದಾಳಿ ಅಥವಾ ಏರ್‌ ಸ್ಟೆ್ರೖಕ್‌ ಮೂಲಕ ಬಾಂಬ… ಹಾಕುವುದು ಇಂದಿನ ದಿನದಲ್ಲಿ ಕಷ್ಟದ ಕೆಲಸವಲ್ಲ. ಹಲವು ದೇಶಗಳು ಈ ಕ್ಷೇತ್ರದಲ್ಲಿ ಪರಿಣತಿ ಪಡೆದಿವೆ. ಆದರೆ ಉಪಗ್ರಹವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸುವುದು ಸುಲಭದ ಕೆಲಸವಲ್ಲ. ಈ ಕೆಲಸವನ್ನು ಭಾರತದ ಡಿಆರ್‌ಡಿಒ ಯಶಸ್ವಿಯಾಗಿ ಮಾಡಿದೆ.

Follow Us:
Download App:
  • android
  • ios