* ಶಸ್ತ್ರ ಸಜ್ಜಿತ ವಾಹನಗಳೊಂದಿಗೆ ಪಂಜ್‌ಶೀರ್‌ನತ್ತ ಪಯಣ* ಪಂಜ್‌ಶೀರ್‌ ವಶಕ್ಕೆ ತಾಲಿಬಾನ್‌ ದಾಳಿ ಆರಂಭ* ಶರಣಾಗಲು ಗಡುವು ನೀಡಿದ ತಾಲಿಬಾನಿಗಳು* ಉಗ್ರರ ಮಣಿಸಲು ಸಿದ್ಧ ಎಂದ ಪಂಜ್‌ಶೀರ್‌ ಯೋಧರು

ಕಾಬೂಲ್‌(ಆ.23): ಇಡೀ ದೇಶವಾದರೂ, ಇನ್ನೂ ತಮ್ಮ ಕೈಸೇರದ ಸಿಂಹಗಳ ನಾಡು ಪಂಜ್‌ಶೀರ್‌ ಅನ್ನು ತೆಕ್ಕೆಗೆ ತೆಗೆದುಕೊಳ್ಳಲು ತಾಲಿಬಾನಿ ಉಗ್ರರು ದಾಳಿ ಆರಂಭಿಸಿದ್ದಾರೆ. ಶನಿವಾರದಿಂದ ಸಣ್ಣ ಪ್ರಮಾಣದಲ್ಲಿ ಪಂಜಶೀರ್‌ನತ್ತ ಧಾವಿಸಲು ಆರಂಭಿಸಿದ್ದ ಉಗ್ರರು, ಭಾನುವಾರ ದೊಡ್ಡ ಪ್ರಮಾಣದಲ್ಲಿ ಸಶಸ್ತ್ರ ವಾಹನಗಳೊಂದಿಗೆ ದಾಳಿಗೆ ಸಜ್ಜಾಗಿದ್ದಾರೆ.

ಅಲ್ಲದೆ ಭಾನುವಾರ ಸಂಜೆ, ಇನ್ನು 4 ಗಂಟೆಯಲ್ಲಿ ಶರಣಾಗದಿದ್ದರೆ ನಾವು ಶಿಕ್ಷೆ ನೀಡಲು ಸಿದ್ದ ಎಂದು ತಾಲಿಬಾನಿ ಉಗ್ರರು ಘೋಷಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಂಜ್‌ಶೀರ್‌ ಪ್ರಾಂತ್ಯದ ಯೋಧರು, ಒಂದು ವೇಳೆ ನಮ್ಮ ಮೇಲೆ ತಾಲಿಬಾನಿ ಉಗ್ರರು ದಾಳಿ ನಡೆಸಿದರೆ ನಾವು ಹೋರಾಟಕ್ಕೆ ಸಿದ್ಧ ಎಂದು ಘೋಷಿಸಿದ್ದಾರೆ. ಹೀಗಾಗಿ ಮುಂದಿನ ಒಂದೆರೆಡು ದಿನಗಳ ಬೆಳವಣಿಗೆ ಕುತೂಹಲ ಮೂಡಿಸಿದೆ.

ಅಫ್ಘಾನಿಸ್ತಾನದ ಉತ್ತರ ಭಾಗದಲ್ಲಿರುವ ಪಂಜ್‌ಶೀರ್‌ ಕಣಿವೆ, ಈ ಹಿಂದಿನಿಂದಲೂ ಉಗ್ರರ ಪಾಲಿಗೆ ಕೈಗೆಟುಕದೇ ಉಳಿದುಕೊಂಡಿದೆ.

ದಶಕಗಳ ಹಿಂದೆ ಸೋವಿಯನ್‌ ಒಕ್ಕೂಟದ ದಾಳಿ, ಬಳಿಕ 90ರ ದಶಕದಲ್ಲಿ ತಾಲಿಬಾನಿಗಳು ಇಡೀ ದೇಶವನ್ನು ಆಕ್ರಮಿಸಿಕೊಂಡರೂ, ಪಂಜ್‌ಶೀರ್‌ ಮಾತ್ರ ಸ್ವತಂತ್ರವಾಗಿಯೇ ಉಳಿದುಕೊಂಡಿತ್ತು. ಆ ಪ್ರದೇಶವನ್ನು ವಶಪಡಿಸಿಕೊಳ್ಳುವುದು ಇದುವರೆಗೆ ಯಾರಿಗೂ ಸಾಧ್ಯವಾಗಿಲ್ಲ. ದಶಕಗಳ ಹಿಂದೆ ಪಂಜ್‌ಶೀರ್‌ನ ನಾಯಕನಾಗಿದ್ದ ಅಹಮದ್‌ ಶಾ ಮಸೌದ್‌ರನ್ನು ಅಲ್‌ಖೈದಾ ಉಗ್ರರು ವಂಚನೆ ಮಾಡಿ ಹತ್ಯೆ ಮಾಡಿದ್ದರು. ಇದೀಗ ಅವರ ಪುತ್ರ ಅಹಮದ್‌ ಮಸೌದ್‌ ಪ್ರಾಂತ್ಯವನ್ನು ರಕ್ಷಿಸುವ ಹೊಣೆ ಹೊತ್ತುಕೊಂಡಿದ್ದಾರೆ.

ಪಂಜ್‌ಶೀರ್‌ ಕಣಿವೆ ಪ್ರದೇಶವಾಗಿದ್ದು, ಅದನ್ನು ಪ್ರವೇಶಿಸಲು ಪಂಜ್‌ಶೀರ್‌ ನದಿ ಹರಿಯುವ ಮಾರ್ಗ ಒಂದೇ ದಾರಿ. ಆ ದಾರಿಯನ್ನು ರಕ್ಷಿಸಿಕೊಂಡರೆ, ಪಂಜ್‌ಶೀರ್‌ ಪ್ರದೇಶ ವಶಪಡಿಸಿಕೊಳ್ಳುವುದು ಅಸಾಧ್ಯ.