* ಪಂಜ್‌ಶೀರ್‌ ವಶಕ್ಕೆ ಉಗ್ರರ ಕುತಂತ್ರ* ಪಂಜ್‌ಶೀರ್‌ಗೆ ಫೋನ್‌, ಇಂಟರ್‌ನೆಟ್‌ ಸಂಪರ್ಕ ಕಟ್‌* ವಿರೋಧಿಗಳ ಸಂವಹನ, ಟ್ವಿಟರ್‌ ಬಳಕೆ ತಡೆಯಲು ಈ ಕ್ರಮ

ಕಾಬೂಲ್‌(ಆ.30): ತಮ್ಮ ಪಾಲಿಗೆ ಸಿಂಹಸ್ವಪ್ನವಾಗಿರುವ ಪಂಜ್‌ಶೀರ್‌ ಪ್ರಾಂತ್ಯಕ್ಕೆ ಇಂಟರ್‌ನೆಟ್‌ ಹಾಗೂ ದೂರವಾಣಿ ಸಂಪರ್ಕವನ್ನು ತಾಲಿಬಾನ್‌ ಕಡಿತಗೊಳಿಸಿದೆ. ಈ ಮೂಲಕ ಪಂಜ್‌ಶೀರ್‌ ಪ್ರಾಂತ್ಯದಿಂದ ಯಾವುದೇ ಮಾಹಿತಿ ಹೊರ ಜಗತ್ತಿಗೆ ತಿಳಿಯದಂತೆ ಮಾಡುವಲ್ಲಿ ತಾಲಿಬಾನ್‌ ಯಶಸ್ವಿಯಾಗಿದೆ.

ಪಂಜ್‌ಶೀರ್‌ ಪ್ರಾಂತ್ಯದಲ್ಲಿ ವಿರೋಧಿ ಪಡೆಗಳ ಮಧ್ಯೆ ಇಂಟರ್‌ನೆಟ್‌ ಮೂಲಕ ನಡೆಯುತ್ತಿರುವ ಸಂದೇಶ ವಿನಿಯವನ್ನು ತಡೆಯುವುದು ಹಾಗೂ ಟ್ವೀಟರ್‌ ಹಾಗೂ ಜನರು ಜಾಲತಾಣಗಳನ್ನು ಬಳಸದಂತೆ ನೋಡಿಕೊಳ್ಳಲು ತಾಲಿಬಾನ್‌ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಆಫ್ಘನ್‌ ಬಂಡಾಯ ಕಮಾಂಡರ್‌ ಅಹ್ಮದ್‌ ಶಾ ಮಸೌದ್‌ ಅವರ ಪುತ್ರ ಅಹ್ಮದ್‌ ಮಸೌದ್‌ ಅವರ ಜತೆಯೇ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್‌ ಪಂಜ್‌ಶೀರ್‌ನಲ್ಲಿ ನೆಲೆಸಿದ್ದಾರೆ. ಟ್ವೀಟರ್‌ನಲ್ಲಿ ಸಕ್ರಿಯವಾಗಿರುವ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಹೇಹ್‌, ತಾಲಿಬಾನ್‌ ವಿರುದ್ಧ ನಿರಂತರ ಟ್ವಿಟ್‌ಗಳನ್ನು ಮಾಡುತ್ತಿದ್ದಾರೆ. ಇದು ತಾಲಿಬಾನಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಹೀಗಾಗಿ ಅಮ್ರುಲ್ಲಾ ಅವರ ಟ್ವೀಟ್‌ಗೆ ಕಡಿವಾಣ ಹಾಕಲು ಮತ್ತು ಕಾಬೂಲ್‌ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ಬಾಂಬ್‌ ಸ್ಫೋಟಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವುದನ್ನು ತಡೆಯಲು ತಾಲಿಬಾನ್‌ ಬಯಸಿದೆ. ಜೊತೆಗೆ ಸಂವಹನವನ್ನು ತಡೆದರೆ ಪಂಜ್‌ಶೀರ್‌ ಮೇಲೆ ದಾಳಿ ಮಾಡುವುದು ಸುಲಭ ಎಂದು ತಾಲಿಬಾನ್‌ ಭಾವಿಸಿದೆ. ಹೀಗಾಗಿ ಸಂಪೂರ್ಣ ಪ್ರಾಂತ್ಯಕ್ಕೆ ಫೋನ್‌ ಹಾಗೂ ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.