ಕಾಬೂಲ್ ( ಮಾ. 01): ಅಷ್ಘಾನಿಸ್ತಾನದಲ್ಲಿ ಕಳೆದ 19 ವರ್ಷಗಳಿಂದ ಘನಘೋರ ಕಾದಾಟದಲ್ಲಿ ನಿರತವಾಗಿದ್ದ ಅಮೆರಿಕ ಹಾಗೂ ವಿಶ್ವದ ಕುಖ್ಯಾತ ಉಗ್ರಗಾಮಿ ಸಂಘಟನೆಗಳಲ್ಲಿ ಒಂದಾದ ತಾಲಿಬಾನ್‌ ಶನಿವಾರ ಶಾಂತಿಮಂತ್ರ ಜಪಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿವೆ. ಕತಾರ್‌ನಲ್ಲಿ ಅಮೆರಿಕ- ತಾಲಿಬಾನ್‌ ಪ್ರತಿನಿಧಿಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಇದರ ಪ್ರಕಾರ, ಅಮೆರಿಕವು ಆಷ್ಘಾನಿಸ್ತಾನದಲ್ಲಿನ ತನ್ನ ಸೇನಾಪಡೆಗಳನ್ನು ಮುಂದಿನ 14 ತಿಂಗಳಲ್ಲಿ ಸಂಪೂರ್ಣ ಹಿಂತೆಗೆಯಲು ‘ಷರತ್ತಿನ ಒಪ್ಪಂದ’ ಮಾಡಿಕೊಂಡಿದೆ. ಇದರ ಮೊದಲ ಭಾಗವಾಗಿ ಮುಂದಿನ 135 ದಿನಗಳಲ್ಲಿ ಅಮೆರಿಕವು ಆಷ್ಘಾನಿಸ್ತಾನದಲ್ಲಿರುವ ತನ್ನ ಒಟ್ಟು 13 ಸಾವಿರ ಯೋಧರ ಬಲವನ್ನು 8,600ಕ್ಕೆ ಇಳಿಸಲು ಒಪ್ಪಿಕೊಂಡಿದೆ.

ಇಂಡೋ- ಅಮೆರಿಕಾ ಶಸ್ತ್ರಾಸ್ತ್ರ ಒಪ್ಪಂದ; ಚೀನಾಗೆ ಶುರುವಾಯ್ತು ತಲೆನೋವು!

ಕತಾರ್‌ ರಾಜಧಾನಿ ದೋಹಾದಲ್ಲಿ ಶನಿವಾರ ನಡೆದ ಸಭೆಯಲ್ಲಿ ಆಷ್ಘಾನಿಸ್ತಾನದಲ್ಲಿನ ಅಮೆರಿಕ ರಾಯಭಾರಿ ಝಲ್ಮೇ ಖಲೀಲ್‌ಜಾದ್‌ ಹಾಗೂ ತಾಲಿಬಾನ್‌ ಮುಖಂಡ ಮುಲ್ಲಾ ಅಬ್ದುಲ್‌ ಗನಿ ಬರಾದಾರ್‌ ಒಪ್ಪಂದಕ್ಕೆ ಸಹಿ ಹಾಕಿದರು.

ಈ ವೇಳೆ ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪಾಂಪಿಯೋ, ತಾಲಿಬಾನ್‌ ಮುಖಂಡರು ಹಾಗೂ ಭಾರತ ಸೇರಿದಂತೆ ವಿವಿಧ ದೇಶಗಳ ರಾಜತಾಂತ್ರಿಕರು ಹಾಜರಿದ್ದರು. ಒಪ್ಪಂದಕ್ಕೆ ಸಹಿ ಬೀಳುತ್ತಿದ್ದಂತೆಯೇ ಸಭೆಯಲ್ಲಿ ‘ಅಲ್ಲಾಹು ಅಕ್ಬರ್‌’ ಎಂಬ ಜಯಘೋಷ ಮೊಳಗಿತು.

‘ಈ ಒಪ್ಪಂದ ಷರತ್ತಿನದಾಗಿರಲಿದೆ. ತಾಲಿಬಾನ್‌ ಹಾಗೂ ಆಷ್ಘಾನಿಸ್ತಾನ ಸರ್ಕಾರಗಳು ಒಟ್ಟಿಗೇ ಕುಳಿತು ಮಾತನಾಡಿ ದೇಶದಲ್ಲಿ ಉಗ್ರವಾದ ನಿಗ್ರಹಿಸುವ ಹಾಗೂ ಶಾಂತಿ ಮರುಕಳಿಸುವ ಒಪ್ಪಂದಕ್ಕೆ ಬರಬೇಕು. ಅಲ್‌ಖೈದಾ ಜತೆಗಿನ ನಂಟನ್ನು ತಾಲಿಬಾನ್‌ ಸಂಪೂರ್ಣ ಕಡಿದುಕೊಳ್ಳಬೇಕು. ಈ ಷರತ್ತುಗಳನ್ನು ಆಫ್ಘನ್‌ ಸರ್ಕಾರ ಹಾಗೂ ತಾಲಿಬಾನ್‌ ಸಂಪೂರ್ಣ ಪಾಲಿಸಿ ಕಾರ್ಯಗತಗೊಳಿಸಿದರೆ ಮಾತ್ರ ಅಮೆರಿಕವು ತನ್ನ ಪಡೆಗಳನ್ನು ಸಂಪೂರ್ಣವಾಗಿ ಹಿಂಪಡೆಯಲಿದೆ. ಇಲ್ಲದೇ ಹೋದರೆ ಆಷ್ಘಾನಿಸ್ತಾನದಲ್ಲಿನ ಅಮೆರಿಕ ಸೇನೆಯ ಠಿಕಾಣಿ ಮುಂದುವರಿಯಲಿದೆ’ ಎಂದು ಡೊನಾಲ್ಡ್‌ ಟ್ರಂಪ್‌ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.

ಈ ಒಪ್ಪಂದದ ಬೆನ್ನಲ್ಲೇ ಮಾಚ್‌ರ್‍ 10ರಂದು ನಾರ್ವೆಯ ಓಸ್ಲೋದಲ್ಲಿ ಆಫ್ಘನ್‌ ಸರ್ಕಾರ ಹಾಗೂ ತಾಲಿಬಾನ್‌ ನಡುವೆ ಮಾತುಕತೆ ನಿಗದಿಯಾಗಿದೆ.

ಅಮೆರಿಕ- ತಾಲಿಬಾನ್‌ ಸಂಘರ್ಷ ನಡೆದಿದ್ದೇಕೆ?

ಒಸಾಮಾ ಬಿನ್‌ ಲಾಡೆನ್‌ ನೇತೃತ್ವದ ಅಲ್‌ ಖೈದಾ ಸಂಘಟನೆ 2001ರ ಸೆ.11ರಂದು ಅಮೆರಿಕದ ವಿಶ್ವ ವಾಣಿಜ್ಯ ಗೋಪುರಗಳಿಗೆ ವಿಮಾನ ಡಿಕ್ಕಿ ಹೊಡೆಸಿ ಸುಮಾರು 3000 ಮಂದಿಯನ್ನು ಕೊಂದಿತ್ತು. ಲಾಡೆನ್‌ಗೆ ತಾಲಿಬಾನ್‌ ಆಶ್ರಯ ನೀಡಿದ್ದ ಹಿನ್ನೆಲೆಯಲ್ಲಿ ಆತನನ್ನು ತನ್ನ ವಶಕ್ಕೆ ನೀಡಲು ಅಮೆರಿಕ ತಾಕೀತು ಮಾಡಿತ್ತು. ಒಪ್ಪದೆ ಇದ್ದಾಗ 2001ರಲ್ಲಿ ಜಾಜ್‌ರ್‍ ಬುಷ್‌ ಸರ್ಕಾರ ಆಷ್ಘಾನಿಸ್ತಾನ ಮೇಲೆ ಯುದ್ಧ ಮಾಡಿತ್ತು.

1996 ರಿಂದ ಅಧಿಕಾರದಲ್ಲಿದ್ದ ತಾಲಿಬಾನ್‌ ಸರ್ಕಾರವನ್ನು ಕಿತ್ತೊಗೆದಿತ್ತು. 2003 ರಲ್ಲಿ ಇರಾಕ್‌ ಸರ್ವಾಧಿಕಾರಿ ಸದ್ದಾಂ ಹುಸೇನ್‌ ಜತೆ ಸಂಘರ್ಷಕ್ಕಿಳಿದ ಅಮೆರಿಕವು ಆಷ್ಘಾನಿಸ್ತಾನದತ್ತ ಹೆಚ್ಚು ಗಮನ ಕೊಡದ ಕಾರಣ ತಾಲಿಬಾನ್‌ ಮರುಸಂಘಟನೆಯಾಗಿ, ಬಲಿಷ್ಠವಾಗಿತ್ತು. ಹೀಗಾಗಿ ಅಮೆರಿಕ- ತಾಲಿಬಾನ್‌ ನಡುವೆ ಸಂಘರ್ಷ ನಡೆಯುತ್ತಲೇ ಇತ್ತು. ಈವರೆಗೆ 3500 ಯೋಧರು ತಾಲಿಬಾನ್‌ ವಿರುದ್ಧದ ಹೋರಾಟದಲ್ಲಿ ಮಡಿದಿದ್ದಾರೆ.

ಒಪ್ಪಂದದಲ್ಲಿ ಏನಿದೆ?

- ಅಲ್‌ಖೈದಾ ಅಥವಾ ಇನ್ನಾವುದೇ ಉಗ್ರ ಸಂಘಟನೆಗೆ ಆಫ್ಘನ್‌ ನೆಲದಲ್ಲಿ ಚಟುವಟಿಕೆ ನಡೆಸಲು ತಾಲಿಬಾನ್‌ ಅವಕಾಶ ನೀಡುವಂತಿಲ್ಲ

- ಆಫ್ಘನ್‌ನಲ್ಲಿ ಉಗ್ರವಾದ ನಿಗ್ರಹಿಸಿ ಆಂತರಿಕ ಶಾಂತಿ ಸ್ಥಾಪಿಸಲು ಆಫ್ಘನ್‌ ಸರ್ಕಾರ-ತಾಲಿಬಾನ್‌ ಮಾತುಕತೆ ನಡೆಸಬೇಕು

- ಮೊದಲ ಹಂತದಲ್ಲಿ ಆಫ್ಘನ್‌ನಲ್ಲಿನ (135 ದಿನದಲ್ಲಿ) ಅಮೆರಿಕ ಯೋಧರ ಸಂಖ್ಯೆ 13000 ದಿಂದ 8600ಕ್ಕೆ ಇಳಿಕೆ

- ಅಮೆರಿಕ ಹಾಕಿರುವ ಷರತ್ತುಗಳನ್ನು ಪೂರೈಸಿದರೆ 14 ತಿಂಗಳಲ್ಲಿ ಬಾಕಿ ಎಲ್ಲ ಯೋಧರ ವಾಪಸಾತಿ