ಮಗುವಿಗೆ ತಾಯಿಯ ಆರೈಕೆ ಬಹಳ ಮುಖ್ಯ: ಹೈಕೋರ್ಟ್ ಆದೇಶದಲ್ಲೇನಿದೆ?
ಗಂಡು ಮಗುವು ತಂದೆಯ ಸುಪರ್ದಿ ಹಾಗೂ ಪಾಲನೆಯಲ್ಲಿದ್ದರೂ ತಾಯಿ ಆರೈಕೆ ಸಹ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್.
ಬೆಂಗಳೂರು (ಮೇ.02): ಗಂಡು ಮಗುವು ತಂದೆಯ ಸುಪರ್ದಿ ಹಾಗೂ ಪಾಲನೆಯಲ್ಲಿದ್ದರೂ ತಾಯಿ ಆರೈಕೆ ಸಹ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪ್ರಕರಣವೊಂದರಲ್ಲಿ ಮಗನನ್ನು ವಾರದಲ್ಲಿ 1 ದಿನ ಭೇಟಿ ಮಾಡಲು ಪತ್ನಿಗೆ ಅವಕಾಶ ಕಲ್ಪಿಸುವುದಾಗಿ ಪತಿಯ ವಾದ ತಿರಸ್ಕರಿಸಿ, ವಾರದಲ್ಲಿ ಎರಡು ದಿನ ಕಾಲ ತಾಯಿ -ಮಗುವಿನ ಭೇಟಿಗೆ ಅವಕಾಶ ಕಲ್ಪಿಸಿ ಮಧ್ಯಂತರ ಆದೇಶ ಮಾಡಿದೆ. ಮಗನ ಸುಪರ್ದಿಯನ್ನು ತಾಯಿಗೆ (ಪತ್ನಿಗೆ) ಹಸ್ತಾಂತರಿಸಲು ಸೂಚಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ರದ್ದತಿಗೆ ಕೋರಿ ವ್ಯಕ್ತಿಯೊಬ್ಬರು (ಪತಿ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ಈ ಆದೇಶ ಮಾಡಿದೆ.
ಈ ವೇಳೆ ಅರ್ಜಿದಾರನ ಪರ ವಕೀಲರು, ‘ಪತ್ನಿ ಹೇಳದೆ -ಕೇಳದೆ ಪತಿಯನ್ನು ತೊರೆದು ಮನೆಬಿಟ್ಟು ಹೋದ ದಿನದಿಂದ ಅರ್ಜಿದಾರರು ಮಕ್ಕಳನ್ನು ಪಾಲನೆ ಮಾಡುತ್ತಿದ್ದಾರೆ. ಶಿಕ್ಷಣ, ವಸತಿ ಸೇರಿ ಮಕ್ಕಳ ಎಲ್ಲ ಅಗತ್ಯತೆಗಳನ್ನು ಪೂರೈಸುತ್ತಾ ಬಂದಿದ್ದಾರೆ. ಹೀಗಿದ್ದರೂ ಕಿರಿಯ ಪುತ್ರವನ್ನು ಪತ್ನಿಗೆ ಸುಪರ್ದಿಗೆ ನೀಡಲು ವಿಚಾರಣಾ ನ್ಯಾಯಾಲಯ ಹೊರಡಿಸಿದ ಆದೇಶ ಸರಿಯಿಲ್ಲ. ಈ ಆದೇಶ ರದ್ದುಪಡಿಸಿ, ಮಗನ ಸುಪರ್ದಿಯನ್ನು ತಂದೆಗೆ ನೀಡಬೇಕು. ಬೇಕಾದರೆ ವಾರದಲ್ಲಿ 1 ದಿನ ತಾಯಿ-ಮಗನ ಭೇಟಿಗೆ ಮಾಡಲು ಅವಕಾಶ ನೀಡುವೆ’ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಶಾಸ್ತ್ರೋಕ್ತವಿಲ್ಲದ ಮದುವೆ ಮದುವೆಯೇ ಅಲ್ಲ: ಸುಪ್ರೀಂಕೋರ್ಟ್ ಬಣ್ಣನೆ
ಅದನ್ನು ಆಕ್ಷೇಪಿಸಿದ ನ್ಯಾಯಪೀಠ, ‘ಗಂಡು ಮಗು ತಂದೆಯ ಪಾಲನೆಯಲ್ಲಿದ್ದರೂ ಸಹ ತಾಯಿ ಆರೈಕೆ ಬಹಳ ಮುಖ್ಯ. ತಾಯಿಯ ಭೇಟಿಗೆ ಕೇವಲ ವಾರದಲ್ಲಿ 1 ದಿನ ಅವಕಾಶ ನೀಡಿದರೆ ಸಾಲದು ಕನಿಷ್ಠ 2 ದಿನವಾದರೂ ನೀಡಬೇಕು’ ಎಂದು ಹೇಳಿತು. ನಂತರ ಮಗನ ಸುಪರ್ದಿಯನ್ನು ತಾಯಿಗೆ ಹಸ್ತಾಂತರಿಸುವಂತೆ ವಿಚಾರಣಾ ನ್ಯಾಯಾಲಯದ ನೀಡಿದ ತೀರ್ಪಿಗೆ ತಡೆಯಾಜ್ಞೆ ವಿಧಿಸಿದ ಹೈಕೋರ್ಟ್, ವಾರದಲ್ಲಿ 2 ದಿನಗಳ ಕಾಲ ತಾಯಿ ಮಗುವಿನ ಭೇಟಿಗೆ ಅವಕಾಶ ನೀಡಿ ವಿಚಾರಣೆ ಮುಂದೂಡಿತು.
ಪ್ರಕರಣದ ವಿವರ: ಪ್ರಕರಣದಲ್ಲಿನ ಮೇಲ್ಮನವಿದಾರ ಮತ್ತು ಆತನ ಪತ್ನಿ 2002ರ ಮೇ 20ರಂದು ಮದುವೆಯಾಗಿದ್ದು, ಇಬ್ಬರು ಪುತ್ರರಿದ್ದಾರೆ. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳಿಂದ ಪತಿ-ಪತ್ನಿ 2015ರಿಂದ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಪತಿಯ ಬಳಿಯೇ ಇಬ್ಬರು ಪುತ್ರರು ನೆಲೆಸಿದ್ದಾರೆ. 2017ರಲ್ಲಿ ಪತಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಪತ್ನಿ 2018ರಲ್ಲಿ ಪುತ್ರರ ಸುಪರ್ದಿ ಕೋರಿ ಮದ್ದೂರು ಸಿವಿಲ್ ಹಾಗೂ ಜೆಎಂಎಫ್‌ಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಕೋವಿಶೀಲ್ಡ್ ಪಡೆದ 10 ಲಕ್ಷ ಜನರಲ್ಲಿ 8 ಮಂದಿಗೆ ಮಾತ್ರ ಅಡ್ಡಪರಿಣಾಮ ಸಂಭವ: ಡಾ.ರಮಣ್ ಗಂಗಾಖೇಡ್ಲರ್
ಆ ಅರ್ಜಿ ವಿಚಾರಣೆ ಪೂರ್ಣಗೊಳ್ಳುವ ವೇಳೆಗೆ ಹಿರಿಯ ಪುತ್ರನಿಗೆ 18 ವರ್ಷ ತುಂಬಿತ್ತು. ಕಿರಿಯ ಮಗ ತಂದೆಯ ಜೊತೆಗೆ ನೆಲೆಸುವುದಾಗಿ ತಿಳಿಸಿದ್ದ. ಹೀಗಿದ್ದರೂ ಕಿರಿಯ ಮಗನದ್ದು ಹದಿಹರೆಯದ ವಯಸ್ಸು ಎಂದು ಹೇಳಿ ಮಗುವನ್ನು ತಾಯಿಯ ಸುರ್ಪದಿಗೆ ನೀಡಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ. ಇದು ಕಾನೂನು ಬಾಹಿರ ಆದೇಶ ಎಂದು ಪತಿಯು ತನ್ನ ಮೇಲ್ಮನವಿಯಲ್ಲಿ ಆರೋಪಿಸಿದ್ದಾರೆ.