ಅಪರಿಚಿತರು ಗೃಹಿಣಿಯನ್ನು ಸೆಕ್ಸ್‌ಗೆ ಕರೆದರು ಎಂಬ ಆರೋಪ ಸುಳ್ಳು: ಪೊಲೀಸ್ ವಿಚಾರಣೆಯಲ್ಲಿ ಬಯಲು
ಕೊಡಿಗೇಹಳ್ಳಿಯ ವಿರೂಪಾಕ್ಷಪುರದಲ್ಲಿ ನಾಲ್ವರು ಅಪರಿಚಿತರು ಗಲಾಟೆ ಮಾಡಿ ತನ್ನ ಪತ್ನಿಯನ್ನು ಲೈಂಗಿಕಕ್ರಿಯೆಗೆ ಕರೆದರು ಎಂದು ಬಿಹಾರ ಮೂಲದ ವ್ಯಕ್ತಿ ಮಾಡಿದ್ದ ಆರೋಪ ಸುಳ್ಳು ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.
ಬೆಂಗಳೂರು (ಮೇ.02): ಕೊಡಿಗೇಹಳ್ಳಿಯ ವಿರೂಪಾಕ್ಷಪುರದಲ್ಲಿ ನಾಲ್ವರು ಅಪರಿಚಿತರು ಗಲಾಟೆ ಮಾಡಿ ತನ್ನ ಪತ್ನಿಯನ್ನು ಲೈಂಗಿಕ ಕ್ರಿಯೆಗೆ ಕರೆದರು ಎಂದು ಬಿಹಾರ ಮೂಲದ ವ್ಯಕ್ತಿ ಮಾಡಿದ್ದ ಆರೋಪ ಸುಳ್ಳು ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ. ವಿಶಾಲ್ ತಿವಾರಿ ಎಂಬಾತ ಮಾಧ್ಯಮಗಳ ಎದುರು ಈ ಆರೋಪ ಮಾಡಿದ್ದ. ಮಂಗಳವಾರ ರಾತ್ರಿ ವಿಶಾಲ್ ತಿವಾರಿ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ, ವಿರೂಪಾಕ್ಷಪುರದಲ್ಲಿ ನಾಲ್ವರು ಅಪರಿಚಿತರು ತನ್ನೊಂದಿಗೆ ಗಲಾಟೆ ಮಾಡುತ್ತಿರುವುದಾಗಿ ದೂರು ನೀಡಿದ್ದಾನೆ. ಈ ಸಂಬಂಧ ಮಾಹಿತಿ ಪಡೆದ ಹೊಯ್ಸಳ ಗಸ್ತು ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ ಮುನಿರಾಜು ಹಾಗೂ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿದ್ದಾರೆ.
ಈ ವೇಳೆ ವಿಶಾಲ್ ತಿವಾರಿ ಈ ನಾಲ್ವರು ವಿನಾಕಾರಣ ತನ್ನೊಂದಿಗೆ ಜಗಳ ತೆಗೆದು ಹೊಡೆದರು ಎಂದು ಆರೋಪಿಸಿದ್ದಾನೆ. ಈ ವೇಳೆ ಹೊಯ್ಸಳ ಸಿಬ್ಬಂದಿ ಆ ನಾಲ್ವರನ್ನು ವಿಚಾರಣೆ ಮಾಡಿದಾಗ ಅವರು ಮದ್ಯ ಸೇವಿಸಿರುವುದು ಕಂಡು ಬಂದಿದೆ. ಈ ಸಂಬಂಧ ಪೊಲೀಸ್ ಠಾಣೆಗೆ ಬಂದು ದೂರು ನೀಡುವಂತೆ ವಿಶಾಲ್ ತಿವಾರಿಗೆ ತಿಳಿಸಿದ ಹೊಯ್ಸಳ ಸಿಬ್ಬಂದಿ, ದೂರನ್ನು ಮುಕ್ತಾಯ ಗೊಳಿಸಿ ಸ್ಥಳದಿಂದ ಹೊರಟಿದ್ದಾರೆ. ಈ ಘಟನೆ ಎಎಸ್‌ಐ ಮುನಿರಾಜು ಧರಿಸಿದ್ದ ಬಾಡಿ ವಾರ್ನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಲ ಸಮಯದ ಬಳಿಕ ವಿಶಾಲ್ ತಿವಾರಿ ತನ್ನ ಪತ್ನಿಯನ್ನು ಸ್ಥಳಕ್ಕೆ ಕರೆಸಿಕೊಂಡು ನಾಲ್ವರು ತನಗೆ ಹೊಡೆದ ವಿಚಾರವನ್ನು ತಿಳಿಸಿದ್ದಾನೆ.
ರಾಕ್ಷಸ ಪರಾರಿಯಾದ ಬಗ್ಗೆ ಪ್ರಧಾನಿ ಮೋದಿ ಹೇಳಲಿ: ರಾಹುಲ್ ಗಾಂಧಿ
ಈ ವೇಳೆ ಆ ನಾಲ್ವರು ಅಪರಿಚಿತರು ವಿಶಾಲ್ ತಿವಾರಿ ಮತ್ತು ಆತನ ಪತ್ನಿಯನ್ನು ಬೈದಿದ್ದಾರೆ. ಇದೇ ಸಮಯಕ್ಕೆ ಮಾಧ್ಯಮದವರು ಆ ಸ್ಥಳಕ್ಕೆ ಬಂದಾಗ, ಈ ನಾಲ್ವರು ತನ್ನ ಹೆಂಡತಿ ಜತೆಗೆ ಅಸಭ್ಯವಾಗಿ ವರ್ತಿಸಿದರು. ಲೈಂಗಿಕ ಕ್ರಿಯೆಗೆ ಆಹ್ವಾನಿಸಿದರು ಎಂದು ವಿಶಾಲ್ ತಿವಾರಿ ಆರೋಪಿಸಿದ್ದಾನೆ. ಈ ಸಂಬಂಧ ಕೊಡಿಗೇಹಳ್ಳಿ ಠಾಣೆ ಪೊಲೀಸರು, ವಿಶಾಲ್ ತಿವಾರಿ ಮತ್ತು ಆತನ ಪತ್ನಿಯನ್ನು ಕರೆಸಿ ವಿಚಾರಣೆ ಮಾಡಿದಾಗ, ಆ ನಾಲ್ವರು ಅಪರಿಚಿತರು ಮತ್ತು ನಮ್ಮ ನಡುವೆ ವಾಗ್ವಾದವಾಗಿದೆ. ಅವರು ಲೈಂಗಿಕ ವಿಚಾರ ಮಾತನಾಡಿಲ್ಲ ಎಂದು ದಂಪತಿ ಹೇಳಿದ್ದಾರೆ. ಅಂತೆಯೇ ಘಟನೆ ಸಂಬಂಧ ದೂರು ನೀಡಲು ನಿರಾಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.