ಪಾಕಿಸ್ತಾನದಿಂದ ಹೊರಹಾಕಲ್ಪಟ್ಟ ಅಫ್ಘಾನ್ ನಿರಾಶ್ರಿತ ಬಾಲಕಿಯ ಮುಗ್ಧ ನಗುವಿನ ವಿಡಿಯೋ ವೈರಲ್ ಆಗಿದೆ. ಛಾಯಾಗ್ರಾಹಕ ಮೊಹಮ್ಮದ್ ಉಸ್ಮಾನ್ "ಮುಸ್ಕಾನ್" ಎಂದು ಹೆಸರಿಟ್ಟ ಈ ಬಾಲಕಿ, ಕಷ್ಟದ ಪರಿಸ್ಥಿತಿಯಲ್ಲೂ ನಗುತ್ತಿರುವುದು ನೆಟ್ಟಿಗರ ಮನಗೆದ್ದಿದೆ. ಲಕ್ಷಾಂತರ ವೀಕ್ಷಣೆ ಪಡೆದ ಈ ವಿಡಿಯೋ, ಮಾನವೀಯತೆಯ ಸ್ಪರ್ಶವನ್ನು ಮೆರೆದಿದೆ.
ಮುಗ್ದ ಮಗುವಿನ ವಿಡಿಯೋ (Video) ಒಂದು ನೆಟ್ಟಿಗರ ಮನಸ್ಸು ಕದ್ದಿದೆ. ಅದೆಷ್ಟೇ ಟೆನ್ಷನ್ ನಲ್ಲಿದ್ರೂ ಈ ವಿಡಿಯೋ ನೋಡಿದ್ರೆ ಮನಸ್ಸು ಹಗುರಾಗದೆ ಇರದು. ಹೊಳೆಯುವ ಕಣ್ಣಿನ ಸುಂದರ ಹುಡುಗಿ ಮುಖದಲ್ಲಿ ಮೂಡಿದ ನಗು, ನೋಡುಗರ ಮುಖದಲ್ಲೂ ನಗು ಮೂಡಿಸಿದೆ. ಮಗುವಿನ ಪಾಲಕರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ಮುಂದಿನ ಭವಿಷ್ಯ ಹೇಗೆ ಎನ್ನುವ ಚಿಂತೆಯಲ್ಲಿದ್ದಾರೆ. ಪಾಕಿಸ್ತಾನದ ಕ್ರೂರ ನಿರ್ಧಾರದಿಂದ ಅವರು ಬದುಕು ಬೀದಿ ಪಾಲಾಗಿದೆ. ಆದ್ರೆ ಅದ್ಯಾವುದರ ಪರಿವೆಯೂ ಇಲ್ಲದ ಮಗು ಮಾತ್ರ, ಸ್ವಚ್ಛ ಮನಸ್ಸಿನಿಂದ ನಗ್ತಿದೆ.
ಫೋಟೋಗ್ರಾಫರ್ ಮೊಹಮ್ಮದ್ ಉಸ್ಮಾನ್ ಅಜೀಜಿ (Mohammad Usman Azizi) ಈ ಪುಟ್ಟ ಹುಡುಗಿಯ ಮುಗ್ಧತೆಯನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಉಸ್ಮಾನ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್ ಮಾಡಿ, ಜಲಾಲಾಬಾದ್ನ ತೋರ್ಖಾಮ್ ಕ್ರಾಸಿಂಗ್ನಲ್ಲಿ, ನನ್ನ ಕಣ್ಣುಗಳು ತಾಯಿಯ ಮಡಿಲಲ್ಲಿ ನಗುತ್ತಿದ್ದ ಮುಗ್ಧ ಹುಡುಗಿಯ ಮೇಲೆ ಬಿದ್ದವು. ಅವಳ ಕಣ್ಣು ಹಾಗೂ ಅವಳ ನಗು ನನ್ನನ್ನು ಅಲ್ಲೇ ಹಿಡಿದಿಟ್ಟಿತ್ತು. ಅವಳ ಹೊಳೆಯುವ ಕಣ್ಣುಗಳು ನನ್ನನ್ನು ಅವಳ ಕಡೆಗೆ ಎಳೆಯುತ್ತಿದ್ದವು ಎಂದು ಶೀರ್ಷಿಕೆ ಹಾಕಿದ್ದಾರೆ. ತಮ್ಮ ಪೋಸ್ಟ್ ಮುಂದುವರೆಸಿದ ಮೊಹಮ್ಮದ್ ಉಸ್ಮಾನ್, ನನಗೆ ಅವಳ ಹೆಸರು ತಿಳಿದಿಲ್ಲ. ನಾನು ಅವಳಿಗೆ ಮುಸ್ಕಾನ್ ಎಂದು ಹೆಸರಿಟ್ಟಿದ್ದೇನೆ. ಪಾಕಿಸ್ತಾನವು ಬಲವಂತವಾಗಿ ತಮ್ಮ ದೇಶದಿಂದ ಹೊರಹಾಕಲ್ಪಟ್ಟ ಸಾವಿರಾರು ಆಫ್ಘನ್ ನಿರಾಶ್ರಿತರಲ್ಲಿ ಇವರು ಒಬ್ಬರು ಎಂದು ಬರೆದಿದ್ದಾರೆ.
ಮೊಹಮ್ಮದ್ ಉಸ್ಮಾನ್ ಅಜೀಜಿ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ @mohosmanazizi ನಲ್ಲಿ ಹಂಚಿಕೊಂಡ ಈ ವೀಡಿಯೊ ವೇಗವಾಗಿ ವೈರಲ್ ಆಗ್ತಿದೆ. ಈವರೆಗೆ 47 ಲಕ್ಷಕ್ಕೂ ಹೆಚ್ಚು ಲೈಕ್ ಬಂದಿದೆ. ಸುಮಾರು 5 ಕೋಟಿ ವೀವ್ಸ್ ಪಡೆದಿದೆ. ನೂರಾರು ಮಂದಿ ಈ ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ಕಮೆಂಟ್ ಸೆಕ್ಷನ್ ನಲ್ಲಿ ಹಾರ್ಟ್ ಎಮೋಜಿ ತುಂಬಿ ಹೋಗಿದೆ. ಈ ಹುಡುಗಿ ಕಣ್ಣೇ ಎಲ್ಲವನ್ನೂ ಹೇಳ್ತಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಈಕೆ ನಗುವೊಂದು ಸಾಕು ನೋವು ಮರೆಯೋಕೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಮಕ್ಕಳ ಮುಗ್ದತೆ ಇಡೀ ಜಗತ್ತನ್ನು ಗೆಲ್ಲುತ್ತದೆ ಎಂದಿರುವ ಬಳಕೆದಾರರು, ಎಲ್ಲ ಮಕ್ಕಳು ಸದಾ ಹೀಗೆ ನಗ್ತಿರಲಿ ಎಂದು ಹರಸಿದ್ದಾರೆ.
ಅಫ್ಘಾನಿಗಳನ್ನು ಹೊರ ಹಾಕ್ತಿರುವ ಪಾಕಿಸ್ತಾನ : ಕಳೆದ ಹಲವಾರು ದಶಕಗಳಿಂದ ಲಕ್ಷಾಂತರ ಅಫ್ಘಾನ್ ನಾಗರಿಕರು ಪಾಕಿಸ್ತಾನದಲ್ಲಿ ಆಶ್ರಯ ಪಡೆಯುತ್ತಿದ್ದರು. ಆದರೆ ಸೆಪ್ಟೆಂಬರ್ 2023 ರಲ್ಲಿ ಪಾಕಿಸ್ತಾನ, ಅಕ್ರಮ ವಿದೇಶಿ ಪ್ರಜೆಗಳನ್ನು ತಮ್ಮ ದೇಶದಿಂದ ವಾಪಸ್ ಕಳುಹಿಸುವ ಾಭಿಯಾನ ಪ್ರಾರಂಭಿಸಿತು. ಈ ಯೋಜನೆಯ ಮೊದಲ ಹಂತದಲ್ಲಿ, ದಾಖಲೆಗಳಿಲ್ಲದೆ ವಾಸಿಸುತ್ತಿರುವ ಅಫಘಾನ್ ನಾಗರಿಕರನ್ನು ಬಲವಂತವಾಗಿ ಮತ್ತು ಸ್ವಯಂಪ್ರೇರಣೆಯಿಂದ ವಾಪಸ್ ಕಳುಹಿಸಲಾಯಿತು. ಮಾರ್ಚ್ 7 ರಂದು ಪಾಕಿಸ್ತಾನ ಅಭಿಯಾನದ ಎರಡನೇ ಹಂತವನ್ನು ಘೋಷಿಸಿದೆ. ಏಪ್ರಿಲ್ 3 ರಿಂದ ಮೇ 3 ರವರೆಗೆ, 1 ಲಕ್ಷ 9 ಸಾವಿರ ಅಫ್ಘಾನ್ ನಾಗರಿಕರು ಪಾಕಿಸ್ತಾನದಿಂದ ತಮ್ಮ ದೇಶಕ್ಕೆ ಮರಳಿದ್ದಾರೆ. ಮನೆ, ಆಸ್ತಿ ಮತ್ತು ಉದ್ಯೋಗ ತೊರೆದು ಅವರು ತವರಿಗೆ ಮರಳುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲೂ ಇವರಿಗೆ ಸೂಕ್ತ ವ್ಯವಸ್ಥೆ ಇಲ್ಲ. ಇದ್ರಿಂದ ವಲಸಿಗರ ಸ್ಥಿತಿ ಗಂಭೀರವಾಗಿದೆ. ಈಗ ಗಮನ ಸೆಳೆದ ಮುದ್ದು ಬಾಲಕಿ ಕೂಡ ಪಾಕಿಸ್ತಾನ ಹೊರ ಹಾಕಿದ ಅಫ್ಘಾನಿಗಳಲ್ಲಿ ಒಬ್ಬಳು.


