* 6 ದಿನದಲ್ಲಿ ರಷ್ಯಾ ನಾನಾ ರಣತಂತ್ರ* ಮೊದಲಿಗೆ ವಾಯುನೆಲೆ ಮೇಲೆ ದಾಳಿ* ನಂತರ ರಾಕೆಟ್‌ ದಾಳಿ, ಬಾಂಬ್‌ ಸ್ಫೋಟ* ರಷ್ಯಾದಿಂದ ಪರಮಾಣು ಸಬ್‌ಮರೀನ್‌, ಕ್ಷಿಪಣಿ ನಿಯೋಜನೆ ಆರಂಭ

ಮಾಸ್ಕೋ(ಮೇ. 02) ಕಳೆದ 6 ದಿನಗಳಿಂದ ಉಕ್ರೇನ್‌ (Ukraine) ಮೇಲೆ ದಾಳಿ ನಡೆಸುತ್ತಿರುವ ರಷ್ಯಾ (Russia) ಈ ಅವಧಿಯಲ್ಲಿ ತನ್ನ ದಾಳಿಯಲ್ಲಿ ನಾನಾ ರಣತಂತ್ರ ಬಳಸುತ್ತಿರುವುದು ಕಂಡುಬಂದಿದೆ. ಮೊದಲಿಗೆ ಉಕ್ರೇನ್‌ ಗಡಿಯಲ್ಲಿ ಗೌಪ್ಯವಾಗಿ ಲಕ್ಷಾಂತರ ಸೈನಿಕರ ನಿಯೋಜಿಸಲಾಗಿತ್ತು. ನಂತರ ಫೆ.24ರಂದು ಏಕಾಏಕಿ ಯುದ್ಧ ಘೋಷಿಸಿ ಮೊದಲಿಗೆ ದೇಶದ ವಾಯು ರಕ್ಷಣಾ ವ್ಯವಸ್ಥೆ, ಸೇನಾ ನೆಲೆ ಮತ್ತು ವಿಮಾನ ನಿಲ್ದಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿತು. ಈ ಮೂಲಕ ಉಕ್ರೇನ್‌ನ ಮಿಲಿಟರಿ ಸೌಕರ‍್ಯ, ವಾಯುನೆಲೆ, ಗೋದಾಮು ನಾಶಗೊಳಿಸುವ ಉದ್ದೇಶ ಈಡೇರಿಸಿಕೊಂಡಿತು. ನಂತರ ಸುಖೋಯ್‌-25 ವಿಮಾನಗಳ ಮೂಲಕ ಉಕ್ರೇನ್‌ ಪಡೆಗಳ ಮೇಲೆ ನಿರಂತರ ದಾಳಿ ನಡೆಸಿತು.

ಬಳಿಕ ರಾಜಧಾನಿ ಕೀವ್‌ ಮೇಲೆ ಬಾಂಬ್‌ ಮತ್ತು ರಾಕೆಟ್‌ ದಾಳಿ ನಡೆಸುವ ಜೊತೆಗೆ ಭೂದಾಳಿ ಪ್ರಮಾಣ ಹೆಚ್ಚಿಸಿತ್ತು. ಈ ಮೂಲಕ ಹೆಚ್ಚು ಜನರು ಇರುವ ಜನವಸತಿ ಪ್ರದೇಶಗಳಲ್ಲಿ ಹೆಚ್ಚಿನ ಸಾವು ನೋವು ಆಗದಂತೆ ನೋಡಿಕೊಂಡಿತ್ತು. ಜೊತೆಗೆ ಸಣ್ಣ ಸಣ್ಣ ತಂಡಗಳನ್ನು ದಾಳಿಗೆ ಕಳಿಸುವ ಮೂಲಕ ಎದುರಾಳಿಗಳನ್ನು ಹಿಮ್ಮಟ್ಟಿಸುವ ಕೆಲಸ ಮಾಡಿತ್ತು. ಆದರೆ ನಾಲ್ಕನೇ ದಿನದ ನಂತರ ಇದೀಗ ಮತ್ತೆ ದೊಡ್ಡ ಪ್ರಮಾಣದಲ್ಲಿ ಆಗಸದ ಮೂಲಕ ದಾಳಿ ನಡೆಸುವುದರ ಜೊತೆಜೊತೆಗೆ ಭೂ ಸೇನೆಯನ್ನೂ ದೊಡ್ಡ ಮಟ್ಟದಲ್ಲಿ ನುಗ್ಗಿಸಿ ನಗರ ಪ್ರದೇಶಗಳ ವಶಕ್ಕೆ ಯತ್ನಿಸುತ್ತಿದೆ.

ಈ ನಡುವೆ ಅದು ಉಕ್ರೇನ್‌ನ ಪ್ರಮುಖ ಆದಾಯದ ಮೂಲವಾಗಿರುವ ತೈಲ ಬಂಕರ್‌ಗಳು, ಅನಿಲ ಪೂರೈಕೆ ಜಾಲದ ಮೇಲೆ ದಾಳಿ ನಡೆಸಿ ಆರ್ಥಿಕವಾಗಿ ಹೊಡೆತ ನೀಡುವ ಯೋಜನೆ ರೂಪಿಸಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ಉಕ್ರೇನ್‌ ಹಲವೆಡೆ ಮೊಬೈಲ್‌ ಟವರ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಇದು ಜನರ ನಡುವಿನ ಸಂವಹನ ಕಡಿತ ಮಾಡುವ ಮೂಲಕ ತನ್ನ ಮೇಲಿನ ದಾಳಿಯನ್ನು ತಡೆ¿ಲು ರಷ್ಯಾ ಹೂಡಿರುವ ತಂತ್ರವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಪುಟಿನ್‌ ಅಣ್ವಸ್ತ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಸೂಚಿಸಿದ್ದೇ ಈ ಕ್ರಮ: ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಉಕ್ರೇನ್‌ ವಿರುದ್ಧ ದಾಳಿ ನಡೆಸಲು ಅಣ್ವಸ್ತ್ರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲು ಸೂಚನೆ ನೀಡಿದ ಬೆನ್ನಲ್ಲೇ, ರಷ್ಯಾ ಸೇನೆ ಪರಮಾಣು ಜಲಾಂತರ್ಗಾಮಿ ನೌಕೆಗಳು ಬಾರೆಂಟ್ಸ್‌ ಸಮುದ್ರದಲ್ಲಿ ಯುದ್ಧಾಭ್ಯಾಸವನ್ನು ಆರಂಭಿಸಿವೆ. ಅದೇ ರೀತಿ ಸೈಬೀರಿಯಾದ ಹಿಮಚ್ಛಾದಿತ ಕಾಡುಗಳಲ್ಲಿ ರಷ್ಯಾದ ಮೊಬೈಲ್‌ ಕ್ಷಿಪಣಿ ಲಾಂಚರ್‌ಗಳು ಸಂಚರಿಸುತ್ತಿವೆ ಎನ್ನಲಾಗಿದೆ.

ಸಮುದ್ರದಲ್ಲಿ ಬಿರುಗಾಳಿಯಂತಹ ಕಠಿಣ ಪರಿಸ್ಥಿತಿಯಲ್ಲೂ ಸಮರ್ಥವಾಗಿ ಕಾರ್ಯನಿರ್ವಹಿಸಲು ಪರಮಾಣು ಜಲಾಂತರ್ಗಾಮಿ ನೌಕೆಗಳು ಅಭ್ಯಾಸ ಆರಂಭಿಸಿವೆ. ವಾಯುವ್ಯ ರಷ್ಯಾದ ಕೋಲಾ ಪರ್ಯಾಯ ದ್ವೀಪದ ರಕ್ಷಣೆಗೆ ನಿಯೋಜಿಸಲಾಗುವ ಜಲಾಂತರ್ಗಾಮಿ ನೌಕೆಗಳು ಈ ಸಾಮರ್ಥ್ಯ ಹೊಂದಿರುತ್ತವೆ ಎಂದು ರಷ್ಯಾದ ಉತ್ತರದ ನೌಕಾಪಡೆಗಳು ಹೇಳಿವೆ. ಪೂರ್ವ ಸೈಬೀರಿಯಾದ ಇರ್ಕುಟ್ಸ್‌ಕ್‌ ಕಾಡುಗಳಲ್ಲಿ ಕಾರ್ಯತಂತ್ರದ ಕ್ಷಿಪಣಿ ಪಡೆಗಳ ಘಟಕಗಳು ಯಾರ್ಸ್‌ ಖಂಡಾಂತರ ಕ್ಷಿಪಣಿ ಲಾಂಚರ್‌ಗಳನ್ನು ರಹಸ್ಯವಾಗಿ ನಿಯೋಜಿಸಿ ತಾಲೀಮು ಆರಂಭಿಸಿವೆ ಎಂದು ಮೂಲಗಳು ತಿಳಿಸಿವೆ.

Russia Ukraine War ರಷ್ಯಾ ಉಕ್ರೇನ್ ಎರಡನೇ ಸುತ್ತಿನ ಮಾತುಕತೆಗೆ ಒಪ್ಪಿಗೆ, ಮಾ.2ಕ್ಕೆ ಸಂಧಾನ ಸಭೆ!

ರಷ್ಯಾ ಪರಮಾಣು ಜಲಾಂತರ್ಗಾಮಿ ನೌಕೆಗಳು ಹಾಗೂ ಕ್ಷಿಪಣಿಗಳ ಅಭ್ಯಾಸವನ್ನು ಉಕ್ರೇನಿನ ಮೇಲೆ ದಾಳಿ ನಡೆಸಲೆಂದೇ ಆರಂಭಿಸಿದೆ ಎನ್ನಲಾಗುತ್ತಿದ್ದು, ಈ ಕುರಿತು ರಷ್ಯಾ ಸೇನೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ರಷ್ಯಾ ಜೊತೆ ಯುರೋಪ್‌ ಬಾಹ್ಯಾಕಾಶ ಮೈತ್ರಿ ಕಟ್‌: ರಷ್ಯಾ ಉಕ್ರೇನಿನ ಮೇಲೆ ಯುದ್ಧವನ್ನು ಘೋಷಿಸಿದ್ದಕ್ಕಾಗಿ ಯುರೋಪಿಯನ್‌ ಬಾಹ್ಯಾಕಾಶ ಸಂಸ್ಥೆಯು ಮಾಸ್ಕೋದ ಜೊತೆಗಿನ ಬಾಹ್ಯಾಕಾಶದ ಸಂಬಂಧವನ್ನು ಕೊನೆಗೊಳಿಸಿವೆ.ಯುರೋಪಿಯನ್‌ ಬಾಹ್ಯಾಕಾಶ ಏಜೆನ್ಸಿ ರಷ್ಯಾದ ಮೇಲೆ ಪೂರ್ಣ ಪ್ರಮಾಣದ ನಿರ್ಬಂಧಗಳನ್ನು ಹೇರಿದ್ದು, ಮಾಸ್ಕೋದ ಬಾಹ್ಯಾಕಾಶ ಸಂಸ್ಥೆ ರೊಸ್‌ಕೊಸ್ಮೋಸ್‌ನ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ನೀಡುತ್ತಿರುವ ಸಹಕಾರವನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ರಷ್ಯಾ ಕಳೆದ ವರ್ಷ ಘೋಷಿಸಿದ ಎಕ್ಸೋಮಾರ್ಸ್‌ ಮಿಶನ್‌ಕ್ಕೆ ಬಲವಾದ ಪೆಟ್ಟುಬಿದ್ದಿದೆ. ಮಂಗಳ ಗ್ರಹದ ಮೇಲೆ ಜೀವಿಗಳು ನೆಲೆಸಿದ್ದವೇ ಎಂಬುವುದನ್ನು ಪತ್ತೆಹಚ್ಚಲು ಯುರೋಪಿನ ಮೊದಲ ರೋವರ್‌ ಅನ್ನು ಕಳುಹಿಸುವ ಉದ್ದೇಶವನ್ನು ಈ ಯೋಜನೆ ಹೊಂದಿತ್ತು.ಈಗಾಗಲೇ ಕೋವಿಡ್‌ ಸಾಂಕ್ರಾಮಿಕ ಹಾಗೂ ತಾಂತ್ರಿಕ ಸಮಸ್ಯೆಯಿಂದಾಗಿ ಮುಂದೂಡಲಾದ ಈ ಯೋಜನೆಯನ್ನು ಯುರೋಪಿಯನ್‌ ದೇಶಗಳ ಸಹಕಾರವಿಲ್ಲದೇ ಯೋಜಿತ ಅವಧಿಯಲ್ಲಿ ಪೂರ್ಣಗೊಳಿಸುವುದು ಕಷ್ಟಸಾಧ್ಯವಾಗಿದೆ.