* ನಾವಿಕ 6ನೇ ವಿಶ್ವ ಕನ್ನಡ ಸಮಾವೇಶಕ್ಕೆ  ಸಮರೋಪಾದಿಯಲ್ಲಿ  ಸಿದ್ಧತೆ !* ವರ್ಚುವಲ್ ಕಾರ್ಯಕ್ರಮಗಳನ್ನು ಎಲ್ಲರೂ ನೋಡಬಹುದು* ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟನೆ

ಬೆಂಕಿ ಬಸಣ್ಣ , ನ್ಯೂಯಾರ್ಕ್

ನ್ಯೂಯಾರ್ಕ್(ಆ. 23) ಆಗಸ್ಟ್‌ 27, 28 29 ರಂದು ಮೂರು ದಿನಗಳ ಕಾಲ ನಡೆಯಲಿರುವ 6ನೇ ನಾವಿಕ ವಿಶ್ವ ಕನ್ನಡ ವರ್ಚುಯಲ್‌ ಸಮಾವೇಶಕ್ಕೆ ಸಮರೋಪಾದಿಯಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಲಿವೆ.

ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯ ಹಿರಿಮೆಯನ್ನು ತಮ್ಮ ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗುವ ಅನೇಕ ಪ್ರಯತ್ನಗಳಲ್ಲಿ ಒಂದು ಭಾಗವಾಗಿ ನಾವಿಕ ಸಂಸ್ಥೆಯು ವಿಶ್ವ ಕನ್ನಡ ಸಮ್ಮೇಳನಗಳನ್ನು ಸಂಯೋಜಿಸುತ್ತಾ ಬಂದಿದೆ. ಈ 6ನೇ ವಿಶ್ವ ಕನ್ನಡ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಈ ಸಮಾವೇಶದಲ್ಲಿ ಪ್ರಪಂಚದ ವಿವಿಧ ದೇಶಗಳ ನೂರಾರು ಕನ್ನಡ ಸಂಘಗಳು ಭಾಗವಹಿಸಲಿವೆ ಮತ್ತು ಈ ಸಮಾವೇಶದ ವೈವಿಧ್ಯಮಯ ಕಾರ್ಯಕ್ರಮಗಳು ನಾವಿಕ ವೆಬ್ ಸೈಟ್ ನ 5 ಪ್ರತ್ಯೇಕ ಚಾನೆಲ್ಲುಗಳಲ್ಲಿ ಏಕಕಾಲದಲ್ಲಿ ಪ್ರಸಾರವಾಗಲಿವೆ. ಕರ್ನಾಟಕದಲ್ಲಿ ವಾಸಿಸುವ ಜನರು ಈ ಕಾರ್ಯಕ್ರಮಗಳನ್ನು ಉಚಿತವಾಗಿ ನೋಡಬಹುದು. ವಿದೇಶಗಳಲ್ಲಿ ನೆಲಸಿರುವ ಕನ್ನಡಿಗರು 25 ಅಮೆರಿಕನ್ ಡಾಲರ್ ಕೊಟ್ಟು ಮನೆಮಂದಿಯೆಲ್ಲಾ ವೀಕ್ಷಿಸಬಹುದು.

ಅನಿವಾಸಿ ಭಾರತೀಯರಿಗೆ ವಿವಿಧ ಸ್ಪರ್ಧೆಗಳು


ಅನಿವಾಸಿಯರು ಮಾತ್ರವಲ್ಲದೇ ಕರ್ನಾಟಕದ ಖ್ಯಾತನಾಮ ಕಲಾವಿದರಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಖ್ಯಾತ ಹಿನ್ನೆಲೆ ಗಾಯಕ ಹೇಮಂತ ಮತ್ತು ಅವರ ತಂಡದಿಂದ ʻಹೇಮಂತ್‌ ರಾಗʼ, ಝೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ಹಾಡಿ ಎಲ್ಲೆಡೆ ಮನೆಮಾತಾಗಿರುವ ಸುಮಾರು 14 ಗಾಯಕರ ತಂಡದಿಂದ ʻಸುರ್ ತರಂಗʼ – ಫ್ಯೂಷನ್‌ ಹಾಡುಗಳ ಕಾರ್ಯಕ್ರಮ, ಜಿಯೋಶ್ರೆಡ್‌ ಆಪ್‌ ಬಳಸಿ ಐಪ್ಯಾಡಿನ ಮೂಲಕ ವಿನೂತನ ವಾದ್ಯ ನುಡಿಸಿ ಶಾಸ್ರ್ತೀಯ ಸಂಗೀತಕ್ಕೆ ಫ್ಯೂಷನ್‌ ಲೇಪ ನೀಡಿ ಪ್ರಖ್ಯಾತರಾಗಿರುವ ಮಹೇಶ್‌ ರಾಘವನ್‌ ಹಾಗೂ ಶ್ರವಣ್‌ ಶ್ರೀಧರ್ ʻಸ್ವರಾಲಾಪʼ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ವಿಶ್ವದೆಲ್ಲೆಡೆ ಭಾರತೀಯರ ಮನಸ್ಸು ಗೆದ್ದ ಬಾಲ ಪ್ರತಿಭೆ ಶಾಸ್ರ್ತೀಯ ಸಂಗೀತ ಗಾಯಕ ರಾಹುಲ್‌ ವೆಲ್ಲಾಳರಿಂದ ʻಸ್ವರಸಂಗಮʼ ಸಂಗೀತ, ಮನೋಜ್‌ ವಸಿಷ್ಠ ಹಾಗೂ ಅರುಂಧತಿ ವಸಿಷ್ಠ ಅವರಿಂದ ಭಾವಗೀತೆಗಳ ಕಾರ್ಯಕ್ರಮ ʻಭಾವಲಹರಿʼ, ಖ್ಯಾತ ಗಾಯಕಿ ಭೂಮಿಕ ಎಲ್‌ ಮಧುಸೂದನ ಅವರಿಂದ ಶಾಸ್ತ್ರೀಯ ಸಂಗೀತ - ಚಿತ್ರಗೀತೆಯ ಜುಗಲ್‌ಬಂದಿ, ಗಾಯಕಿ ಶ್ರೀಮತಿ ವಾಣಿ ಶಂಕರ್‌ ಹಾಗೂ ಗಾಯಕ ಮಹಮ್ಮದ್‌ ನವಾಜ್‌ ಅವರಿಂದ ʻಮಧುರಗಾನʼ, ಖಾನ್‌ ಬ್ರದರ್ಸ್ ಎಂದೇ ಖ್ಯಾತರಾಗಿರುವ ಹಫೀಸ್‌ ಖಾನ್‌ ಮತ್ತು ರಯೀಸ್‌ ಖಾನ್‌ ಮತ್ತವರ‌ 18 ಜನರ ತಂಡದಿಂದ ಸಿತಾರ ವಾದನ ಹಾಗೂ ಪುರಂದರದಾಸರ ಕೀರ್ತನೆಗಳ ಗಾಯನ, ತೇಜಸ್ವಿ ಅನಂತ್‌ ಅವರಿಂದ ವಿನೂತನ ಮಾದರಿಯ ಲೇಝರ್‌ ಶೋ - ʻಪಿಕ್ಸೆಲ್‌ ಪಾಯ್‌ʼ, ಹಾಗೂ ಎಂ.ಡಿ.ಕೌಶಿಕ್‌ ಅವರಿಂದ ಮ್ಯಾಜಿಕ್‌ ಶೋ ಕಾರ್ಯಕ್ರಮ ನಡೆಲಿದೆ.

ಕನ್ನಡ ಪ್ರತಿಭಾನ್ವೇಷಣೆ: ಅನಿವಾಸಿ ಕನ್ನಡ ಮಕ್ಕಳಿಗಾಗಿ ನಾವಿಕ ರೂಪಿಸಿದ ವಿಶೇಷ ಕಾರ್ಯಕ್ರಮವಿದು. ಇದರಲ್ಲಿ 5 ರಿಂದ 7 ವರ್ಷ ವಯಸ್ಸಿನ ಚಿಣ್ಣರಿಗಾಗಿ 'ಶಿಶು ಗೀತೆಗಳು' ಮತ್ತು 'ನೀತಿ ಕಥೆ' ಹೇಳುವ ಸ್ಪರ್ಧೆಗಳನ್ನು 8 ರಿಂದ 10 ವರ್ಷದ ವಯೋಮಾನದ ಮಕ್ಕಳಿಗಾಗಿ 'ಏಕಪಾತ್ರಾಭಿನಯ' ಮತ್ತು 'ವಿಷಯಾಧಾರಿತ ಮಾತು' ಎಂಬ ಎರಡು ಸ್ಪರ್ಧೆಗಳನ್ನು 11 ರಿಂದ 13 ವರ್ಷದ ಮಕ್ಕಳಿಗೆ 'ಏಕಪಾತ್ರಾಭಿನಯ' ಹಾಗೂ 'ಕರ್ನಾಟಕ ಸವಿರುಚಿ' ಸ್ಪರ್ಧೆ ಗಳನ್ನು ಮತ್ತು 14 ರಿಂದ 16 ವಯಸ್ಸಿನ ಮಕ್ಕಳಿಗೆ 'ಕನ್ನಡ ವಾರ್ತಾ ಪ್ರಸಾರ' ಹಾಗೂ 'ಕವನ ವಾಚನ' ಸ್ಪರ್ಧೆ ಗಳನ್ನೂ ಏರ್ಪಡಿಸಲಾಗಿತ್ತು . ಈ ಸ್ಪರ್ಧೆಗಳಲ್ಲಿ ವಿಜೇತರಾದ ಅಪ್ರತಿಮ ಮಕ್ಕಳ ಪ್ರತಿಭೆಯನ್ನು ತಪ್ಪದೇ ನೋಡಿ ಆನಂದಿಸಿ . ಕನ್ನಡ ಪ್ರತಿಭಾನ್ವೇಷಣೆ ಸಮಿತಿಯಲ್ಲಿ ನ್ಯೂ ಜೆರ್ಸಿಯ ಉಮಾ ಮೂರ್ತಿ, ಸಿಂಗಪುರದ ರಾಮನಾಥ್‌, ಟೋರಾಂಟೋದ ಸುಧಾ ಸುಬ್ಬಣ್ಣ, ಯುಎಸ್‌ಎನ ಮಂಗಳಾ ಉಡುಪ, ಉಷಾ ಬಸ್ರೂರ್‌, ಶ್ರೀನಿಧಿ ಹೊಳ್ಳ, ಶುಭ ಶಾಸ್ತ್ರೀ, ಜರ್ಮನಿಯ ಗೀತಾ ಮಾದಪ್ಪ ಮತ್ತು ಯುಕೆ ನಿವಾಸಿ ಶರತ್ಚಂದ್ರ ಶಿವಲಿಂಗಯ್ಯ ಕಾರ್ಯ ನಿರ್ವಹಿಸಿದ್ದಾರೆ.

ನಾವಿಕ ಅಂತ್ಯಾಕ್ಷರಿ, ನಾವಿಕ ಕೋಗಿಲೆ, ನಾವಿಕ ಬಾಣಸಿಗ ( ನಾ ಎಂತ ಕುಕ್‌) , ಛಾಯಾ ನಾವಿಕ (ಫೋಟೋಗ್ರಫಿ) ಹೀಗೆ ಅನೇಕ ಸ್ಪರ್ಧೆಗಳು ನಡೆಯಲಿವೆ . ನಾವಿಕ ಅಂತ್ಯಾಕ್ಷರಿಯ ಅಂತಿಮ ಹಂತದ ಸ್ಪರ್ಧೆಯನ್ನು ಬೆಂಗಳೂರಿನಿಂದ ಖ್ಯಾತ ಹಿನ್ನೆಲೆ ಗಾಯಕ ಚಿನ್ಮಯ್‌ ಅತ್ರೆಯಸ್‌ ನಡೆಸಿಕೊಡಲಿದ್ದಾರೆ. ಅಂತ್ಯಾಕ್ಷರಿ ಸ್ಪರ್ಧೆಯನ್ನು ನಡೆಸುವ ಸಮಿತಿಯಲ್ಲಿ ಶ್ರೀಧರ ರಾಜಣ್ಣ, ಚಿತ್ರ ರಾವ್‌, ಮಾಧವಿ, ಶ್ರೀನಿ, ಗೋಪಾಲ ಹಾಗೂ ಉಷಾ ಕುಮಾರ್ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಾವಿಕ ಕೋಗಿಲೆಯ ಅಂತಿಮ ಹಂತದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್‌ ಡಿ ರಾವ್‌, ಚಿನ್ಮಯ್‌ ಆತ್ರೇಯಸ್, ಮಂಗಳ ರವಿ ಮತ್ತು ಖ್ಯಾತ ಗಾಯಕ ಅಜಯ್‌ ವಾರಿಯರ್‌ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ. ಪ್ರಸನ್ನ ಕುಮಾರ್‌, ಗುರುಪ್ರಸಾದ್‌ ರವೀಂದ್ರ, ಶ್ರೇಯಸ್‌ ಶ್ರೀಕರ್, ಲಕ್ಷ್ಮೀ ಶೈಲೇಶ್‌ ಮತ್ತು ಮಂಗಳ ರವಿ ನಾವಿಕ ಕೋಗಿಲೆ ಸ್ಪರ್ಧೆಯ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ.

ನಾವಿಕ ಬಾಣಸಿಗ ( ನಾ ಎಂತ ಕುಕ್‌) ಹೆಸರಿನ ವಿನೂತನ ಮಾದರಿಯ ಮೊದಲ ಬಾರಿಗೆ ವರ್ಚುಯಲ್ಲಾಗಿ ನಡೆಯಲಿರುವ ಅಡುಗೆ ಸ್ಪರ್ಧೆ ಯನ್ನು ಹಿರಿಯ ನಟ ಸಿಹಿಕಹಿ ಚಂದ್ರು ನಡೆಸಿಕೊಡಲಿದ್ದಾರೆ. ಛಾಯಾ ನಾವಿಕ (ಫೋಟೋಗ್ರಫಿ) ಸ್ಪರ್ಧೆ ಯನ್ನು ಈ ಸಮ್ಮೇಳನದ ಟ್ಯಾಗ್ ಲೈನ್ ಆದ "ಭಾಷೆ, ಬಾಂಧವ್ಯ ಮತ್ತು ಭರವಸೆ" ಎಂಬ ಮೂರು ವಿಭಾಗಗಳಲ್ಲಿ ನಡೆಸಲಾಗಿದೆ.

ನಾವಿಕ 2021ರ ಸ್ಮರಣ ಸಂಚಿಕೆ 'ಭಾವಧಾರೆ' ಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ. ಎಸ್‌. ನಾಗಾಭರಣ ಬಿಡುಗಡೆ ಮಾಡಲಿದ್ದಾರೆ. ಈ ಸ್ಮರಣ ಸಂಚಿಕೆಯು ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಿಂದ ಕನ್ನಡಿಗರು ಬರೆದ ಲೇಖನಗಳು, ಕವಿತೆಗಳು, ಕಥೆಗಳನ್ನು ಒಳಗೊಂಡಿದೆ. ಇದರ ಜೊತೆಗೆ ನಾವಿಕ ಫೋಟೋಗ್ರಫಿ ಸ್ಪರ್ಧೆಯ ವಿಜೇತರು ತೆಗೆದ ಛಾಯಾಚಿತ್ರಗಳು, ಕವನ ಸ್ಪರ್ಧೆಯ ವಿಜೇತರು ಬರೆದ ಕವನಗಳು ಎಲ್ಲವನ್ನೂ ಸಂಚಿಕೆಯಲ್ಲಿ ಪ್ರಕಟಿಸಲಿದ್ದಾರೆ. ಸ್ಮರಣ ಸಂಚಿಕೆ ವಿಭಾಗದಲ್ಲಿ ಅಮೆರಿಕದ ಸಂಜೋತ ಪುರೋಹಿತ್‌, ಪುಷ್ಪಲತಾ ವೆಂಕಟರಾಮನ್, ನವೀನ್‌ ಉಳಿ, ಮತ್ತು ನರಸಿಂಹ ಮೂರ್ತಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಮೆರಿಕದಲ್ಲಿ ಗಣಪತಿ ಹಬ್ಬದ ಸಂಭ್ರಮ

ಈ ಸಮಾವೇಶದ ಪ್ರಮುಖ ಭಾಗವಾದ ಕನ್ನಡ ಸಾಹಿತ್ಯ ಚಟುವಟಿಕೆಗಳಿಗಾಗಿಯೇ ಪ್ರತ್ಯೇಕ ಚಾನೆಲ್‌ ತೆರೆಯಲಾಗಿದೆ. ಸ್ವರಚಿತ ಕವನ ಸ್ಪರ್ಧೆ, ಸಾಹಿತ್ಯ ಸಿಂಚನ, ಕನ್ನಡ ಸಾಹಿತ್ಯ ಪ್ರಕಾಶಕರ ಜೊತೆ ಸಂವಾದ, ರಸ ಪ್ರಶ್ನೆ ಹೀಗೆ ವಿವಿಧ ಸಾಹಿತ್ಯ ಚಟುವಟಿಕೆಗಳ ಈ ವಲಯಕ್ಕೆ ಡಾ. ಅಶೋಕ್‌ ಕಟ್ಟೀಮನಿ ನೇತೃತ್ವದಲ್ಲಿ ತ್ರಿವೇಣಿ ರಾವ್‌ , ಭಾಸ್ಕರ್‌ ತೈಲಗೇರಿ, ಪ್ರತಿಭಾ ಭಾಗವತ್‌ ಹಾಗೂ ಉಮೇಶ್‌ ಮೂರ್ತಿ ಜೊತೆಗೂಡಿ ಕಾರ್ಯ ನಿರ್ವಸಿದ್ದಾರೆ. ಕನ್ನಡ ಸಾಹಿತ್ಯ ಪ್ರಕಾಶಕರ, ಲೇಖಕರ ಜೊತೆ ಸಂವಾದ: 'ಕನ್ನಡ ಪುಸ್ತಕಗಳ ಡಿಜಿಟಲೀಕರಣ' – ಈ ವೇದಿಕೆಯಲ್ಲಿ ಖ್ಯಾತ ಬರಹಗಾರ ಜೋಗಿ, ವಸುದೇಂದ್ರ, ಪ್ರಕಾಶಕರಾದ ಅಂಕಿತ ಪ್ರಕಾಶನದ ಪ್ರಕಾಶ್‌ ಕಂಬತ್ತಳ್ಳಿ, ಟೋಟಲ್ ಕನ್ನಡದ ಲಕ್ಷ್ಮೀಕಾಂತ್‌, ಸಪ್ನ ಬುಕ್‌ಹೌಸಿನ ದೊಡ್ಡೇಗೌಡ, ಸಾವಣ್ಣ ಪ್ರಕಾಶನದ ಜಮೀಲ್ ಭಾಗವಹಿಸುತ್ತಾರೆ.

ತುಂಬಾ ತಮಾಷೆಯಾಗಿರುವ "ಅನಿವಾಸಿ ರಸಾನುಭವ" ಕಾರ್ಯಕ್ರಮದಲ್ಲಿ, ನಮ್ಮ ಕನ್ನಡಿಗರು ಭಾರತ ಬಿಟ್ಟು ಹೊರ ದೇಶಕ್ಕೆ ಬಂದಾಗ ಆಗುವ ಫಜೀತಿಗಳು, ವಿಚಿತ್ರ ಅನುಭವಗಳು, ತಮಾಷೆ, ಪೇಚಿಕೆ ಸಿಲುಕಿದ ಪ್ರಸಂಗಗಳು, ಅರಿಯದೇ ಸಿಲುಕಿಕೊಂಡು ಇಂಗು ತಿಂದ ಮಂಗನಂಥಾದ ತಮ್ಮ ಪರಿಸ್ಥಿತಿಯಗಳನ್ನು ಹಂಚಿಕೊಂಡಿದ್ದಾರೆ.

ಯೋಗ ಗುರು ಬಿ.ಕೆ. ಐಯಂಗಾರರ ಅನುಯಾಯಿಗಳಾದ ಶ್ರೀ ಕೃಷ್ಣ ಕುಮಾರ್ ʻಯೋಗ ನಾವಿಕʼ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ನಂತರ ಕುಮಾರ್‌ ಅವರು ಝುಂಬಾ ಡ್ಯಾನ್ಸ್‌ ʻಕುಣಿದು ಕುಣಿದು ಬಾʼ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಬೆಂಗಳೂರಿನ ಸಂಸ್ಕೃತಿ ಸೆಂಟರ್‌ ಫಾರ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ನ ಸುಚಿತ್ರ ಅಲ್ಕಾನಂದ ಮತ್ತು ತಂಡದಿಂದ ʻದಶಾವತಾರʼ ನೃತ್ಯ ರೂಪಕ, ಪಂಪಾ ಡ್ಯಾನ್ಸ್‌ ಅಕಾಡೆಮಿಯ ಶ್ರೀಮತಿ ನಿರ್ಮಲ ಆಧವ ಮತ್ತು ತಂಡಿದಿಂದ ʻನಾಮಸ್ಮರಣೆʼ ನೃತ್ಯ ರೂಪಕ ಮತ್ತು ಸಾಯಿ ಆರ್ಟ್ಸ್ ಇಂಟರ್‌ನ್ಯಾಷನಲ್‌ನ ಡಾ.ಸುಪರ್ಣಾ ವೆಂಕಟೇಶ ಹಾಗೂ ತಂಡದಿಂದ ಕತಕ್‌ನ ʻಉಮಂಗ್‌ʼ ಫ್ಯೂಷನ್‌ ನೃತ್ಯ ಕಾರ್ಯಕ್ರಮ ಪ್ರದರ್ಶನವಾಗಲಿವೆ‌.

ಇದರ ಜೊತೆಗೆ ವುಮೆನ್ಸ್ ಫೋರಮ್ , ಬಿಸಿನೆಸ್ ಫೋರಮ್, ಕ್ರಿಕೆಟ್ ಸಂವಾದ ಹೀಗೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ . ಎಲ್ಲ ಕಾರ್ಯಕ್ರಮ ಆಸ್ವಾದಿಸಲು www.navika.org ನಲ್ಲಿ ನೋಂದಾವಣೆ ಮಾಡಿಕೊಳ್ಳಿರಿ.