ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನ ಮತ್ತು ಸಂಸತ್ ಭವನವಾದ ಕ್ಯಾಪಿಟಲ್ ಹಿಲ್‌ನಿಂದ ಕೇವಲ 3 ಕಿ.ಮೀ ದೂರದ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ.

ಅರ್ಲಿಂಗ್ಟನ್(ಜ.31): ರನ್‌ವೇನಲ್ಲಿ ಇಳಿಯಲು ಆಗ ಮಿಸುತ್ತಿದ್ದ ವಿಮಾನವೊಂದಕ್ಕೆ ಸೇನಾ ಹೆಲಿಕಾಪ್ಟರ್ ಆಗಸದಲ್ಲೇ ಡಿಕ್ಕಿ ಹೊಡೆದ ಭೀಕರ ಘಟನೆಯೊಂದು ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನ ಹೊರವಲಯದ ವಿಮಾನ ನಿಲ್ದಾಣ ವೊಂದರಲ್ಲಿ ಬುಧವಾರ ಸಂಭವಿಸಿದೆ. ಘಟನೆಯಲ್ಲಿ ಎಲ್ಲಾ 67 ಜನರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನ ಮತ್ತು ಸಂಸತ್ ಭವನವಾದ ಕ್ಯಾಪಿಟಲ್ ಹಿಲ್‌ನಿಂದ ಕೇವಲ 3 ಕಿ.ಮೀ ದೂರದ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ.

ಘಟನೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ. ಘಟನಾ ಸ್ಥಳದಿಂದ ಭಾರತೀಯ ಕಾಲಮಾನ ಗುರುವಾರ ರಾತ್ರಿಯವರೆಗೆ 30 ಶವಗಳನ್ನು ಪತ್ತೆ ಹಚ್ಚಲಾಗಿದೆ. ಉಳಿದವರು ಕೂಡ ಬದುಕುಳಿದಿರುವ ಸಾಧ್ಯತೆ ತೀರಾ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಾಯ್ತು?: 

ನಾಲ್ವರು ಸಿಬ್ಬಂದಿ ಮತ್ತು 60 ಪ್ರಯಾಣಿಕರನ್ನು ಹೊತ್ತಿದ್ದ ಅಮೆರಿಕನ್ ಏರ್ ಲೈನ್ಸ್‌ಗೆ ಸೇರಿದ ವಿಮಾನ ಕನಾಸ್‌ನ ವಿಚಿಟಾ ನಗದಿಂದ ಆಗಮಿಸಿ ರೊನಾಲ್ಡ್ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲು ಸಜ್ಜಾಗುತ್ತಿತ್ತು. ಈ ವೇಳೆ ಮೂವರು ಯೋಧರನ್ನು ಹೊತ್ತಿದ್ದ ಸೇನಾ ಹೆಲಿಕಾಪ್ಟರ್ ಏಕಾಏಕಿ ಅದೇ ಮಾರ್ಗದಲ್ಲಿ ಬಂದು ವಿಮಾನಕ್ಕೆ ಡಿಕ್ಕಿ ಹೊಡೆದು ಭೀಕರ ದುರ್ಘಟನೆ ಸಂಭವಿಸಿದೆ. ವಿಮಾನಮತ್ತು ಕಾಪ್ಟರ್‌ಡಿಕ್ಕಿಯ ದೃಶ್ಯಗಳು ಸಮೀಪದ ಕ್ಯಾಮೆರಾವೊಂದರಲ್ಲಿ ಸೆರೆಯಾಗಿದ್ದು, ಅಪಘಾತದ ಬಳಿಕ ಭಾರೀ ಪ್ರಮಾಣದ ಬೆಳಕು ಹೊರಹೊಮ್ಮಿದ್ದು ಕಂಡುಬಂದಿದೆ. ಡಿಕ್ಕಿ ಬಳಿಕ ಕಾಪ್ಟರ್ ಮತ್ತು ವಿಮಾನವು ಸಮೀಪದ ಪೋಟೋಮ್ಯಾಕ್ ನದಿಯಲ್ಲಿ ಪತನಗೊಂಡಿದೆ.

ಏರ್‌ಟ್ರಾಫಿಕ್ ಜೊತೆ ಸಂವಾದ:

ಡಿಕ್ಕಿ ಘಟನೆಗೂ ಕೆಲವೇ ಕ್ಷಣಗಳ ಮೊದಲು ಏರ್ ಟ್ರಾಫಿಕ್ ಕಂಟ್ರೋಲರ್ ಸಿಬ್ಬಂದಿಗಳು ವಿಮಾನದ ಪೈಲಟ್‌ ಮತ್ತು ಕಾಪ್ಟರ್‌ನ ಪೈಲಟ್ ಜೊತೆ ಸಂವಾದ ನಡೆಸಿದ ಅಂಶಗಳು ಬಹಿರಂಗಗೊಂಡಿದೆ. ಅದರಲ್ಲಿ ಏರ್‌ಟ್ರಾಫಿಕ್ ಕಂಟ್ರೋಲ್ ಸಿಬ್ಬಂದಿ, ವಿಮಾನದ ಪೈಲಟ್‌ಗೆ ಮಾಡಿದ ಕರೆಯಲ್ಲಿ ರನ್‌ವೇ ನಂ.33ರಲ್ಲಿ ಇಳಿಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಪೈಲಟ್ ಕಡೆಯಿಂದ ಸಾಧ್ಯ ಎಂಬ ಉತ್ತರ ಬಂದಿದೆ. ಹೀಗಾಗಿ ಅಲ್ಲಿ ವಿಮಾನ ಇಳಿಸಲು ರನ್‌ವೇ ಅನ್ನು ಮುಕ್ತಗೊಳಿಸಲಾಗಿತ್ತು. ಇನ್ನು ದುರ್ಘಟನೆಗೆ ಕೇವಲ 30 ಸೆಕೆಂಡ್‌ಗೆ ಮುನ್ನ ಕಾಪ್ಟರ್ನ್‌ ಪೈಲಟ್‌ಗೆ ಮಾಡಿದ್ದ ಕರೆಯಲ್ಲಿ ರನ್ ವೇನಲ್ಲಿ ಇಳಿಯಲು ಸಜ್ಜಾಗಿರುವ ವಿಮಾನ ಕಾಣಿಸುತ್ತಿದೆಯೇ ಎಂದು ಪ್ರಶ್ನಿಸಲಾಗಿದೆ. ಅದಕ್ಕೆ ಉತ್ತರ ಬರದೇ ಇದ್ದಾಗ ಮತ್ತೊಮ್ಮೆಕರೆ ಮಾಡಿ ಪ್ರಶ್ನಿಸಿದ್ದಾರೆ. ಅದರ ಬೆನ್ನಲ್ಲೇ ಕಾಪ್ಟರ್ ಮತ್ತು ವಿಮಾನದ ನಡುವೆ ಡಿಕ್ಕಿ ಸಂಭವಿಸಿದೆ.

ಆಗಿದ್ದೇನು?

• 60 ಪ್ರಯಾಣಿಕರು, 4 ಸಿಬ್ಬಂದಿ ಇದ್ದ ಅಮೆರಿಕನ್ ಏರ್‌ಲೈನ್ಸ್ ವಿಮಾನ ವಾಷಿಂಗ್ಟನ್‌ನ ರೊನಾಲ್ಡ್ ರೇಗನ್ ವಿಮಾನ ನಿಲ್ದಾಣದ ಬಳಿಗೆ ಬಂದಿತ್ತು
. ಆ ಏರ್‌ಪೋರ್ಟ್ ಬಳಿಯೇ ಸೇನಾ ಹೆಲಿಕಾಪ್ಟ‌ರ್ ಹಾರಾಡುತ್ತಿತ್ತು. ಈ ವೇಳೆ ಎರಡೂ ಡಿಕ್ಕಿಯಾಗಿ, ಪೋಟೋ ಮ್ಯಾಕ್ ನದಿಗೆ ಉರುಳಿದವು
• ನದಿಯಲ್ಲಿ ರಕ್ಷಣಾ ಕಾರ್ಯ. ಈವರೆಗೆ 30 ಶವಗಳು ಪತ್ತೆ. ಉಳಿದವರಿಗಾಗಿ ಮುಂದುವರಿದ ಶೋಧ ಕಾಯಾಚರಣೆ
. ಅಮೆರಿಕ ಅಧ್ಯಕ್ಷರ ನಿವಾಸ ಶ್ವೇತಭವನ ದಿಂದ 3 ಕಿ.ಮೀ. ದೂರದಲ್ಲಿ ದುರಂತ