ಬೆಂಗಳೂರು (ಜು. 04): ಭಾರತದ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರ 59 ಆ್ಯಪ್‌ಗಳನ್ನೇನೋ ನಿಷೇಧ ಮಾಡಿದೆ. ಆದರೆ ಒಂದು ವೇಳೆ ಇದಕ್ಕೆ ಪ್ರತಿಯಾಗಿ ಚೀನಾ ಭಾರತದ ಆ್ಯಪ್‌ಗಳನ್ನು ನಿಷೇಧ ಮಾಡಬೇಕೆಂದರೆ ನಾವು ಅಭಿವೃದ್ಧಿಪಡಿಸಿದ ಒಂದು ಆ್ಯಪನ್ನೂ ಚೀನೀಯರು ಉಪಯೋಗಿಸುತ್ತಿಲ್ಲ.

ಚೀನೀಯರು ಬಿಡಿ, ನಾವು ಕೂಡ ನಮ್ಮ ಆ್ಯಪ್‌ಗಳನ್ನು ಬಳಕೆ ಮಾಡುತ್ತಿಲ್ಲ. ಭಾರತದಲ್ಲಿ ಅತಿ ಹೆಚ್ಚು ಡೌನ್‌ಲೋಡ್‌ ಆಗುವ 10 ಆ್ಯಪ್‌ಗಳಲ್ಲಿ 6 ಚೀನೀಯರದ್ದಾದರೆ 4 ಅಮೆರಿಕನ್ನರದ್ದು. ಈಗ ನಿಷೇಧಗೊಂಡಿರುವ ಟಿಕ್‌ಟಾಕ್‌ಗೆ ಭಾರತದಲ್ಲಿ 2 ಕೋಟಿ ಬಳಕೆದಾರರಿದ್ದರು. ವಿಶ್ವದ ಮಾರುಕಟ್ಟೆಗೆ ನಮ್ಮ ದೇಶದಿಂದ ತಯಾರಾಗುವ ಎಂಜಿನಿಯರ್‌ಗಳ ಸಂಖ್ಯೆ ವರ್ಷಕ್ಕೆ 15 ಲಕ್ಷ. ಅದರಲ್ಲಿ ಕಂಪ್ಯೂಟರ್‌ ಸಂಬಂಧಿತ ಕ್ಷೇತ್ರಕ್ಕೆ ಕೆಲಸ ಮಾಡುವವರ ಸಂಖ್ಯೆಯೇ ಹೆಚ್ಚು.

ಚೀನಾ ಸಂಘರ್ಷ: ನಿಜಕ್ಕೂ ಭಾರತದ ಪರ ನಿಲ್ಲುತ್ತಾ ಅಮೆರಿಕಾ?

ಆದರೆ ತಾಂತ್ರಿಕವಾಗಿ ಪರಿಣತ ಸಾಫ್ಟ್‌ವೇರ್‌ ಪ್ರೋಗ್ರಾಮಿಂಗ್‌ ಬರೆಯುವುದರಲ್ಲಿ ನಿಪುಣ ಮಾನವ ಸಂಪನ್ಮೂಲ ಹೊಂದಿರುವ ನಮ್ಮವರೇ ದೈನಂದಿನ ವಾಗಿ ಬಳಕೆ ಮಾಡುವ ಆ್ಯಪ್‌ಗಳನ್ನು ಏಕೆ ತಯಾರು ಮಾಡಲು ಆಗುವುದಿಲ್ಲ ಎನ್ನುವುದು ಪ್ರಶ್ನೆ. ಅಂದಹಾಗೆ, ಟಿಕ್‌ಟಾಕ್‌ ಚೀನಿ ಆ್ಯಪ್‌ ಹೌದಾದರೂ ಶ್ರೀಮಂತರ ಜೊತೆ ಜೊತೆಗೆ ಸ್ಲಮ್‌ಗಳ ಕಡುಬಡವರು ಮತ್ತು ಹಳ್ಳಿಯ ಅನಕ್ಷರಸ್ಥರನ್ನು ಸಮನಾಗಿ ತಲುಪಿತ್ತು ಎಂಬುದು ಸುಳ್ಳಲ್ಲ.

ಚೀನೀ ಆ್ಯಪ್‌ ನಿಷೇಧದ ಬಳಿಕ ಭಾರತದ ಆ್ಯಪ್‌ಗಳಿಗೆ ಬಂಪರ್‌!

ಮೋದಿ ಕ್ಯಾಪ್‌ ಮೇಲೆ 2 ಸಿಡಿಲಿನ ಚಿಹ್ನೆ!

ಪ್ರಧಾನಿ ಮೋದಿ ನಿನ್ನೆ ಭೇಟಿ ನೀಡಿದ್ದು ಬೆಂಕಿ ಮತ್ತು ರೋಷ ಉಗುಳುವ ಭಾರತೀಯ ಸೇನೆಯ ಪ್ರಸಿದ್ಧ 14 ಕೋರ್‌ನ ಕ್ಯಾಂಪ್‌ಗೆ. ಭಾಷಣ ಮಾಡುವಾಗ ಮೋದಿ ಹಾಕಿಕೊಂಡಿದ್ದ 14 ಕೋರ್‌ನ ಕ್ಯಾಪ್‌ ಮೇಲೆ ಎರಡು ಸಿಡಿಲಿನ ಚಿಹ್ನೆ ಇತ್ತು. ಪಾಕಿಸ್ತಾನ ಮತ್ತು ಚೀನಾ ಹೀಗೆ ಎರಡು ಸೇನೆಗಳನ್ನು ಗಡಿಯಲ್ಲಿ ಎದುರಿಸುವ 14 ಕೋರ್‌ ಸಿಯಾಚಿನ್‌ಗೆ ಸರಕು ಸಾಗಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅಂದಹಾಗೆ, ಈಗ ಚೀನಾದ ಮಿಲಿಟರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವವರು 14 ಕೋರ್‌ನ ಕಮಾಂಡಿಂಗ್‌ ಆಫೀಸರ್‌ ಲೆಫ್ಟಿನೆಂಟ್‌ ಜನರಲ್‌ ಹರಜಿತ್‌ ಸಿಂಗ್‌.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ