ನವದೆಹಲಿ (ಜು. 04): ಅಂತಾರಾಷ್ಟ್ರೀಯ ರಾಜಕೀಯ ಪರಿಣತರು ಹೇಳುವ ಪ್ರಕಾರ, ಚೀನಾ-ಭಾರತದ ಈಗಿನ ತಿಕ್ಕಾಟಕ್ಕೆ ಗಡಿ ತಂಟೆ ಮೇಲ್ನೋಟಕ್ಕೆ ಕಾಣುವ ಕಾರಣ ಹೌದಾದರೂ ತೆರೆಯ ಹಿಂದಿನ ಕಾರಣ ಅಮೆರಿಕದ ಜೊತೆ ಬೆಳೆಯುತ್ತಿರುವ ಭಾರತದ ಸಾಮೀಪ್ಯ.

1962 ರಲ್ಲಿ ಭಾರತ-ಚೀನಾ ಯುದ್ಧ ನಡೆದಾಗ ಭಾರತವು ಅಮೆರಿಕದ ಶೀತಲ ಶತ್ರು ಸೋವಿಯತ್‌ ರಷ್ಯಾಕ್ಕೆ ಹತ್ತಿರ ಇತ್ತು. ಚೀನಾ ಪಾಕಿಸ್ತಾನದ ಜೊತೆ ಇತ್ತು. ಆದರೆ ಏಕಾಏಕಿ ಅರುಣಾಚಲ ಪ್ರದೇಶದಲ್ಲಿ ಚೀನಾ ದಾಳಿ ಮಾಡಿದಾಗ ಎಚ್ಚೆತ್ತುಕೊಂಡ ಪಂಡಿತ್‌ ನೆಹರು ಅಮೆರಿಕದ ಅಧ್ಯಕ್ಷ ಜಾನ್‌ ಎಫ್‌ ಕೆನಡಿಗೆ ಮಿಲಿಟರಿ ನೆರವು ಕೋರಿ ಎರಡು ಪತ್ರ ಬರೆದರು. ಆದರೆ ಕೆನಡಿ ಸಹಾಯ ಮಾಡಲಿಲ್ಲ. ಬದಲಿಗೆ ಬೇಹುಗಾರಿಕಾ ದಳ ಸಿಐಎನ ತಂಡವನ್ನು ಅಧ್ಯಯನಕ್ಕೆ ಕಳುಹಿಸಿದರು.

ಗಡಿಯಲ್ಲಿ ಮೋದಿ ಘರ್ಜನೆ; ಲಡಾಖ್‌ ಭೇಟಿಯ ಸಂದೇಶವೇನು?

ಮುಂದೆ ಪಂಡಿತ್‌ ನೆಹರು ವಾಯುಸೇನೆಗೆ 12 ಸೂಪರ್‌ ಸಾನಿಕ್‌ ವಿಮಾನ ಮತ್ತು ರಾಡಾರ್‌ ಕೇಳಿದರು. ಆದರೆ ಅಮೆರಿಕ ಮೀನಮೇಷ ಎಣಿಸಿತೇ ಹೊರತು ಸಹಾಯ ಮಾಡಲಿಲ್ಲ. ಮುಂದೆ 1971ರಲ್ಲಿ ಭಾರತಕ್ಕೆ ಒಂದು ಮಾತೂ ಹೇಳದೆ ಅಮೆರಿಕದ ಭದ್ರತಾ ಸಲಹೆಗಾರ ಹೆನ್ರಿ ಕಿಸೆಂಜರ್‌ ಬೀಜಿಂಗ್‌ಗೆ ರಹಸ್ಯವಾಗಿ ಹೋಗಿ ಒಪ್ಪಂದ ಮಾಡಿಕೊಂಡು ಬಂದರು. ಆಗ ಅಮೆರಿಕಕ್ಕೆ ಸೋವಿಯತ್‌ ವಿರುದ್ಧ ಚೀನಾ ಬೇಕಿತ್ತು. ಆದರೆ ಈಗ ಅಮೆರಿಕಕ್ಕೆ ಚೀನಾ ವಿರುದ್ಧ ಭಾರತ ಬೇಕಿದೆ. ಹೀಗಾಗಿ ಚೀನಾ ವಿರುದ್ಧ ಏನೇ ಸಹಾಯ ಕೇಳಿದರೂ ಕೊಡಲು ಅಮೆರಿಕ ತಯಾರಿದೆ. ಆದರೆ ಯಾವಾಗಲೂ ಯುದ್ಧ ಅಥವಾ ಶಾಂತಿಯನ್ನು ನಮ್ಮ ಶಕ್ತಿ ಸಾಮರ್ಥ್ಯದ ಮೇಲೆ ಯೋಜಿಸಬೇಕೇ ಹೊರತು ಬೇರೆ ಯಾರೋ ಬಂದು ಸಹಾಯ ಮಾಡುತ್ತಾರೆ ಎಂದಲ್ಲ.

ಹಾಂಗ್‌ಕಾಂಗ್‌ ಪ್ರಸ್ತಾಪದ ಹಿಂದೆ

1957ರಿಂದ ಚೀನಾ ಎಷ್ಟೇ ಕೆಣಕಿದರೂ ಭಾರತ, ಚೀನಾದ ಯಾವುದೇ ವಿಷಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಬಂದಾಗ ಮೌನ ಧರಿಸುತ್ತಿತ್ತು. ಆದರೆ ಚೀನಾ ಮಾತ್ರ ಭಾರತ ಎಷ್ಟೇ ಮೈತ್ರಿ ತೋರಿಸಿದರೂ ಮೌಲಾನಾ ಮಸೂದ್‌ ಅಜರ್‌ನನ್ನು ಗ್ಲೋಬರ್‌ ಉಗ್ರ ಎಂದು ಘೋಷಿಸಲು, ಭಯೋತ್ಪಾದಕ ಸಂಘಟನೆಗಳ ಹಣ ಮುಟ್ಟುಗೋಲು ಹಾಕಲು, ಭಾರತಕ್ಕೆ ವಿಶ್ವ ಭದ್ರತಾ ಸಂಸ್ಥೆಯ ಕಾಯಂ ಸದಸ್ಯತ್ವ ಕೊಡಿಸಲು ಮತ್ತು ಪರಮಾಣು ಪೂರೈಕೆಗಳ ರಾಷ್ಟ್ರಕ್ಕೆ ಭಾರತವನ್ನು ಸೇರಿಸಲು ಸದಾ ಅಡ್ಡಗಾಲು ಹಾಕುತ್ತಿತ್ತು.

ಗಡಿ ಬಗ್ಗೆ ಚೀನಾ ಜತೆ ಮಾತಾಡಲು ಒಪ್ಪದ ನೆಹರು; ಲಡಾಕ್‌ನತ್ತ ನುಗ್ಗಿದ ಚೀನೀ ಸೈನಿಕರು

ಭಾರತ ಎಷ್ಟರಮಟ್ಟಿಗೆ ಅಂದರೆ ಚೀನಾ ಕಬಳಿಸಿದ ಟಿಬೆಟ್‌ನದು ಆಂತರಿಕ ವಿಷಯ ಎಂದು ಕೈತೊಳೆದುಕೊಂಡಿತ್ತು. ಕ್ಸಿ ಜಿನ್‌ಪಿಂಗ್‌ ಜೊತೆ ಮಾತುಕತೆಗೆ ಅಡ್ಡಿ ಆದೀತು ಎಂದು ಮೋದಿ ಟಿಬೆಟ್‌ನ ನಿರಾಶ್ರಿತ ಸರ್ಕಾರದ ಜೊತೆಗೆ ಮಾತುಕತೆ ನಿಲ್ಲಿಸಲು ಒಪ್ಪಿಕೊಂಡಿದ್ದರು. ಅಷ್ಟೇ ಅಲ್ಲ, ಅಮೆರಿಕ, ಆಸ್ಪ್ರೇಲಿಯಾ, ಜಪಾನ್‌ ಜೊತೆಗೆ ಯುರೋಪ್‌ ರಾಷ್ಟ್ರಗಳು ಕೊರೋನಾ ವೈರಸ್‌ ಹರಡಲು ಚೀನಾ ಹೊಣೆ ಎಂದು ಹೇಳಿದರೆ ಭಾರತ್‌ ಮಾತನಾಡಲಿಲ್ಲ. ಆದರೆ ಗಲ್ವಾನ್‌ ಕಣಿವೆ ಸಂಘರ್ಷದ ನಂತರ ಭಾರತದ ವರಸೆ ಬದಲಾಗಿದೆ. ಮೊದಲ ಬಾರಿಗೆ ಹಾಂಗ್‌ಕಾಂಗ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ಧ್ವನಿ ಎತ್ತಿದೆ. ಯಾರಾರ‍ಯರಿಗೆ ಯಾವ ಭಾಷೆಯಲ್ಲಿ ಉತ್ತರ ಅರ್ಥವಾಗುತ್ತೋ ಆ ಭಾಷೆ ಬಳಕೆ ಅನಿವಾರ್ಯ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ