ಜಮ್ಮು(ಡಿ.30): 2003ರಲ್ಲಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದಿದ್ದ ಕದನವಿರಾಮ ಒಪ್ಪಂದವನ್ನು ಪಾಕಿಸ್ತಾನ 2020ರಲ್ಲಿ ಅತಿ ಹೆಚ್ಚು ಬಾರಿ ಉಲ್ಲಂಘಿಸಿದೆ. 5100 ಸಲ ಪಾಕ್‌ ಈ ವರ್ಷ ಕದನವಿರಾಮ ಉಲ್ಲಂಘಿಸಿದ್ದು, ಇದು 18 ವರ್ಷದಲ್ಲೇ ಗರಿಷ್ಠ.

‘ನಿತ್ಯ ಸರಾಸರಿ 14 ಕದನವಿರಾಮ ಉಲ್ಲಂಘನೆಯನ್ನು ಪಾಕಿಸ್ತಾನ ನಡೆಸಿದೆ. ಪಾಕಿಸ್ತಾನದ ಕಿತಾಪತಿಯಿಂದ 36 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇವರಲ್ಲಿ 24 ಭದ್ರತಾ ಸಿಬ್ಬಂದಿ. ಇನ್ನುಳಿದವರು ನಾಗರಿಕರು. 130 ಮಂದಿ ಗಾಯಗೊಂಡಿದ್ದಾರೆ’ ಎಂದು ಭದ್ರತಾ ಪಡೆಗಳು ಹೇಳಿವೆ.

2019ರಲ್ಲಿ ಪಾಕಿಸ್ತಾನ 3289 ಬಾರಿ ಕದನ ವಿರಾಮ ಉಲ್ಲಂಘಿಸಿತ್ತು. ಈ ಪೈಕಿ 1565 ಉಲ್ಲಂಘನೆಗಳು ಭಾರತವು ಆಗಸ್ಟ್‌ನಲ್ಲಿ ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು ಹಾಕಿದ ನಂತರ ನಡೆದಿದ್ದವು.

2018ರಲ್ಲಿ 2936 ಉಲ್ಲಂಘನೆ ಹಾಗೂ 61 ಸಾವು, 2017ರಲ್ಲಿ 971 ಉಲ್ಲಂಘನೆ ಹಾಗೂ 31 ಸಾವು ಸಂಭವಿಸಿದ್ದವು. 2017ಕ್ಕೆ ಹೋಲಿಸಿದರೆ ಈ ಸಲ 5 ಪಟ್ಟು ಹೆಚ್ಚು ಉಲ್ಲಂಘನೆ ನಡೆದಿವೆ.

ವಿಶೇಷವೆಂದರೆ 2004, 2005 ಹಾಗೂ 2006ರಲ್ಲಿ ಒಂದೇ ಒಂದು ಉಲ್ಲಂಘನೆ ನಡೆದಿರಲಿಲ್ಲ.

ಆದರೆ 2009ರಿಂದ ಪಾಕಿಸ್ತಾನ ಪದೇ ಪದೇ ದಾಳಿ ಆರಂಭಿಸಿತು. 2013, 2012, 2011, 2010 ಹಾಗೂ 2009ರಲ್ಲಿ ಕ್ರಮವಾಗಿ 347, 114, 62, 44 ಹಾಗೂ 28 ಉಲ್ಲಂಘನೆಗಳು ನಡೆದಿವೆ.