ನವದೆಹಲಿ (ಏ.30): ಕೊರೋನಾ ವೈರಸ್‌ ಪರಿಸ್ಥಿತಿ ದಿನೇದಿನೇ ಭೀಕರವಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ, ಫ್ರಾನ್ಸ್‌, ರಷ್ಯಾ, ಜಪಾನ್‌ ಸೇರಿ ಸುಮಾರು 40 ದೇಶಗಳು ಭಾರತಕ್ಕೆ ನಾನಾ ರೀತಿಯ ವೈದ್ಯಕೀಯ ನೆರವು ನೀಡಲು ಮುಂದೆ ಬಂದಿವೆ. ಭಾರತ ಕೂಡ ಇಂಥ ನೆರವು ಸ್ವೀಕಾರಕ್ಕೆ ಮುಂದಾಗಿದೆ. ವಿಶೇಷವೆಂದರೆ ಕಳೆದ 16 ವರ್ಷಗಳಲ್ಲಿ ಇದೇ ಮೊದಲ ಬಾರಿ ಭಾರತವು ವಿದೇಶಗಳಿಂದ ನೆರವು ಪಡೆಯಲು ನಿರ್ಧರಿಸಿದೆ. ಇದರ ಮೊದಲ ಭಾಗವಾಗಿ ಅಮೆರಿಕದಿಂದ ಈಗಾಗಲೇ ಒಂದು ವಿಮಾನದಲ್ಲಿ ಭಾರತಕ್ಕೆ ನೆರವು ರವಾನೆಯಾಗಿದ್ದು, ಮುಂದಿನ ದಿನಗಳಲ್ಲಿ ಬೇರೆ ಬೇರೆ ದೇಶಗಳಿಂದಲೂ ನೆರವು ಹರಿದುಬರಲಿದೆ.

ಇನ್ನೊಂದು ವಿಶೇಷವೆಂದರೆ, ಅಗತ್ಯಬಿದ್ದರೆ ಚೀನಾದಿಂದಲೂ ಉಪಕರಣಗಳನ್ನು ಆಮದು ಮಾಡಿಕೊಳ್ಳಲು ಭಾರತ ಸರ್ಕಾರ ಸಿದ್ಧವಾಗಿದೆ. ಆದರೆ, ಪಾಕಿಸ್ತಾನದ ವಿಷಯದಲ್ಲಿ ಸದ್ಯಕ್ಕೆ ಇಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ. ವಿದೇಶಗಳ ಸರ್ಕಾರಗಳು ಹಾಗೂ ಸಂಸ್ಥೆಗಳಿಂದ ಜೀವರಕ್ಷಕ ಉಪಕರಣಗಳು, ಔಷಧ ಮತ್ತು ಕೊರೋನಾ ಹೋರಾಟಕ್ಕೆ ಅಗತ್ಯವಿರುವ ಯಾವುದೇ ರೀತಿಯ ವಸ್ತುಗಳನ್ನು ಭಾರತ ಪಡೆದುಕೊಳ್ಳಲು ನಿರ್ಧರಿಸಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಭಾರತದಲ್ಲಿ ಆರೋಗ್ಯದ ತುರ್ತು ಪರಿಸ್ಥಿತಿ, ವಿದೇಶಗಳಿಂದ ನೆರವಿನ ಮಹಾಪೂರ ...

ಇನ್ನು, ರಾಜ್ಯ ಸರ್ಕಾರಗಳು ಕೊರೋನಾ ನಿಯಂತ್ರಣಕ್ಕಾಗಿ ತಾವೇ ನೇರವಾಗಿ ವಿದೇಶಗಳಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಅಥವಾ ನೆರವು ಪಡೆಯಲು ಮುಂದಾದರೆ ಅದಕ್ಕೆ ಅಡ್ಡಿಪಡಿಸದಿರುವುದಕ್ಕೂ ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯ ಕಾರ್ಯದರ್ಶಿ ಹರ್ಷವರ್ಧನ್‌ ಶೃಂಗ್ಲಾ, ಈ ಹಿಂದೆ ಸಂಕಷ್ಟದ ಸಮಯದಲ್ಲಿ ಭಾರತ ನಾನಾ ದೇಶಗಳಿಗೆ ನೆರವು ನೀಡಿತ್ತು. ಇದೀಗ ಆದೇಶಗಳು ಭಾರತಕ್ಕೆ ನೆರವಿನ ಹಸ್ತ ಚಾಚಿವೆ. ನಮ್ಮ ಜನರ ವೈದ್ಯಕೀಯ ಬೇಡಿಕೆಗಳನ್ನು ಈಡೇರಿಸಲು ನಾವು ಏನು ಬೇಕಾದರೂ ಮಾಡಲು ಸಿದ್ಧ ಎಂದು ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona