ನವದೆಹಲಿ (ಮಾ.18]: ಚೀನಾ ಮತ್ತು ಇಟಲಿ ಹೊರತುಪಡಿಸಿದರೆ ವಿಶ್ವದಲ್ಲೇ ಅತಿಹೆಚ್ಚು ಕೊರೋನಾ ಸೋಂಕುಪೀಡಿತರು ಬೆಳಕಿಗೆ ಬಂದಿರುವ ಇರಾನ್‌ನಲ್ಲಿ ಸಿಕ್ಕಿಬಿದ್ದಿರುವ ಭಾರತೀಯರ ಪೈಕಿ 254 ಭಾರತೀಯರಿಗೆ ಕೊರೋನಾ ಸೋಂಕು ತಗುಲಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

ನಾನಾ ಕಾರಣಗಳಿಂದಾಗಿ ಫೆಬ್ರವರಿ ತಿಂಗಳಿನಿಂದ ಇರಾನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ 800 ಭಾರತೀಯರ ಪೈಕಿ 254 ಜನರಿಗೆ ಸೋಂಕು ತಗುಲಿರುವುದು ಖಚಿತಪಟ್ಟಿದೆ. ಇರಾನ್‌ನಲ್ಲಿನ ಭಾರತೀಯರ ಚಿಕಿತ್ಸೆಗೆಂದು ಭಾರತದಿಂದ ತೆರಳಿರುವ ಭಾರತೀಯರ ವೈದ್ಯರ ತಂಡ, ತಪಾಸಣೆ ಬಳಿಕ ಇಂಥದ್ದೊಂದು ವರದಿ ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಈ 800 ಜನರ ತಂಡ ಲಡಾಖ್‌ನಿಂದ ಇರಾನ್‌ನ ಧಾರ್ಮಿಕ ಸ್ಥಳಗಳಿಗೆ ಯಾತ್ರೆ ತೆರಳಿತ್ತು ಎನ್ನಲಾಗಿದೆ.

ಹೆಚ್ಚಾಗುತ್ತಿರುವ ಕೋರೋನಾ ಕೇಸ್: ಮತ್ತೊಂದು ವಾರ ಕರ್ನಾಟಕ ಸ್ತಬ್ಧ..?..

ಈ ನಡುವೆ ಸುದ್ದಿಯನ್ನು ಖಚಿತಪಡಿಸಲಾಗದು ಎಂದು ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ. ಇರಾನ್‌ನಲ್ಲಿ ಎಲ್ಲಾ ಭಾರತೀಯರನ್ನು ಅಲ್ಲಿರುವ ನಮ್ಮ ರಾಯಭಾರ ಕಚೇರಿ ಉತ್ತಮವಾಗಿ ನೋಡಿಕೊಳ್ಳುತ್ತಿದೆ. ಅವರೆಲ್ಲರ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿದೆ ಎಂದಷ್ಟೇ ಹೇಳಿದೆ. ಆದರೆ ಅದು ಸುದ್ದಿಯನ್ನು ನಿರಾಕರಿಸಿಯೂ ಇಲ್ಲ.

ಇರಾನ್‌ನಲ್ಲಿ ಈವರೆಗೆ 16170 ಜನರಿಗೆ ಸೋಂಕು ತಗುಲಿದ್ದು, 988 ಜನ ಸಾವನ್ನಪ್ಪಿದ್ದಾರೆ.