ಶುರುವಾಗುತ್ತಾ 3ನೇ ಮಹಾಯುದ್ಧ..? ಪೋಲೆಂಡ್ ಮೇಲೂ ರಷ್ಯಾ ಕ್ಷಿಪಣಿ ದಾಳಿ; ಇಬ್ಬರು ಬಲಿ
ಪೋಲೆಂಡ್ ಮೇಲೆ ದಾಳಿ ಮಾಡಿರುವುದನ್ನು ರಷ್ಯಾ ನಿರಾಕರಿಸಿದೆ. ಇನ್ನು, ಅಮೆರಿಕ ಸೇರಿ ಹಲವು ದೇಶಗಳು ಈ ದಾಳಿಯನ್ನು ಖಂಡಿಸಿದ್ದು, ತುರ್ತು ಸಭೆಗೆ ನ್ಯಾಟೋ ಕರೆದಿದ್ದು, ಇಂದು ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.
ರಷ್ಯಾ - ಉಕ್ರೇನ್ ನಡುವಿನ ಯುದ್ಧ (Russia - Ukraine War) ಮುಂದುವರಿದಿದ್ದು, ಈ ನಡುವೆ ರಷ್ಯಾದ ಕ್ಷಿಪಣಿಗಳು (Russia Missile) ಪೋಲೆಂಡ್ (Poland) ಮೇಲೂ ದಾಳಿ ನಡೆಸಿವೆ ಎಂದು ಪೋಲೆಂಡ್ ಸರ್ಕಾರ ಹೇಳಿಕೊಂಡಿದೆ. ಉಕ್ರೇನ್ (Ukraine) ಮೇಲೆ ರಷ್ಯಾ (Russia) ದಾಳಿ ಮುಂದುವರಿದದ್ದು, ಈ ನಡುವೆ ಉಕ್ರೇನ್ ಗಡಿ ಬಳಿಯ ಪೋಲೆಂಡ್ ಭೂ ಪ್ರದೇಶದ ಮೇಲೆ ರಷ್ಯಾದ ಮಿಸೈಲ್‌ಗಳು ದಾಳಿ ಮಾಡಿವೆ ಎಂದು ಪೋಲೆಂಡ್ ಹೇಳುತ್ತಿದ್ದು, ಈ ದಾಳಿಯಲ್ಲಿ ಇಬ್ಬರು ಬಲಿಯಾಗಿದ್ದಾರೆ ಎಂದೂ ವರದಿಯಾಗಿದೆ. ಈ ಹಿನ್ನೆಲೆ, ಪೋಲೆಂಡ್ ಇಂದು ತನ್ನ ರಾಷ್ಟ್ರೀಯ ಭದ್ರತಾ ಮಂಡಳಿ ಮತ್ತು ಕ್ಯಾಬಿನೆಟ್‌ನ ತುರ್ತು ಸಭೆಗಳನ್ನು ಕರೆದಿದೆ. ಆದರೆ, ಪೋಲೆಂಡ್ ಮೇಲೆ ದಾಳಿ ಮಾಡಿರುವುದನ್ನು ರಷ್ಯಾ ನಿರಾಕರಿಸಿದೆ. ಇನ್ನು, ಅಮೆರಿಕ ಸೇರಿ ಹಲವು ದೇಶಗಳು ಈ ದಾಳಿಯನ್ನು ಖಂಡಿಸಿದ್ದು, ತುರ್ತು ಸಭೆಗೆ ನ್ಯಾಟೋ ಕರೆದಿದ್ದು, ಇಂದು ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ. ಇದರ ಜತೆಗೆ, ಜಿ - 7 ನಾಯಕರ ತುರ್ತು ಸಭೆಯನ್ನು ಅಮೆರಿಕ (United States of America) ಅಧ್ಯಕ್ಷ ಜೋ ಬೈಡೆನ್ (Joe Biden) ಕರೆ ನೀಡಿದ್ದಾರೆ.
ಉಕ್ರೇನ್ - ಪೋಲೆಂಡ್ ಗಡಿಯ ಸಮೀಪವಿರುವ ಪ್ರಜೆವೊಡೋವ್ ಗ್ರಾಮದ ಕೃಷಿ ಕಟ್ಟಡದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೋಲೆಂಡ್ ಮಾದ್ಯಮಗಳು ವರದಿ ಮಾಡಿವೆ. ರಷ್ಯಾದ ಕ್ಷಿಪಣಿಗಳು ಪೋಲೆಂಡ್‌ಗೆ ಹೋಗಿದ್ದರಿಂದ ಸ್ಫೋಟ ಸಂಭವಿಸಿದೆ ಎಂದು ಯುಎಸ್ ಗುಪ್ತಚರ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಇನ್ನೊಂದೆಡೆ, ಅದನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಪೆಂಟಗನ್ ಹೇಳಿದೆ.
ಇದನ್ನು ಓದಿ: ಯುದ್ಧ ಸ್ಥಗಿತಕ್ಕೆ ರಷ್ಯಾ-ಉಕ್ರೇನ್ ನಡುವೆ ಭಾರತ ಸಂಧಾನ?
ಇನ್ನು, ರಷ್ಯಾದ ಕ್ಷಿಪಣಿಗಳು ಪೋಲಿಷ್ ಭೂಪ್ರದೇಶದ ಮೇಲೆ ದಾಳಿ ಮಾಡಿವೆ ಎಂಬ ವರದಿಗಳನ್ನು ರಷ್ಯಾದ ರಕ್ಷಣಾ ಸಚಿವಾಲಯ ನಿರಾಕರಿಸಿದೆ. ಹಾಗೂ, ಇದನ್ನು "ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಪ್ರಚೋದನೆ" ಎಂದೂ ಸಮರ್ಥನೆ ಮಾಡಿದೆ.
'ಕ್ಷಿಪಣಿ' ದಾಳಿ ಹಿನ್ನೆಲೆ ರಷ್ಯಾದ ರಾಯಭಾರಿಗೆ ಸಮನ್ಸ್ ನೀಡಿದ ಪೋಲೆಂಡ್
ರಷ್ಯಾ ನಿರ್ಮಿತ ಕ್ಷಿಪಣಿಯು ದೇಶದಲ್ಲಿ ಬಿದ್ದು ಇಬ್ಬರು ನಾಗರಿಕರನ್ನು ಕೊಂದಿದೆ ಎಂದು ಪೋಲೆಂಡ್ ಸರ್ಕಾರ ಹೇಳಿದ್ದು, ಈ ಹಿನ್ನೆಲೆ ರಷ್ಯಾ ರಾಯಭಾರಿಗೆ ಸಮನ್ಸ್ ನೀಡಿದೆ. ಹಾಗೂ, ಘಟನೆಯ ಕುರಿತು ತಕ್ಷಣದ ವಿವರವಾದ ವಿವರಣೆಗಳನ್ನು ನೀಡಬೇಕೆಂದು ಪೋಲೆಂಡ್ ವಿದೇಶಾಂಗ ಸಚಿವಾಲಯದ ವಕ್ತಾರ ಲುಕಾಸ್ಜ್ ಜಸಿನಾ ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಒಂದೇ ದಿನದಲ್ಲಿ 1000 ರಷ್ಯಾ ಸೈನಿಕರ ಹತ್ಯೆಗೈದ Ukraine..! 8 ತಿಂಗಳಲ್ಲಿ 71,200 ಯೋಧರು ಬಲಿ
"15 ನವೆಂಬರ್ 2022 ರಂದು, ರಷ್ಯಾದ ಒಕ್ಕೂಟದ ಸಶಸ್ತ್ರ ಪಡೆಗಳಿಂದ ಉಕ್ರೇನ್‌ನ ಸಂಪೂರ್ಣ ಭೂಪ್ರದೇಶ ಮತ್ತು ಅದರ ನಿರ್ಣಾಯಕ ಮೂಲಸೌಕರ್ಯಗಳ ಮೇಲೆ ಗಂಟೆಗಳ ಕಾಲ ಬೃಹತ್ ಶೆಲ್ ದಾಳಿ ನಡೆಯಿತು. ಮಧ್ಯಾಹ್ನ 3:40 ಕ್ಕೆ, ರಷ್ಯಾ ನಿರ್ಮಿತ ಕ್ಷಿಪಣಿಯೊಂದು ಗ್ರಾಮದ ಮೇಲೆ ಬಿದ್ದಿದೆ. ಲುಬೆಲ್ಸ್ಕಿ ಪ್ರಾಂತ್ಯದ ಹ್ರೂಬಿಸ್ಜೋವ್ ಜಿಲ್ಲೆಯ ಪ್ರಜೆವೊಡೋವ್ ಗ್ರಾಮದ ಮೇಲೆ ಬಿದ್ದಿದೆ. ಇದರಿಂದ ಪೋಲೆಂಡ್ ಗಣರಾಜ್ಯದ ಇಬ್ಬರು ನಾಗರಿಕರ ಸಾವಿಗೆ ಕಾರಣವಾಯಿತು, ”ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿ ಹಲವರು ಈ ದಾಳಿಯನ್ನು ಖಂಡಿಸಿದ್ದು, ನ್ಯಾಟೋ ಬುಧವಾರ ಈ ಸಂಬಂಧ ತುರ್ತು ಸಭೆ ಕರೆದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Ukraine ವಿದ್ಯುತ್ ಗ್ರಿಡ್‌ಗಳ ಮೇಲೆ ರಷ್ಯಾ ದಾಳಿ: ಕೀವ್, ಖಾರ್ಕೀವ್‌ನಲ್ಲಿ ಕಾರ್ಗತ್ತಲು