ಇಸ್ಲಾಮಾಬಾದ್‌ [ಜ.17]: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಂ ಕಣಿವೆಯಲ್ಲಿ 12 ವರ್ಷದ ಬಾಲಕಿಯೊಬ್ಬಳು ತನ್ನ ಮೇಲೆ ಭಾರೀ ಪ್ರಮಾಣದ ಹಿಮ ಬಿದ್ದರೂ 18 ತಾಸು ಅದರಡಿಯೇ ಸಿಲುಕು ಬಚಾವ್‌ ಆಗಿರುವ ಅಚ್ಚರಿಯ ಪ್ರಸಂಗ ನಡೆದಿದೆ. ಸಮೀನಾ ಬೀಬಿ ಎಂಬಾಕೆಯೇ ಸಾವಿನ ದವಡೆಯಿಂದ ಪಾರಾಗಿರುವ ಬಾಲಕಿ. ಸಮೀನಾ 3 ಅಂತಸ್ತಿನ ಕಟ್ಟಡಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು.

ಭೀಕರ ಹಿಮಕುಸಿತ ಮಂಗಳವಾರ ಸಂಭವಿಸಿದಾಗ ಆಕೆಯ ಮನೆ ಹಿಮಾಚ್ಛಾದಿತವಾಯಿತು. ಅದರಡಿ ಸಮೀನಾ ಸಿಲುಕಿಕೊಂಡಳು. ವಿಷಯ ಅರಿತ ವಿಕೋಪ ನಿರ್ವಹಣಾ ಪಡೆ ಅಧಿಕಾರಿಗಳು ಬುಧವಾರ ಈಕೆಯನ್ನು ಹರಸಾಹಸ ಮಾಡಿ ಮೇಲೆತ್ತಿದ್ದಾರೆ.

ಹಿಮದ ಏಟಿನಿಂದಾಗಿ ಆಕೆಯ ಬಾಯಲ್ಲಿ ರಕ್ತ ಬರುತ್ತಿತ್ತು ಹಾಗೂ ಕಾಲು ಮುರಿದಿದೆ. ಕೂಡಲೇ ಆಕೆಯನ್ನು ಮುಜಫ್ಫರ್‌ಬಾದ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ ಅಪಾಯದಿಂದ ಪಾರಾಗಿದ್ದಾಳೆ. ಆದರೆ, ಶಹನಾಜ್‌ರ ಒಬ್ಬ ಪುತ್ರ ಹಾಗೂ ಇನ್ನೊಬ್ಬ ಪುತ್ರಿ ಇದೇ ದುರಂತದಲ್ಲಿ ಮೃತಪಟ್ಟಿದ್ದಾರೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಹಿಮಕುಸಿತಕ್ಕೆ 114 ಜನ ಈವರೆಗೆ ಬಲಿಯಾಗಿದ್ದಾರೆ. ಅದರಲ್ಲಿ ನೀಲಂ ಕಣಿವೆಯೊಂದರಲ್ಲೇ 74 ಜನ ಸಾವನ್ನಪ್ಪಿದ್ದಾರೆ.

ಸಿಯಾಚಿನ್‌ನಲ್ಲಿ ಶತ್ರುಗಳ ಜೊತೆ ಮಾತ್ರವಲ್ಲ, ನಿಸರ್ಗದೊಂದಿಗೂ ಸೆಣಸಬೇಕು ಸೈನಿಕರು!

ಕೊಪ್ಪದ ನೆನಪು:

ಈ ಹಿಂದೆ 2016ರಲ್ಲಿ ಭಾರತದ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ ಸಂಭವಿಸಿದ ಹಿಮಕುಸಿತದ ಕಾರಣ ಹನುಮಂತಪ್ಪ ಕೊಪ್ಪದ ಎಂಬ ಭಾರತೀಯ ಯೋಧ 6 ದಿನ ಕಾಲ ಹಿಮದಡಿಯೇ ಸಿಲುಕಿ ಜೀವಂತವಾಗಿ ಹೊರಬಂದಿದ್ದರು. ಆದರೆ ಕೆಲವು ದಿನಗಳ ಬಳಿಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.