ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ನ ಉತ್ತರ ಭಾಗದಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ನಾಲ್ವರು ಯೋಧರು ಮತ್ತು ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಭಾರತದ ಯೋಧರಿಗೆ ಶತ್ರು ದೇಶದ ಸೈನಿಕರಿಗಿಂತ ನಿಸರ್ಗವೇ ದೊಡ್ಡ ವೈರಿ. ಹಠಾತ್‌ ಹಿಮಪಾತ, ಕೊರೆಯುವ ಚಳಿ, ಆಮ್ಲಜನಕದ ಕೊರತೆ ಹೀಗೆ ಪ್ರತಿಕೂಲ ಹವಾಮಾನ ಎದುರಿಸಲಾಗದೆ ಇದುವರೆಗೆ ಸಾವಿರಾರು ಸೈನಿಕರು ಹುತಾತ್ಮರಾಗಿದ್ದಾರೆ. ಅವುಗಳಲ್ಲಿ ಅತಿ ಭೀಕರ ಸವಾಲು ಅವಲಂಚೆ ಅರ್ಥಾತ್‌ ಹಿಮಕುಸಿತ. ಈ ಕುರಿತು ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಅವಲಂಚೆ ಅಂದರೆ ಏನು?

ಪರ್ವತ ಶ್ರೇಣಿಯ ಶಿಖರದಿಂದ ಹಿಮದ ರಾಶಿ ರಾಶಿ ಬಂಡೆಗಳು ಕೆಳಕ್ಕೆ ಅಥವಾ ಇಳಿಜಾರಿನ ಪ್ರದೇಶದ ಕಡೆಗೆ ಹಠಾತ್‌ ಕುಸಿಯುವುದನ್ನು ಅವಲಂಚೆ ಎಂದು ಕರೆಯಲಾಗುತ್ತದೆ. ಹವಾಮಾನ ಬದಲಾವಣೆ, ಮಳೆ, ಗಾಳಿ ಮತ್ತು ಮಾನವ ಚಟುವಟಿಕೆಗಳಿಂದಲೂ ಪ್ರಚೋದಿತವಾಗಿ ಹೀಗೆ ಹಿಮಕುಸಿತ ಉಂಟಾಗುತ್ತದೆ. ಭಾರತದಲ್ಲಿ ಕಾಶ್ಮೀರದಲ್ಲಿ ಅದರಲ್ಲೂ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ ಹಿಮಕುಸಿತ ಅತಿಹೆಚ್ಚು. 90% ಅವಲಂಚೆಯು ಹಿಮಾವೃತ ಪ್ರದೇಶವು 30ರಿಂದ 40 ಡಿಗ್ರಿ ಇಳಿಜಾರಿರುವ ಜಾಗದಲ್ಲಿ ಉಂಟಾಗುತ್ತದೆ.

ಭಾರತೀಯ ಯೋಧರಿಗಾಗಿ 'ಐರನ್ ಮ್ಯಾನ್' ಸೂಟ್: ಎದುರಿರುವ ಶತ್ರು ಛಿದ್ರ ಛಿದ್ರ!

98% ಅವಲಂಚೆಯು 25ರಿಂದ 50 ಡಿಗ್ರಿ ಇಳಿಜಾರಿರುವ ಸ್ಥಳದಲ್ಲಿ ಉಂಟಾಗುತ್ತದೆ. ಮಾನವನ ಹಸ್ತಕ್ಷೇಪದಿಂದಾಗಿಯೇ 90% ಹಿಮಕುಸಿತ ದುರಂತಗಳು ಸಂಭವಿಸುತ್ತವೆ. ಭಾರತದಲ್ಲಿ ಬೇಸಿಗೆ ಕಾಲದಲ್ಲಿ ಹೆಚ್ಚು ಈ ರೀತಿಯ ಹಿಮಕುಸಿತ ಸಂಭವಿಸುತ್ತದೆ. ಉತ್ತರ ಅಮೆರಿಕದಲ್ಲಿ ಇದೇ ರೀತಿಯ ಹಿಮಕುಸಿತದಿಂದ ಪ್ರತಿ ವರ್ಷ 40 ಜನರು ಸಾವನ್ನಪ್ಪುತ್ತಾರೆ.

ನಮ್ಮ ಯೋಧರಿಗೆ ಪಾಕ್‌ಗಿಂತ ದೊಡ್ಡ ಶತ್ರು ಈ ಹಿಮಕುಸಿತ!

ದೇಶದ ಕಾರ್ಗಿಲ್‌ ಗಡಿಯಲ್ಲಿ ನಿಂತು ದೇಶ ಕಾಯುವ ಭಾರತೀಯ ಯೋಧರಿಗೆ ಪಾಕ್‌ನ ಸೈನಿಕರು ಮಾತ್ರ ಶತ್ರುಗಳಲ್ಲ. ಅಲ್ಲಿನ ನಿಸರ್ಗ ಕೂಡ ಎಡಬಿಡದೆ ಕಾಡುತ್ತದೆ. ಕಾಶ್ಮೀರದಲ್ಲಿ ಪ್ರತಿ ವರ್ಷ ಕನಿಷ್ಠ 300 ಅವಲಂಚೆಗಳು ಸಂಭವಿಸುತ್ತವೆ. ಇದರಿಂದ ಸೈನಿಕರಿಗೆ ತೊಂದರೆಯಾಗುವುದು ಮಾತ್ರವಲ್ಲ, ಗಡಿ ನಿಯಂತ್ರಣ ರೇಖೆಯ ಯೋಧರ ಯುದ್ಧ ತಂತ್ರಗಳನ್ನೂ ಇದು ಹಾಳುಗೆಡವುತ್ತದೆ. ಇಲ್ಲಿನ ದ್ರಾಸ್‌ ಸೆಕ್ಟರ್‌ನಲ್ಲಿ ಪ್ರತಿ ವರ್ಷ 80-100 ಅವಲಂಚೆಗಳು ಉಂಟಾಗುತ್ತವೆ.

ಇಲ್ಲಿ ಸಣ್ಣ ಮಟ್ಟದಲ್ಲಿ ಹಿಮಕುಸಿತ ಸಂಭವಿಸಿದರೂ 20ರಿಂದ 30 ಅಡಿ ಹಿಮಪಾತವಾಗುತ್ತದೆ. ಒಂದು ವೇಳೆ ಅವಲಂಚೆ ದೊಡ್ಡ ಪ್ರಮಾಣದಲ್ಲಿ ಘಟಿಸಿದರೆ ಸೇನೆಯ ಹಲವು ಉಪಕರಣಗಳು, ಊಟಕ್ಕೆ ಇಟ್ಟರೇಶನ್‌ ಕೂಡ ಹಿಮಪಾತದಡಿ ಸೇರಿಕೊಳ್ಳುತ್ತದೆ. ಅವುಗಳ ರಕ್ಷಣೆ ಹಾಗಿರಲಿ ಸೈನಿಕರು ತಮ್ಮ ಪ್ರಾಣ ಉಳಿಸಿಕೊಳ್ಳುವುದೇ ದುಸ್ತರವಾಗಿರುತ್ತದೆ.

ಹಿಮಪಾತಕ್ಕೆ ನಾಲ್ವರು ಯೋಧರನ್ನು ಕಳೆದುಕೊಮಡ ಭಾರತ

ಹಿಮಕುಸಿತ ನಿಂತ ತಕ್ಷಣ ಸೈನಿಕರು ಕೊಚ್ಚಿ ಹೋದದ್ದೇನಾದರೂ ಸಿಗಬಹುದೆಂದು ಅಗೆಯಲು ಆರಂಭಿಸುತ್ತಾರೆ. ಆದರೆ ಅದೂ ಒಂದು ಸಾಹಸದ ಕೆಲಸ. ಏಕೆಂದರೆ ಆಗ ತಾಪಮಾನ ತೀರಾ ಕನಿಷ್ಠ ಮಟ್ಟಕ್ಕೆ ಇಳಿದಿರುತ್ತದೆ. ಹಿಮ ಮತ್ತಷ್ಟುಗಟ್ಟಿಯಾಗಿರುತ್ತದೆ. ಅಲ್ಲದೆ ಮತ್ತೊಂದು ಅವಲಂಚೆ ಸಂಭವಿಸುವ ಸಾಧ್ಯತೆಯೂ ಹೆಚ್ಚಿರುತ್ತದೆ.

ಮುಂಜಾನೆ ಮತ್ತು ರಾತ್ರಿ ಮಾತ್ರ ಸುರಕ್ಷಿತ

ವೇಗವಾದ ಗಾಳಿ ತೀರಾ ಕಡಿದಾದ ಇಳಿಜಾರಿನಲ್ಲಿ ಹಿಮಕುಸಿತಕ್ಕೆ ಕಾರಣವಾಗುತ್ತದೆ. ಆಗ ಹಿಮದ ಮೇಲ್ಪದರವು ಹಠಾತ್‌ ಕೆಳಗೆ ಜಾರುತ್ತದೆ. ಸಾಮಾನ್ಯವಾಗಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಅವಲಂಚೆಗಳು ಸಂಭವಿಸುತ್ತವೆ. ಏಕೆಂದರೆ ಈ ಸಮಯದಲ್ಲಿ ಹಿಮ ಕರಗುವ ಸಾಧ್ಯತೆ ಇರುವುದರಿಂದ ಅದು ಅವಲಂಚೆಯನ್ನು ಪ್ರಚೋದಿಸುತ್ತದೆ. ಹಾಗಾಗಿ ಸೈನಿಕರು ಈ ಪ್ರದೇಶಗಳಲ್ಲಿ ಮುಂಜಾನೆ ಅಥವಾ ರಾತ್ರಿ ವೇಳೆ ಮಾತ್ರ ಸಂಚರಿಸುತ್ತಾರೆ. ಈ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಸೈನಿಕರು ಪ್ರತಿ ದಿನ ಕನಿಷ್ಠ 4-6 ಗಂಟೆ ಗಸ್ತು ತಿರುಗುತ್ತಾರೆ.

2017ರಲ್ಲಿ 24 ಜನರು ಸಾವು

ಜಮ್ಮು-ಕಾಶ್ಮೀರದ ಗುರೇಜ್‌ ಸೆಕ್ಟರ್‌ನಲ್ಲಿ 2017ರಲ್ಲಿ ಸಂಭವಿಸಿದ ಅವಲಂಚೆಯು ಭಾರತದ ಇತಿಹಾಸದಲ್ಲಿಯೇ ಅತ್ಯಂತ ಮಾರಣಾಂತಿಕ ಹಿಮಕುಸಿತವಾಗಿದ್ದು, ಆಗ 24 ಜನರು ಸಾವನ್ನಪ್ಪಿದ್ದರು. ಅವರಲ್ಲಿ 20 ಜನರು ಸೈನಿಕರು, ಉಳಿದ ನಾಲ್ವರು ನಾಗರಿಕರಾಗಿದ್ದರು. ಅದರ ಹಿಂದಿನ ವರ್ಷ ಅಂದರೆ 2016ರಲ್ಲಿಯೂ ಹಠಾತ್‌ ಹಿಮಕುಸಿತವಾಗಿ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ 10 ಜನ ಸೈನಿಕರು ಅದರಡಿ ಸಿಲುಕಿದ್ದರು. ಇನ್ನು ಪಾಕಿಸ್ತಾನದ ಕಡೆಗೂ ಇದೇ ರೀತಿ ಅವಲಂಚೆ ಸಂಭವಿಸುತ್ತದೆ. 2012, ಏಪ್ರಿಲ್‌ 7ರಂದು ಹಿಮಕುಸಿತದಲ್ಲಿ 140 ಪಾಕ್‌ ಸೈನಿಕರು ಸಿಲುಕಿದ್ದರು.

ಸೈನಿಕರ ಉಳಿವಿಗೆ ತಂತ್ರಜ್ಞಾನ ಹೇಗೆ ನೆರವಾಗುತ್ತಿದೆ?

ಭಾರತೀಯ ಸೇನೆ ಹಿಮಕುಸಿತ ನಿಯಂತ್ರಣಕ್ಕೆ ಅಥವಾ ಅದರ ಪರಿಣಾಮವನ್ನು ತಗ್ಗಿಸಲು ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಇದು ಅವಲಂಚೆಯ ಬಗ್ಗೆ ಸಂಶೋಧನೆ ನಡೆಸುತ್ತಾ, ಅವುಗಳನ್ನು ತಡೆಯುತ್ತದೆ ಅಥವಾ ಅದರ ಪರಿಣಾಮವನ್ನು ತಗ್ಗಿಸುತ್ತದೆ. ಅವುಗಳಲ್ಲಿ ಮುಖ್ಯವಾದುದು ‘ಸ್ನೋ ಆ್ಯಂಡ್‌ ಅವಲಂಚೆ ಸ್ಟಡಿ ಎಸ್ಟಾಬ್ಲಿಶ್‌ಮೆಂಟ್‌ (ಎಸ್‌ಎಎಸ್‌ಇ)’. ಇದು ಅವಲಂಚೆ ಉದ್ಭವಿಸುವ ಸ್ಥಳಗಳ ಬಗ್ಗೆ ಮಾಹಿತಿ ನೀಡಿ ಮುನ್ನಚ್ಚರಿಕೆ ವಹಿಸಲು ನೆರವಾಗುತ್ತದೆ.

ಪ್ರವಾಸಿಗರಿಗೆ ಸಿಯಾಚಿನ್‌ ಮುಕ್ತ; ಈಗಲೇ ಪ್ರವಾಸ ಹೋಗಬಹುದೆ?

ಹಾಗೆಯೇ ‘ಅವಲಂಚೆ ಮಿಟಿಗೇಶನ್‌ ವಾಲ್ಸ್‌’ ,‘ಅವಲಂಚೆ ಡೆಟೆಕ್ಷನ್‌ ಡಿವೈಸ್‌’ ಅನ್ನು ಪ್ರತಿ ಸೈನಿಕರಿಗೂ ನೀಡಲಾಗಿರುತ್ತದೆ. ಅವುಗಳು ಅವಲಂಚೆ ಉದ್ಭವಿಸುವಂತಿದ್ದರೆ ಸಿಗ್ನಲ್‌ಗಳನ್ನು ರವಾನಿಸುತ್ತದೆ. ಸಿಯಾಚಿನ್‌ನಲ್ಲಿ ವಿಂಟರ್‌ ರೂಟ್‌ ಮೇಕ​ರ್ಸ್ ಅಂದರೆ ದಾರಿಯುದ್ದಕ್ಕೂ ಹಗ್ಗವನ್ನು ಕಟ್ಟಿರಲಾಗುತ್ತದೆ. ಯೋಧರು ಈ ಹಗ್ಗ ಹಿಡಿದು ಮೇಲೆ ಹತ್ತಬೇಕು. ಒಂದು ವೇಳೆ ಅವಲಂಚೆ ಉಂಟಾದರೂ ರಕ್ಷಣಾ ಪಡೆಗಳಿಗೆ ಸೈನಿಕರನ್ನು ಹುಡುಕುವುದು ಸುಲಭ. ಈ ವಿಧಾನವನ್ನು ಬಳಸದಿದ್ದರೆ ಸೈನಿಕರ ದೇಹ ಪತ್ತೆ ಮಾಡುವುದು ಕಷ್ಟ.

ಚಳಿ ತಡೆಯಲಾಗದೆ 2500ಕ್ಕೂ ಹೆಚ್ಚು ಯೋಧರು ಸಾವು!

ಹಿಮಾವೃತ ಪ್ರದೇಶದ ರಕ್ಷಣೆಗಾಗಿ ಭಾರತ ಪ್ರತಿ ದಿನ 5 ಕೋಟಿ ರು. ಖರ್ಚು ಮಾಡುತ್ತಿದೆ. ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ ಹಲವು ವರ್ಷಗಳಿಂದ ಶತ್ರು ದೇಶದ ಗುಂಡೇಟಿಗೆ ಬಲಿಯಾದವರಿಗಿಂತ ಇಲ್ಲಿನ ಪ್ರತಿಕೂಲ ಹವಾಮಾನವನ್ನು ಎದುರಿಸಲಾಗದೆ ಹುತಾತ್ಮರಾದ ಸೈನಿಕರ ಸಂಖ್ಯೆ ಹೆಚ್ಚು. ಭಾರತ ಸರ್ಕಾರ 1984ರಲ್ಲಿ ಸಿಯಾಚಿನ್‌ ನೀರ್ಗಲ್ಲು ಪ್ರದೇಶದ ಹಿಡಿತಕ್ಕಾಗಿ ‘ಆಪರೇಶನ್‌ ಮೇಘದೂತ್‌’ ಎಂಬ ಸೈನಿಕ ಕಾರ್ಯಾಚರಣೆ ಆರಂಭಿಸಿದಾಗಿನಿಂದಲೂ ಕೇವಲ ಪಾಕ್‌ನೊಂದಿಗೆ ಮಾತ್ರವಲ್ಲ, ನಿಸರ್ಗದೊಂದಿಗೂ ನಮ್ಮ ಸೈನಿಕರು ನಿತ್ಯ ಸೆಣಸಾಡುತ್ತಿದ್ದಾರೆ.

ಪಾಕ್‌ ಮತ್ತು ಭಾರತದ 2500ಕ್ಕೂ ಹೆಚ್ಚು ಸೈನಿಕರು ಇಲ್ಲಿನ ಪ್ರತಿಕೂಲ ಹವಾಮಾನಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಅಂಕಿಅಂಶಗಳು ಹೇಳುತ್ತಿವೆ. ಅನಧಿಕೃತ ದಾಖಲೆಗಳ ಪ್ರಕಾರ ಸುಮಾರು 3000ದಿಂದ 5000 ಜನರು ಸಾವನ್ನಪ್ಪಿದ್ದಾರೆ. ಅಂದಹಾಗೆ ಸಿಯಾಚಿನ್‌ನಲ್ಲಿ ಸಂಭವಿಸುವ 70% ಮರಣಕ್ಕೆ ಪ್ರತಿಕೂಲ ಹವಾಮಾನವೇ ಕಾರಣ.

30 ಕೇಜಿ ಬ್ಯಾಗ್‌, 10 ಕೇಜಿ ಬೂಟ್‌ ಹೊತ್ತು ತಿರುಗಬೇಕು

ಸಮುದ್ರ ಮಟ್ಟಕ್ಕಿಂತ 18 ಅಥವಾ 19 ಸಾವಿರ ಅಡಿ ಎತ್ತರದಲ್ಲಿ ವಾಸಿಸಬೇಕು ಎಂದರೆ ಅದು ಪ್ರಾಣ ಪಣಕ್ಕಿಟ್ಟು ಹೋರಾಡುವ ಕೆಚ್ಚೆದೆ ಇದ್ದವರಿಗೆ ಮಾತ್ರ ಸಾಧ್ಯ. ಅಲ್ಲಿ ಚಳಿ ಎಂದರೆ ಸಾಮಾನ್ಯ ಅಲ್ಲ, ಊಹೆಗೂ ನಿಲುಕದ್ದು. ಈ ಪ್ರದೇಶದಲ್ಲಿ ಗಸ್ತು ತಿರುಗುವಾಗ ಆಕ್ಸಿಜನ್‌ ಕನ್ಸಿಸ್ಟರ್‌, ಕೆರೋಸಿನ್‌, ಹಗ್ಗ, ಕೈ ಕವಚಗಳು, ಸಾಕ್ಸ್‌, ಸ್ಲೀಪಿಂಗ್‌ ಬಾಗ್‌ಗಳನ್ನೊಳಗೊಂಡ ಬ್ಯಾಗ್‌ ಹೊತ್ತೊಯ್ಯಬೇಕು. ಇವೆಲ್ಲದರ ಒಟ್ಟು ತೂಕ ಕನಿಷ್ಠ 25-30 ಕೆ.ಜಿ. ಇರುತ್ತದೆ.

ನಿಜಕ್ಕೂ ವಿಶೇಷ: ಪ್ರವಾಸಿಗರಿಗೆ ಮುಕ್ತಗೊಂಡ ಸಿಯಾಚಿನ್ ನಿರ್ಗಲ್ಲು ಪ್ರದೇಶ!

ಹಿಮಾವೃತ ಪ್ರದೇಶದ ಸಂಚಾರಕ್ಕೆಂದೇ ಇರುವ ಬೂಟ್‌ಗಳು ಸುಮಾರು 10 ಕೆ.ಜಿ. ತೂಕವಿರುತ್ತವೆ. ಇಷ್ಟುತೂಕವನ್ನು ಹೊತ್ತು ಕೊರೆಯುವ ಚಳಿಯಲ್ಲಿ ನಮ್ಮ ಸೈನಿಕರು ದೇಶ ಕಾಯುತ್ತಾರೆ. ಅಲ್ಲದೆ ಅಲ್ಲಿ ವಿದ್ಯುತ್‌, ಗ್ಯಾಸ್‌ ಯಾವುದೂ ಇರುವುದಿಲ್ಲ. ಟೆಂಟ್‌ಗಳನ್ನು ಬಿಸಿ ಮಾಡಲು, ಮಂಜುಗಡ್ಡೆಯಾದ ನೀರನ್ನು ಕರಗಿಸಲು, ಮೈ ಬಿಸಿ ಮಾಡಿಕೊಳ್ಳಲು ಸೀಮೆ ಎಣ್ಣೆಯನ್ನೇ ಬಳಸಬೇಕು.

ಸಿಯಾಚಿನ್‌ನಲ್ಲಿ -60 ಡಿಗ್ರಿ ತಾಪಮಾನ!

ಸಿಯಾಚಿನ್‌ ನೀರ್ಗಲ್ಲು ಪ್ರದೇಶ ಲಡಾಖ್‌ ಕೇಂದ್ರಾಡಳಿತ ಪ್ರದೇಶದಲ್ಲಿ ಭಾರತದ ಗಡಿಯ ತುತ್ತತುದಿಯಲ್ಲಿದೆ. ಸಮುದ್ರ ಮಟ್ಟದಿಂದ 21 ಸಾವಿರ ಅಡಿ ಎತ್ತರದಲ್ಲಿದೆ. ಭಾರತ ಹಾಗೂ ಪಾಕಿಸ್ತಾನ ನಡುವಣ ಗಡಿ ನಿಯಂತ್ರಣ ರೇಖೆ ಅಂತ್ಯವಾಗುವುದು ಇಲ್ಲೇ. ಇದು ಎಡಭಾಗದಲ್ಲಿ ಪಾಕಿಸ್ತಾನ ಮತ್ತು ಬಲಭಾಗದಲ್ಲಿ ಚೀನಾ ಜೊತೆ ಗಡಿ ಹಂಚಿಕೊಂಡಿರುವುದರಿಂದ ಅತ್ಯಂತ ಸೂಕ್ಷ್ಮ ಸ್ಥಳವಾಗಿದೆ. ಇದು ವಿಶ್ವದ ಅತಿದೊಡ್ಡ ಧ್ರುವೇತರ ಹಿಮನದಿ ಮತ್ತು ಇದನ್ನು ಕೆಲವೊಮ್ಮೆ ಮೂರನೇ ಧ್ರುವ ಎಂದು ಕರೆಯಲಾಗುತ್ತದೆ. ಚಳಿಗಾಲದಲ್ಲಿ ಇಲ್ಲಿನ ತಾಪಮಾನವು ಮೈನಸ್‌ 60 ಡಿಗ್ರಿಗೆ ಇಳಿಯುತ್ತದೆ. ಸಿಯಾಚಿನ್‌ನಲ್ಲಿ ಒಬ್ಬ ಯೋಧ ಗರಿಷ್ಠ ಮೂರು ತಿಂಗಳು ಮಾತ್ರವೇ ಗಡಿ ಕಾಯಬಹುದು. ಈ ಅವಧಿ ಮುಗಿಯುತ್ತಿದ್ದಂತೆ ಸೇನೆ ಬೇರೆ ಯೋಧನನ್ನು ನಿಯೋಜಿಸುತ್ತದೆ. ಸಿಯಾಚಿನ್‌ನಲ್ಲಿ ಮೂರು ಸಾವಿರ ಮಂದಿ ಸೈನಿಕರು ನಿತ್ಯ ಭಾರತದ ಗಡಿ ಕಾಯುತ್ತಿದ್ದಾರೆ.

6 ದಿನ ಹಿಮದಡಿ ಸಿಲುಕಿದ್ದ ಕುಂದಗೋಳದ ಯೋಧ

ಹಿಮಪಾತದಡಿ ಸಿಲುಕಿದರೆ ಒಂದು ದಿನ ಬದುಕುಳಿಯುವುದೇ ಕಷ್ಟ. ಅಂಥದ್ದರಲ್ಲಿ ಕರ್ನಾಟದ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯೋಧ ಲ್ಯಾನ್ಸ್‌ನಾಯಕ್‌ ಹನುಮಂತಪ್ಪ ಕೊಪ್ಪದ 19,500 ಅಡಿ ಎತ್ತರದ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ 6 ದಿನ ಹಿಮಪಾತದಲ್ಲಿ ಸಿಲುಕಿ ಜೀವಂತವಾಗಿ ಮರಳಿದ್ದರು! ಹೌದು, ಫೆ.3, 2016ರಲ್ಲಿ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಲ್ಲಿ ಘಟಿಸಿದ ಅವಲಂಚೆಯಲ್ಲಿ ಕೊಪ್ಪದ ಸಿಲುಕಿದ್ದರು.

25 ಅಡಿ ಹಿಮ ಪ್ರಪಾತದಲ್ಲಿ -50 ಡಿಗ್ರಿ ಸೆಲ್ಸಿಯಸ್‌ ಚಳಿಯಲ್ಲಿ, ಅನ್ನ ನೀರು ಇಲ್ಲದೆಯೂ ನಿಸರ್ಗ ಒಡ್ಡಿದ ಸವಾಲುಗಳನ್ನು ಸತತ 6 ದಿನಗಳ ಕಾಲ ಎದುರಿಸಿ ಇವರು ಬದುಕುಳಿದಿದ್ದರು. ನಂತರ ಸೇನೆಯು ಇವರನ್ನು ಹುಡುಕಿ ಕರೆತಂದು ಆಸ್ಪತ್ರೆಗೆ ಸೇರಿಸಿತ್ತು. ಆದರೆ, ಮೈತುಂಬಾ ಹಿಮದ ಹುಣ್ಣುಗಳಾಗಿ, ಉಸಿರಾಟ ಸಹಜ ಸ್ಥಿತಿಗೆ ಬಾರದೆ ಕೊನೆಗೆ ಫೆ.11ರಂದು ಕೊನೆಯುಸಿರೆಳೆದಿದ್ದರು.

-