ನವದೆಹಲಿ(ಜ.07): ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಮೆಸೇಜಿಂಗ್‌ ಆ್ಯಪ್‌ ಸದ್ದಿಲ್ಲದೆ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, ಇದನ್ನು ಒಪ್ಪಿಕೊಂಡರೆ ಮಾತ್ರ ಫೆಬ್ರವರಿ 8ರಿಂದ ನೀವು ವಾಟ್ಸಾಪ್‌ ಉಪಯೋಗಿಸಬಹುದು. ಇಲ್ಲದಿದ್ದರೆ ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಫೇಸ್‌ಬುಕ್‌ ಹಾಗೂ ಅದರ ಅಧೀನದಲ್ಲಿರುವ ಸೋಷಿಯಲ್‌ ಮೀಡಿಯಾಗಳ ಜೊತೆಗೆ ವಾಟ್ಸ್‌ಆ್ಯಪ್‌ ಬಳಕೆದಾರರು ತಮ್ಮ ಮಾಹಿತಿಯನ್ನು ಹಂಚಿಕೊಳ್ಳಲು ಒಪ್ಪಿಗೆ ನೀಡುವುದೇ ಈ ಹೊಸ ನಿಯಮವಾಗಿದೆ.

ಹಿಂದೆಲ್ಲ ವಾಟ್ಸಾಪ್‌ ಯಾವುದಾದರೂ ಬದಲಾವಣೆ ತಂದರೆ ಅದನ್ನು ಆ್ಯಪ್‌ ಅಪ್‌ಡೇಟ್‌ ಮೂಲಕ ಬಿಡುಗಡೆ ಮಾಡುತ್ತಿತ್ತು. ಆದರೆ, ಈ ಬಾರಿ ಆ್ಯಪ್‌ ಅಪ್‌ಡೇಟ್‌ ಮಾಡದೆ ಗ್ರಾಹಕರ ಮೊಬೈಲ್‌ ಸ್ಕ್ರೀನ್‌ ಮೇಲೆ ನೋಟಿಸ್‌ ಬಿತ್ತರವಾಗುವಂತೆ ಮಾಡಿದೆ. ಮಂಗಳವಾರ ಬಹುತೇಕ ಎಲ್ಲಾ ವಾಟ್ಸಾಪ್‌ ಬಳಕೆದಾರರ ಸ್ಕ್ರೀನ್‌ ಮೇಲೆ ಈ ನೋಟಿಸ್‌ ಪ್ರದರ್ಶಿತವಾಗಿದೆ. ಇದನ್ನು ಒಪ್ಪಿಕೊಳ್ಳುವುದ್ಕೂ, ಒಪ್ಪಿಕೊಳ್ಳದಿರುವುದಕ್ಕೂ ಅಲ್ಲೇ ಆಯ್ಕೆ ನೀಡಲಾಗಿದೆ. ಒಪ್ಪಿಕೊಂಡರೆ ಮಾತ್ರ ಫೆ.8ರಿಂದ ಅವರ ಮೊಬೈಲ್‌ನಲ್ಲಿ ವಾಟ್ಸಾಪ್‌ ಕೆಲಸ ಮಾಡಲಿದೆ ಎಂದು ಹೇಳಲಾಗಿದೆ.

ಹೊಸ ವ್ಯವಸ್ಥೆಯಡಿ ವಾಟ್ಸಾಪ್‌ ಕಂಪನಿಯು ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸುವುದು ಹಾಗೂ ಬಳಕೆ ಮಾಡುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ತಿದ್ದುಪಡಿ ಮಾಡಿದೆ. ಗ್ರಾಹಕರ ವ್ಯವಹಾರಗಳು, ಹಣ ಪಾವತಿ ಮಾಹಿತಿ, ಸ್ಥಳ, ವಾಟ್ಸಾಪ್‌ ಮೂಲಕ ನಡೆಸುವ ವಾಣಿಜ್ಯ ವ್ಯವಹಾರಗಳು ಮುಂತಾದವುಗಳ ವಿವರಗಳನ್ನು ಇನ್ನು ಮುಂದೆ ಫೇಸ್‌ಬುಕ್‌ನ ಒಡೆತನದಲ್ಲಿರುವ ಕಂಪನಿಗಳ ಜೊತೆ ವಾಟ್ಸಾಪ್‌ ಹಂಚಿಕೊಳ್ಳಲಿದೆ.