ಆಕ್ಷೇಪಾರ್ಹ ಪೋಸ್ಟ್‌ಗೆ ವಾಟ್ಸಾಪ್‌ ಗ್ರೂಪ್‌ ಅಡ್ಮಿನ್‌ ಹೊಣೆ ಅಲ್ಲ| ಇನ್ನಾರೋ ಹಾಕಿದ ಪೋಸ್ಟ್‌ಗೆ ಆತ ಜವಾಬ್ದಾರ ಆಗಲ್ಲ| ಲೈಂಗಿಕ ಕಿರುಕುಳ ಕೇಸಲ್ಲಿ ಬಾಂಬೆ ಹೈಕೋರ್ಟ್‌ನಿಂದ ತೀರ್ಪು

ಮುಂಬೈ(ಏ.27): ವಾಟ್ಸಾಪ್‌ ಗ್ರೂಪ್‌ನಲ್ಲಿ ಸದಸ್ಯರು ಹಾಕಿದ ಆಕ್ಷೇಪಾರ್ಹ ಪೋಸ್ಟ್‌ಗಳಿಗೆ ಗ್ರೂಪ್‌ ಅಡ್ಮಿನ್‌ ಹೊಣೆಗಾರ ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ತೀರ್ಪು ನೀಡಿದೆ.

ವಾಟ್ಸಾಪ್‌ ಗ್ರೂಪ್‌ ಅಡ್ಮಿನ್‌ ಆದ ಕಾರಣಕ್ಕೆ 33 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ ದಾಖಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ ಕಳೆದ ತಿಂಗಳು ನೀಡಿದ್ದ ಆದೇಶದ ಪ್ರತಿ ಇದೀಗ ಲಭ್ಯವಾಗಿದೆ. ‘ವಾಟ್ಸಾಪ್‌ ಗ್ರೂಪ್‌ ಅಡ್ಮಿನ್‌ ಆದವರು ಸದಸ್ಯರನ್ನು ಸೇರಿಸಿಕೊಳ್ಳುವ ಮತ್ತು ಅವರನ್ನು ಗ್ರೂಪ್‌ನಿಂದ ಡಿಲೀಟ್‌ ಮಾಡುವ ಸೀಮಿತ ಅಧಿಕಾರವನ್ನು ಮಾತ್ರ ಹೊಂದಿರುತ್ತಾರೆ. ಆದರೆ, ಗ್ರೂಪ್‌ನಲ್ಲಿ ಪ್ರಕಟಗೊಳ್ಳುವ ಸಂದೇಶಗಳನ್ನು ಸೆನ್ಸಾರ್‌ ಮಾಡುವ ಅಧಿಕಾರ ಹೊಂದಿಲ್ಲ’ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಕಿಶೋರ್‌ ತರೋಣೆ (33) ಎಂಬಾತ ರಚಿಸಿದ್ದ ವಾಟ್ಸಪ್‌ ಗ್ರೂಪ್‌ನಲ್ಲಿ ಸದಸ್ಯರೊಬ್ಬರು ಮಹಿಳೆಯ ವಿರುದ್ಧ ಹಾಕಿದ್ದ ಅಶ್ಲೀಲ ಸಂದೇಶವನ್ನು ಡಿಲೀಟ್‌ ಮಾಡಲು ವಿಫಲವಾದ ಕಾರಣಕ್ಕೆ ಆತನ ವಿರುದ್ಧ ಲೈಂಗಿಕ ಕಿರುಕುಳ ಕೇಸ್‌ ದಾಖಲಾಗಿತ್ತು. ತನ್ನ ವಿರುದ್ಧ ಕೇಸ್‌ ದಾಖಲಿಸಿದ್ದನ್ನು ಪ್ರಶ್ನಿಸಿ ಕಿಶೋರ್‌ ಕೋರ್ಟ್‌ ಮೊರೆ ಹೋಗಿದ್ದ. ಕಿಶೋರ್‌ ವಾದಕ್ಕೆ ಕೋರ್ಟ್‌ ಮನ್ನಣೆ ನೀಡಿದೆ.

‘ಈ ಪ್ರಕರಣದಲ್ಲಿ ಗ್ರೂಪ್‌ ಅಡ್ಮಿನ್‌ ಯಾವುದೇ ತಪ್ಪು ಮಾಡಿಲ್ಲ. ಆತ ಕೇವಲ ಸದಸ್ಯರನ್ನು ಸೇರಿಸಿಕೊಳ್ಳುವ ಅಥವಾ ಡಿಲೀಟ್‌ ಮಾಡುವ ಅಧಿಕಾರವನ್ನಷ್ಟೇ ಹೊಂದಿದ್ದಾನೆ’ ಎಂದು ಕೋರ್ಟ್‌ ತಿಳಿಸಿದೆ.