ಭಾರತದಲ್ಲಿ ವ್ಯಾಟ್ಸ್ಆ್ಯಪ್ ಡೌನ್ ಆಗಿದೆ. ಕೆಲ ತಾಂತ್ರಿಕ ಸಮಸ್ಯೆಗಳಿಂದ ವ್ಯಾಟ್ಸ್ಆ್ಯಪ್ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಲವು ಬಳಕೆದಾರರು ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ದೂರು ನೀಡಿದ್ದಾರೆ. ಬಳಕೆದಾರರು ವಿಡಿಯೋ ಡನ್ಲೋಡ್ ಮಾಡಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನವದೆಹಲಿ(ಏ.17): ಭಾರತದಲ್ಲಿ ವ್ಯಾಟ್ಸ್ಆ್ಯಪ್ ಬಳಕೆದಾರರು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಬಳಕೆದಾರರು ವಿಡಿಯೋ ಡೌನ್ಲೋಡ್ ಮಾಡಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಕಳೆದ ರಾತ್ರಿಯಿಂದ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಇಂದು ಕೂಡ ಮುಂದುವರಿದಿದೆ ಎಂದು ಡೌನ್‌ಡಿಟೆಕ್ಟರ್ ವರದಿ ಮಾಡಿದೆ. ವ್ಯಾಟ್ಸ್ಆ್ಯಪ್ ಸಮಸ್ಯೆ ಎದುರಿಸುತ್ತಿರುವ ಭಾರತದ ಹಲವು ಬಳಕೆದಾರರು ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮದಲ್ಲಿ ದೂರು ನೀಡಿದ್ದಾರೆ. ಭಾರತದ ಶೇಕಡಾ 43 ರಷ್ಟು ವ್ಯಾಟ್ಸ್ಆ್ಯಪ್ ಬಳಕೆದಾರರು ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಡೌನ್‌ಡಿಟೆಕ್ಟರ್ ವರದಿ ಮಾಡಿದೆ.
ಶೇಕಡಾ 41 ರಷ್ಟು ಭಾರತದ ವ್ಯಾಟ್ಸ್ಆ್ಯಪ್ ಬಳಕೆದಾರರು ಇದು ಸರ್ವರ್ ಸಮಸ್ಯೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ವ್ಯಾಟ್ಸ್ಆ್ಯಪ್ ಇದುವರೆಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಆದರೆ ಮತ್ತೊಂದು ಪ್ರಮುಖ ವಿಚಾರ ಎಂದರೆ, ವ್ಯಾಟ್ಸ್ಆ್ಯಪ್ ಹೊಸ ವಿಡಿಯೋ ಸಿಸ್ಟಮ್ ಪರಿಚಯಿಲು ಟೆಸ್ಟಿಂಗ್ ನಡೆಸುತ್ತಿದೆ. ಇದರ ಭಾಗವಾಗಿ ಬಳಕೆದಾರರಿಗೆ ವಿಡಿಯೋ ಡೌನ್ಲೋಡ್ ಸಮಸ್ಯೆ ಎದುರಾಗಿರುವ ಸಾಧ್ಯತೆ ಇದೆ ಎಂದು ಡೌನ್‌ಡಿಟೆಕ್ಟರ್ ವರದಿ ಮಾಡಿದೆ.
ಬಳಕೆದಾರರ ಭದ್ರತೆಗೆ 3 ಹೊಸ ಫೀಚರ್ ಬಿಡುಗಡೆ ಮಾಡಿದ ವಾಟ್ಸಾಪ್
ವ್ಯಾಟ್ಸ್ಆ್ಯಪ್ ವಿಡಿಯೋ ಪ್ಲಾಟ್‌ಫಾರ್ಮ್ ಸ್ವರೂಪ ಬದಲಿಸುತ್ತಿದೆ. ಇದರ ಟೆಸ್ಟಿಂಗ್ ಕಾರ್ಯಗಳು ನಡೆಯುತ್ತಿದೆ. ಶೀಘ್ರದಲ್ಲೇ ಹೊಸ ವಿಡಿಯೋ ಪ್ಲಾಟ್‌ಫಾರ್ಮ್ ಜಾರಿಯಾಗಲಿದೆ. ಇದರಿಂದ ಬಳಕೆದಾರರು ವಿಡಿಯೋ ಡೌನ್ಲೋಡ್, ವಿಡಿಯೋ ಶೇರಿಂಗ್, ಫಾರ್ವಡ್‌ಗೆ ಸುಲಭ ಹಾಗೂ ಸುರಕ್ಷಿತ ವಿಧಾನ ಬರಲಿದೆ. ಆ್ಯಂಡ್ರಾಯ್ಡ್ ಬಳೆದಾರರು ವಿಡಿಯೋ ಡೌನ್ಲೋಡ್ ಸಮಸ್ಯೆ ಹೆಚ್ಚಾಗಿ ಎದುರಿಸುತ್ತಿದ್ದಾರೆ. ಆದರೆ ವ್ಯಾಟ್ಸ್ಆ್ಯಪ್ ಆನ್‌ಲೈನ್ ಹಾಗೂ ಡೆಸ್ಕ್‌ಟಾಪ್ ಬಳಕೆದಾರರು ಯಾವುದೇ ಸಮಸ್ಯೆ ಇಲ್ಲದೆ ಡೌನ್ಲೋಡ್ ಮಾಡಲು ಸಾಧ್ಯವಾಗುತ್ತಿದೆ. ವ್ಯಾಟ್ಸ್ಆ್ಯಪ್ ಹೊಸ ಹೊಸ ಫೀಚರ್ಸ್ ಪರಿಚಯಿಸುತ್ತಿದೆ.
ವ್ಯಾಟ್ಸ್ಆ್ಯಪ್ ಬಳಕೆದಾರರ ಸುರಕ್ಷತೆಗಾಗಿ ಈಗಾಗಲೇ ಅಕೌಂಟ್ ರಕ್ಷಣೆ, ಡಿವೈಸ್ ದೃಢೀಕರಣ, ಸ್ವಯಂ ಚಾಲಿತ ಭದ್ರತಾ ಕೋಡ್ ಸೇರಿದಂತೆ ಹಲವು ಫೀಚರ್ಸ್ ಪರಿಚಯಿಸಿದೆ. ಪ್ರಮುಖವಾಗಿ ಸುರಕ್ಷತೆಗಾಗಿ ಭಾರತದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಕಾರಣ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್, ವ್ಯಾಟ್ಸ್ಆ್ಯಪ್‌ಗೆ ಖಡಕ್ ಎಚ್ಚರಿಕೆ ನೀಡಿದೆ.
ವಾಟ್ಸಾಪ್ ಗ್ರೂಪಲ್ಲಿ ಮತ ಕೇಳಿದ್ರೆ ಅಡ್ಮಿನ್ ಮೇಲೆ ಕ್ರಮ: ಚುನಾವಣಾ ಆಯೋಗ
2021ರಲ್ಲಿ ಜಾರಿಗೆ ತಂದಿದ್ದ ‘ಖಾಸಗಿತನ ನೀತಿ’ ಒಪ್ಪದ ಬಳಕೆದಾರರ ಮೇಲೆ ನಿರ್ಬಂಧ ಹೇರಲ್ಲ’ ಎಂದು ಸರ್ಕಾರಕ್ಕೆ ಬರೆದುಕೊಟ್ಟಿದ್ದ ಮುಚ್ಚಳಿಕೆ ಪತ್ರವನ್ನು 5 ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕು ಎಂದು ವಾಟ್ಸಾಪ್‌ಗೆ ಸುಪ್ರೀಂ ಕೋರ್ಚ್ ಇತ್ತೀಚೆಗೆ ಸೂಚನೆ ನೀಡಿತ್ತು. 2 ವರ್ಷದ ಹಿಂದೆ ವಾಟ್ಸಾಪ್ ಖಾಸಗಿತನ ನೀತಿಯೊಂದನ್ನು ಜಾರಿಗೆ ತಂದಿತ್ತು. ಈ ನೀತಿಯ ಅನುಸಾರ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿನ ಫೋಟೋ, ಸಂಪರ್ಕಗಳು, ಬರಹಗಳನ್ನು ವಾಟ್ಸಾಪ್ ಹಾಗೂ ಅಂಗಸಂಸ್ಥೆ ಫೇಸ್‌ಬುಕ್ ಜತೆ ಹಂಚಿಕೊಳ್ಳಬೇಕು. ಇಲ್ಲದಿದ್ದರೆ ಖಾತೆ ನಿಷ್ಕಿ್ರಯ ಮಾಡಲಾಗುವುದು ಎಂಬ ಷರತ್ತು ವಿಧಿಸಿತ್ತು. ಇದನ್ನು ಪ್ರಶ್ನಿಸಿ ಇಬ್ಬರು ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಚ್ ಮೊರೆ ಹೋಗಿ, ಇದು ವಾಕ್ ಸ್ವಾತಂತ್ರ್ಯದ ಉಲ್ಲಂಘನೆ ಎಂದಿದ್ದರು. ಬಳಿಕ ವ್ಯಾಪಕ ಜನವಿರೋಧದ ಕಾರಣ ತನ್ನ ಈ ನೀತಿಗೆ ತಡೆ ನೀಡಿ, ಬಳಕೆದಾರರ ಮೇಲೆ ನಿರ್ಬಂಧ ಹೇರುವುದಿಲ್ಲ ಎಂದು ಸರ್ಕಾರಕ್ಕೆ ಮುಚ್ಚಳಿಕೆ ನೀಡಿತ್ತು.
