ಕ್ರೋಮ್, ಎಡ್ಜ್ ಬಳಸುವ 30 ಲಕ್ಷ ಕಂಪ್ಯೂಟರ್‌ಗೆ ರಹಸ್ಯ ವೈರಸ್ ದಾಳಿ!
ಜನಪ್ರಿಯ ಬ್ರೌಸರ್‌ಗಳಾದ ಗೂಗಲ್ ಕ್ರೋಮ್ ಹಾಗೂ ಮೈಕ್ರೋಸಾಫ್ಟ್ ಎಡ್ಜ್‌ಗಳನ್ನು ಬಳಸುವ ಕನಿಷ್ಠ 30 ಲಕ್ಷ ಮಂದಿ| ಕ್ರೋಮ್, ಎಡ್ಜ್ ಬಳಸುವ 30 ಲಕ್ಷ ಕಂಪ್ಯೂಟರ್‌ಗೆ ರಹಸ್ಯ ವೈರಸ್ ದಾಳಿ
ಮುಂಬೈ(ಡಿ.19): ಜನಪ್ರಿಯ ಬ್ರೌಸರ್‌ಗಳಾದ ಗೂಗಲ್ ಕ್ರೋಮ್ ಹಾಗೂ ಮೈಕ್ರೋಸಾಫ್ಟ್ ಎಡ್ಜ್‌ಗಳನ್ನು ಬಳಸುವ ಕನಿಷ್ಠ 30 ಲಕ್ಷ ಮಂದಿಯ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ಗಳು ರಹಸ್ಯ ವೈರಸ್ ದಾಳಿಗೆ ತುತ್ತಾಗಿವೆ. ಜಗತ್ತಿನಾದ್ಯಂತ ಈ ಬ್ರೌಸರ್‌ಗಳನ್ನು ಬಳಸುವವರು ಡೌನ್‌ಲೋಡ್ ಮಾಡಿದ ಕೆಲ ಎಕ್ಸ್‌ಟೆನ್ಷನ್‌ಗಳಿಂದ ಇವರ ಕಂಪ್ಯೂಟರ್‌ಗೆ ವೈರಸ್ ಸೇರಿಕೊಂಡಿದೆ ಎಂದು ಪ್ರಸಿದ್ಧ ಆ್ಯಂಟಿವೈರಸ್ ಕಂಪನಿ ಅವಾಸ್ಟ್ ತಿಳಿಸಿದೆ.
ಗೂಗಲ್ ಕ್ರೋಮ್ ಹಾಗೂ ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್ ಬಳಕೆದಾರರು ಇನ್‌ಸ್ಟಾಗ್ರಾಂ, ಫೇಸ್‌ಬುಕ್, ಸ್ಪಾಟಿಫೈ, ವಿಮೆಯೋ ಮುಂತಾದ ಸೋಷಿಯಲ್ ಮೀಡಿಯಾಗಳಿಂದ ಫೋಟೋ, ವಿಡಿಯೋ ಅಥವಾ ಇನ್ನಿತರ ಕಂಟೆಂಟ್‌ಗಳನ್ನು ಡೌನ್‌ಲೋಡ್ ಮಾಡುವ ಎಕ್ಸ್‌ಟೆನ್ಷನ್‌ಗಳನ್ನು ಅಳವಡಿಸಿಕೊಂಡಿರುತ್ತಾರೆ. ಅದರ ಜೊತೆಗೇ ಅವರು ಮಾಲ್‌ವೇರ್‌ಗಳನ್ನೂ ಡೌನ್‌ಲೋಡ್ ಮಾಡಿಕೊಂಡಿದ್ದು, ಈ ವೈರಸ್‌ಗಳು ಬಳಕೆದಾರರ ಖಾಸಗಿ ಮಾಹಿತಿಯನ್ನು ಕದ್ದು ವೈರಸ್‌ನ ಜನಕರಿಗೆ ನೀಡುತ್ತಿವೆ. ಜೊತೆಗೆ ಯಾವುದೋ ವೆಬ್‌ಸೈಟ್ ಕ್ಲಿಕ್ ಮಾಡಿದರೆ ಇನ್ನಾವುದೋ ವೆಬ್‌ಸೈಟಿಗೆ ಕರೆದುಕೊಂಡು ಹೋಗುತ್ತಿವೆ. ಆದರೆ, ಇದು ಎಕ್ಸ್‌ಟೆನ್ಷನ್‌ಗಳಿಂದ ಬಂದ ವೈರಸ್ ಎಂಬುದು ಬಳಕೆದಾರರಿಗೆ ತಿಳಿಯುತ್ತಿಲ್ಲ ಎಂದು ಅವಾಸ್ಟ್ ಹೇಳಿದೆ.
ಬಳಕೆದಾರರ ಜನ್ಮದಿನಾಂಕ, ಇ-ಮೇಲ್ ವಿಳಾಸ, ಕಂಪ್ಯೂಟರ್‌ನ ಮಾಹಿತಿ, ಅವರ ಆಸಕ್ತಿಗಳು, ಐಪಿ ಅಡ್ರೆಸ್ ಮುಂತಾದ ಮಾಹಿತಿಗಳನ್ನು ಕದ್ದು ಮಾರಾಟ ಮಾಡುವುದಕ್ಕೆ ಈ ವೈರಸ್ ಹರಿಬಿಡಲಾಗಿದೆ. ಇದು ಈ ವರ್ಷದ ನವೆಂಬರ್‌ನಲ್ಲಿ ತನ್ನ ಗಮನಕ್ಕೆ ಬಂದಿದ್ದು, ಕೆಲ ವರ್ಷಗಳಿಂದಲೂ ಈ ವೈರಸ್ ಇರಬಹುದು. ವೈರಸ್ ಹರಡುವ ಎಕ್ಸ್‌ಟೆನ್‌್ಷಗಳು ಈಗಲೂ ಡೌನ್‌ಲೋಡ್ ಆಗುತ್ತಿವೆ ಎಂದೂ ಅವಾಸ್ಟ್ ತಿಳಿಸಿದೆ.