ಇದು ಸೋಷಿಯಲ್ ಮೀಡಿಯಾ ಯುಗ. ಅದರಲ್ಲೂ ಕೋವಿಡ್-19 ಬಂದ ಮೇಲಂತೂ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಲೇ ಇದ್ದು, ಸಾಮಾಜಿಕ ಜಾಲತಾಣ ಬಳಸುವವರ ಪ್ರಮಾಣವೂ ಹೆಚ್ಚುತ್ತಲಿದೆ. ಇನ್ನೊಂದು ಮಹತ್ವದ ಸಂಗತಿಯೆಂದರೆ ಲಾಕ್ ಡೌನ್ ವೇಳೆ ವರ್ಕ್ ಫ್ರಂ ಹೋಂ ಮಾಡುವವರ ಸಂಖ್ಯೆ ಹೆಚ್ಚಿದ್ದರಿಂದ ಅವರಿಂದ ಸೋಷಿಯಲ್ ಮೀಡಿಯಾಗಳ ಬಳಕೆಯೂ ಎಂದಿಗಿಂತ ಹೆಚ್ಚಿದೆ ಎಂದು ವರದಿಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ಹೊಸ ಹೊಸ ಅಪ್ಡೇಟ್ ಗಳಿಗೆ ತೆರೆದುಕೊಳ್ಳಬೇಕಾದ ಅವಶ್ಯಕತೆ ಆ್ಯಪ್ ಹಾಗೂ ಮಿನಿ ಬ್ಲಾಗರ್ ಗಳಿಗೆ ಇವೆ. ಈ ನಿಟ್ಟಿನಲ್ಲಿ ಟ್ವಿಟರ್ ಮತ್ತೆ ಹೊಸತನಕ್ಕೆ ತೆರೆದುಕೊಂಡಿದೆ.

ಟ್ವಿಟರ್ ನಲ್ಲಿ ನಾವೀಗ ವಾಯ್ಸ್ ಟ್ವೀಟ್ ಮಾಡಬಹುದು. ಹೌದು. ಆದರೆ, ಸದ್ಯ ಈ ಸೌಲಭ್ಯ ಐಫೋನ್ ಗೆ ಮಾತ್ರ ಲಭ್ಯವಿದೆ. ಪ್ರಾಯೋಗಿಕವಾಗಿ ಈ ಸೇವೆಯನ್ನು ನೀಡಲಾಗಿದ್ದು, ಟೈಪ್ ಮಾಡಬೇಕಾದ ಅಗತ್ಯವಿಲ್ಲ. ಹೇಳಬೇಕಾದ್ದನ್ನು ಹೇಳಿದರೆ ವಾಯ್ಸ್ ರೆಕಾರ್ಡ್ ಆಗಿ ಇನ್ನೊಬ್ಬರಿಗೆ ಕಳುಹಿಸಲು ಸಿದ್ಧವಾಗಿಬಿಡುತ್ತದೆ. ನಿಮ್ಮದೇ ಧ್ವನಿಯನ್ನು ಬಳಸುವ ಹಾಗೂ ಆಪ್ತರಿಗೆ ಕೇಳಿಸಲು ಅನುವು ಮಾಡಿಕೊಡುವ ಮೂಲಕ ಹ್ಯೂಮನ್ ಟಚ್ ಕೊಡಲಾಗಿದೆ ಎಂದು ಟ್ವಿಟರ್ ಹೇಳಿಕೊಂಡಿದೆ.

ಇದನ್ನು ಓದಿ: ನಿಮ್ಮನೆ ಹತ್ತಿರ ಕೊರೋನಾ ಟೆಸ್ಟಿಂಗ್ ಸೆಂಟರ್ ಎಲ್ಲಿದೆ ಅಂತ ಹೇಳುತ್ತೆ ಗೂಗಲ್!
 
ಇಷ್ಟು ವರ್ಷ ಬಳಕೆದಾರರಿಗೆ ವಿಡಿಯೋ, ಫೋಟೋಗಳು, ಜಿಫ್‌ಗಳು ಹಾಗೂ ಕ್ಯಾರೆಕ್ಟರ್‌ಗಳ ಬಳಕೆಗೆ ಅವಕಾಶ ಇದ್ದೇ ಇತ್ತು. ಈ ಮೂಲಕ ಬಳಕೆದಾರರು ತಮ್ಮ ಅನಿಸಿಕೆಗಳನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಲು ಅವಕಾಶ ಇತ್ತು. ಆದರೆ, 280 ಪದಕ್ಕೆ ಸೀಮಿತವಾಗಿದ್ದ ಟ್ವೀಟ್‌ನಲ್ಲಿ ಹೆಚ್ಚಿನದೇನನ್ನೂ ಹೇಳಲು ಬಹುತೇಕ ಸಂದರ್ಭಗಳಲ್ಲಿ ಆಗುತ್ತಿರಲಿಲ್ಲ. ಹೀಗಾಗಿ ಇದಕ್ಕೋಸ್ಕರವೇ ಈಗ ವಾಯ್ಸ್ ನೋಟ್ ಅನ್ನು ಟ್ವಿಟ್ಟರ್ ಬಿಡುಗಡೆ ಮಾಡಿದೆ. 

ಟೆಕ್ಸ್ಟ್ ಟ್ವೀಟ್‌ಗಿಂತ ತೀರಾ ಭಿನ್ನವಿಲ್ಲ
ನೂತನವಾಗಿ ಬಳಕೆಗೆ ಬಿಟ್ಟಿರುವ ವಾಯ್ಸ್ ಟ್ವೀಟ್ ನಲ್ಲಿ ಹೆಚ್ಚಿನ ಫೀಚರ್ ಗಳನ್ನೇನೂ ಅಳವಡಿಸಲಾಗಿಲ್ಲ. ಇದು ಟೆಕ್ಸ್ಟ್ ಟ್ವೀಟ್ ಗಿಂತ ತೀರಾ ಭಿನ್ನವಾಗೇನಿಲ್ಲ. ಇಲ್ಲಿ ಬಳಕೆದಾರರು ಟ್ವೀಟ್ ಕಂಪೋಸರ್ ಗೆ ಭೇಟಿ ನೀಡಬೇಕು, ಅಲ್ಲಿ ವೇವ್‌ಲೆಂತ್ಸ್ ಮಾದರಿಯ ಹೊಸ ಐಕಾನ್ ಮೇಲೆ ಕ್ಲಿಕ್ ಮಾಡಬೇಕು. ಹೀಗೆ ಟ್ಯಾಪ್ ಮಾಡಿ ಹಿಡಿದಾಗ ಕೆಳಗೆ ಕಾಣುವ ರೆಕಾರ್ಡ್ ಬಟನ್‌ನಲ್ಲಿ ನಿಮ್ಮ ಪ್ರೊಫೈಲ್ ಫೋಟೋ ಸಹಿತ ವಾಯ್ಸ್ ರೆಕಾರ್ಡ್ ಆಗುತ್ತಿರುತ್ತದೆ. 

ಇದನ್ನು ಓದಿ: ಈ 36 ಕ್ಯಾಮೆರಾ ಆ್ಯಪ್ ಅನ್ನು ಗೂಗಲ್ ಡಿಲೀಟ್ ಮಾಡಿಯಾಯ್ತು.., ನೀವು ಡಿಲೀಟ್ ಮಾಡಿಬಿಡಿ…

ಇಲ್ಲಿ ನಿಮಗೆ ವಾಯ್ಸ್ ಟ್ವೀಟ್ ಮಾಡಲು 140 ಸೆಕೆಂಡ್ ಗಳ ಅವಕಾಶ ನೀಡಲಾಗಿದ್ದು, ಈ ಸಮಯ ಆದ ಬಳಿಕ ಅಟೋಮ್ಯಾಟಿಕ್ ಆಗಿ ಹೊಸ ರೆಕಾರ್ಡ್ ಪ್ರಾರಂಭವಾಗುತ್ತದೆ. ಒಮ್ಮೆ ನೀವು ರೆಕಾರ್ಡ್ ಮಾಡಿ ಮುಗಿಯಿತು ಎಂದಾದ ಮೇಲೆ ಡನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ಕಂಪೋಸರ್ ಸ್ಕ್ರೀನ್‌ಗೆ ಹೋಗಿ ಟ್ವೀಟ್ ಮಾಡಬೇಕು. 

ಸದ್ಯ ನೂತನ ಫೀಚರ್ ಐಒಎಸ್ ನಲ್ಲಿ ಮಾತ್ರ ಲಭ್ಯವಿದ್ದು, ಅದೂ ಸಹ ಕೆಲವೇ ಕೆಲವು ಬಳಕೆದಾರರಿಗೆ ಸಿಗುತ್ತಲಿದೆ ಎಂದು ಟ್ವಿಟರ್ ಸ್ಪಷ್ಟಪಡಿಸಿದೆ. ಮುಂದಿನ ದಿನಗಳಲ್ಲಿ ಎಲ್ಲ ಐಒಎಸ್ ಬಳಕೆದಾರರಿಗೂ ಈ ಸೌಲಭ್ಯ ಸಿಗಲಿದೆ ಎನ್ನಲಾಗಿದೆ. ಹೀಗಾಗಿ ಎಲ್ಲರೂ ಆಡಿಯೋವನ್ನು ಕೇಳಿ ಅದಕ್ಕೆ ಪ್ರತಿಕ್ರಿಯೆ ಕೊಡಬಹುದಾಗಿದೆ.

ಇದನ್ನು ಓದಿ: ಗೂಗಲ್ ಸರ್ಚ್‌‌‌ನಲ್ಲಿ ಕಾಣತ್ತೆ ನಿಮ್ಮ ವಾಟ್ಸ್ಆ್ಯಪ್ ನಂಬರ್!

ಇಲ್ಲಿ ನಿಮಗೆ ಹೇಳಬೇಕಾಗಿದೆ ಅಂದುಕೊಂಡಿದ್ದನ್ನು ನಿಮ್ಮದೇ ಧ್ವನಿಯ ಮೂಲಕ ತಲುಪಿಸಬಹುದಾಗಿದೆ. ನಿಮಗೆ ಗೊತ್ತಿರುವ ಹೊಸ ವಿಷಯಗಳನ್ನೂ ಸಹ ನೀವೇ ಮೊದಲು ತಿಳಿಸುವ ಸೌಲಭ್ಯ ಇದಾಗಿದೆ. ಹೀಗಾಗಿ ಬ್ರೇಕಿಂಗ್ ನ್ಯೂಸ್ ಗಳನ್ನೂ ನೀವು ಕೊಡುವ ಅವಕಾಶಗಳಿವೆ. ಇದರಿಂದ ಸುಲಭ ಹಾಗೂ ಸರಳವಾಗಿ ನೀವು ತಕ್ಷಣವೇ ಟ್ವೀಟ್ ಮಾಡಿಬಿಡಬಹುದಾಗಿದೆ. ಇದರಿಂದಾಗಿ ಈ ನೂತನ ಫೀಚರ್ ಎಷ್ಟರ ಮಟ್ಟಿಗೆ ಬಳಕೆದಾರರನ್ನು ಸೆಳೆಯುತ್ತದೆ ಎಂಬುದು ಸದ್ಯದ ಕುತೂಹಲವಾಗಿದೆ. ಅಂದಹಾಗೆ, ಆ್ಯಂಡ್ರಾಯ್ಡ್ ಒಎಸ್‌ನಲ್ಲಿ ಈ ಸೌಲಭ್ಯವನ್ನು ಯಾವಾಗ ಬಳಕೆಗೆ ಬಿಡಲಾಗುತ್ತದೆ ಎಂಬ ಬಗ್ಗೆ ಟ್ವಿಟರ್ ಇನ್ನೂ ಗುಟ್ಟುಬಿಟ್ಟುಕೊಟ್ಟಿಲ್ಲ.