ನಿಮ್ಮ ಮೊಬೈಲ್‌ನಲ್ಲಿ ಹೀಗಾಗುತ್ತಿದ್ದರೆ ಹ್ಯಾಕ್ ಆಗಿದೆ ಎಂದರ್ಥ..!

ಒಳ್ಳೇ ಆ್ಯಂಡ್ರಾಯ್ಡ್ ಫೋನ್ ಇರುತ್ತದೆ, ನೀವು ಉತ್ತಮವಾಗಿಯೇ ಬಳಸುತ್ತಿರುತ್ತೀರಿ. ಆದರೆ, ಇದ್ದಕ್ಕಿದ್ದ ಹಾಗೆ ಕೆಲವು ತಾಂತ್ರಿಕ ಸಮಸ್ಯೆಗಳು ಗೋಚರಿಸುತ್ತವೆ. ಇಷ್ಟಾದರೂ ಸಮಸ್ಯೆ ಏನು ಎಂಬ ಬಗ್ಗೆ ನೀವು ಚಿಂತನೆ ಮಾಡಿರುವುದಿಲ್ಲ. ಎಲ್ಲವೂ ಸರಿ ಇದ್ದ ಸಂದರ್ಭದಲ್ಲಿ ಏಕಾಏಕಿ ಮೊಬೈಲ್ ಅಪ್ಲಿಕೇಶನ್‌ಗಳ ಸಹಿತ ಕೆಲವು ಫೀಚರ್‌ಗಳು ಕೈಕೊಡಲು ಪ್ರಾರಂಭಿಸಿದರೆ ಏನೋ ಸಮಸ್ಯೆಯಾಗಿದೆ ಎಂಬುದರ ಸುಳಿವು ಎಂಬುದನ್ನು ತಿಳಿದುಕೊಳ್ಳಿ. ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿರಬಹುದು ಎಂಬುದನ್ನೂ ಅರಿಯಿರಿ. ಹಾಗಾದರೆ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಎಂಬ ಬಗ್ಗೆ ನೋಡೋಣ ಬನ್ನಿ...

These signs are showing your Android smartphone is hacked

ನಿಮಗೇ ಗೊತ್ತಿಲ್ಲದೇ ನಿಮ್ಮ ಮೊಬೈಲ್ ಹ್ಯಾಕ್ ಆಗಿರುತ್ತದೆ. ವಿಪರ್ಯಾಸವೆಂದರೆ ಹೀಗೆ ಹ್ಯಾಕ್ ಆಗಿರುವುದೂ ನಿಮಗೆ ಗೊತ್ತಿರುವುದಿಲ್ಲ. ಅಷ್ಟರಮಟ್ಟಿಗೆ ಹ್ಯಾಕರ್‌ಗಳು ಕೈಚಳಕವನ್ನು ತೋರಿರುತ್ತಾರೆ. ಇನ್ನು ನನ್ನ ಮೊಬೈಲ್‌ನಲ್ಲಿ ಅಂಥದ್ದೇನಿದೆ..? ಅದನ್ನು ಹ್ಯಾಕ್ ಮಾಡಿ ಹ್ಯಾಕರ್‌ಗಳು ಏನು ಮಾಡುತ್ತಾರೆಂದು ನೀವು ಭಾವಿಸಬಹುದು. ಆದರೆ, ನಿಮ್ಮ ಬ್ಯಾಂಕಿಂಗ್ ಆ್ಯಪ್ ಗಳಿರಬಹುದು, ಇಲ್ಲವೇ ನೀವು ಕೆಲವು ಮಹತ್ವದ ಮಾಹಿತಿಗಳನ್ನು ಇ-ಮೇಲ್‌ನಲ್ಲಿಯೋ, ಯಾವುದೋ ಫೋಲ್ಡರ್‌ನಲ್ಲಿಯೋ ಇಟ್ಟಿರಬಹುದು. ಇಂಥದ್ದು ಹ್ಯಾಕ್ ಆಗಿಬಿಟ್ಟರೆ..?

ಇಂಥ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಹೆಚ್ಚಾಗಿ ಹ್ಯಾಕ್‌ಗೆ ಒಳಗಾಗುತ್ತಿರುವುದು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಗಳಾಗಿವೆ. ಇವೇ ಹ್ಯಾಕರ್‌ಗಳು ಇಲ್ಲವೇ ಸೈಬರ್ ಅಪರಾಧಿಗಳ ಪಾಲಿನ ಟಾರ್ಗೆಟ್ ಗಳಾಗಿವೆ. ಇಲ್ಲಿ ಹ್ಯಾಕ್ ಮಾಡಲೆಂದೇ ಕೆಲವು ದೋಷಪೂರಿತ ಆ್ಯಪ್‌ಗಳನ್ನು ಸೃಷ್ಟಿಸಿರಲಾಗಿರುತ್ತದೆ. ಇಲ್ಲವೇ ಕೆಲವು ದೋಷಪೂರಿತ URL ಗಳೂ ಇದ್ದು, ಇವುಗಳ ಮೇಲೆ ಅಪ್ಪಿತಪ್ಪಿ ಒಂದು ಕ್ಲಿಕ್ ಮಾಡಿದರೆ ಸಾಕು, ಮೊಬೈಲ್‌ನಲ್ಲಿನ ಸಂಪೂರ್ಣ ಮಾಹಿತಿ ಹ್ಯಾಕರ್‌ಗಳ ಕಂಪ್ಯೂಟರ್ ಅನ್ನು ಸೇರಿರುತ್ತದೆ ಎಂದೇ ಅರ್ಥ. 

ಇದನ್ನು ಓದಿ: ವಾಟ್ಸಪ್‌ನಲ್ಲಿ ಶೀಘ್ರ ಬರುತ್ತೆ ಇನ್ನೂ 138 ಹೊಸ ಇಮೋಜಿಗಳು..!

ಇನ್ನು ಥರ್ಡ್ ಪಾರ್ಟಿ APK ಫೈಲ್‌ಗಳ ಸಹವಾಸವೂ ಅಷ್ಟೇ ಅಪಾಯಕಾರಿಯಾಗಿವೆ. ಇವುಗಳನ್ನು ನೀವು ಓಪನ್ ಮಾಡುತ್ತಿದ್ದಂತೆ ಸಂಬಂಧವಿಲ್ಲದ ಜಾಹೀರಾತುಗಳು ಒಂದಾದ ಮೇಲೊಂದರಂತೆ ತೆರೆದುಕೊಳ್ಳುತ್ತಲೇ ಹೋಗುತ್ತದೆ. ಜೊತೆಗೆ ನೀವು ಸಬ್‌ಸ್ಕ್ರೈಬ್ ಆಗದಿರುವಂತಹ ವಿಷಯಗಳೂ ಓಪನ್ ಆಗುತ್ತವೆ. ಹೀಗಾಗಿ ನಿಮ್ಮ ಮೊಬೈಲ್‌ನಲ್ಲಿ ಕೆಲವೊಮ್ಮೆ ನಿಮಗೇ ಗೊತ್ತಿಲ್ಲದಂತೆ ಅಪಾಯಕಾರಿ ಆ್ಯಪ್‌ಗಳು ಅಡಗಿ ಕುಳಿತುಕೊಂಡಿರುತ್ತವೆ. ಈ ಎಲ್ಲ ಅಂಶಗಳು ಸೇರಿದಂತೆ ಇನ್ನಿತರ ಸಮಸ್ಯೆಗಳು ನಿಮ್ಮ ಮೊಬೈಲ್‌ನಲ್ಲಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಕ್ ಆಗಿದೆಯೇ ಎಂದು ತಿಳಿಯಲು ಈ ಕೆಳಗಿನ ಅಂಶಗಳನ್ನು ಗಮನಿಸಿಕೊಳ್ಳಿ...

ದುತ್ತನೆ ಬರುತ್ತವೆ ಪಾಪ್‌ಅಪ್ ಆ್ಯಡ್‌ಗಳು
ಕೆಲವು ಸಂದರ್ಭದಲ್ಲಿ ನೀವು ಯಾವುದೋ ಅಪರಿಚಿತ ವೆಬ್‌ಸೈಟ್‌ಗೆ ಭೇಟಿ ಕೊಟ್ಟಾಗ ಇದ್ದಕ್ಕಿದ್ದಂತೆ ಅನೇಕ ಪಾಪ್‌ಅಪ್ ಜಾಹೀರಾತುಗಳು ಬಂತೆಂದರೆ ನಿಮ್ಮ ಸ್ಮಾರ್ಟ್‌ಫೋನ್‌ಗೆ ಮಾಲ್ವೇರ್ ವೈರಸ್ ಅಟಕಾಯಿಸಿಕೊಂಡಿರಬಹುದು. 

ನಿಮಗೇ ಗೊತ್ತಿಲ್ಲದೆ ಕೆಲ ಆ್ಯಪ್‌ಗಳು ಇನ್ಸ್ಟಾಲ್
ಕೆಲವೊಮ್ಮೆ ನೀವು ನಿಮ್ಮ ಸ್ಮಾರ್ಟ್‌ಫೋನ್ ಪರಿಶೀಲನೆ ಮಾಡುತ್ತಿದ್ದಾಗ ನೀವು ಡೌನ್ಲೋಡ್ ಮಾಡದೆ ಇದ್ದರೂ ಯಾವುದೋ ಹೊಸ ಆ್ಯಪ್ ಇಲ್ಲವೇ ಆ್ಯಪ್‌ಗಳು ಕಂಡುಬಂದರೆ ಫೋನಲ್ಲಿ ಮಾಲ್ವೇರ್ ಅಟ್ಯಾಕ್ ಆಗಿದೆ ಎಂದೇ ಅರ್ಥ. 

These signs are showing your Android smartphone is hacked

ನೀವು ಇನ್‌ಸ್ಟಾಲ್ ಮಾಡಿದ ಆ್ಯಪ್ ಐಕಾನ್ ನಾಪತ್ತೆ
ನೀವು ಆಗತಾನೆ ಪ್ಲೇಸ್ಟೋರ್ ನಿಂದ ಒಂದು ಆ್ಯಪ್ ಅನ್ನು ಇನ್‌ಸ್ಟಾಲ್ ಮಾಡುತ್ತೀರಿ. ಬಳಿಕ ಹೋಂ ಸ್ಕ್ರೀನ್‌ಗೆ ಬಂದು ನೋಡಿದರೆ ಅದರ ಐಕಾನ್‌ಗಳು ಕಾಣುತ್ತಿರುವುದಿಲ್ಲ. ಈ ಸಂದರ್ಭದಲ್ಲಿ ಆ ಆ್ಯಪ್ ದೋಷಪೂರಿತವಾಗಿದೆ ಎಂದು ನೀವು ಅರಿಯಬಹುದು. ಅಂತಹುಗಳ ಸಹವಾಸಕ್ಕೆ ಹೋಗದಿರುವುದೂ ಒಳಿತು. 

ಇದನ್ನು ಓದಿ: ಅಲಾರಾಂ ರೀತಿ ನಿಮ್ಮ G-Mail ಮೆಸೇಜ್‌ ಸ್ನೂಜ್ ಮಾಡಿ..!

ಇದ್ದಕ್ಕಿದ್ದಂತೆ ಬ್ಯಾಟರಿ ಸಾಮರ್ಥ್ಯ ಕಡಿಮೆ
ಎಲ್ಲವೂ ಸರಿಯಾಗಿಯೇ ಇರುತ್ತದೆ ಎಂದು ನೀವು ಅಂದುಕೊಳ್ಳುತ್ತಿರುವಾಗಲೇ ಇದ್ದಕ್ಕಿದ್ದಂತೆ ಬ್ಯಾಟರಿ ಸಾಮರ್ಥ್ಯ ತಗ್ಗುತ್ತದೆ. 100 ಪರ್ಸೆಂಟ್ ತೋರಿಸುವ ಬ್ಯಾಟರಿ 2 ಇಲ್ಲವೇ 3 ಗಂಟೆಯೊಳಗೆ 10 ಪರ್ಸೆಂಟ್ ಗೆ ಬಂದಿದೆ ಎಂದಾದರೆ ಸಾಕು, ಸಾರ್ಟ್‌ಫೋನ್‌ಗೆ ಮಾಲ್ವೇರ್ ವೈರಸ್ ಅಟ್ಯಾಕ್ ಆಗಿದೆ ಎಂದರ್ಥ. 

ರಾಂಡಮ್ ಇಲ್ಲವೇ ಮಿಸ್ಡ್ ಇಂಟರ್ ನ್ಯಾಷನಲ್ ಕಾಲ್ ಬಂದರೆ
ನಿಮಗೆ ಪದೇ ಪದೆ ಯಾವುದೋ ಅಪರಿಚಿತ ನಂಬರ್‌ನಿಂದ ಅಂತಾರಾಷ್ಟ್ರೀಯ ಕರೆಗಳು ಬಂದರೆ ನೀವು ಎಚ್ಚರಿಕೆ ವಹಿಸಿಕೊಳ್ಳುವುದು ಉತ್ತಮ. ಆಗ ಒಮ್ಮೆ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಒಮ್ಮೆ ಪರಿಶೀಲಿಸಿಕೊಳ್ಳುವುದು ಒಳಿತು. 

ಡೇಟಾ ಉಪಯೋಗ ಇದ್ದಕ್ಕಿದ್ದಂತೆ ಜಾಸ್ತಿಯಾದರೆ
ನೀವು ಅನ್ ಲಿಮಿಟೆಡ್ ಮೊಬೈಲ್ ಡೇಟಾವನ್ನು ಹೊಂದಿದ್ದರೂ ಕೆಲ ದಿನಗಳಿಂದ ಹೆಚ್ಚಿನ ಡೇಟಾ ಬಳಕೆಯಾಗಿ, ಡೇಟಾ ನಿಧಾನವಾಗುತ್ತಿದೆ ಎಂದನ್ನಿಸಿದರೆ ನಿಮ್ಮ ಫೋನ್‌ಗೆ ಯಾವುದೋ ವೈರಸ್ ದಾಳಿ ಮಾಡಿದೆ ಎಂದೇ ಅರ್ಥ. 

ಆ್ಯಪ್‌ಕ್ರ್ಯಾಶ್ ಆಗೋದು, ಅಪ್ಡೇಟ್ ಆಗ್ದೇ ಇರೋದು
ಆಗಾಗ ನೀವು ಬಳಸುತ್ತಿರುವ ಆ್ಯಪ್‌ಕ್ರ್ಯಾಶ್ ಆಗುವುದು ಇಲ್ಲವೇ ಒಂದು ನಿರ್ದಿಷ್ಠ ಆ್ಯಪ್ ಏನೇ ಪ್ರಯತ್ನಪಟ್ಟರೂ ಅಪ್ಡೇಟ್ ಆಗದೇ ಇರುವುದು ಸಹ ಮಾಲ್ವೇರ್ ಅಟ್ಯಾಕ್ ಆಗಿರುವ ಲಕ್ಷಣವನ್ನು ತೋರಿಸುತ್ತದೆ. 

ಇದನ್ನು ಓದಿ: ಭಾರತೀಯ ಓದುಗರ ಬಳಿ ವಾರದ ಕಾಫಿ ದುಡ್ಡು ಕೇಳುತ್ತಿದೆ ವಿಕಿಪೀಡಿಯಾ…!

ಮೊಬೈಲ್  ಸ್ಲೋ ಆಗುತ್ತಿದೆಯೇ?
ಬಹಳ ಫಾಸ್ಟ್ ಆಗಿ ಸ್ಕ್ರಾಲ್ ಆಗುತ್ತಿದ್ದ, ಎಲ್ಲ ಫೀಚರ್‌ಗಳು ಪಟಪಟನೆ ಓಪನ್ ಆಗುತ್ತಿದ್ದ ನಿಮ್ಮ ಮೊಬೈಲ್‌ನಲ್ಲಿ ಇದ್ದಕ್ಕಿದ್ದಂತೆ ನಿಧಾನದ ಗಾಳಿ ಬೀಸಿದ್ದರೆ, ಇಲ್ಲವೇ ಆ್ಯಪ್ ಲೋಡ್ ಆಗಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿದ್ದರೆ ಒಮ್ಮೆ ಮೊಬೈಲ್ ಅನ್ನು ಪರಿಶೀಲಿಸಿಕೊಳ್ಳಬೇಕು. 

Latest Videos
Follow Us:
Download App:
  • android
  • ios