ನವದೆಹಲಿ(ಏ18): ವಾಟ್ಸಾಪ್‌ ಇದೀಗ ಹೊಸ ಮಾದರಿಯಲ್ಲಿ ಬಂದಿದೆ. ಪಿಂಕ್‌ ಬಣ್ಣದಲ್ಲಿರುವ ಈ ಸೌಲಭ್ಯವನ್ನು ನೋಡಲು ಈ ಕೆಳಗಿನ ಲಿಂಕ್‌ ಒತ್ತಿ ಎಂಬ ವಾಟ್ಸಾಪ್‌ ಸಂದೇಶವೊಂದು ಇದೀಗ ದೇಶಾದ್ಯಂತ ವಾಟ್ಸಾಪ್‌ ಬಳಕೆದಾರರಿಗೆ ಭಾರೀ ಪ್ರಮಾಣದಲ್ಲಿ ರವಾನೆಯಾಗುತ್ತಿದೆ. ಆದರೆ ಈ ಬಗ್ಗೆ ಎಚ್ಚರ.

ಇದು ವಾಟ್ಸಾಪ್‌ ಕಂಪನಿಯ ಅಧಿಕೃತ ಲಿಂಕ್‌ ಅಲ್ಲ. ವಾಟ್ಸಾಪ್‌ ಬಳಕೆದಾರರ ಮಾಹಿತಿ ಕದಿಯಲು ಹ್ಯಾಕರ್‌ಗಳು ಹರಿಯಬಿಟ್ಟಿರುವ ವೈರಸ್‌. ಹೀಗಾಗಿ ಇಂಥ ಲಿಂಕ್‌ ಅನ್ನು ಒತ್ತಬೇಡಿ ಎಂದು ಸೈಬರ್‌ ತಜ್ಞರು ಎಚ್ಚರಿಸಿದ್ದಾರೆ.

ಬಹುತೇಕ ಬಳಕೆದಾರರು ಈ ಲಿಂಕ್‌ ಕೊಂಡಿಯನ್ನು ಒತ್ತುತ್ತಲೇ, ಅವರ ವಾಟ್ಸಾಪ್‌ನಲ್ಲಿರುವ ಎಲ್ಲಾ ನಂಬರ್‌ಗಳಿಗೂ ತಂತಾನೇ ಆ ಲಿಂಕ್‌ ರವಾನೆಯಾಗಿದೆ. ಹೀಗಾಗಿ ಕೆಲವೇ ಹೊತ್ತಿನಲ್ಲೇ ಈ ಲಿಂಕ್‌ ಕೋಟ್ಯಂತರ ಸಂಖ್ಯೆಯಲ್ಲಿ ಫಾರ್ವಾಡ್‌ ಆಗಿದೆ. ಕೆಲವರು ಇದು ನಕಲಿ ಎಂಬುದನ್ನು ಅರಿತು ಅದನ್ನು ಡಿಲೀಟ್‌ ಮಾಡಲು ಅದರ ಮೇಲೆ ಕ್ಲಿಕ್ಕಿಸಿದ್ದವರಿಂದಲೂ ಹಲವರಿಗೆ ಈ ಸಂದೇಶ ರವಾನೆಯಾಗಿದೆಯಂತೆ.