ನಿಮ್ಗೂ ಬಂದಿದ್ಯಾ ಯೋಗಾ ಕ್ಲಾಸ್ ಲಿಂಕ್, WhatsApp ಬಳಕೆದಾರರೇ ಹಣ ಎಗರಿಸುತ್ತಾರೆ ಹ್ಯಾಕರ್ಸ್!
ವ್ಯಾಟ್ಸ್ಆ್ಯಪ್ ಬಳಕೆದಾರರೇ ಎಚ್ಚರ. ಈ ಕುರಿತು ಪೊಲೀಸರು ಮಹತ್ವದ ಎಚ್ಚರಿಕೆಯನ್ನು ನೀಡಿದ್ದಾರೆ. ನಿಮ್ಮ ವ್ಯಾಟ್ಸ್ಆ್ಯಪ್ ಹ್ಯಾಕ್ ಮಾಡಿ, ಹಣ ದೋಚುವ ಜಾಲವೊಂದು ಪತ್ತೆಯಾಗಿದೆ. ಹೀಗಾಗಿ ವ್ಯಾಟ್ಸ್ಆ್ಯಪ್ ಮೂಲಕ ಲಿಂಕ್ ಓಪನ್ ಮಾಡುವುದು, ಒಟಿಪಿ ಹಂಚಿಕೊಳ್ಳುವುದು ಮಾಡಲೇ ಬೇಡಿ. ನೂತನ ಹ್ಯಾಕಿಂಗ್ ದಂಧೆ ಕುರಿತು ವಿವರ ಇಲ್ಲಿದೆ.
ನವದೆಹಲಿ(ಜು.25) ಭಾರತದಲ್ಲಿ ವ್ಯಾಟ್ಸ್ಆ್ಯಪ್ ಬಳಕೆದಾರರ ಸಂಖ್ಯೆ ಸರಿಸುಮಾರು 50 ಕೋಟಿ. ಬಹುತೇಕ ವ್ಯವಹಾರ, ಸಂವಹನ, ಮೀಟಿಂಗ್ ವ್ಯಾಟ್ಸ್ಆ್ಯಪ್ ಮೂಲಕವೇ ನಡೆಯುತ್ತಿದೆ. ದಿನದಿಂದ ದಿನಕ್ಕೆ ವ್ಯಾಟ್ಸ್ಆ್ಯಪ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರ ಜೊತೆಗೆ ಅಪಾಯವೂ ಹೆಚ್ಚಾಗಿದೆ. ಹ್ಯಾಕರ್ಸ್ ಇದೀಗ ಹೊಸ ತಂತ್ರ ಬಳಸಿ ಹ್ಯಾಕ್ ಮಾಡುತ್ತಿದ್ದಾರೆ. ಈ ಕುರಿತು ಹಲವು ಪ್ರಕರಣ ದಾಖಲಾಗುತ್ತಿದ್ದಂತೆ ಕೋಲ್ಕತಾ ಪೊಲೀಸರು ಅಲರ್ಟ್ ಸಂದೇಶ ರವಾನಿಸಿದ್ದಾರೆ. ಮೊದಲು ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಬಳಕೆದಾರರ ಮೆಸೇಂಜರ್ ಮೂಲಕ ಆಪ್ತರಿಗೆ, ಗೆಳೆಯರಿಗೆ ಯೋಗಾ ಕ್ಲಾಸ್ ಆರಂಭ ಮಾಡುತ್ತಿರುವುದಾಗಿ ಲಿಂಕ್ ಕಳುಹಿಸುತ್ತಾರೆ. ಈ ಲಿಂಕ್ ಓಪನ್ ಮಾಡಿದರೆ ಒಟಿಪಿ ಕೇಳುತ್ತದೆ. ಈ ಒಟಿಪೆಯನ್ನು ಹಂಚಿಕೊಂಡರೆ ಕತೆ ಮುಗಿಯಿತು. ನಿಮ್ಮ ವ್ಯಾಟ್ಸ್ಆ್ಯಪ್ ನಂಬರ್ ಕೂಡ ಹ್ಯಾಕ್ ಆಗಲಿದೆ. ಬಳಿಕ ಹ್ಯಾಕರ್ಸ್ ನಿಮ್ಮ ವ್ಯಾಟ್ಸ್ಆ್ಯಪ್ ನಂಬರ್ ಬಳಸಿ ಹಣ ದೋಚುತ್ತಿದ್ದಾರೆ.
ಕೋಲ್ಕತಾದಲ್ಲಿ ವಿದ್ಯಾರ್ಥಿಗಳು, ಉದ್ಯಮಿಗಳು ಈ ಕುರಿತು ಹಲವು ದೂರು ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಕೋಲ್ಕತಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಆಫರ್, ರಿಜಿಸ್ಟ್ರೇಶನ್, ಸೇರಿದಂತೆ ಅನಧಿಕೃತ ಲಿಂಕ್‌ಗಳನ್ನು ಓಪನ್ ಮಾಡುವುದು, ಒಟಿಪಿ ಹಂಚಿಕೊಳ್ಳುವುದು ಮಾಡಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.
AI ತಂತ್ರಜ್ಞಾನ ಬಳಸಿ ಡೀಪ್‌ಫೇಕ್ ಸ್ಕಾಮ್, ವ್ಯಾಟ್ಸ್ಆ್ಯಪ್ ಮೂಲಕ 40 ಸಾವಿರ ಕಳೆದುಕೊಂಡ ಯುವಕ!
ಹ್ಯಾಕರ್ಸ್‌ಗಳು ಮೊದಲು ಬಳಕೆದಾರರ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡುತ್ತಿದ್ದಾರೆ. ಬಳಿಕ ಮೇಸೇಂಜರ್ ಮೂಲಕ ಬಳಕೆದಾರನ ಆಪ್ತರಿಗೆ ಯೋಗಾ ಕ್ಲಾಸ್ ಆರಂಭಿಸುತ್ತಿದ್ದೇನೆ. ಸೇರಿಕೊಂಡು ಸಹಾಯ ಮಾಡಿ ಎಂಬ ಸಂದೇಶವನ್ನು ಕಳುಹಿಸುತ್ತಿದ್ದಾರೆ. ಯೋಗಾ ಕ್ಲಾಸ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ ಎಂದು ಸಂದೇಶ ಕಳುಹಿಸುತ್ತಿದ್ದಾರೆ. ಗೆಳೆಯನ ಅಥವಾ ಆಪ್ತರ ಫೇಸ್‌ಬುಕ್‌ನಿಂದಲೇ ಸಂದೇಶ ಬಂದಿರುವ ಕಾರಣ ಹಿಂದೂ ಮುಂದೂ ಯೋಚಿಸದೆ ಕನಿಷ್ಠ ಲಿಂಕ್ ಒಪನ್ ಮಾಡುವವರೇ ಹೆಚ್ಚು. ಲಿಂಕ್ ಒಪನ್ ಮಾಡಿದ ತಕ್ಷಣ ಒಟಿಪಿ ಬರಲಿದೆ ಈ ಒಟಿಪಿ ಹಂಚಿಕೊಂಡ ಬೆನ್ನಲ್ಲೇ ನಿಮ್ಮ ವ್ಯಾಟ್ಸ್ಆ್ಯಪ್ ಖಾತೆಯನ್ನು ಹ್ಯಾಕರ್ಸ್ ಬೇರೊಂದು ಫೋನ್ ಮೂಲಕ ನಿರ್ವಹಣೆ ಮಾಡುತ್ತಾರೆ.
ನಿಮ್ಮ ವ್ಯಾಟ್ಸ್ಆ್ಯಪ್ ಖಾತೆಯನ್ನುಟ್ಟುಕೊಂಡು ನಿಮ್ಮ ಖಾತೆಯಿಲ್ಲಿರುವ ಹಣ, ನಿಮ್ಮ ಆಪ್ತರ ಹಣವನ್ನೂ ದೋಚುತ್ತಿದ್ದಾರೆ. ನಿಮ್ಮ ಆಪ್ತರಿಗೆ ವ್ಯಾಟ್ಸ್ಆ್ಯಪ್ ಮೂಲಕವೇ ಯೋಗಾ ಕ್ಲಾಸ್ ಸಂದೇಶ ಕಳುಹಿಸಿ ಅವರ ಖಾತೆಯನ್ನು ಹ್ಯಾಕ್ ಮಾಡುತ್ತಿದ್ದಾರೆ. ಹೀಗಾಗಿ ಈ ದಂಧೆಯಿಂದ ಎಚ್ಚರವಾಗಿರಿ ಎಂದು ಪೊಲೀಸರು ಸೂಚನೆ ನೀಡಿದ್ದಾರೆ.
1 ತಿಂಗಳಲ್ಲಿ ಭಾರತದ 65 ಲಕ್ಷ ವ್ಯಾಟ್ಸ್ಆ್ಯಪ್ ಖಾತೆಗೆ ನಿರ್ಬಂಧ, ಐಟಿ ನಿಯಮ ಉಲ್ಲಂಘಿಸಿದರೆ ಅಪಾಯ!
ವ್ಯಾಟ್ಸ್ಆ್ಯಪ್ ಅಥವಾ ಸಾಮಾಜಿಕ ಮಾಧ್ಯಮಗಳ ಮೂಲಕ ಲಿಂಕ್ ಓಪನ್ ಮಾಡುವಾಗ ಎಚ್ಚರ ವಹಿಸಿ. ಅದರಲ್ಲೂ ಪ್ರಮುಖವಾಗಿ ಒಟಿಪಿ ಹಂಚಿಕೊಳ್ಳುವುದು ಅತ್ಯಂತ ಅಪಾಯಕಾರಿ. ಮೋಸ ಹೋಗುವ ಮುನ್ನವೇ ಎಚ್ಚರವಹಿಸಿ.