ಮುಂಬೈ[ಜ.02]: ಅಗ್ಗದ ದರದ ಡಾಟಾ ಮತ್ತು ಉಚಿತ ಮೊಬೈಲ್‌ ಕರೆಗಳ ಮೂಲಕ ಮೊಬೈಲ್‌ ವಲಯದಲ್ಲಿ ಹೊಸ ಕ್ರಾಂತಿ ಮಾಡಿದ್ದ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ ಕಂಪನಿ ಇದೀಗ ಆನ್‌ಲೈನ್‌ ವಹಿವಾಟು ಕ್ಷೇತ್ರಕ್ಕೆ ಕಾಲಿಟ್ಟಿದೆ. ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಮಾದರಿಯಲ್ಲಿ ಆನ್‌ಲೈನ್‌ ಸೇವೆ ಒದಗಿಸುವ ಜಿಯೋ ಮಾರ್ಟ್‌ ಸೇವೆಯನ್ನು ರಿಲಯನ್ಸ್‌ ಮುಂಬೈನಲ್ಲಿ ಆರಂಭಿಸಿದೆ.

ಜಿಯೋ ಮಾರ್ಟ್‌ ಪ್ರಾಯೋಗಿಕವಾಗಿ ಮುಂಬೈನ ನವಿಮುಂಬೈ, ಥಾಣೆ ಮತ್ತು ಕಲ್ಯಾಣ್‌ನಲ್ಲಿ ಸೇವೆ ಆರಂಭಿಸಿದೆ. ಜೊತೆಗೆ ಶೀಘ್ರ ದೇಶವ್ಯಾಪಿ ಸೇವೆ ವಿಸ್ತರಣೆಯ ಗುರಿ ಹಾಕಿಕೊಂಡಿದೆ.

3 ಕೋಟಿ ಚಿಲ್ಲರೆ ರಿಟೇಲರ್‌ಗಳ ಮೂಲಕ ದೇಶದ 20 ಕೋಟಿ ಕುಟುಂಬಗಳನ್ನು ತಲುಪುವ ಗುರಿಯನ್ನು ಜಿಯೋ ಮಾರ್ಟ್‌ ಹಾಕಿಕೊಂಡಿದೆ. ಜಿಯೋ ಮಾರ್ಟ್‌ನಲ್ಲಿ 50000ಕ್ಕೂ ಹೆಚ್ಚು ಬಗೆಯ ಉತ್ಪನ್ನಗಳು ಲಭ್ಯವಿರಲಿವೆ. ಯಾವುದೇ ಕನಿಷ್ಠ ಪ್ರಮಾಣದ ಖರೀದಿಯ ಅಗತ್ಯವಿಲ್ಲದೆಯೇ, ಮನೆಗೆ ಉಚಿತ ವಿತರಣೆ ಸೌಲಭ್ಯ, ಯಾವುದೇ ಪ್ರಶ್ನೆ ಕೇಳದೆಯೇ ಉತ್ಪನ್ನಗಳು ಹಿಂದಕ್ಕೆ ಪಡೆಯುವ ಸೌಲಭ್ಯ, ತ್ವರಿತಗತಿ ವಿತರಣೆ ಸೌಲಭ್ಯವನ್ನು ಒಳಗೊಂಡಿದೆ.

ರಿಲಯನ್ಸ್‌ನ ಈ ಹೊಸ ಸೇವೆ, ಈಗಾಗಲೇ ಈ ಕ್ಷೇತ್ರದಲ್ಲಿ ಬೇರೂರಿರುವ ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮೊದಲಾದ ಕಂಪನಿಗಳಿಗೆ ಸಡ್ಡು ಹೊಡೆಯಲಿದೆ ಎನ್ನಲಾಗಿದೆ.

ಜನವರಿ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ