ನವದೆಹಲಿ(ಡಿ.10): ಕೊರೋನಾ ಲಾಕ್‌ಡೌನ್‌ ಬಳಿಕ ಮನೆಯಿಂದಲೇ ಕೆಲಸ ಮಾಡುವವರು ಹಾಗೂ ಹೈಸ್ಪೀಡ್‌ ಇಂಟರ್ನೆಟ್‌ ಬಳಸುವವರ ಪ್ರಮಾಣ ಅಗಾಧವಾಗಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ವೈ-ಫೈ ಕ್ರಾಂತಿಗೆ ಮುಂದಾಗಿದೆ. ದೇಶಾದ್ಯಂತ ಬ್ರಾಡ್‌ಬ್ಯಾಂಡ್‌ ಇಂಟರ್ನೆಟ್‌ ಲಭ್ಯತೆ ಹೆಚ್ಚಿಸಲು ಸಾರ್ವಜನಿಕ ವೈ-ಫೈ ಕೇಂದ್ರಗಳನ್ನು ತೆರೆಯುವ ಯೋಜನೆಯೊಂದಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಅನುಮೋದನೆ ನೀಡಿದೆ. ಸಾರ್ವಜನಿಕ ವೈ-ಫೈ ನೆಟ್‌ವರ್ಕ್ ಇಂಟರ್‌ಫೇಸ್‌ ಎಂಬ ಈ ಯೋಜನೆಯನ್ನು ‘ಪಿಎಂ-ವಾನಿ’ ಎಂದು ಚುಟುಕಾಗಿ ಕರೆಯಲಾಗುತ್ತದೆ. ದೇಶದಲ್ಲಿ ವೈ-ಫೈ ಕ್ರಾಂತಿಗೆ ಇದು ಮುನ್ನುಡಿಯಾಗಿರಲಿದೆ.

‘ಪಿಎಂ- ವಾನಿ’ಯಡಿ ಯಾವುದೇ ಲೈಸೆನ್ಸ್‌ ಪಡೆಯದೆ, ಸರ್ಕಾರಕ್ಕೆ ಶುಲ್ಕ ಕಟ್ಟದೆ ಅಥವಾ ನೋಂದಣಿ ಕೂಡ ಮಾಡಿಸದೆ ದೇಶದ ಯಾವುದೇ ಭಾಗದಲ್ಲಿ ಸಣ್ಣ ಅಂಗಡಿಯೊಂದನ್ನು ತೆರೆದು ಇಂಟರ್ನೆಟ್‌ ಸೇವೆ ಒದಗಿಸಬಹುದಾಗಿದೆ. ಗ್ರಾಹಕರು ಈ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಂಡು ಇಂಟರ್ನೆಟ್‌ ಪಡೆಯಬಹುದಾಗಿದೆ. ಇದರಿಂದಾಗಿ 4ಜಿ ಇಂಟರ್ನೆಟ್‌ ಸಮಸ್ಯೆ ಇರುವ ಕಡೆಗಳಲ್ಲೂ ವೇಗದ ಇಂಟರ್ನೆಟ್‌ ಲಭ್ಯವಾಗಲಿದೆ.

ಏನಿದು ಯೋಜನೆ? ಕಾರ್ಯನಿರ್ವಹಣೆ ಹೇಗೆ?

ಈ ಯೋಜನೆಯಡಿ ಮುಖ್ಯವಾಗಿ ಮೂರು ವಿಭಾಗಗಳಿವೆ. ಮೊದಲನೆಯದಾಗಿ ಪಬ್ಲಿಕ್‌ ಡೇಟಾ ಆಫೀಸ್‌ (ಪಿಡಿಒ). ಇದೊಂದು ರೀತಿ ಇಂಟರ್ನೆಟ್‌ ಅಂಗಡಿ ಇದ್ದಂತೆ. ಇತರೆ ಸಾಮಾನ್ಯ ಸೇವೆಗಳನ್ನು ಬೇಕಾದರೂ ಒದಗಿಸುತ್ತಲೆ ಗ್ರಾಹಕರಿಗೆ ಇಂಟರ್ನೆಟ್‌ ಸೇವೆಯನ್ನು ಪಿಡಿಒಗಳು ನೀಡಬಹುದು. ಇನ್ನು ಪಬ್ಲಿಕ್‌ ಡೇಟಾ ಆಫೀಸ್‌ ಅಗ್ರಿಗೇಟರ್‌ (ಪಿಡಿಒಎ) ಎಂಬ ಮತ್ತೊಂದು ವಿಭಾಗವಿದೆ. ಇದು ಪಿಡಿಒಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುತ್ತದೆ.

ಮೂರನೆ ವಿಭಾಗ ಆ್ಯಪ್‌ ಸೇವಾದಾತರು. ಗ್ರಾಹಕರು ಪಿಡಿಒಗಳಲ್ಲಿ ಸೇವೆ ಪಡೆಯಲು ನೋಂದಣಿ ಮಾಡಿಸಿಕೊಳ್ಳಲು, ಸಮೀಪದ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲು ಬೇಕಾದ ಆ್ಯಪ್‌ ಅನ್ನು ಈ ಸೇವಾದಾತರು ಅಭಿವೃದ್ಧಿಪಡಿಸಿಕೊಡಬೇಕಾಗುತ್ತದೆ. ಪಿಡಿಒ, ಪಿಡಿಒಎ ಹಾಗೂ ಆ್ಯಪ್‌ ಸೇವಾದಾತರ ಕುರಿತು ಕೇಂದ್ರೀಯ ನೋಂದಣಿಯನ್ನು ಹೊಂದಿರಲಾಗಿರುತ್ತದೆ. ಆರಂಭದಲ್ಲಿ ಡಿ-ಡಾಟ್‌ ಸಂಸ್ಥೆ ಇದರ ನಿರ್ವಹಣೆ ಮಾಡಲಿದೆ.