ನವದೆಹಲಿ(ಮಾ.10): ಬಳಕೆದಾರರ ಮಾಹಿತಿ ಸಂಗ್ರಹ ಮತ್ತು ಅದನ್ನು ಇತರರ ಜೊತೆ ಹಂಚಿಕೊಳ್ಳುವ ಕುರಿತ ತನ್ನ ಹೊಸ ನೀತಿಯ ಕುರಿತು ವಾಟ್ಸಾಪ್‌ ಸಂಸ್ಥೆ ಮತ್ತೆ ಗ್ರಾಹಕರಿಗೆ ಸಂದೇಶ ರವಾನಿಸಲು ಆರಂಭಿಸಿದೆ. ಒಂದು ವೇಳೆ ಗ್ರಾಹಕರು ಈ ಹೊಸ ಖಾಸಗಿ ನೀತಿ ಒಪ್ಪದೇ ಹೋದಲ್ಲಿ ಮೇ 15ರಿಂದ ಮೊಬೈಲ್‌ನಲ್ಲಿ ವಾಟ್ಸಾಪ್‌ ಸೇವೆಗಳು ಸ್ಥಗಿತಗೊಳ್ಳಲಿದೆ ಎಂದು ಅದು ಮಾಹಿತಿ ನೀಡಿದೆ.

ಬಳಕೆದಾರರ ಮಾಹಿತಿಯನ್ನು, ತನ್ನ ಇತರೆ ಜಾಲತಾಣಗಳಿಗೆ ಮತ್ತು ಉದ್ಯಮಗಳ ಜೊತೆ ಹಂಚಿಕೊಳ್ಳುವ ಹೊಸ ನೀತಿಯೊಂದರ ಜಾರಿಗೆ ವಾಟ್ಸಾಪ್‌ನ ಮಾತೃಸಂಸ್ಥೆ ಫೇಸ್‌ಬುಕ್‌ ಮುಂದಾಗಿದೆ. ಫೆ.8ರಿಂದಲೇ ಈ ನೀತಿ ಜಾರಿಯಾಗಬೇಕಿತ್ತಾದರೂ, ಬಳಕೆದಾರರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಅದು ನೀತಿ ಜಾರಿಯನ್ನು ಮೇ 15ಕ್ಕೆ ಮುಂದೂಡಿತ್ತು. ಇದೀಗ ಆ ಗಡುವು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಾಟ್ಸಾಪ್‌ ಸಂಸ್ಥೆಯು ನೇರವಾಗಿ ಬಳಕೆದಾರರ ಮೊಬೈಲ್‌ಗಳಿಗೆ ಮತ್ತು ಟ್ವೀಟರ್‌ ಮೂಲಕ ಮಾಹಿತಿ ರವಾನಿಸುವ ಮೂಲಕ, ಗಡುವು ಸಮೀಪಿಸುತ್ತಿರುವ ಕುರಿತು ಜ್ಞಾಪಕ ಮಾಡುವ ಕೆಲಸ ಮಾಡಿದೆ.

ಇದೇ ವೇಳೆ ಬಳಕೆದಾರರು ಇತರರ ಜೊತೆ ನಡೆಸುವ ಯಾವುದೇ ಸಂವಾದ, ಹಂಚಿಕೊಳ್ಳುವ ವಿಷಯ, ಫೋಟೋ, ವಿಡಿಯೋ ಯಾವುದನ್ನೂ ತಾನು ನೋಡುವುದಿಲ್ಲ. ಇದರಿಂದ ಬಳಕೆದಾರರ ಖಾಸಗಿತನಕ್ಕೆ ಯಾವುದೇ ಭಂಗ ಬರುವುದಿಲ್ಲ. ಇದು ಕೇವಲ ವಾಟ್ಸಾಪ್‌ ಬಳಕೆದಾರರು ಮತ್ತು ಉದ್ಯಮಗಳ ನಡುವಿನ ಸಂಪರ್ಕದ ಹೊಸ ಕಿಂಡಿಯಾಗಲಿದೆ ಅಷ್ಟೇ ಎಂದು ತನ್ನ ಹೊಸ ನೀತಿಯ ಬಗ್ಗೆ ವಾಟ್ಸಾಪ್‌ ಸ್ಪಷ್ಟನೆಯನ್ನೂ ನೀಡಿದೆ.

ಏನಾಗುತ್ತೆ?:

ಮೇ 15ರೊಳಗೆ ಹೊಸ ನೀತಿ ಒಪ್ಪದೇ ಇದ್ದರೆ, ಮೇ 15ರ ನಂತರ ನೀತಿ ಒಪ್ಪುವವರೆಗೂ ಅಂಥ ವಾಟ್ಸಾಪ್‌ ಬಳಕೆದಾರರಿಗೆ ಸಂದೇಶ ಕಳಿಸಲು ಆಗದು. ಕೆಲ ದಿನಗಳ ಮಟ್ಟಿಗೆ ಸಂದೇಶ ಹಾಗೂ ಕರೆ ಸ್ವೀಕರಿಸಬಹುದು.