Viral news : ನೀವು ವಾಸಿಸ್ತಿರೋ ಮನೆಯಲ್ಲಿ ಏನಾದ್ರೂ ವಿಚಿತ್ರ ವಸ್ತುಗಳು ಸಿಕ್ಕಿದ್ರೆ ಹೇಗಾಗುತ್ತೆ? ಅದೂ ಅನೇಕಾನೇಕ ವರ್ಷಗಳ ಹಳೆಯ ಹಾಗೂ ಭಯಾನಕ ವಸ್ತು ಕಣ್ಣಿಗೆ ಬಿದ್ರೆ ರಾತ್ರಿ ನಿದ್ದೆ ಬರೋದಿಲ್ಲ. ಈ ವ್ಯಕ್ತಿ ಸ್ಥಿತಿಯೂ ಅದೇ ಆಗಿದೆ.
ಕಳೆದ ನಾಲ್ಕು ವರ್ಷಗಳಿಂದ ವಾಸಿಸುತ್ತಿರುವ ಮನೆಯ ಮಹಡಿ ಮೇಲೆ ವ್ಯಕ್ತಿಯೊಬ್ಬನಿಗೆ ಹಲ್ಲುಗಳ ರಾಶಿಯೇ ಸಿಕ್ಕಿದೆ. ಇದನ್ನು ನೋಡಿದ ಆತ ಭಯಗೊಂಡಿದ್ದಾನೆ. ತನ್ನ ಮನೆಗೇ ತಾನು ಹೋಗಲು ಭಯವಾಗುತ್ತೆ ಎಂದಿರುವ ಆತನ ಹಲ್ಲನ್ನು ತೆಗೆದು ಎಸೆಯುವ ಸಾಹಸಕ್ಕೆ ಕೈ ಹಾಕಿಲ್ಲ. ಮನೆಯ ಮಹಡಿಯ ಕೆಳಭಾಗದಲ್ಲಿರುವ ಸ್ಟೋರೇಜ್ ಬಾಕ್ಸ್ನಿಂದ ವಸ್ತುಗಳನ್ನು ತೆಗೆಯಲು ಹೋದಾಗ ಹಲ್ಲುಗಳ ರಾಶಿ ಕಾಣಿಸಿದೆ. ಅದನ್ನು ನೋಡಿ ಬೆಚ್ಚಿಬಿದ್ದಿದ್ದಾನೆ.ಸ
100 ವರ್ಷ ಹಳೆಯ ಹಲ್ಲು !
ಡೈಲಿ ಸ್ಟಾರ್ ವರದಿಯ ಪ್ರಕಾರ, ಈ ಘಟನೆ ಹಳೆಯ ಮನೆಯೊಂದರಲ್ಲಿ ನಡೆದಿದೆ. ಮನೆಯ ಮಾಲೀಕ ತನ್ನ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾನೆ. ಸುಮಾರು ನಾಲ್ಕು ವರ್ಷಗಳಿಂದ ಈ ಮನೆಯಲ್ಲಿ ವಾಸಿಸುತ್ತಿರುವುದಾಗಿ ಆತ ತಿಳಿಸಿದ್ದಾನೆ. ಆತನ ಪ್ರಕಾರ, ಈ ಮನೆ 1900ರಲ್ಲಿ ನಿರ್ಮಾಣವಾಗಿದೆ. ಆದರೆ ಸುತ್ತಮುತ್ತಲಿನ ಹಲವು ಮನೆಗಳು ಬಹಳ ಹಳೆಯದಾಗಿರುವುದರಿಂದ ಈ ಮನೆ ಅದಕ್ಕಿಂತಲೂ ಹಿಂದಿನದ್ದಾಗಿರಬಹುದು ಎಂಬ ಅನುಮಾನವೂ ಆತನಿಗಿದೆ.
ಒಂದು ದಿನ ಮನೆಯ ಮಹಡಿ ಕೆಳಭಾಗದಲ್ಲಿರುವ ಸ್ಟೋರೇಜ್ ಬಾಕ್ಸ್ನಲ್ಲಿದ್ದ ವಸ್ತುಗಳನ್ನು ಜೋಡಿಸುತ್ತಿದ್ದಾಗ ಮೂಲೆಯೊಂದರಲ್ಲಿ ಹಲ್ಲುಗಳ ರಾಶಿ ಕಾಣಿಸಿದೆ. ಅವು ಮನುಷ್ಯರ ಹಲ್ಲುಗಳಿರಬಹುದು ಎಂದು ಭಾವಿಸಿದ ಆತ ತೀವ್ರ ಆತಂಕಕ್ಕೊಳಗಾಗಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಇದೇ ಮನೆಯಲ್ಲಿ ವಾಸಿಸುತ್ತಿದ್ದರೂ ಈ ಹಲ್ಲುಗಳು ಆತನ ಕಣ್ಣಿಗೆ ಬಿದ್ದಿರಲಿಲ್ಲ. ಅವು ಅಲ್ಲಿಗೆ ಹೇಗೆ ಬಂದವು ಅವುಗಳನ್ನು ಏನು ಮಾಡಬೇಕು ಎಂಬುದು ಆತನಿಗೆ ತಿಳಿಯಲಿಲ್ಲ.
ಮನೆಯಲ್ಲಿ ದೆವ್ವ ಇರುವ ಅನುಮಾನ
ಹಲ್ಲುಗಳು ಸಿಕ್ಕ ಬಳಿಕ ಆತನ ಆತಂಕ ಮತ್ತಷ್ಟು ಹೆಚ್ಚಾಗಿದೆ. ಕಳೆದ ಎರಡು ವರ್ಷಗಳಿಂದ ಅವನ ಜೀವನದಲ್ಲಿ ಅನೇಕ ದುಃಖದ ಘಟನೆಗಳು ನಡೆದಿವೆ. ಈಗ ಮಹಡಿಯಲ್ಲಿ ಸಿಕ್ಕಿರುವ ಹಲ್ಲುಗಳಿಗೂ ಆ ಘಟನೆಗಳಿಗೂ ಏನಾದರೂ ಸಂಬಂಧವಿದೆಯೇ ಎಂಬ ಅನುಮಾನ ಆತನನ್ನು ಕಾಡತೊಡಗಿದೆ. ಅಷ್ಟೇ ಅಲ್ಲ, ಈ ಮನೆಗೆ ಬಂದಾಗಿನಿಂದಲೂ ಮನೆಯಲ್ಲಿ ಯಾವುದೋ ದೆವ್ವ ಇದೆ ಎಂಬ ಭಾವನೆ ಹಲವು ಬಾರಿ ತನಗೆ ಬಂದಿತ್ತಂತೆ. ಹಲ್ಲುಗಳು ಸಿಕ್ಕ ಬಳಿಕ ಆ ಅನುಮಾನ ಮತ್ತಷ್ಟು ಹೆಚ್ಚಾಗಿದೆ.
ಭಯದಲ್ಲಿರುವ ವ್ಯಕ್ತಿ ಹಲ್ಲುಗಳನ್ನು ಅಲ್ಲಿಂದ ತೆಗೆದಿಲ್ಲ. ಅವುಗಳನ್ನು ಸ್ಥಳಾಂತರಿಸಿದರೆ ಯಾವುದಾದರೂ ಆತ್ಮಕ್ಕೆ ಕೋಪ ಬರಬಹುದು ಎಂಬ ಅನುಮಾನ ಆತನಿಗಿದೆ.
ಮಹಡಿಯಲ್ಲಿ ಸಿಕ್ಕ ಹಲ್ಲುಗಳ ಹಿಂದಿನ ರಹಸ್ಯ ತಿಳಿದುಕೊಳ್ಳಲು ಆತ ಮನೆಯ ಹಿಂದಿನ ಮಾಲೀಕರನ್ನು ಸಂಪರ್ಕಿಸಿದ್ದಾನೆ. ಆಗ ಅಚ್ಚರಿ ವಿಷ್ಯ ಹೊರ ಬಿದ್ದಿದೆ. ಹಿಂದಿನ ಮಾಲೀಕ 2005ರಲ್ಲಿ ಈ ಮನೆಯನ್ನು ಖರೀದಿಸಿದ್ದ. ಅದಕ್ಕೂ ಮೊದಲು ಈ ಮನೆಯನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ಅಚ್ಚರಿಯ ಸಂಗತಿಯೆಂದರೆ, ಹಿಂದಿನ ಮಾಲೀಕರಿಗೂ ಈ ಹಲ್ಲುಗಳ ಬಗ್ಗೆ ತಿಳಿದಿತ್ತು. ಅವನಿಗೂ ಅವು ಮನುಷ್ಯರ ಹಲ್ಲುಗಳಿರಬಹುದು ಎಂಬ ಅನುಮಾನವಿತ್ತು.
ಇದರಿಂದಾಗಿ ಆ ಹಲ್ಲುಗಳು ಹಲವು ವರ್ಷಗಳಿಂದ ಮನೆಯಲ್ಲೇ ಇರಬಹುದು ಎಂದು ಹೊಸ ಮಾಲೀಕ ಊಹಿಸಿದ್ದಾನೆ. ಆದರೆ ಅವುಗಳನ್ನು ಅಲ್ಲಿಟ್ಟವರು ಯಾರು, ಯಾವ ಕಾರಣಕ್ಕೆ ಅಲ್ಲಿ ಇಡಲಾಗಿತ್ತು ಎಂಬ ಪ್ರಶ್ನೆಗಳಿಗೆ ಮಾತ್ರ ಉತ್ತರ ಸಿಕ್ಕಿಲ್ಲ.
ಆತ್ಮಗಳು ಮತ್ತು ಕೆಟ್ಟ ಶಕ್ತಿಗಳಿಂದ ರಕ್ಷಣೆ ನೀಡುವ ವಸ್ತುಗಳ ಬಗ್ಗೆ ತನಗೆ ನಂಬಿಕೆಯಿದೆ ಎಂದಿರುವ ಆತ, ಇದಕ್ಕಾಗಿಯೇ ಬಹಳ ಹಿಂದೆಯೇ ಯಾರೋ ಮನೆಯ ರಕ್ಷಣೆಗಾಗಿ ಈ ಹಲ್ಲುಗಳನ್ನು ಅಲ್ಲಿ ಇಟ್ಟಿರಬಹುದು ಎಂದು ಭಾವಿಸಿದ್ದಾನೆ. ಹಲ್ಲುಗಳು ಸಾಕಷ್ಟು ಹಳೆಯದಾಗಿ ಕಾಣುತ್ತಿವೆಯಂತೆ. ಎಂದು ಆತ ಹೇಳಿದ್ದಾನೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅವು ಮಣ್ಣಿನ ಅಥವಾ ಬೇರೆ ಯಾವುದೋ ವಸ್ತುವಿನ ರಾಶಿಯಾಗಿರಬಹುದೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. ಆದರೂ ಅವು ನಿಜವಾಗಿಯೂ ಹಲ್ಲುಗಳೇ ಎಂಬ ತನ್ನ ಅಭಿಪ್ರಾಯಕ್ಕೆ ಆತ ಬದ್ಧನಾಗಿದ್ದಾನೆ. ಮನೆಯ ಹಳೆಯ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ತನ್ನ ನಗರದ ಐತಿಹಾಸಿಕ ಸಂಸ್ಥೆಯನ್ನು ವ್ಯಕ್ತಿ ಸಂಪರ್ಕಿಸಿದ್ದಾನೆ. ಇನ್ನೂ ಇದು ಮನುಷ್ಯರದ್ದು ಎಂಬುದು ಸಾಭೀತಾಗಿಲ್ಲ.






