ಗೋವಾದ ಪ್ರಸಿದ್ಧ ವಾಗೇಟರ್ ಕಡಲತೀರದಲ್ಲಿ, ಹೋಟೆಲ್ ಸಿಬ್ಬಂದಿಯೊಬ್ಬರು ಪ್ರವಾಸಿಗರೊಬ್ಬರ ಐಷಾರಾಮಿ ಫಾರ್ಚೂನರ್ ಕಾರನ್ನು ಸಮುದ್ರದ ಉಪ್ಪು ನೀರಿನಿಂದ ತೊಳೆಯಲು ಹೋಗಿ ಅನಾಹುತ ಸೃಷ್ಟಿಸಿದ್ದಾರೆ. ಅಲೆಗಳ ಹೊಡೆತಕ್ಕೆ ಸಿಲುಕಿ ಮರಳಿನಲ್ಲಿ ಹೂತುಹೋದ ಕಾರನ್ನು ನಂತರ ಪೊಲೀಸರು ಜೆಸಿಬಿ ಸಹಾಯದಿಂದ ಹೊರತೆಗೆದರು.

ಗೋವಾದ ಪ್ರಸಿದ್ಧ ವಾಗೇಟರ್ ಕಡಲತೀರದಲ್ಲಿ ಸಂಭವಿಸಿದ ಅಸಾಮಾನ್ಯ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಹಮದಾಬಾದ್ ಮೂಲದ ಪ್ರವಾಸಿಗರೊಬ್ಬರಿಗೆ ಸೇರಿದ ಐಷಾರಾಮಿ ಎಸ್‌ಯುವಿ ಕಾರು, ಹೋಟೆಲ್ ಸಿಬ್ಬಂದಿಯ ಅಜಾಗರೂಕತೆಯಿಂದ ಸಮುದ್ರದ ನೀರಿನಲ್ಲಿ ಮುಳುಗಿದ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಘಟನೆ ವಾಗೇಟರ್ ಬೀಚ್‌ನಲ್ಲಿ ಮುಂಜಾನೆ ಈ ಘಟನೆ ಸಂಭವಿಸಿದ್ದು, ಗುಜರಾತ್ ನೋಂದಣಿಯ (GJ01WY0090) ಕಪ್ಪು ಬಣ್ಣದ ಟೊಯೋಟಾ ಫಾರ್ಚೂನರ್ ಕಾರು ಈ ಘಟನೆಯಲ್ಲಿ ಹಾಳಾದ ಐಷಾರಾಮಿ ಕಾರಾಗಿದೆ. ಅಹಮದಾಬಾದ್ ನಿವಾಸಿಯಾದ ಕಾರಿನ ಮಾಲೀಕರು ಅಂಜುನಾ–ವಾಗೇಟರ್ ಪ್ರದೇಶದ ಹೋಟೆಲ್‌ನಲ್ಲಿ ತಂಗಿದ್ದು, ರಾತ್ರಿ ಪಾರ್ಟಿ ಮುಗಿಸಿ ಹಿಂತಿರುಗಿದ ಬಳಿಕ ತಮ್ಮ ಕಾರಿನ ಕೀಲಿಗಳನ್ನು ಹೋಟೆಲ್ ಕೇರ್‌ಟೇಕರ್‌ಗೆ ಒಪ್ಪಿಸಿದ್ದರು. ಕಾರನ್ನು ವೃತ್ತಿಪರವಾಗಿ ತೊಳೆಯಲು ಹಣ ಹಾಗೂ ಟಿಪ್ ಸಹ ನೀಡಿದ್ದರು.

ಉಪ್ಪು ನೀರಲ್ಲಿ ಕಾರು ತೊಳೆದ ಹೊಟೇಲ್ ಸಿಬ್ಬಂದಿ

ಆದರೆ, ಕಾರನ್ನು ನಿಯಮಿತ ಕಾರ್ ವಾಶ್ ಕೇಂದ್ರಕ್ಕೆ ಕೊಂಡೊಯ್ಯುವ ಬದಲು, ಹೋಟೆಲ್ ಸಿಬ್ಬಂದಿ ಬೇಜವಾಬ್ದಾರಿಯಿಂದ ಅಸಾಂಪ್ರದಾಯಿಕ ವಿಧಾನವನ್ನು ಕಾರು ತೊಳೆಯಲು ಅನುಸರಿಸಿದ್ದಾರೆ. ಬೆಳಗಿನ ಜಾವ ಸುಮಾರು 5:30ರಿಂದ 6 ಗಂಟೆಯ ಸಮಯದಲ್ಲಿ ಕೇವಲ ಒಂದು ಬಕೆಟ್ ಮತ್ತು ಮಗ್ ಹಿಡಿದು ಕಾರನ್ನು ನೇರವಾಗಿ ವಾಗೇಟರ್ ಬೀಚ್‌ನ ಮರಳಿನ ಮೇಲೆ ಕೊಂಡೊಯ್ದು, ಸಮುದ್ರದ ಉಪ್ಪು ನೀರಿನಿಂದ ತೊಳೆಯಲು ಯತ್ನಿಸಿದರು.

ಈ ವೇಳೆ ಸಮುದ್ರದ ಅಲೆಗಳು ಬಹಳ ಎತ್ತರದಲ್ಲಿ ಬರುತ್ತಿರುವುದನ್ನು ಗಮನಿಸದೇ, ಸಿಬ್ಬಂದಿ ಕಾರನ್ನು ಇನ್ನಷ್ಟು ನೀರಿನತ್ತ ಸಾಗಿಸಿದ್ದಾರೆ. ಕೆಲವು ಕ್ಷಣಗಳಲ್ಲಿ ಕಾರು ಒದ್ದೆಯಾದ ಮರಳಿನಲ್ಲಿ ಹೂತು ಹೋಗಿದೆ. ನೀರಿನ ಉಬ್ಬರ ಹೆಚ್ಚಾದಂತೆ ನೀರಿನ ಮಟ್ಟ ಏರಿಕೆ ಕಂಡು, ಕೊನೆಗೆ ಕಾರಿನ ಬಾಗಿಲುಗಳ ಎತ್ತರದವರೆಗೂ ನೀರು ತಲುಪಿತು. ಈ ದೃಶ್ಯವನ್ನು ನೋಡಿದ ಸ್ಥಳೀಯರು ಮತ್ತು ಪ್ರವಾಸಿಗರು ಬೆಚ್ಚಿಬಿದ್ದು ತಕ್ಷಣ ಕ್ರಮ ಕೈಗೊಂಡರು.

ಜೆಸಿಬಿ ಮೂಲಕ ಕಾರು ಹೊರತೆಗೆದ ಪೊಲೀಸರು

ಘಟನೆ ಬಗ್ಗೆ ಮಾಹಿತಿ ತಿಳಿದುಕೊಂಡ ಅಂಜುನಾ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಜೆಸಿಬಿ ಯಂತ್ರದ ಸಹಾಯದಿಂದ ಸಾಕಷ್ಟು ಪ್ರಯತ್ನಗಳ ಬಳಿಕ ಕಾರನ್ನು ಸಮುದ್ರದಿಂದ ಹೊರತೆಗೆದರು. ಅದೃಷ್ಟವಶಾತ್, ದೊಡ್ಡ ಅನಾಹುತ ತಪ್ಪಿದರೂ, ಕಾರು ಭಾಗಶಃ ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಹೋಟೆಲ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದು, ಅಜಾಗರೂಕತೆ ಮತ್ತು ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಕಾರನ್ನು ಪೊಲೀಸರು ವಶಕ್ಕೆ ಪಡೆದು ಅಂಜುನಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದರು. ಈ ಘಟನೆಯ ಹಿನ್ನೆಲೆಯಲ್ಲಿ, ಗೋವಾ ಪೊಲೀಸರು ಹಾಗೂ ಸ್ಥಳೀಯ ಆಡಳಿತವು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದು, ಕಡಲತೀರ ಪ್ರದೇಶಗಳಲ್ಲಿ ವಾಹನಗಳನ್ನು ಓಡಿಸುವುದು ಅಪಾಯಕಾರಿಯಷ್ಟೇ ಅಲ್ಲ, ಪರಿಸರಕ್ಕೂ ಹಾನಿಕಾರಕವಾಗಿದೆ ಎಂದು ತಿಳಿಸಿದ್ದಾರೆ. ಪ್ರವಾಸಿಗರು ಹಾಗೂ ಹೋಟೆಲ್ ಸಿಬ್ಬಂದಿ ಇಂತಹ ನಿರ್ಲಕ್ಷ್ಯ ನಡೆ ತೋರಬಾರದು ಖಡಕ್ ಆಗಿ ಹೇಳಿದ್ದಾರೆ.

ಒಟ್ಟಾರೆ, ಈ ಘಟನೆ ಅಜಾಗರೂಕತೆಯ ಪರಿಣಾಮ ಎಷ್ಟು ಗಂಭೀರವಾಗಿರಬಹುದು ಎಂಬುದನ್ನು ತೋರಿಸುವುದರ ಜೊತೆಗೆ, ಸುರಕ್ಷತೆ ಮತ್ತು ನಿಯಮ ಪಾಲನೆಯ ಅಗತ್ಯತೆಯನ್ನು ಮತ್ತೊಮ್ಮೆ ನೆನಪಿಸಿದೆ. ಮಾತ್ರವಲ್ಲ ನಿಮ್ಮ ವಾಹನಗಳಿಗೆ ನೀವೇ ಜವಾಬ್ದಾರರು ಪರಿಚಯವಿಲ್ಲದವರ, ಗೊತ್ತಿಲ್ಲದವರ ಬಳಿ ಕಾರನ್ನು ಕೊಟ್ಟು ಬಳಿಕ ಪಶ್ಚಾತಾಪವಾಗಬಾರದು ಎಂಬುದಕ್ಕೆ ಈ ಘಟನೆ ಸಾಕ್ಷಿ, ದುಡ್ಡು ಮತ್ತು ಟಿಪ್ಸ್ ಆಸೆಗೆ ಜನ ಏನು ಬೇಕಾದರೂ ಮಾಡಬಹುದು.

Scroll to load tweet…