ಅಪಾರ್ಟ್‌ಮೆಂಟ್ ಒಂದರಲ್ಲಿ ಪ್ರೇಮಿಗಳ ಖಾಸಗಿ ಕ್ಷಣವನ್ನು ಮಹಿಳೆಯೊಬ್ಬರು ರಹಸ್ಯವಾಗಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಈ ಘಟನೆಯು ಸಾರ್ವಜನಿಕ ಸ್ಥಳದಲ್ಲಿ ಪ್ರೀತಿ ಪ್ರದರ್ಶನ ಮತ್ತು ವ್ಯಕ್ತಿಯ ಖಾಸಗಿತನದ ಹಕ್ಕಿನ ನಡುವಿನ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ನವದೆಹಲಿ: ದೆಹಲಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಪ್ರೇಮಿಗಳ ಜೋಡಿಯೊಂದು ಪರಸ್ಪರ ಮುದ್ದಾಡುತ್ತಿದ್ದ ಖಾಸಗಿ ಕ್ಷಣವನ್ನು ಮಹಿಳೆಯೊಬ್ಬರು ರಹಸ್ಯವಾಗಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ (Social Media) ಹರಿಬಿಟ್ಟಿದ್ದಾರೆ. ಈ ವಿಡಿಯೋ ವೈರಲ್ (Viral Video) ಆಗುತ್ತಿದ್ದಂತೆ, ಇಂಟರ್ನೆಟ್‌ನಲ್ಲಿ ಬೃಹತ್ ಮಟ್ಟದ ಸಾರ್ವಜನಿಕ ಚರ್ಚೆ ಶುರುವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಪ್ರೀತಿ ಪ್ರಕಟಿಸುವುದು (Public Display of Affection - PDA) ತಪ್ಪೋ ಅಥವಾ ಅವರ ಅನುಮತಿ ಇಲ್ಲದೆ ರಹಸ್ಯವಾಗಿ ವಿಡಿಯೋ ಮಾಡಿ ನೆಟ್‌ನಲ್ಲಿ ಹಾಕುವುದು (Invasion of Privacy) ತಪ್ಪೋ ಎಂಬ ಬಗ್ಗೆ ನೆಟ್ಟಿಗರು ವಿಭಜನೆಯಾಗಿದ್ದಾರೆ.
ಏನಿದು ದೆಹಲಿಯ ವೈರಲ್ ಘಟನೆ?
ಸಂಜು ಗೋಯಲ್ ಎನ್ನುವ ಎಕ್ಸ್ (X/Twitter) ಬಳಕೆದಾರರು 73 ಸೆಕೆಂಡುಗಳ ವಿಡಿಯೋ ಕ್ಲಿಪ್ ಅನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೆಳಿಗ್ಗೆ ತಮ್ಮ ಮಗಳನ್ನು ಶಾಲಾ ಬಸ್‌ಗೆ ಬಿಡಲು ಹೋದಾಗ ಹೌಸಿಂಗ್ ಸೊಸೈಟಿಯ (Housing Society) ಪಾರ್ಕಿಂಗ್ ಪ್ರದೇಶದಲ್ಲಿ ಜೋಡಿಯೊಂದು ಪರಸ್ಪರ ಅಪ್ಪಿಕೊಂಡು ಕಿಸ್ ಮಾಡುತ್ತಿರುವುದು ಕಂಡುಬಂದಿದೆ.'ನಮ್ಮ ಯುವಸಮುದಾಯ ಎತ್ತ ಸಾಗುತ್ತಿದೆ? ಪ್ರತಿಯೊಂದು ಗಲ್ಲಿಯಲ್ಲೂ ಇಂತಹ ದೃಶ್ಯಗಳು ಕಾಣಸಿಗುತ್ತಿವೆ. ವಿಡಿಯೋ ಹಂಚಿಕೊಳ್ಳಬೇಕೋ ಬೇಡವೋ ಎಂದು ಯೋಚಿಸಿ ಕೊನೆಗೆ ಪೋಸ್ಟ್ ಮಾಡಿದ್ದೇನೆ' ಎಂದು ಮಹಿಳೆ ಬರೆದುಕೊಂಡಿದ್ದರು.
ಮಹಿಳೆಯ ಪರ ನಿಂತವರ ವಾದ:
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಮಹಿಳೆಯ ಆತಂಕವನ್ನು ಬೆಂಬಲಿಸಿದ್ದಾರೆ. 'ಇಂದಿನ ಕಾಲದ ಮಕ್ಕಳಿಗೆ ಸಂಸ್ಕಾರ ಮತ್ತು ಶಿಸ್ತು ಕಲಿಸುವುದು ಅಗತ್ಯ. ವಸತಿ ಪ್ರದೇಶಗಳಲ್ಲಿ ಕುಟುಂಬಗಳು ಹಾಗೂ ಚಿಕ್ಕ ಮಕ್ಕಳು ಇರುವುದರಿಂದ ಇಂತಹ ಸಾರ್ವಜನಿಕ ನಡವಳಿಕೆಗಳಿಗೆ ಒಂದು ಮಿತಿ ಇರಬೇಕು (Maintain Decorum)' ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಪ್ರೈವೆಸಿ ಮತ್ತು ಕನ್ಸೆಂಟ್ ಪ್ರಶ್ನೆ ಎತ್ತಿದ ನೆಟ್ಟಿಗರು:
ಆದರೆ, ಇನ್ನೊಂದೆಡೆ ಬಹುತೇಕ ನೆಟ್ಟಿಗರು ವಿಡಿಯೋ ಮಾಡಿದ ಮಹಿಳೆಯ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. 'ಯಾರದ್ದೋ ಖಾಸಗಿ ಕ್ಷಣಗಳನ್ನು (Private Moments) ಅವರ ಅನುಮತಿ ಇಲ್ಲದೆ (Without Consent) ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದು ಅಸಭ್ಯ ಮತ್ತು ಕಾನೂನುಬಾಹಿರ' ಎಂದು ಅನೇಕರು ತರಾಟೆಗೆ ತೆಗೆದುಕೊಂಡಿದ್ದಾರೆ.
'ನಿಮಗೆ ಆ ಜೋಡಿಯ ನಡವಳಿಕೆಯಿಂದ ಕಿರಿಕಿರಿಯಾಗಿದ್ದರೆ ನೇರವಾಗಿ ಅವರ ಬಳಿ ಮಾತನಾಡಬಹುದಿತ್ತು ಅಥವಾ ಸೊಸೈಟಿ ಆಡಳಿತ ಮಂಡಳಿಗೆ ದೂರು ನೀಡಬಹುದಿತ್ತು.'
'ಅನುಮತಿ ಇಲ್ಲದೆ ವಿಡಿಯೋ ಮಾಡಿ ಆನ್‌ಲೈನ್‌ನಲ್ಲಿ ಹಾಕುವುದು ವ್ಯಕ್ತಿಯ ಖಾಸಗಿತನದ ಹಕ್ಕಿನ (Right to Privacy) ಧಕ್ಕೆಯಾಗುತ್ತದೆ' ಎಂದು ಅನೇಕ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಪ್ರೇಮಿಗಳ ಪ್ರೀತಿ ಪ್ರಕಟಣೆ (PDA) ಭಾರತೀಯ ಸಮಾಜದಲ್ಲಿ ಇಂದಿಗೂ ಸಂವೇದನಾಶೀಲ ವಿಚಾರವಾಗಿದೆ. ಆದರೆ, ಅದನ್ನು ತಡೆಯುವ ನೆಪದಲ್ಲಿ ರಹಸ್ಯ ವಿಡಿಯೋ ಮಾಡಿ ವೈರಲ್ ಮಾಡುವುದು ಕೂಡ ನೈತಿಕ ಹಾಗೂ ಕಾನೂನಾತ್ಮಕವಾಗಿ ಅಪರಾಧ ಎನ್ನುವ ಅಭಿಪ್ರಾಯ ನೆಟ್ಟಿಗರಿಂದ ವ್ಯಕ್ತವಾಗುತ್ತಿದೆ.


