ಕೋಪನ್‌ಹೇಗನ್‌ನಲ್ಲಿ ವಾಸಿಸುವ ದೆಹಲಿ ಮೂಲದ ಯುವತಿ, ಡೆನ್ಮಾರ್ಕ್‌ನಲ್ಲಿರುವ ನಾಲ್ಕು ಸೌಲಭ್ಯಗಳು ಭಾರತದಲ್ಲೂ ಇರಬೇಕೆಂದು ಆಶಿಸಿ ವಿಡಿಯೋ ಹಂಚಿಕೊಂಡಿದ್ದಾರೆ. ಅವರ ಆಸೆಗಳುಳ್ಳ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೋಪನ್‌ಹೇಗನ್‌ನಲ್ಲಿ ವಾಸಿಸುವ ದೆಹಲಿ ಮೂಲದ ಯುವತಿಯೊಬ್ಬರು, ಭಾರತದಲ್ಲಿ ಇರಬೇಕೆಂದು ತಾನು ಬಯಸುವ ದೈನಂದಿನ ಸೌಲಭ್ಯಗಳ ಬಗ್ಗೆ ಒಂದು ಚಿಕ್ಕ ವಿಡಿಯೋ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ಪಾಲಕ್ ವಾಹಿ ಎಂಬ ಯುವತಿ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಡೆನ್ಮಾರ್ಕ್‌ನ ನಾಲ್ಕು ವಿಷಯಗಳನ್ನು ಅವರು ಪಟ್ಟಿ ಮಾಡಿದ್ದಾರೆ. ಈ ವಿಷಯಗಳು ಭಾರತದಲ್ಲಿದ್ದರೆ, ಇಲ್ಲಿನ ಜೀವನ ಇನ್ನಷ್ಟು ಆನಂದದಾಯಕವಾಗಿರುತ್ತಿತ್ತು ಎಂದು ಪಾಲಕ್ ವಾಹಿ ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.
ನಾಲ್ಕು ಆಸೆಗಳು:
ಕೋಪನ್‌ಹೇಗನ್‌ನಲ್ಲಿ ಉಚಿತ ತರಕಾರಿ ವಿತರಣೆಯ ಪರಿಕಲ್ಪನೆಯನ್ನು ತೋರಿಸುತ್ತಾ ವಾಹಿ ತಮ್ಮ ವಿಡಿಯೋವನ್ನು ಪ್ರಾರಂಭಿಸುತ್ತಾರೆ. ಎರಡನೆಯದಾಗಿ, ಅವರು ಮೆಟ್ರೋದಲ್ಲಿನ 'ಸೈಲೆಂಟ್ ಜೋನ್'ಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಇವು ಪ್ರಯಾಣಿಕರು ಮೌನವಾಗಿರಬೇಕಾದ ವಿಶೇಷ ಕಂಪಾರ್ಟ್‌ಮೆಂಟ್‌ಗಳಾಗಿವೆ. ಭಾರತದ ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳಲ್ಲಿ 'ಸ್ವಚ್ಛವಾದ ಜಗ್‌ಗಳಲ್ಲಿ' ನೀರು ನೀಡುವುದು ಯುವತಿಯ ಮೂರನೇ ಆಸೆಯಾಗಿದೆ. ಕೊನೆಯದಾಗಿ, ದೈನಂದಿನ ಪ್ರಯಾಣಕ್ಕಾಗಿ ಸೈಕಲ್‌ಗಳನ್ನು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡುವುದು.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:
ನಿಮ್ಮ 2 ಆಸೆ ಈಡೇರಲು ಸಾಧ್ಯವೇ ಇಲ್ಲವೆಂದ ನೆಟ್ಟಿಗರು:
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗಿದ್ದು, ವಿಡಿಯೋಗೆ ಹಲವಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳು ಬಂದಿವೆ. ಕೆಲವು ಬಳಕೆದಾರರು ಅವರ ಅಭಿಪ್ರಾಯಗಳನ್ನು ಒಪ್ಪಿಕೊಂಡರೆ, ಇತರರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಮೊದಲ ಎರಡು ಆಸೆಗಳು ಕೇವಲ ಕನಸಿನಲ್ಲಿ ಮಾತ್ರ ಸಾಧ್ಯ, ಮುಂದಿನ 20 ರಿಂದ 30 ವರ್ಷಗಳವರೆಗೆ ಅವು ಸಾಧ್ಯವಿಲ್ಲ ಎಂದು ಒಬ್ಬ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಉಚಿತ ತರಕಾರಿಗಳ ವಿತರಣೆ ಮತ್ತು ಮೆಟ್ರೋ ಸೈಲೆಂಟ್ ಜೋನ್‌ಗಳು ಸದ್ಯದಲ್ಲೇ ಬರುವ ಸಾಧ್ಯತೆಯನ್ನು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ತಳ್ಳಿಹಾಕಿದ್ದಾರೆ. ಭಾರತದಲ್ಲಿ ನಾಗರಿಕ ಪ್ರಜ್ಞೆ ಇರುವವರು ಬಹಳ ಕಡಿಮೆ, ಹಾಗಾಗಿ ಇವೆಲ್ಲವನ್ನೂ ಜಾರಿಗೆ ತಂದರೂ ಸರಿಯಾಗಿ ಅನುಷ್ಠಾನಗೊಳ್ಳುವುದಿಲ್ಲ ಎಂದು ಹೇಳಿದವರ ಸಂಖ್ಯೆಯೂ ಕಡಿಮೆಯಿಲ್ಲ.
