ಜಪಾನ್ ವಿದ್ಯಾರ್ಥಿಗಳ ಜೊತೆ ಸಿಎಂ ಯೋಗಿ ಆದಿತ್ಯನಾಥ್ ಸೆಲ್ಫಿ ಭಾರಿ ಕುತೂಹಲ ಕೆರಳಿಸಿದೆ. ವಿದ್ಯಾರ್ಥಿಗಳು ಜೆನ್‌ಝಿ ಸ್ಟೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರೆ ಯೋಗಿ, ವಿದ್ಯಾರ್ಥಿಗಳನ್ನು ಹತ್ತಿರಕ್ಕೆ ಕರೆದು ಸೆಲ್ಫಿ ನೀಡಿದ್ದಾರೆ. ಇಷ್ಟೇ ಅಲ್ಲ ಒಹಾಯೊ ಗೊಜೈಮಾಸು ಎಂದು ಅಚ್ಚರಿ ಮೂಡಿಸಿದ್ದಾರೆ.
ಲಖನೌ (ಆ.21) ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ಧಾರ, ಆಡಳಿತ ಖಡಕ್. ಮಾತುಗಳು, ನಿರ್ದೇಶನಗಳು ಅಷ್ಟೇ ಖಾರ. ಭ್ರಷ್ಟರು, ಗ್ಯಾಂಗ್‌ಸ್ಟರ್,ರೌಡಿಗಳ ವಿರುದ್ಧ ಯೋಗಿ ಆದಿತ್ಯನಾಥ್ ನಿರ್ಧಾರಗಳು ದೇಶದೆಲ್ಲೆಡೆ ಚರ್ಚೆಯಾಗಿದೆ. ವಿಶೇಷ ಅಂದರೆ ಯೋಗಿ ಆದಿತ್ಯನಾಥ್ ವಿದ್ಯಾರ್ಥಿಗಳ ಜೊತೆ ವಿದ್ಯಾರ್ಥಿಗಳಾದ ಘಟನೆ ನಡೆದಿದೆ. ಮುಖ್ಯಮಂತ್ರಿ ನಿವಾಸದಲ್ಲಿ ನಡೆದ ಭಾರತ ಜಪಾನ್ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ವಿದ್ಯಾರ್ಥಿಗಳ ಜೊತೆ ವಿದ್ಯಾರ್ಥಿಯಾಗಿ ಸೆಲ್ಫಿ ನೀಡಿದ್ದಾರೆ.
ಉತ್ತರ ಪ್ರದೇಶ ಹಾಗೂ ಜಪಾನ್ ಹೂಡಿಕೆ ಶೃಂಗಸಭೆಯ ಭಾಗವಾಗಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ತಪಾನ್ ಯಮಾನಾಶಿ ಪ್ರಾಂತ್ಯದ ಗರ್ವನರ್ ಕೊಟಾರೋ ನಗಾಕಿ ಹಾಗೂ ವಿದ್ಯಾರ್ಥಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ಬಳಿಕ ವಿದ್ಯಾರ್ಥಿಗಳು ಯೋಗಿ ಆದಿತ್ಯನಾಥ್ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಂದಾಗಿದ್ದಾರೆ. ದೂರದಲ್ಲೇ ನಿಂತು ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸುತ್ತಿದ್ದ ವಿದ್ಯಾರ್ಥಿಗಳನ್ನು ಹತ್ತಿರಕ್ಕೆ ಕರೆದು ಜೆನ್‌ಝಿ ರೀತಿ ಸೆಲ್ಫಿ ನೀಡಿದ ಘಟನೆ ನಡೆದಿದೆ.
ಯೋಗಿ ಹೆಗಲ ಮೇಲೆ ಕೈಹಾಕಿ ಸೆಲ್ಫಿ ಕ್ಲಿಕ್ಕಿಸಿದ ವಿದ್ಯಾರ್ಥಿಗಳು
ಜಪಾನ್ ವಿದ್ಯಾರ್ಥಿ ಯೋಗಿ ಆದಿತ್ಯನಾಥ್ ಪಕ್ಕ ಸೆಲ್ಫಿ ಕ್ಲಿಕ್ಕಿಸಲು ಆಗಮಿಸಿದ್ದಾರೆ. ಪಕ್ಕ ನಿಲ್ಲದೆ ಕೊಂಚ ದೂರ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಿದ್ದ ವೇಳೆ ಸಿಎಂ ಯೋಗಿ ಆದಿತ್ಯನಾಥ್ ವಿದ್ಯಾರ್ಥಿಯ ಪಕ್ಕಕ್ಕೆ ಎಳೆದು ಸೆಲ್ಫಿ ನೀಡಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ಯೋಗಿ ಆದಿತ್ಯನಾಥ್ ಹೆಗಲ ಮೇಲೆ ಕೈಹಾಕಿ ಜೆನ್‌ಝಿಗಳ ಸಿಂಬಲ್ ಫೋಸ್ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿದ್ದಾನೆ. ಎಲ್ಲಾ ವಿದ್ಯಾರ್ಥಿಗಳಿಗೆ ಯೋಗಿ ಆದಿತ್ಯನಾಥ್ ಸೆಲ್ಫಿ ನೀಡಿದ್ದಾರೆ.
ಒಹಾಯೊ ಗೊಜೈಮಾಸು ಎಂದು ಅಚ್ಚರಿ ಮೂಡಿಸಿದ ಯೋಗಿ
ಕಾರ್ಯಕ್ರಮ ಆರಂಭಗೊಂಡಾಗ ಯೋಗಿ ಆದಿತ್ಯನಾಥ್ ಅಚ್ಚರಿ ನೀಡಿದ್ದರು. ಜಪಾನ್ ವಿದ್ಯಾರ್ಥಿಗಳು, ಜಪಾನ್ ಗವರ್ನರ್ ಸೇರಿದಂತೆ ಅಧಿಕಾರಿಗಳ ವರ್ಗಕ್ಕೆ ಆರಂಭದಲ್ಲೇ ಒಹಾಯೊ ಗೊಜೈಮಾಸು ಎಂದಿದ್ದಾರೆ. ಜಪಾನ್ ಭಾಷೆಯಲ್ಲೇ ಗುಡ್ ಮಾರ್ನಿಂಗ್ ಹೇಳುವ ಮೂಲಕ ಯೋಗಿ ಆದಿತ್ಯನಾಥ್ ಅಚ್ಚರಿ ಮೂಡಿಸಿದ್ದಾರೆ.
ಇಂದಿನ ವಿದ್ಯಾರ್ಥಿಗಳು ಮುಂದಿನ ರಾಯಭಾರಿಗಳು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಇದು ಕೇವಲ ಭೇಟಿಯಲ್ಲ, ಎರಡು ದೇಶಗಳ ಸಂಸ್ಕೃತಿಗಳ ವಿನಿಮಯ. ಭಾರತ ಹಾಗೂ ಜಪಾನ್ ರಾಜತಾಂತ್ರಿಕ ಸಂಬಂಧಕ್ಕೆ 75 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಈ ಭೇಟಿ ಮತ್ತಷ್ಟು ವಿಶೇಷವಾಗಿ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.


