ವೀಲ್‌ಚೇರ್‌ನಲ್ಲಿ ಕುಳಿತು ಭಿಕ್ಷೆ ಬೇಡುವ ವ್ಯಕ್ತಿಯೊಬ್ಬ ತನ್ನ ಗಾಡಿ ತಳ್ಳುವವನಿಗೆ ತಿಂಗಳಿಗೆ ₹9000 ಸಂಬಳ ನೀಡುತ್ತಿದ್ದಾನೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯ ಸ್ಥಳ ಹಾಗೂ ಸತ್ಯಾಸತ್ಯತೆಯ ಬಗ್ಗೆ ಯಾವುದೇ ನಿಖರ ಮಾಹಿತಿ ಇಲ್ಲದಿದ್ದರೂ, ನೆಟ್ಟಿಗರಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ವಿಚಿತ್ರ ವಿಡಿಯೋ ಒಂದು ಭಾರೀ ಸದ್ದು ಮಾಡುತ್ತಿದೆ. ವೀಲ್‌ಚೇರ್ ಅಥವಾ ತಳ್ಳುಗಾಡಿಯಲ್ಲಿ ಕುಳಿತು ಭಿಕ್ಷೆ ಬೇಡುವ ವ್ಯಕ್ತಿಯೊಬ್ಬ, ತನ್ನ ಗಾಡಿಯನ್ನು ತಳ್ಳಲು ಮತ್ತೊಬ್ಬ ವ್ಯಕ್ತಿಗೆ ತಿಂಗಳಿಗೆ ಬರೋಬ್ಬರಿ ₹9,000 ಸಂಬಳ ನೀಡುತ್ತಿದ್ದಾನೆ ಎಂಬ ಅಡಿಬರಹದೊಂದಿಗೆ ಈ ಕ್ಲಿಪ್ ವೈರಲ್ ಆಗುತ್ತಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ. ಮತ್ತೊಂದೆಡೆ ಇದು ನಿಜವೇ ಅಥವಾ ಸುಳ್ಳೇ ಎಂಬ ಚರ್ಚೆಯೂ ಶುರುವಾಗಿದೆ. ಈ ವೈರಲ್ ವಿಡಿಯೋ ಎಲ್ಲಿ ನಡೆದಿದ್ದು? ಇದರ ಹಿಂದಿನ ಸತ್ಯಾಸತ್ಯತೆ ಏನು? ಜನರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಎಲ್ಲಿ ಆಗಿರೋದು?

ಸದ್ಯ ಈ ವಿಡಿಯೋ ಸೋಶಿಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಆದರೆ ಸ್ಥಳದ ಬಗ್ಗೆ ನಿಖರ ಮಾಹಿತಿಯಿಲ್ಲ. ವಿಡಿಯೋ ಭಾರತದ ಯಾವ ರಾಜ್ಯ ಅಥವಾ ನಗರದಲ್ಲಿ ಚಿತ್ರೀಕರಿಸಲ್ಪಟ್ಟಿದೆ ಅನ್ನೋದ್ರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ವಿಡಿಯೋದಲ್ಲಿ ಕಾಣುವ ಸ್ಥಳ ಅಥವಾ ವ್ಯಕ್ತಿಗಳ ಗುರುತಿನ ಬಗ್ಗೆ ಸ್ವತಂತ್ರ ದೃಢೀಕರಣ (Independent Verification) ನಡೆದಿಲ್ಲ.

₹9,000 ಸಂಬಳದ ದಾವೆ ದೃಢಪಟ್ಟಿಲ್ಲ

ಭಿಕ್ಷೆ ಬೇಡುವ ವ್ಯಕ್ತಿ ತನಗೆ ಸಹಾಯ ಮಾಡುವವನಿಗೆ ತಿಂಗಳಿಗೆ ₹9,000 ನಿಗದಿತ ಸಂಬಳ ನೀಡುತ್ತಿದ್ದಾನೆ ಎಂಬುದಕ್ಕೆ ಯಾವುದೇ ಪುರಾವೆಯಿಲ್ಲ. ಇದು ಕೇವಲ ಸೋಶಿಯಲ್ ಮೀಡಿಯಾ ವೀಕ್ಷಣೆಗಾಗಿ (Views) ಸೃಷ್ಟಿಸಿದ ಸ್ಕ್ರಿಪ್ಟೆಡ್ ವಿಡಿಯೋ ಆಗಿರಬಹುದು ಎಂದು ಹೇಳಲಾಗುತ್ತಿದೆ. ಅಸಹಾಯಕ ಪರಿಸ್ಥಿತಿಯಲ್ಲಿ ಇಬ್ಬರು ಮಾಡಿಕೊಂಡಿರುವ ಅನೌಪಚಾರಿಕ ವ್ಯವಸ್ಥೆಗೆ ತಪ್ಪಾಗಿ ಸಂಬಳದ ಬಣ್ಣ ಕಟ್ಟಿರುವ ಸಾಧ್ಯತೆ ಇದೆ.

ಯಾಕೆ ವೈರಲ್ ಆಗುತ್ತಿದೆ?

ಭಿಕ್ಷಾಟನೆ ಎಂದರೆ ತೀವ್ರ ಬಡತನ ಮತ್ತು ಅಸಹಾಯಕತೆ ಎಂದು ಭಾವಿಸಲಾಗುತ್ತದೆ. ಭಿಕ್ಷೆ ಬೇಡುವ ವ್ಯಕ್ತಿಯೇ ಮತ್ತೊಬ್ಬರಿಗೆ ತಿಂಗಳಿಗೆ ₹9,000 ಸಂಬಳ ಕೊಟ್ಟು ಕೆಲಸಕ್ಕೆ ಇಟ್ಟುಕೊಂಡಿದ್ದಾನೆ ಎಂಬ ವಿಷಯ ಜನರಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಇತ್ತೀಚಿನ ದಿನಗಳಲ್ಲಿ ಬೀದಿ ಭಿಕ್ಷಾಟನೆ ಮತ್ತು ನಕಲಿ ಅಂಗವಿಕಲತೆಯ ಪ್ರಕರಣಗಳು ಹೆಚ್ಚಾಗಿ ಚರ್ಚೆಯಾಗುತ್ತಿವೆ. ಇಂತಹ ಹಳೆಯ ಅಥವಾ ಸಂಬಂಧವಿಲ್ಲದ ಘಟನೆಗಳೊಂದಿಗೆ ಈ ವಿಡಿಯೋವನ್ನು ಜೋಡಿಸಿ ಹಂಚಿಕೊಳ್ಳುತ್ತಿರುವುದರಿಂದ ಇದು ವೇಗವಾಗಿ ವೈರಲ್ ಆಗುತ್ತಿದೆ.

ನೆಟ್ಟಿಗರ ಪ್ರತಿಕ್ರಿಯೆ

ಈ ವೈರಲ್ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಹಲವು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದು, ಇಂದಿನ ಕಾಲದಲ್ಲಿ ಪದವಿ ಪಡೆದ ಫ್ರೆಶರ್‌ಗಳಿಗೆ ಕಂಪನಿಗಳಲ್ಲಿ ಸಿಗುವ ಆರಂಭಿಕ ಸಂಬಳಕ್ಕಿಂತ ವೀಲ್‌ಚೇರ್ ತಳ್ಳುವವನಿಗೆ ಸಿಗುತ್ತಿರುವ ಸಂಬಳವೇ ಹೆಚ್ಚಾಗಿದೆ ಎಂದು ತಮಾಷೆ ಮಾಡಿದ್ದಾರೆ.

ಕೆಲವರು ಇದನ್ನು ಮಾನವೀಯ ಹಾಗೂ ಆರ್ಥಿಕ ದೃಷ್ಟಿಕೋನದಿಂದ ವಿಶ್ಲೇಷಿಸಿದ್ದಾರೆ. ಒಂದು ವೇಳೆ ಇದು ನಿಜವಾಗಿದ್ದರೆ, ಅಂಗವಿಕಲ ವ್ಯಕ್ತಿಯೊಬ್ಬ ತನ್ನ ಓಡಾಟಕ್ಕಾಗಿ ಮತ್ತೊಬ್ಬನ ಸಹಾಯ ಪಡೆದು, ಆತನ ಜೀವನೋಪಾಯಕ್ಕೂ ದಾರಿ ಮಾಡಿಕೊಟ್ಟಂತೆ ಆಗುತ್ತದೆ. ಅನೌಪಚಾರಿಕ ವಲಯದ ಬದುಕು ಹೀಗೆಯೇ ಪರಸ್ಪರ ಅವಲಂಬನೆಯಿಂದ ನಡೆಯುತ್ತದೆ ಎನ್ನುತ್ತಿದ್ದಾರೆ.

ಮತ್ತೊಂದೆಡೆ ಭಿಕ್ಷಾಟನೆ ಎನ್ನುವುದು ಒಂದು ವ್ಯವಸ್ಥಿತ ದಂಧೆ ಆಗಿದೆ. ಸಾರ್ವಜನಿಕರ ಅನುಕಂಪವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಹಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ವಿಡಿಯೋದ ನೈಜತೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ.