79ರ ವಯಸ್ಸಿನಲ್ಲೂ 33 ವರ್ಷಗಳಿಂದ ಸೈಕಲ್ ಏರಿ ಪಾರ್ಸೆಲ್ ತಲುಪಿಸುತ್ತಿರುವ ಜಮ್ಶೆಡ್‌ಪುರದ ಸಿ.ಕೆ. ಮುಖರ್ಜಿ ಅವರ ಪರಿಶ್ರಮ, ಜನರ ಮೇಲಿನ ಪ್ರೀತಿ ಮತ್ತು ಜೀವನೋತ್ಸಾಹದ ಕಥೆ ಇದೀಗ ವೈರಲ್ ಆಗಿದೆ.

ವಯಸ್ಸು 79. ಆದರೆ ಕೆಲಸ ಮಾಡುವ ಉತ್ಸಾಹ ಮಾತ್ರ ಇನ್ನೂ ಕುಂದಿಲ್ಲ. ಪ್ರತಿದಿನ ಸೈಕಲ್ ಏರಿ ಪಾರ್ಸೆಲ್ ತಲುಪಿಸುವ ಸಿ.ಕೆ. ಮುಖರ್ಜಿ ಇದೀಗ ಹಲವರ ಹೃದಯ ಗೆಲ್ಲುತ್ತಿದ್ದಾರೆ. ಇತ್ತೀಚೆಗೆ ಮಹಿಳೆಯೊಬ್ಬರು ಮುಖರ್ಜಿ ಅವರನ್ನು ಭೇಟಿಯಾಗಿ ನಡೆಸಿದ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾನ್ಯ ಕೊರಿಯರ್ ಡೆಲಿವರಿ ಸಂದರ್ಭದಲ್ಲಿ ಆರಂಭವಾದ ಮಾತುಕತೆ, ಕೊನೆಗೆ ಅವರ ಜೀವನದ ಹಲವು ಭಾವುಕ ಸಂಗತಿಗಳನ್ನು ಹೊರಹಾಕಿದೆ.

79ರ ವಯಸ್ಸಲ್ಲೂ ಸೈಕಲ್ ಮೇಲೆ ಪಾರ್ಸೆಲ್ ಡೆಲಿವರಿ

ಇನ್‌ಸ್ಟಾಗ್ರಾಮ್ ಬಳಕೆದಾರ ಮಹಿಮಾ ಭಲೋಟಿಯಾ ಅವರು ಮುಖರ್ಜಿ ಅವರನ್ನು ಭೇಟಿಯಾಗಿ, “ಅಂಕಲ್, ನಿಮ್ಮ ವಯಸ್ಸು ಎಷ್ಟು?” ಎಂದು ಕೇಳುತ್ತಾರೆ. ಅದಕ್ಕೆ ಅವರು ಯಾವುದೇ ಹಿಂಜರಿಕೆಯಿಲ್ಲದೆ ಎಪ್ಪತ್ತೊಂಬತ್ತು ಎಂದು ಉತ್ತರಿಸುತ್ತಾರೆ. ನಂತರ ಅವರು ಏನು ಕೆಲಸ ಮಾಡುತ್ತಾರೆ ಎಂದು ಕೇಳಿದಾಗ, ತಾವು ಕೊರಿಯರ್ ಸೇವೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಮುಖರ್ಜಿ ಹೇಳುತ್ತಾರೆ. ಡಿಟಿಡಿಸಿ ಕೊರಿಯರ್‌ನೊಂದಿಗೆ ಸುಮಾರು 33 ವರ್ಷಗಳಿಂದ ಈ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಬಿಸಿಲು, ಮಳೆ ಯಾವುದೂ ತಡೆಯಲ್ಲ

79ರ ವಯಸ್ಸಿನಲ್ಲೂ ಇಷ್ಟು ಚುರುಕಾಗಿ ಹೇಗೆ ಕೆಲಸ ಮಾಡುತ್ತೀರಿ, ಅದಕ್ಕೆ ಶಕ್ತಿ ಎಲ್ಲಿಂದ ಬರುತ್ತದೆ ಎಂದು ಮಹಿಳೆ ಪ್ರಶ್ನಿಸುತ್ತಾರೆ. ತಾವು ಜಮ್ಶೆಡ್‌ಪುರದಾದ್ಯಂತ ಸೈಕಲ್‌ನಲ್ಲಿ ಪಾರ್ಸೆಲ್‌ಗಳನ್ನು ತಲುಪಿಸುತ್ತಿರುವುದಾಗಿ ಮುಖರ್ಜಿ ಹೇಳುತ್ತಾರೆ. ಬಾಬಾನಂದ್ ಆಸ್ಪತ್ರೆ, ತಿರುಂಡಿ ಮೈಲ್ಸ್ ಸೇರಿದಂತೆ ನಗರದ ವಿವಿಧ ಪ್ರದೇಶಗಳಿಗೆ ಡೆಲಿವರಿ ಮಾಡಿರುವುದಾಗಿ ಅವರು ವಿವರಿಸುತ್ತಾರೆ. ಸೈಕಲ್‌ನಲ್ಲಿ ಓಡಾಡುವಾಗ ಬಿಸಿಲು ಮತ್ತು ಮಳೆ ತೊಂದರೆ ನೀಡುವುದಿಲ್ಲವೇ ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರವೇ ಇದೀಗ ಹಲವರ ಗಮನ ಸೆಳೆದಿದೆ. ದೇವರ ಆಶೀರ್ವಾದ ಮತ್ತು ನೀವು ನನಗೆ ನೀಡುವ ಪ್ರೀತಿ, ವಾತ್ಸಲ್ಯ ಹಾಗೂ ಗೌರವದಿಂದಾಗಿ ನಾನು ಮುಂದುವರಿಯುತ್ತಿದ್ದೇನೆ. ಅದೇ ನನಗೆ ಶಕ್ತಿ ನೀಡುತ್ತದೆ ಎಂದು ಮುಖರ್ಜಿ ಹೇಳಿದ್ದಾರೆ.

ಎರಡೂ ಕಣ್ಣುಗಳಿಗೆ ಶಸ್ತ್ರಚಿಕಿತ್ಸೆ

ತಮ್ಮ ಎರಡೂ ಕಣ್ಣುಗಳಿಗೆ ಇತ್ತೀಚೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ತಾವು ಬಡ ಕುಟುಂಬದವರಾಗಿದ್ದು, ಜನರು ನೀಡಿದ ದೇಣಿಗೆ ಮತ್ತು ಬೆಂಬಲದಿಂದ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.

ಅಪರಿಚಿತ ವ್ಯಕ್ತಿ ನೀಡಿದ ₹100 ಇಂದಿಗೂ ನೆನಪು

ಒಮ್ಮೆ ಅಪರಿಚಿತ ವ್ಯಕ್ತಿಯೊಬ್ಬರು ಅವರಿಗೆ ₹100 ನೀಡಿ, ಅಪ್ಪಾ, ತಿನ್ನಲು ಏನಾದರೂ ಖರೀದಿಸಿ” ಎಂದು ಹೇಳಿದ್ದರಂತೆ. ಆ ವ್ಯಕ್ತಿಯ ಮಾನವೀಯತೆಯನ್ನು ಇಂದಿಗೂ ನೆನಪಿಸಿಕೊಳ್ಳುವ ಮುಖರ್ಜಿ, ಬಳಿಕವೂ ಆ ವ್ಯಕ್ತಿಗೆ ಪಾರ್ಸೆಲ್‌ಗಳನ್ನು ತಲುಪಿಸುತ್ತಿದ್ದೆ ಎಂದು ಹೇಳಿದ್ದಾರೆ. ಆದರೆ ಆ ವ್ಯಕ್ತಿಯನ್ನು ಮತ್ತೆ ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂಬ ಬೇಸರವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಜನರ ಪ್ರೀತಿಯೇ ನನ್ನ ಶಕ್ತಿ

ಸಂಭಾಷಣೆಯ ಕೊನೆಯಲ್ಲಿ ಮುಖರ್ಜಿ ತಮ್ಮನ್ನು ಸಿ.ಕೆ. ಮುಖರ್ಜಿ ಎಂದು ಪರಿಚಯಿಸಿಕೊಂಡು, ತಾವು ಬಂಗಾಳಿ ಎಂದು ತಿಳಿಸಿದ್ದಾರೆ. ತಮ್ಮ ಜೀವನವನ್ನು ಮುಂದುವರಿಸಲು ಮತ್ತು ಕುಟುಂಬವನ್ನು ಪೋಷಿಸಲು ಏನು ಪ್ರೇರಣೆ ನೀಡುತ್ತದೆ ಎಂಬ ಪ್ರಶ್ನೆಗೆ ಅವರು ನೀಡಿದ ಉತ್ತರ ಮತ್ತೊಮ್ಮೆ ಗಮನ ಸೆಳೆಯುತ್ತದೆ. ನೀವು ನನಗೆ ನೀಡುವ ಗೌರವ, ಪ್ರೀತಿ ಮತ್ತು ವಾತ್ಸಲ್ಯದಿಂದಾಗಿ ನಾನು ಮುಂದುವರಿಯಲು ಸಾಧ್ಯವಾಗಿದೆ. ಹೇಗೋ ನನ್ನ ಕುಟುಂಬವನ್ನು ಪೋಷಿಸಲು ಮತ್ತು ಜೀವನವನ್ನು ಮುಂದುವರಿಸಲು ನಾನು ನಿರ್ವಹಿಸುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ. 79ರ ವಯಸ್ಸಿನಲ್ಲೂ ಸೈಕಲ್ ಏರಿ ಕೆಲಸ ಮಾಡುತ್ತಿರುವ ಮುಖರ್ಜಿ ಅವರ ಜೀವನಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಲವರಿಗೆ ಪರಿಶ್ರಮ, ಸ್ವಾಭಿಮಾನ ಮತ್ತು ಮಾನವೀಯತೆಯ ಪಾಠವಾಗಿದೆ. ವಯಸ್ಸು ಕೇವಲ ಸಂಖ್ಯೆ ಕೆಲಸದ ಮೇಲಿನ ಪ್ರೀತಿ ಮತ್ತು ಬದುಕುವ ಉತ್ಸಾಹ ಇದ್ದರೆ ಯಾವುದೂ ಅಸಾಧ್ಯವಲ್ಲ” ಎಂಬ ಸಂದೇಶವನ್ನು ಅವರ ಕಥೆ ಸಾರುತ್ತಿದೆ.