ಲಂಡನ್ನಲ್ಲಿ 130 ವರ್ಷಗಳಷ್ಟು ಹಳೆಯದಾದ 'ಕೆಲ್ಮ್ಸ್ಕಾಟ್ ಚೌಸರ್' ಎಂಬ ಅಪರೂಪದ ಪುಸ್ತಕವೊಂದು ಬರೋಬ್ಬರಿ ₹2.68 ಕೋಟಿಗೆ ಹರಾಜಾಗಿದೆ. ಕೇವಲ 50 ಪ್ರತಿಗಳನ್ನು ಹೊಂದಿರುವ ಈ ಪುಸ್ತಕವನ್ನು ಹಂದಿಯ ಚರ್ಮದಿಂದ (ಪಿಗ್ಸ್ಕಿನ್) ಬೈಂಡಿಂಗ್ ಮಾಡಲಾಗಿದೆ.
ಲಂಡನ್ (ಅ.22): ಮಧ್ಯಯುಗದ ಸಾಹಿತ್ಯ, ಸಂಕೀರ್ಣ ಮುದ್ರಣ ತಂತ್ರಜ್ಞಾನ, ಭವ್ಯವಾದ ಸಾಂಪ್ರದಾಯಿಕ ಚಿತ್ರಗಳು ಹಾಗೂ ಅತ್ಯಪರೂಪದ ಬೈಂಡಿಂಗ್ನಿಂದ ಜಗತ್ಪ್ರಸಿದ್ಧವಾಗಿರುವ 130 ವರ್ಷ ಹಳೆಯ 'ಕೆಲ್ಮ್ಸ್ಕಾಟ್ ಚೌಸರ್' (Kelmscott Chaucer) ಎಂಬ ಪ್ರಸಿದ್ಧ ಪುಸ್ತಕದ ಪ್ರತಿಯೊಂದು ಬರೋಬ್ಬರಿ ₹2.68 ಕೋಟಿ ರೂಪಾಯಿಗೆ (ಅಕ್ಟೋಬರ್ 2026 ರಲ್ಲಿ) ಹರಾಜಾಗಿದೆ. ಈ ಕೃತಿಯ ವಿಷಯವಸ್ತುವಿಗಿಂತ ಹೆಚ್ಚಾಗಿ, ಇದರ ವಿಶಿಷ್ಟ ವಿನ್ಯಾಸ ಹಾಗೂ ಕಲಾತ್ಮಕ ಬೈಂಡಿಂಗ್ ಶೈಲಿಯಿಂದಾಗಿ ಇದನ್ನು ಜಗತ್ತಿನ ಅತ್ಯಂತ ಅಪರೂಪದ ಪುಸ್ತಕಗಳ ಸಾಲಿನಲ್ಲಿ ಸೇರಿಸಲಾಗಿದೆ. ಈ ಪ್ರತಿಯ ಅತ್ಯಂತ ವಿಶಿಷ್ಟ ಸಂಗತಿಯೆಂದರೆ, ಇದರ ಬೈಂಡಿಂಗ್ ಅನ್ನು 'ಪಿಗ್ಸ್ಕಿನ್' ಅಂದರೆ ಹಂದಿಯ ಚರ್ಮದಿಂದ ಮಾಡಲಾಗಿದೆ.
1896 ರಲ್ಲಿ ಪ್ರಕಟಣೆ - 87 ಮರದ ಕೆತ್ತನೆಯ ಸಾಂಪ್ರದಾಯಿಕ ಚಿತ್ರಗಳು
ಈ ಕೃತಿಯ ಅಪರೂಪದ ಇತಿಹಾಸವನ್ನು ಗಮನಿಸುವುದಾದರೆ, ಇದನ್ನು 1896 ರಲ್ಲಿ ಪ್ರಕಟಿಸಲಾಯಿತು. ಇಂಗ್ಲಿಷ್ ಮಾಧ್ಯಮದ ವರದಿಯ ಪ್ರಕಾರ, ಪ್ರಕಾಶಕರು ಈ ಪುಸ್ತಕದ ಕೆಲಸವನ್ನು ಪ್ರಕಟಣೆಗಿಂತ ಹಲವು ವರ್ಷಗಳ ಮುಂಚೆಯೇ ಆರಂಭಿಸಿದ್ದರು. ಅದರಂತೆ, 1894 ರ ಆಗಸ್ಟ್ನಲ್ಲಿ ಇದರ ಮುದ್ರಣ ಕಾರ್ಯ ಪ್ರಾರಂಭವಾಗಿ, 1896 ರ ಜೂನ್ನಲ್ಲಿ ಪುಸ್ತಕ ರೂಪದಲ್ಲಿ ಹೊರಬಂದು ಸಾರ್ವಜನಿಕರಿಗೆ ಲಭ್ಯವಾಯಿತು. ಈ ಪುಸ್ತಕದಲ್ಲಿ ಒಟ್ಟು 87 'ವುಡ್ಕಟ್'ಗಳು (ಅಂದರೆ ಮರದ ಹಲಗೆಗಳ ಮೇಲೆ ಕೈಯಿಂದ ಕೆ್ತಲಾದ ಅತ್ಯಂತ ಕಲಾತ್ಮಕ ಚಿತ್ರಗಳು) ಇದ್ದು, ಇವು ಈ ಗ್ರಂಥಕ್ಕೆ ಅತ್ಯಂತ ಪ್ರಮುಖ ಮೆರುಗನ್ನು ನೀಡಲಿವೆ.
ಹಂದಿ ಚರ್ಮದ ಬೈಂಡಿಂಗ್ - ಲಭ್ಯವಿರುವುದು ಕೇವಲ 50 ಪ್ರತಿಗಳು!
ಬರೋಬ್ಬರಿ ₹2.68 ಕೋಟಿಗೆ ಹರಾಜಾಗಿರುವ ಈ 'ಕೆಲ್ಮ್ಸ್ಕಾಟ್ ಚೌಸರ್' ಪುಸ್ತಕದ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ ಇದರ ಕಲಾತ್ಮಕ ಬೈಂಡಿಂಗ್. ಇದನ್ನು ಮೂಲ 'ಪಿಗ್ಸ್ಕಿನ್' (ಹಂದಿ ಚರ್ಮ) ಬಳಸಿ 'ಡವ್ಸ್ ಬೈಂಡರಿ' (Doves Bindery - ಅತ್ಯಂತ ಕೈಚಳಕದ ಕಲಾತ್ಮಕ ಬೈಂಡಿಂಗ್ ಶೈಲಿ) ಮಾದರಿಯಲ್ಲಿ ಮಾಡಲಾಗಿದೆ. ಅಲ್ಲದೆ, ಪುಸ್ತಕವನ್ನು ಭದ್ರವಾಗಿಡಲು ವಿಶೇಷವಾದ ಪೆಟ್ಟಿಗೆಯನ್ನೂ (Box) ಒಳಗೊಂಡಿದೆ.
ಬಿಳಿ ಹಂದಿಯ ಚರ್ಮದಿಂದ ಬೈಂಡಿಂಗ್ ಮಾಡುವ ಈ ಕಲ್ಪನೆ ಹಾಗೂ ಪ್ರೇರಣೆಯನ್ನು ಜರ್ಮನ್ ಪುಸ್ತಕ ಬೈಂಡಿಂಗ್ ಸಂಪ್ರದಾಯದಿಂದ ಪಡೆಯಲಾಗಿತ್ತು. ಪುಸ್ತಕದ ಮುಖಪುಟದ ಮೇಲೆ ಸಂಕೀರ್ಣವಾದ ಕೆತ್ತನೆಗಳಿದ್ದು, ದ್ರಾಕ್ಷಿ ಬಳ್ಳಿಗಳ ವಿನ್ಯಾಸ, ಗುಲಾಬಿ, ಲಿಲಿ ಹೂವುಗಳು ಹಾಗೂ ಓಕ್ ಮರದ ಎಲೆಗಳ ಆಕೃತಿಗಳನ್ನು ಅತ್ಯಂತ ಕಲಾತ್ಮಕವಾಗಿ ಉಬ್ಬಿಸಿ ಕೆತ್ತಿಸಲಾಗಿದೆ. ಪುಸ್ತಕವನ್ನು ಮುಚ್ಚಲು ಎರಡು ಲೋಹದ ಲಾಕ್ಗಳನ್ನು ನೀಡಲಾಗಿದೆ. ಈ ವಿಶಿಷ್ಟ ಮಾದರಿಯಲ್ಲಿ ಕೇವಲ 50 ಪ್ರತಿಗಳನ್ನು ಮಾತ್ರ ಸಿದ್ಧಪಡಿಸಲಾಗಿದ್ದು, ಅವುಗಳಲ್ಲಿ ಒಂದು ಪ್ರತಿ ಇದೀಗ ಹರಾಜಾಗಿದೆ.
ಕಪ್ಪು ಮತ್ತು ಕೆಂಪು ವರ್ಣಗಳಲ್ಲಿ ಮುದ್ರಣ - ಕಲೆಯ ಸಂಕೇತ
ಲಂಡನ್ನ ಹ್ಯಾಮರ್ಸ್ಮಿತ್ನಲ್ಲಿರುವ ವಿಲಿಯಂ ಮೊರಿಸ್ ಅವರ 'ಕೆಲ್ಮ್ಸ್ಕಾಟ್ ಪ್ರೆಸ್' ನ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಈ ಪುಸ್ತಕವೂ ಒಂದಾಗಿತ್ತು. ಮೊರಿಸ್ ಅವರು ಪ್ರಸಿದ್ಧ 'ಆರ್ಟ್ಸ್ ಅಂಡ್ ಕ್ರಾಫ್ಟ್ಸ್' (ಕಲೆ ಮತ್ತು ಕರಕುಶಲ) ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. "ಪುಸ್ತಕಗಳು ಕೇವಲ ಸಾಹಿತ್ಯವನ್ನು ತಲುಪಿಸುವ ಮಾಧ್ಯಮವಾಗಷ್ಟೇ ಅಲ್ಲದೆ, ನೋಡಲು ಅತ್ಯಂತ ಸುಂದರವಾದ ಕಲಾಕೃತಿಗಳಾಗಿಯೂ ಕಣ್ಣಿಗೆ ಕಾಣಿಸಬೇಕು" ಎಂಬುದು ಮೊರಿಸ್ ಅವರ ದೃಢ ನಂಬಿಕೆಯಾಗಿತ್ತು.
ಈ ಗ್ರಂಥದಲ್ಲಿದ್ದ 87 ಬೃಹತ್ ವುಡ್ಕಟ್ ಚಿತ್ರಗಳನ್ನು ಮೊರಿಸ್ ಅವರ ಕಲಾತ್ಮಕ ಸಹಯೋಗಿ ಬರ್ನ್-ಜೋನ್ಸ್ ಅವರ ರೇಖಾಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಸಿದ್ಧಪಡಿಸಲಾಗಿತ್ತು. ಇವುಗಳನ್ನು ರಾಬರ್ಟ್ ಕ್ಯಾಟರ್ಸನ್-ಸ್ಮಿತ್ ಮರುರೂಪಿಸಿದ್ದರೆ, ಡಬ್ಲ್ಯೂ.ಎಚ್. ಹೂಪರ್ ಮರದ ಹಲಗೆಗಳ ಮೇಲೆ ಕೆತ್ತಿದ್ದರು. ಪುಸ್ತಕದ ಅಲಂಕಾರಿಕ ಬಾರ್ಡರ್ಗಳು, ಅಕ್ಷರಗಳ ವಿನ್ಯಾಸ, ಶೀರ್ಷಿಕೆ ಪುಟ ಹಾಗೂ ಇತರ ಪ್ರಮುಖ ಅಂಶಗಳನ್ನು ಮೊರಿಸ್ ಸ್ವತಃ ವಿನ್ಯಾಸಗೊಳಿಸಿದ್ದರು. ಇಡೀ ಪುಸ್ತಕವನ್ನು ಅತ್ಯಂತ ಆಕರ್ಷಕವಾಗಿ ಕಪ್ಪು ಮತ್ತು ಕೆಂಪು ಬಣ್ಣದ ಶಾಯಿಯಲ್ಲಿ ಮುದ್ರಿಸಲಾಗಿತ್ತು.


