ಇಂಡಿ: ತಾಂಬಾ ಗ್ರಾಮದ ಜನರ ನಿದ್ದಗೆಡಿಸಿದ ಚರ್ಮರೋಗ
ತಾಂಬಾ ಗ್ರಾಮಸ್ಥರಿಗೆ ಚರ್ಮರೋಗ ಕಾಟ| ಗಜಕರ್ಣ ಎಂಬ ಚರ್ಮಸಂಬಂಧಿ ಬಾಧೆಯಿಂದ ಹೈರಾಣಾದ ಜನರು| ಈ ಬಾಧೆಯಿಂದ ಬಳಲಿ ಬೆಂಡಾದ ಅರ್ಧಕ್ಕರ್ಧ ತಾಂಬಾ ಗ್ರಾಮಸ್ಥರು|ತಾಂಬಾದಲ್ಲಿ ಅರ್ಧಕ್ಕರ್ಧ ಜನರು ಇಂತಹ ಚರ್ಮ ಸಂಬಂಧಿ ರೋಗಬಾಧೆಯಿಂದ ಬಳುಲುತ್ತಿದ್ದಾರೆ| ಪುರುಷ, ಮಹಿಳೆ, ವಯೋವೃದ್ಧರು, ಮಕ್ಕಳು ಸಹಿತ ಇಂತಹ ಬಾಧೆಯಿಂದ ಬಳಲಿ ಬೆಂಡಾಗಿದ್ದಾರೆ| ಯಾರನ್ನೇ ಕೇಳಿದರೂ ಚರ್ಮವ್ಯಾಧಿಯದೇ ಮಾತು ಕೇಳಿಬರುತ್ತಿದೆ|
ಲಕ್ಷ್ಮಣ ಹಿರೇಕುರಬರ
ತಾಂಬಾ[ಅ.16]: ಗಜಕರ್ಣ ಎಂಬ ಚರ್ಮ ಸಂಬಂಧಿ ರೋಗ ಇಂಡಿ ತಾಲೂಕಿನ ತಾಂಬಾ ಗ್ರಾಮದ ಅರ್ಧಕ್ಕರ್ಧ ಗ್ರಾಮಸ್ಥರನ್ನೇ ನಿದ್ದೆಗೆಡಿಸಿದೆ.
ಹಲವರಿಗೆ ಗಜಕರ್ಣ, ಕೆಲವರಿಗೆ ಹುರುಕು (ಗುಳ್ಳಿ), ತುರಿಕೆ ಆರಂಭವಾದರೆ ಕಲ್ಲಿನಿಂದ ಉಜ್ಜಿಕೊಳ್ಳುವಷ್ಟರ ಮಟ್ಟಿಗೆ ಸಂಕಟ ಕೊಡುತ್ತಿದೆ. ಸುಮಾರು 20 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ತಾಂಬಾದಲ್ಲಿ ಅರ್ಧಕ್ಕರ್ಧ ಜನರು ಇಂತಹ ಚರ್ಮ ಸಂಬಂಧಿ ರೋಗಬಾಧೆಯಿಂದ ಬಳುಲುತ್ತಿದ್ದಾರೆ. ರಾತ್ರಿಯಿಡಿ ನಿದ್ದೆಗೆಡುತ್ತಿದ್ದಾರೆ. ಪುರುಷ, ಮಹಿಳೆ, ವಯೋವೃದ್ಧರು, ಮಕ್ಕಳು ಸಹಿತ ಇಂತಹ ಬಾಧೆಯಿಂದ ಬಳಲಿ ಬೆಂಡಾಗಿದ್ದಾರೆ. ಯಾರನ್ನೇ ಕೇಳಿದರೂ ಚರ್ಮವ್ಯಾಧಿಯದೇ ಮಾತು ಕೇಳಿಬರುತ್ತಿದೆ. ಈ ಮೊದಲು ಕಡಿಮೆಯಿದ್ದ ಬಾಧೆ ಕಳೆದ ಆರೇಳು ತಿಂಗಳಿಂದ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ತಾಂಬಾ ಅಷ್ಟೇ ಅಲ್ಲ, ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ಇದೇ ಬಾಧೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಾರಣವೇನು?:
ದೇಹದ ವಿವಿಧ ಭಾಗಗಳಲ್ಲಿ ಗೋಲಾಕಾರ ಹಾಗೂ ಚೌಕಾಕಾರವಾಗಿ ಬಿದ್ದ ಕಲೆ ಅತಿಯಾಗಿ ತುರಿಕೆ ಆರಂಭವಾಗುತ್ತದೆ. ರಾತ್ರಿ ನಿದ್ರೆಯನ್ನೂ ಮಾಡಲು ಬಿಡದೆ ಹೈರಾಣಾಗಿಸಿದೆ. ತುರಿಕೆಯ ವೇದನೆ ತಾಳದೆ ಅನೇಕರು ಸಣ್ಣ ಕಲ್ಲಿನಿಂದ ತುರಿಸಿಕೊಂಡು ಮುಲಾಮು ಹಚ್ಚಿಕೊಂಡು ನಂತರವೇ ರಾತ್ರಿ ನಿದ್ರೆ ಮಾಡುತ್ತಿದ್ದಾರೆ. ಮತ್ತೇ ಮರುದಿನ ಅದೇ ಸ್ಥಿತಿ ಎಂದು ಅಬ್ದುಲ್ ಮಬುಬ್ ಅವರು ಹೇಳುತ್ತಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ರೋಗಕ್ಕೆ ಕುಡಿಯುವ ನೀರು, ಮಲಿನ ನೀರು, ಸುತ್ತಮುತ್ತಲಿನ ಗಲೀಜು ವಾತಾವರಣ ಕಾರಣ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಇದು ಗಾಳಿಯಿಂದ ಆಗುವಂತಹದ್ದು ಅಲ್ಲ. ಸ್ವಚ್ಛತೆ ಇಲ್ಲದಿರುವುದು, ಹಸಿಯಾದ ಬಟ್ಟೆ ತೊಡುವುದರಿಂದ ಬರುತ್ತದೆ ಎಂದು ವೈದ್ಯಾಧಿಕಾರಿಗಳು ಹೇಳುತ್ತಾರೆ. ಗರ್ಭಿಣಿಯರು, ಶಿಶುವಿಗೆ ಈ ತುರಿಕೆ ರೋಗದಿಂದ ಯಾವುದೇ ತೊಂದರೆ ಇಲ್ಲ ಎಂದೂ ಅಭಯ ನೀಡಿದ್ದಾರೆ.
ವೈದ್ಯರಿಗೆ ತೋರಿಸಲು ಮುಜುಗರ:
ಗ್ರಾಮದಲ್ಲಿ ಪುರುಷರು, ಮಹಿಳೆಯರು, ಯುವತಿಯರು ಸೇರಿದಂತೆ ಮಕ್ಕಳಿಗೂ ತೊಡೆಯ ಭಾಗದಲ್ಲಿ ಈ ಗಜಕರ್ಣ ಬಾಧೆ ಕಾಣಿಸಿದ್ದು, ಇದನ್ನು ವೈದ್ಯರಿಗೆ ತೋರಿಸಲು ನಾಚಿಕೊಳ್ಳುತ್ತಿದ್ದಾರೆ. ಆದರೆ ವಿಪರೀತ ತುರಿಕೆ ತಾಳದೆ ತೋರಿಸುವುದು ಅನಿವಾರ್ಯವಾಗಿದೆ ಎಂದು ಶರಣು ಉಪ್ಪಾರ ಹೇಳುತ್ತಾರೆ. ದೇಹದ ಇತರೆ ಭಾಗಕ್ಕೂ ಈ ಚರ್ಮರೋಗ ಬಾಧೆ ಆವರಿಸುತ್ತಿರುವುದರಿಂದ ಹೆದರಿದ ಕೆಲ ಗ್ರಾಮಸ್ಥರು ಇಂಡಿ, ವಿಜಯಪುರ ಆಸ್ಪತ್ರೆಗಳಿಗೆ ಅಲೆದಾಡಿ ಸಾವಿರು ರುಪಾಯಿ ಖರ್ಚು ಮಾಡುತ್ತಿದ್ದಾರೆ. ಎರಡ್ಮೂರು ತಿಂಗಳಾನುಗಟ್ಟಲೆ ಔಷಧೋಪಚಾರ ಮಾಡಿಕೊಳ್ಳುತ್ತಿದ್ದಾರೆ.
ಕಾರಣ ಏನೇ ಇರಲಿ, ಸಂಬಂಧಿಸಿ ಇಲಾಖೆ ಹಾಗೂ ಅಧಿಕಾರಿಗಳು ಈ ಸಮಸ್ಯೆಯತ್ತ ಚಿತ್ತ ಹರಿಸಿ ರೋಗಬಾಧೆಯಿಂದ ಬಳಲಿ ಬೆಂಡಾದ ಗ್ರಾಮಸ್ಥರನ್ನು ಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ತಾಂಬಾದ ತಾಪಂ ಸದಸ್ಯ ಪ್ರಕಾಶ ಮುಂಜಿ ಅವರು, ತಾಂಬಾ ಗ್ರಾಮದಲ್ಲಿ ಶೇ. 60 ರಷ್ಟು ಜನರಿಗೆ ಗಜಕರ್ಣ ರೋಗ ಹರಡಿದೆ. ಇದಕ್ಕೆ ಕುಡಿಯುವ ನೀರು ಅಥವಾ ಗಾಳಿ ಕಾರಣವಿರಬಹುದು. ಇದನ್ನು ವೈದ್ಯರು ತಪಾಸಣೆ ನಡೆಸಿ ರೋಗದಿಂದ ಮುಕ್ತಗೊಳಿಸಬೇಕು ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ತಾಂಬಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಎ.ಎಂ. ಬಾಗವಾನ ಅವರು, ತಾಂಬಾ ಸೇರಿ ಈ ಭಾಗದಿಂದ ಪ್ರತಿದಿನ ಎರಡು ನೂರರಿಂದ ಮೂರು ನೂರಕ್ಕೂ ಹೆಚ್ಚು ಜನರು ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಅದರಲ್ಲಿ ಗಜಕರ್ಣ ಹಾಗೂ ಚರ್ಮರೋಗದ ಜನರೇ ಇರುತ್ತಾರೆ. ಎಲ್ಲ ರೋಗಿಗಳನ್ನು ತಪಾಸಣೆ ಮಾಡಿ ಕಳುಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಗಜಕರ್ಣ ಎಂಬ ಚರ್ಮರೋಗ ಸ್ವಚ್ಛತೆ ಇಲ್ಲದಿರುವುದು, ಹಸಿಯಾದ ಬಟ್ಟೆ ತೊಡುವುದರಿಂದ ಬರುತ್ತದೆ. ಹಾಗೊಂದು ವೇಳೆ ಒಮ್ಮಿಂದೊಮ್ಮೆಲೆ ಗ್ರಾಮಸ್ಥರಿಗೆ ತುರಿಕೆ ಆಗಿದ್ದರೆ ನಾವು ಪರೀಕ್ಷೆ ಮಾಡುತ್ತೇವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಹೇಂದ್ರ ಕಾಪ್ಸೆ ಅವರು ತಿಳಿಸಿದ್ದಾರೆ.