Asianet Suvarna News Asianet Suvarna News

ವಿಜಯಪುರ: ಸೌಲಭ್ಯಗಳಿಲ್ಲದೆ ಯೋಗಾಪುರ ನಿವಾಸಿಗಳ ನರಕಯಾತನೆ!

ಸೌಲಭ್ಯ ವಂಚಿತ ಯೋಗಾಪುರ ಬಡಾವಣೆ| ರಾತ್ರಿಯೇ ಮಹಿಳೆಯರ ಬಹಿರ್ದೆಸೆ| ಚರಂಡಿಯಾದ ಬಡಾವಣೆ ರಸ್ತೆಗಳು| ಕಲುಷಿತ ನೀರು ಕುಡಿಯಬೇಕಾದ ದಯನೀಯ ಸ್ಥಿತಿ|ಬಡಾವಣೆಯಲ್ಲಿ ಒಂದೂ ರಸ್ತೆ ಸುಸಜ್ಜಿತವಾಗಿ ಇಲ್ಲ. ಎಲ್ಲ ರಸ್ತೆಗಳು ತೆಗ್ಗು, ದಿನ್ನೆಗಳಿಂದ ಕೂಡಿವೆ|

No Infrastructure in Yogapura Nagar in Vijayapura City
Author
Bengaluru, First Published Oct 30, 2019, 12:24 PM IST

ರುದ್ರಪ್ಪ ಆಸಂಗಿ

ವಿಜಯಪುರ[ಅ.30]: ನಗರ ಹೊರವಲಯದ ಯೋಗಾಪುರ ಕಾಲೋನಿಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ನಿತ್ಯವೂ ಅಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದು, ಇದ​ರಿಂದ ನಮ್ಮನ್ನು ಪಾರು ಮಾಡುವಂತೆ ಬಡಾವಣೆ ನಿವಾಸಿಗಳ ಕೂಗು ಅರಣ್ಯರೋದನವಾಗಿದೆ.

ಹೌದು, ವಿಜಯಪುರ ನಗರದಿಂದ ಪೂರ್ವಕ್ಕೆ 5 ಕಿಮೀ ದೂರದಲ್ಲಿರುವ ಯೋಗಾಪುರ ಬಡಾವಣೆಗಳಲ್ಲಿ ನಗರ ಸಾರಿಗೆ ಬಸ್‌, ಚರಂಡಿ, ಕುಡಿಯುವ ನೀರು, ಶೌಚಾಲಯ ಇವೇ ಮುಂತಾದ ಸಮಸ್ಯೆಗಳು ಬೃಹದಾಕಾರವಾಗಿವೆ. ಇದರಿಂದಾಗಿ ಈ ಬಡಾವಣೆ ನಾಗರಿಕರಿಗೆ ನರಕಯಾತನೆ ಗತಿಯಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಡಾವಣೆಯಲ್ಲಿ ತೆರೆದ ಚರಂಡಿಯಾಗಲಿ, ಒಳ ಚರಂಡಿಯಾಗಲಿ ಯಾವುದೂ ಇಲ್ಲ. ಹೀಗಾಗಿ ಕೊಳಚೆ ನೀರು ರಸ್ತೆ ಮೇಲೆ ಎಗ್ಗಿಲ್ಲದೆ ಹರಿದಾಡುತ್ತಿದೆ. ಕೊಳಚೆಯಿಂದ ಕೂಡಿದ ಈ ನೀರಿನಲ್ಲಿ ಅಲ್ಲಿನ ನಿವಾಸಿಗಳು ಸಂಚರಿಸುವುದು ಬಹಳ ದುಸ್ತರವಾಗಿದೆ.

ಈ ಬಡಾವಣೆಯ ಸ್ಟಾರ್‌ ಚೌಕನ ಹನುಮಾನ ದೇವಸ್ಥಾನದ ಹತ್ತಿರ ಐದಾರು ತಿಂಗಳುಗಳಿಂದ ಗಟಾರ್‌ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಈ ರಸ್ತೆ ಮೇಲೆ ಹರಿಯುವ ಗಟಾರ್‌ ನೀರು ಅಕ್ಕ ಪಕ್ಕದ ಮನೆಗಳಿಗೆ ನುಗ್ಗಿ ಭಾರಿ ಹಿಂಸೆ ಮಾಡುತ್ತಿದೆ. ಈ ಪ್ರದೇಶದಲ್ಲೇ ನಲ್ಲಿ ಪೈಪ್‌ಲೈನ್‌ ಕೂಡಾ ಒಡೆದಿದೆ. ಚರಂಡಿ ನೀರು ನಲ್ಲಿಗಳಲ್ಲಿ ಸೇರಿ ಅಲ್ಲಿನ ನಿನವಾಸಿಗಳು ಕಲುಷಿತ ನೀರು ಕುಡಿಯುವ ಅಯೋಮಯ ಸ್ಥಿತಿ ನಿರ್ಮಾಣವಾಗಿದೆ. ಅಂಬಿಗರ ಚೌಡಯ್ಯ ವೃತ್ತದಲ್ಲಿ ಭಾರಿ ಪ್ರಮಾಣದ ಚರಂಡಿ ನೀರು ರಸ್ತೆಯಲ್ಲೇ ನಿಂತುಕೊಳ್ಳುತ್ತದೆ. ಇದರಿಂದಾಗಿ ಈ ರಸ್ತೆಯ ಅಕ್ಕ ಪಕ್ಕದಲ್ಲಿನ ನಿವಾಸಿಗಳಿಗೆ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಈ ಮನೆಗಳಲ್ಲಿ ಸೊಳ್ಳೆ ಕಚ್ಚಿ ಜನರು ಅನಾರೋಗ್ಯಕ್ಕೆ ತುತ್ತಾಗಬೇಕಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರುತ್ತಾರೆ.

ಈ ಬಡಾವಣೆಯಲ್ಲಿ ಇನ್ನೂ 10 ರಿಂದ 12 ದಿನಕ್ಕೊಮ್ಮೆ ನಲ್ಲಿ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತದೆ. ಇದರಿಂದಾಗಿ ಈ ಬಡಾವಣೆ ನಿವಾಸಿಗಳು ಬೇರೆ ನೀರಿನ ಅವಲಂಬನೆ ಮಾಡುವಂತಾಗಿದೆ. ಒಂದು ಸಲ ಪೂರೈಸಿದ ನಲ್ಲಿ ನೀರು ಮೂರ್ನಾಲ್ಕು ದಿನಗಳಲ್ಲಿಯೇ ಮುಗಿದು ಹೋಗುತ್ತದೆ. ಹೀಗಾಗಿ ನಿವಾಸಿಗಳು ನೀರಿನ ಮೂಲ ಹುಡುಕಿಕೊಂಡು ಕೈಯಲ್ಲಿ ಕೊಡ ಹಿಡಿದುಕೊಂಡು ತಿರುಗಾಡಬೇಕಾಗಿದೆ. 24/7 ನೀರು ಪೂರೈಕೆ ಯೋಜನೆ ಅಡಿಯಲ್ಲಿ ಈ ಬಡಾವಣೆಯಲ್ಲಿ ಪೈಪ್‌ಲೈನ್‌ ಅಳವಡಿಸಲಾಗಿದೆ. ಆದರೆ ಇನ್ನುವರೆಗೆ ಈ ಯೋಜನೆ ಅಡಿಯಲ್ಲಿ ನೀರು ಪೂರೈಕೆ ಆರಂಭವಾಗಿಲ್ಲ.

ಯೋಗಾಪುರ ಕಾಲನಿಗೆ ಸಿಟಿಬಸ್‌ ಸೌಲಭ್ಯವಿಲ್ಲ. ಹೀಗಾಗಿ ಈ ಬಡಾವಣೆಯ ನಿವಾಸಿಗಳು ಬಡವರು, ಶ್ರಮಿಕರು ಇದ್ದಾರೆ. ಅವರು ಕೆಲಸ ಅರಸಿ ವಿಜಯಪುರದ ಮಾರುಕಟ್ಟೆಗೆ ತೆರಳಬೇಕು. ಈ ಬಡಾವಣೆಯ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಿಗೆ ತೆರಳಲು ಬಸ್‌ ಇಲ್ಲದಂತಾಗಿದೆ. ಹೀಗಾಗಿ ಈ ಬಡಾವಣೆ ಜನರು ಖಾಸಗಿ ಆಟೋಗಳಿಗೆ ಮೊರೆ ಹೋಗಬೇಕಾಗಿದೆ.

ಈ ಬಡಾವಣೆಯಲ್ಲಿ ಒಂದೂ ರಸ್ತೆ ಸುಸಜ್ಜಿತವಾಗಿ ಇಲ್ಲ. ಎಲ್ಲ ರಸ್ತೆಗಳು ತೆಗ್ಗು, ದಿನ್ನೆಗಳಿಂದ ಕೂಡಿವೆ. ಅಸ್ಥಿ ಪಂಜರದಂತೆ ಗೋಚರಿಸುತ್ತಿವೆ. ಇದರಿಂದಾಗಿ ವಾಹನ ಸವಾರರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.

ಬೈಕ್‌ ಮೇಲೆ ಶೌಚಕ್ಕೆ:

ಬಡಾವಣೆಯಲ್ಲಿ ಪುರುಷರ, ಮಹಿಳೆಯರ ಶೌಚಾಲಯಗಳಿಲ್ಲ. ಪುರುಷರು ಹೇಗಾದರೂ ಶೌಚಾಲಯಕ್ಕೆ ತೆರಳುತ್ತಾರೆ. ಆದರೆ ಮಹಿಳೆಯರು ಫಜೀತಿಗೆ ಸಿಲುಕಿದ್ದಾರೆ. ಮಹಿಳೆಯರು ಹಗಲು ಹೊತ್ತಿನಲ್ಲಿ ಬಹಿರ್ದೆಸೆ ಮಾಡುವಂತಿಲ್ಲ. ರಾತ್ರಿ ಹೊತ್ತಿನಲ್ಲಿಯೇ ಮಹಿಳೆಯರು ಬಹಿರ್ದೆಸೆಗೆ ತೆರಳಬೇಕು. ರಾತ್ರಿ ಹೊತ್ತಿನಲ್ಲಿ ಗ್ರಾಮದ ಹೊರ ವಲಯದಲ್ಲಿ ಮಹಿಳೆಯರು ಶೌಚಕ್ಕೆ ತೆರಳಬೇಕಾದರೆ ಅವರ ಮನೆ ಗಂಡಸರು ಬೈಕ್‌ ಮೇಲೆ ಕರೆದುಕೊಂಡು ಹೋಗಬೇಕು. ರಾತ್ರಿ ಹೊತ್ತಿನಲ್ಲಿ ಮಹಿಳೆಯರು ಒಬ್ಬರೇ ಹೋದರೆ ಕಳ್ಳಕಾಕರ ಭಯ, ವಿಷ ಜಂತುಗಳ ಭಯ ಇದೆ. ಇದರಿಂದಾಗಿ ಮಹಿಳೆಯರು ತಮ್ಮ ಪುರುಷರ ಜೊತೆಗೆ ಬೈಕ್‌ನಲ್ಲಿ ಬಹಿರ್ದೆಸೆಗೆ ತೆರಳಬೇಕಾದ ಅಮಾನವೀಯ ಸ್ಥಿತಿ ನಿತ್ಯವೂ ನಡೆಯುತ್ತಿದೆ.

ಬಡಾವಣೆ ರಸ್ತೆಗಳ ಬದಿಗೆ ವಿದ್ಯುತ್‌ ಕಂಬಗಳಿವೆ. ಕಂಬಗಳಿಗೆ ದೀಪಗಳನ್ನು ಅಳವಡಿಸಲಾಗಿದೆ. ಆದರೆ ವಿದ್ಯುತ್‌ ಬಲ್ಬ್  ಸುಟ್ಟು ಹೋಗಿವೆ. ಬೇರೆ ಬಲ್ಬ್ ಗಳನ್ನು ಮಹಾನಗರ ಪಾಲಿಕೆಯವರು ಬದಲಿಸಿಲ್ಲ. ಇದರಿಂದಾಗಿ ಈ ಬಡಾವಣೆ ರಾತ್ರಿ ಹೊತ್ತಿನಲ್ಲಿ ಅಂಧಕಾರದಲ್ಲಿ ಮುಳುಗಿ ಹೋಗುತ್ತದೆ.

ನಮ್ಮ ಜೀವನ ನರಕವಾಗಿದೆ. ಒಂದು ರಸ್ತೆ ಸರಿಯಿಲ್ಲ. ಶೌಚಾಲಯವಿಲ್ಲ. ಗಟಾರ್‌ ನೀರು ನಲ್ಲಿಯಲ್ಲಿ ಬಂದು ಕಲುಷಿತ ನೀರು ಕುಡಿಯಬೇಕಾದ ದಯನೀಯ ಸ್ಥಿತಿ ಬಂದಿದೆ. ಸಂಬಂಧಿಸಿದವರು ಬೇಗನೆ ನಮ್ಮ ಬಡಾವಣೆಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಯೋಗಾಪುರ ನಿವಾಸಿ
ವೀರಭದ್ರಪ್ಪ ಮಸೂತಿ ಅವರು ಹೇಳಿದ್ದಾರೆ. 

ಇನ್ನು ಈ ಬಗ್ಗೆ ಮಾತನಾಡಿದ ಅವರು,  ವಿಜಯಪುರ  ಮಹಾನಗರ ಪಾಲಿಕೆ ಆಯುಕ್ತ  ಶ್ರೀಹರ್ಷ ಶೆಟ್ಟಿ ಅವರು, ವಿಜಯಪುರ ನಗರ ಹೊರ ವಲಯದ ಯೋಗಾಪುರ ಕಾಲನಿಯ ಸ್ಥಿತಿಗತಿ ಪರಿಶೀಲಿಸಿ ಅಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ. 

Follow Us:
Download App:
  • android
  • ios