ವಿಜಯಪುರ: KDP ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವ ಪಾಟೀಲ ಕ್ಲಾಸ್
ಮಾಹಿತಿ ನೀಡದ ಅಧಿಕಾರಿಗಳಿಗೆ ಸಚಿವ ಸಿ.ಸಿ. ಪಾಟೀಲ ತರಾಟೆ|ನೀವು ಸಭೆಗೆ ಬಂದಿದ್ದೀರೋ ಇಲ್ಲವೆ, ಚಹಾ ಕುಡಿಯಲು ಬಂದಿದ್ದೀರೋ? ಸಭೆಗೆ ಬರಬೇಕಾದರೆ ಪೂರ್ಣ ಮಾಹಿತಿಯೊಂದಿಗೆ ಬರಬೇಕು ಎಂದ ಸಚಿವರು|ಅಂಕಿ-ಅಂಶಗಳನ್ನು ನಿಖರವಾಗಿ ಹೇಳುವ ಪರಿಪಾಠ ರೂಢಿಸಿಕೊಳ್ಳಿ| ನಾನು ಯಾವ ರೀತಿ ಗದಗನಲ್ಲಿ ಮೀಟಿಂಗ್ ನಡೆಸುತ್ತೇನೆ ಎಂದು ಕೇಳಿ ತಿಳಿದುಕೊಳ್ಳಿ ಎಂದ ಸಚಿವ|
ವಿಜಯಪುರ(ನ.14):ನೀವು ಸಭೆಗೆ ಬಂದಿದ್ದೀರೋ ಇಲ್ಲವೆ, ಚಹಾ ಕುಡಿಯಲು ಬಂದಿದ್ದೀರೋ? ಸಭೆಗೆ ಬರಬೇಕಾದರೆ ಪೂರ್ಣ ಮಾಹಿತಿಯೊಂದಿಗೆ ಬರಬೇಕು ಎಂದು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಫುಲ್ ಕ್ಲಾಸ್ ತೆಗೆದುಕೊಂಡ ಪ್ರಸಂಗ ನಡೆದಿದೆ.
ಬುಧವಾರ ಜಿಲ್ಲಾ ಪಂಚಾಯತಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸರಿಯಾಗಿ ಮಾಹಿತಿ ನೀಡದ ಅಧಿಕಾರಿಗಳಿಗೆ ಸಚಿವ ಸಿ.ಸಿ.ಪಾಟೀಲ ತರಾಟೆಗೆ ತೆಗೆದುಕೊಂಡರು. ಕೆಬಿಜೆಎನ್‌ಎಲ್ ಝಳಕಿ ವ್ಯಾಪ್ತಿಯಲ್ಲಿ ನೀರಾವರಿಗೆ ಸಂಬಂಧಿಸಿದ ಯಂತ್ರಗಳ ರಿಪೇರಿ ಕುರಿತು ಕೇಳಿದ ಪ್ರಶ್ನೆಗೆ ಅಧೀಕ್ಷಕ ಅಭಿಯಂತರರೊಬ್ಬರು ಬೇರೆಯೇ ಉತ್ತರ ನೀಡಿದರು. ಆಗ ಸಚಿವರು ನಾನು ಯಾವ ಪ್ರಶ್ನೆ ಕೇಳಿದ್ದೇನೆ ಎಂದು ಎರಡು ಮೂರು ಬಾರಿ ಪುನರಾವರ್ತನೆ ಮಾಡಿದರೂ ಅಧಿಕಾರಿ ಉತ್ತರ ಹೇಳಲಿಲ್ಲ. ಆಗ ಅಸಮಾಧಾನಗೊಂಡ ಸಚಿವರು, ನೀವು ಸಭೆಗೆ ಬಂದಿದ್ದೀರೋ ಅಥವಾ ಚಹಾ ಕುಡಿಯಲು ಬಂದಿದ್ದೀರೋ, ಈಗಲೇ ನಿಮಗೆ ಸಭೆಯಿಂದ ಹೊರಗೆ ಹೋಗಲು ಹೇಳುತ್ತಿದ್ದೆ. ಆದರೆ ನಿಮ್ಮ ಹುದ್ದೆಗೆ ಗೌರವ ನೀಡುತ್ತಿದ್ದೇನೆ ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇನ್ನೊಂದೆಡೆ ಕೆಬಿಜೆಎನ್‌ಎಲ್ ವತಿಯಿಂದ ಕೊರೆಸಲಾಗಿರುವ ಬೋರ್‌ವೆಲ್‌ಗಳಿಗೆ ಸಂಬಂಧಿಸಿದಂತೆ ಹೆಸ್ಕಾಂ ಹಾಗೂ ಕೆಬಿಜೆಎನ್‌ಎಲ್ ಇಲಾಖೆಯ ಅಧಿಕಾರಿಗಳ ನಡುವೆ ಸಮನ್ವಯ ಕೊರತೆ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ನೀವು ಸವತಿ ಮಕ್ಕಳಂತೆ ಏಕೆ ಜಗಳವಾಡುತ್ತಿದ್ದೀರಿ? ನಿಮ್ಮ ಸಮನ್ವಯ ಕೊರತೆಯಿಂದಾಗಿ ಮುಗ್ದ ಜನರು ತೊಂದರೆ ಅನುಭವಿಸಬೇಕಾಗುತ್ತದೆ. ಮಾಧ್ಯಮದವರ ಮುಂದೆ ನಿಮ್ಮ ಮರ್ಯಾದೆ ಕಳೆದುಕೊಳ್ಳಬೇಡಿ ಎಂದು ಚಾಟಿ ಬೀಸಿದರು.
ಅಧಿಕಾರಿಗಳು ಸಭೆಗೆ ಬರುವಾಗ ಎಲ್ಲ ತಯಾರಿಯೊಂದಿಗೆ ಬರಬೇಕು. ಇಲಾಖೆಯ ಅಂಕಿ-ಅಂಶಗಳನ್ನು ಸಂಗ್ರಹಿಸಿ ಹೇಳಬೇಕು. ಅದನ್ನು ಬಿಟ್ಟು ಏನೋ ಹೇಳಿ ಮಿಸ್‌ಗೈಡ್ ಮಾಡಬೇಡಿ. ಸರ್ಕಾರದ ಸೌಲಭ್ಯಗಳು ಜನರಿಗೆ ಮುಟ್ಟಬೇಕು. ಹೀಗಾಗಿ ತಪ್ಪು ಅಂಕಿ ಅಂಶ ನೀಡಬೇಡಿ. ಗೊತ್ತಿಲ್ಲದಿದ್ದರೆ ಗೊತ್ತಿಲ್ಲ ಎಂದು ಹೇಳಿ, ಅಂಕಿ-ಅಂಶಗಳನ್ನು ನಿಖರವಾಗಿ ಹೇಳುವ ಪರಿಪಾಠ ರೂಢಿಸಿಕೊಳ್ಳಿ. ನಾನು ಯಾವ ರೀತಿ ಗದಗನಲ್ಲಿ ಮೀಟಿಂಗ್ ನಡೆಸುತ್ತೇನೆ ಎಂದು ಕೇಳಿ ತಿಳಿದುಕೊಳ್ಳಿ ಎಂದರು.