ಮುದ್ದೇಬಿಹಾಳದಲ್ಲಿ ವರುಣನ ಆರ್ಭಟ: ಕೊಚ್ಚಿಹೋದ ಸೇತುವೆ
ಮುದ್ದೇಬಿಹಾಳ-ಅಡವಿ ಹುಲಗಬಾಳ ತಾಂಡಾ ಸಂಪರ್ಕ ಕಡಿತ| ಇಕ್ಕಟ್ಟಿಗೆ ಸಿಲುಕಿದ ಅಡವಿ ಹುಲಗಬಾಳ ಗ್ರಾಮಸ್ಥರು| ತಾಂಡಾದ ಜನರು ಸಮೀಪದ ಗ್ರಾಮ ಅಡವಿ ಹುಲಗಬಾಳ ಮತ್ತು ಮುದ್ದೇಬಿಹಾಳದ ಸಂಪರ್ಕದಿಂದ ವಂಚಿತರಾಗಿದ್ದಾರೆ| ಸುಗಮ ಸಂಚಾರಕ್ಕೆ ತಾಂಡಾಕ್ಕೆ ಇದೊಂದೇ ಮಾರ್ಗವಾಗಿದೆ| ಇದು ಬಿಟ್ಟರೆ ಬೇರೆ ದಾರಿಯಿಲ್ಲ| ಸಂಪರ್ಕ ಸಾಧಿಸಬೇಕೆಂದರೆ ಸುತ್ತು ಬಳಸಿ ನಡೆದುಕೊಂಡೇ ಹೋಗಬೇಕಾದ ದುಸ್ಥಿತಿ ಇದೆ|
ಮುದ್ದೇಬಿಹಾಳ(ಅ.11): ತಾಲೂಕಿನ ಅಡವಿ ಹುಲಗಬಾಳ ಗ್ರಾಮದ ಬಳಿ ಇರುವ ಸಂಪರ್ಕ ರಸ್ತೆಯ ಕಿರು ಸೇತುವೆ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಂಪೂರ್ಣ ಕೊಚ್ಚಿಹೋಗಿದೆ. ಇದರಿಂದಾಗಿ ಅಡವಿ ಹುಲಗಬಾಳ ತಾಂಡಾ ಸಂಪರ್ಕಿಸುವ ರಸ್ತೆ ಸಂಚಾರ ಬಂದ್ ಆಗಿ ತಾಂಡಾದ ಜನರು ಪರದಾಡುವಂತಾಗಿದೆ. ಪರಿಣಾಮ ತಾಂಡಾದ ಜನರು ಸಮೀಪದ ಗ್ರಾಮ ಅಡವಿ ಹುಲಗಬಾಳ ಮತ್ತು ಮುದ್ದೇಬಿಹಾಳದ ಸಂಪರ್ಕದಿಂದ ವಂಚಿತರಾಗಿದ್ದಾರೆ.
ಗುರುವಾರ ಬೆಳಗ್ಗೆ ತಾಂಡಾದ ಜನರು ಅಡವಿ ಹುಲಗಬಾಳ ಮೂಲಕ ಮುದ್ದೇಬಿಹಾಳಕ್ಕೆ ಬರಲು ಅದೇ ರಸ್ತೆಯಲ್ಲಿ ಬಂದಾಗ ಸೇತುವೆ ಕೊಚ್ಚಿ ಹೋಗಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ತಾಂಡಾದ ಜನರು ಯಾವ ಕಡೆಯೂ ಹೋಗಲಾಗದೆ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ಸುಗಮ ಸಂಚಾರಕ್ಕೆ ತಾಂಡಾಕ್ಕೆ ಇದೊಂದೇ ಮಾರ್ಗವಾಗಿದೆ. ಇದು ಬಿಟ್ಟರೆ ಬೇರೆ ದಾರಿಯಿಲ್ಲ. ಹಾಗೊಂದು ವೇಳೆ ಸಂಪರ್ಕ ಸಾಧಿಸಬೇಕೆಂದರೆ ಸುತ್ತು ಬಳಸಿ ನಡೆದುಕೊಂಡೇ ಹೋಗಬೇಕಾದ ದುಸ್ಥಿತಿ ಇದೆ. ಹಳ್ಳಕ್ಕೆ ಕಟ್ಟಿರುವ ಈ ಸೇತುವೆ ಪೂರ್ಣ ಜೀರ್ಣಾವಸ್ಥೆಗೆ ತಲುಪಿತ್ತು. ಜಿಲ್ಲಾ ಪಂಚಾಯತಿ ಎಂಜಿನಿಯರಿಂಗ್ ಉಪ ವಿಭಾಗದಿಂದ ಇದರ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಪೂರ್ಣ ದುರಸ್ತಿ ಮಾಡುವುದಕ್ಕೂ ಮುನ್ನವೇ ಕೊಚ್ಚಿಹೋಗಿರುವುದು ಗ್ರಾಮಸ್ಥರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.
ಪರ್ಯಾಯ ಸಂಚಾರ ವ್ಯವಸ್ಥೆಗೆ ಚಿಂತನೆ
ಸೆ.28 ರಂದು ಸೇತುವೆಯ ಒಂದು ಪಿಲ್ಲರ್ ಕುಸಿದಿತ್ತು. ಇದು ಗಮನಕ್ಕೆ ಬಂದ ತಕ್ಷಣ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ವಿಷಯ ತಿಳಿಸಿ ಸೇತುವೆಯ ತುರ್ತು ಅವಶ್ಯಕತೆ ಮನವರಿಕೆ ಮಾಡಿಕೊಟ್ಟು ದುರಸ್ತಿಗೆ 10 ಲಕ್ಷದ ಅಂದಾಜು ಪಟ್ಟಿ ತಯಾರಿಸಲಾಗಿತ್ತು. 25 ಮೀಟರ್ ಎತ್ತರದ ಗೋಡೆ ಸಂಪೂರ್ಣ ಕೊಚ್ಚಿ ಹೋಗಿದ್ದು ತಕ್ಷಣಕ್ಕೆ ದುರಸ್ತಿ ಪಡಿಸುವುದು ಅಸಾಧ್ಯ ಎನ್ನಲಾಗಿದೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿರುವ ಪಂಚಾಯತ್ ರಾಜ್ ಉಪವಿಭಾಗದ ಕಿರಿಯ ಎಂಜಿನಿಯರ್ ಆರತಿ ಸ್ಥಳ ಸಮೀಕ್ಷೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದು ಪರ್ಯಾಯ ಸಂಚಾರ ವ್ಯವಸ್ಥೆಗೆ ಚಿಂತನೆ ನಡೆದಿದೆ.
ಸೇತುವೆ ಕುಸಿಯಲು ಜನಪ್ರತಿನಿಧಿಗಳ ಬೇಜವಾಬ್ದಾರಿ ಕಾರಣ
ಸೇತುವೆ ಇರುವ ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಪಕ್ಕದ ಹಳ್ಳಗಳಿಂದ ನೀರು ಬಂದು ಸೇರಿದ್ದರಿಂದ ರಭಸ ಹೆಚ್ಚಿಸಿಕೊಂಡು, ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಬಹಳ ವರ್ಷಗಳಿಂದ ಅಲ್ಲಲ್ಲಿ ಕುಸಿದು ಸಂಪೂರ್ಣ ಜೀರ್ಣಾವಸ್ಥೆಗಿಳಿದಿದ್ದ ಸೇತುವೆಯನ್ನು ಮಳೆಗಾಲಕ್ಕೂ ಮೊದಲೇ ದುರಸ್ತಿಪಡಿಸಿದ್ದರೆ ಇಂದು ಈ ದುಸ್ಥಿತಿ ಬರುತ್ತಿರಲಿಲ್ಲ. ಇದಕ್ಕೆಲ್ಲ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಉದಾಸೀನತೆಯೇ ಕಾರಣ ಎಂದು ತಾಂಡಾದ ನಿವಾಸಿಗಳು ಆಪಾದಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಡವಿ ಸೋಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ತಾಂಡಾದಲ್ಲಿ ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಬೆಳಗಿನ ಜಾವ 5 ಗಂಟೆಗೆ ಸೇತುವೆ ಕುಸಿದಿದ್ದು ತಾಂಡಾದ ನಿವಾಸಿಗಳಿಗೆ ಮಾತ್ರವಲ್ಲದೆ ಹೊಲಮನೆಗಳಿಗೆ ಹೋಗಿ ಬರುವುದೂ ತೊಂದರೆ ಆಗಿದೆ. ತಕ್ಷಣಕ್ಕೆ ಸಂಚಾರ ವ್ಯವಸ್ಥೆ ಪುನರ್ ಕಲ್ಪಿಸಲು ಅಧಿಕಾರಿಗಳು ತುರ್ತು ಕ್ರಮ ಕೈಕೊಳ್ಳಬೇಕು ಎಂದು ಪಂಚಾಯತಿ ಸದಸ್ಯ ಚನಬಸಪ್ಪ ಗುಡಗುಂಟಿ ಹಾಗೂ ಗ್ರಾಮಸ್ಥರಾದ ಪರಶುರಾಮ ವಡಿಗೇರಿ, ಶಿವಶಂಕರ ಗುಡಗುಂಟಿ, ಮಾರುತಿ ಬಿರಾದಾರ ಮತ್ತಿತರರು ಆಗ್ರಹಿಸಿದ್ದಾರೆ.
ಜಾತ್ರೆಗೆ ತೊಂದರೆ ಸಂಭವ:
ಅಡವಿ ಹುಲಗಬಾಳದ ಬೀರಪ್ಪ ದೇವರ ಬೆಟ್ಟದಲ್ಲಿ ದೀಪಾವಳಿಯಂದು ಸಿಡಿಯಾನ ದ್ಯಾಮವ್ವದೇವಿ ಮತ್ತು ಬೀರಪ್ಪ ದೇವರ ಜಾತ್ರೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಸಾವಿರಾರು ಭಕ್ತರು ಆ ಜಾತ್ರೆಗೆ ಹೋಗಿ ಬರಲು ಬಳಸುವುದು ಇದೇ ರಸ್ತೆ. ಈಗ ಸೇತುವೆ ಕೊಚ್ಚಿ ಹೋಗಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ದೀಪಾವಳಿಯೊಳಗೆ ಇದನ್ನು ಅಧಿಕಾರಿಗಳು ದುರಸ್ತಿಪಡಿಸಿ ಜಾತ್ರೆಗೆ ಜನ ಹೋಗಿ ಬರಲು ಅನುಕೂಲ ಮಾಡಿಕೊಡುವವರೇ ಎನ್ನುವ ಪ್ರಶ್ನೆ ಗ್ರಾಮಸ್ಥರನ್ನು ಕಾಡತೊಡಗಿದೆ.