Asianet Suvarna News Asianet Suvarna News

ಆಲಮೇಲದಲ್ಲಿ ಡೆಂಘೀ ಭೀತಿ: ಕಣ್ಮುಚ್ಚಿ ಕುಳಿತ ಪಪಂ

ಗಬ್ಬೆದ್ದು ಹೋಗಿದೆ ಆಲ​ಮೇಲ ಪಟ್ಟಣ| ವಿಪರೀತಗೊಂಡಿರುವ ಸೊಳ್ಳೆ​ಗಳ ಕಾಟ| ಇಬ್ಬ​ರಿಗೆ ಡೆಂಘೀ, ಉಲ್ಬಣಿಸುವ ಆತಂಕ| ನೂರಾರು ಜನಕ್ಕೆ ತೀವ್ರ ಜ್ವರ| ಯಾವುದೇ ಉಪಚಾರ ಮಾಡಿದರೂ ಜ್ವರ ಬರುವ ವೇಗ ಮಾತ್ರ ಕಡಿಮೆ ಆಗುತ್ತಿಲ್ಲ| ಕುಡಿ​ಯುವ ನೀರಿನಿಂದಲೂ ಸಹಿತ ಜ್ವರ ಬರುತ್ತಿವೆ| ನೀರಿನ ನಲ್ಲಿಗಳು ಚರಂಡಿಯಲ್ಲಿವೆ|

Dengue Fever Spectre in Alamela Town in Vijayapura District
Author
Bengaluru, First Published Oct 18, 2019, 2:52 PM IST

ಆಲಮೇಲ(ಅ.18): ಪಟ್ಟಣದ ಎಲ್ಲ (19) ವಾರ್ಡ್‌ಗಳಲ್ಲೂ ಚರಂಡಿಗಳು ಗಲೀಜು ನೀರಿನಿಂದ ತುಂಬಿ ತುಳು​ಕು​ತ್ತಿದ್ದು, ಸೊಳ್ಳೆಗಳ ಕಾಟ ಮಿತಿ​ಮೀ​ರಿದೆ. ಈ ಸೊಳ್ಳೆ​ಗಳ ಕಚ್ಚು​ವಿ​ಕೆ​ಯಿಂದ ನಿವಾ​ಸಿ​ಗಳು ತೀವ್ರ​ ಜ್ವ​ರ​ದಿಂದ ಬಳ​ಲು​ತ್ತಿ​ದ್ದಾರೆ. ಡೆಂಘೀ ಜ್ವರದ ಭೀತಿ​ಯಲ್ಲಿ ದಿನ ನೂಕು​ತ್ತಿ​ದ್ದಾರೆ.

ಪಟ್ಟಣದಲ್ಲಿ ಈಗಾಗಲೇ ಎರಡು ಪ್ರಕರಣಗಳು ಡೆಂಘೀ ಎಂದು ಸಾಬೀತವಾಗಿವೆ. ಇದರಿಂದ ಇನ್ನು​ಳಿದ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಪ್ರತಿದಿನವೂ ಪಟ್ಟ​ಣದ ಜನರು ಜ್ವರದಿಂದಾಗಿ ಆಸ್ಪ​ತ್ರೆಗೆ ಹೋಗು​ವಂತಾ​ಗಿದೆ. ಪಟ್ಟ​ಣದ ಮಕ್ಕಳ ಆಸ್ಪತ್ರೆ​ಗೆ ವಿವಿಧ ಕಾರ​ಣ​ಗ​ಳಿಂದ ಚಿಕಿ​ತ್ಸೆಗೆ ಹೋಗುವ 400ಕ್ಕೂ ಹೆಚ್ಚು ಮಕ್ಕಳಲ್ಲಿ 280 ಮಕ್ಕಳಿಗೆ ಜ್ವರವೇ ಕಂಡು ಬರುತ್ತಿದೆ. ಯಾವುದೇ ಉಪಚಾರ ಮಾಡಿದರೂ ಜ್ವರ ಬರುವ ವೇಗ ಮಾತ್ರ ಕಡಿಮೆ ಆಗುತ್ತಿಲ್ಲ ಎಂದು ಪಾಲ​ಕರು ಹೇಳು​ತ್ತಾರೆ.

ಪಪಂ ಕ್ರಮಕೈಗೊ​ಳ್ಳ​ಲಿ:

ಪಟ್ಟ​ಣದ ಪ್ರತಿಯೊಂದು ವಾರ್ಡ್‌​ಗ​ಳಲ್ಲಿ ಚರಂಡಿ​ಗಳಲ್ಲಿನ ಗಲೀಜಿನಿಂದಾಗಿ ಸೊಳ್ಳೆ​ಗಳು ವಿಪ​ರೀ​ತ​ವಾ​ಗಿದ್ದು, ಇವು​ಗಳ ನಿಯಂತ್ರ​ಣಕ್ಕೆ ಪಪಂ ಅಧಿ​ಕಾ​ರಿ​ಗಳು ಕ್ರಮ ಕೈಗೊ​ಳ್ಳ​ಬೇ​ಕಾ​ಗಿದೆ. ಅಲ್ಲದೆ ನಿವಾ​ಸಿ​ಗ​ಳಿಗೆ ಶುದ್ಧ​ವಾದ ನೀರು ಪೂರೈ​ಸಲು ಕ್ರಮ ಕೈಗೊ​ಳ್ಳ​ಬೇ​ಕಾ​ಗಿದೆ. ಪಟ್ಟ​ಣದಲ್ಲಿ ಅಲ್ಲಲ್ಲಿ ತೆಗ್ಗಿನಲ್ಲಿ ನೀರು ನಿಲ್ಲ​ದಂತೆಯೂ ನೋಡಿ​ಕೊ​ಳ್ಳುವ ಹೊಣೆ​ಗಾ​ರಿ​ಕೆ​ಯನ್ನು ಪಪಂ ನಿರ್ವ​ಹಿ​ಸ​ಬೇ​ಕಾ​ಗಿದೆ.

ಆಲ​ಮೇಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತಿದಿನ 500 ಕ್ಕೂ ಹೆಚ್ಚು ರೋಗಿಗಳು ವಿವಿಧ ಕಾರ​ಣ​ವಾಗಿ ಚಿಕಿತ್ಸೆಗೆ ಬರು​ತ್ತಿ​ರು​ತ್ತಾರೆ. ಆದರೆ ವೈದ್ಯರು ಮಾತ್ರ ಒಬ್ಬರೇ ಇದ್ದಾರೆ. ಇವ​ರಿಂದ ಅಷ್ಟೂ ಜನ​ರಿಗೆ ಗುಣ​ಮ​ಟ್ಟದ ಚಿಕಿತ್ಸೆ ನೀಡು​ವುದು ಅಸಾ​ಧ್ಯ. ಆದ್ದ​ರಿಂದ ಆಸ್ಪ​ತ್ರೆಗೆ ಅವ​ಶ್ಯ​ವಿ​ರುವ ವೈದ್ಯ​ರನ್ನು ನೇಮಿ​ಸಲು ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೆ ವೈದ್ಯರಿಗೆ ಸಹಾ​ಯ​ಕ​ರಾಗ​ಬೇ​ಕಾದ ಸಿಬ್ಬಂದಿ ಕೂಡ ಇಲ್ಲ. ಹೀಗಾಗಿ ಎಲ್ಲ ಹೊಣೆ ಒಬ್ಬರ ಮೇಲೆ ಬೀಳು​ತ್ತಿದೆ. ಆದ್ದ​ರಿಂದ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು ಎಂದು ಆಲ​ಮೇಲ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಅಶೋಕ ಕೋಲಾರಿ ಆಗ್ರಹಿಸಿದ್ದಾರೆ.

ಉಗ್ರ ಹೋರಾ​ಟದ ಎಚ್ಚ​ರಿ​ಕೆ:

ಆಲ​ಮೇಲ ಪಟ್ಟಣದಲ್ಲಿ ಒಟ್ಟು 14ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿವೆ. ಒಂದು ಚಿಕ್ಕಮಕ್ಕಳ ಆಸ್ಪತ್ರೆ ಇದೆ. ಅಲ್ಲಿಯೂ ಪ್ರತಿದಿನ ನೂರಾರು ರೋಗಿಗಳು ಬರುತ್ತಿದ್ದು ಅವರಲ್ಲಿ ಹೆಚ್ಚು ಜನ ಜ್ವರದಿಂದ ಬಳಲುತ್ತಿದ್ದಾರೆ. ಎರಡು ತಿಂಗಳಿಂದ ರೋಗಿಗಳ ಸಂಖ್ಯೆ ಹೆಚ್ಚಿದ್ದು ಜನರು ಆತಂಕಗೊಂಡಿ​ದ್ದಾರೆ. ಪಪಂಗೆ ಅಧ್ಯಕ್ಷ, ಉಪಾಧ್ಯಕ್ಷರು ಇಲ್ಲದ್ದರಿಂದ ನಾವು ನಮ್ಮ ಸಮಸ್ಯೆ ಹೇಳಲು ಸಾಧ್ಯವಾಗುತ್ತಿಲ್ಲ. ಒಂದು ಸಭೆಯೂ ನಡೆದಿಲ್ಲ. ಮುಖ್ಯಾಧಿ​ಕಾ​ರಿ​ಗಳೂ ಸರಿಯಾಗಿ ಕಚೇರಿಗೆ ಬರು​ತ್ತಿಲ್ಲ. ಆದ್ದರಿಂದ ಪಟ್ಟಣದಲ್ಲಿ ಆರೋಗ್ಯ ವಾತಾವರಣ ಹದಗೆಟ್ಟಿದೆ. ಕುಡಿ​ಯುವ ನೀರಿನಿಂದಲೂ ಸಹಿತ ಜ್ವರ ಬರುತ್ತಿವೆ. ನೀರಿನ ನಲ್ಲಿಗಳು ಚರಂಡಿಯಲ್ಲಿವೆ. ಕೂಡಲೇ ಅಧಿಕಾರಿಗಳು ಜನರ ಆರೋಗ್ಯ ದೃಷ್ಟಿಯಿಂದ ಸ್ವಚ್ಛಪ​ಡಿಸಿ ಶುದ್ಧವಾದ ವಾತಾವರಣ ನಿರ್ಮಿಸ​ಬೇಕು. ಇಲ್ಲದಿದ್ದರೆ ವಿವಿಧ ಸಂಘಟನೆಗಳ ಒಕ್ಕೂಟದಿಂದ ಉಗ್ರವಾದ ಹೋರಾಟ ಮಾಡಬೇ​ಕಾ​ಗು​ತ್ತದೆ ಎಂದು ವಿವಿಧ ಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾತನಾಡಿದ ಆಲಮೇಲದ ವೈದ್ಯಾಧಿಕಾರಿ ಪ್ರಶಾಂತ ದೂಮಗೊಂಡ ಅವರು, ಪ್ರತಿ ದಿನ ಸರ್ಕಾರಿ ಆಸ್ಪತ್ರೆಗೆ 500 ಕ್ಕೂ ಹೆಚ್ಚು ರೋಗಿಗಳು ಬರುತ್ತಿದ್ದಾರೆ. ಇಲ್ಲಿ ಸಿಬ್ಬಂದಿ ಕೊರತೆ ಇದೆ. ವೈದ್ಯರ ಕೊರ​ತೆಯೂ ಇದೆ. ಇಲ್ಲಿ ಪರೀಕ್ಷೆ ಮಾಡಿಸಿಕೊಂಡ ರೋಗಿಗಳಲ್ಲಿ ಇಬ್ಬರಿಗೆ ಡೆಂಘೀ ಇದೆ ಎಂಬುದು ಖಚಿತವಾಗಿದೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟ​ಣ​ದ​ಲ್ಲಿನ ಸ್ವಚ್ಛ​ತೆ ಬಗ್ಗೆ ಪಪಂಗೆ ಹಲವಾರು ಬಾರಿ ಮನವಿ ನೀಡಿದ್ದೇನೆ ಎಂದು ಹೇಳಿದ್ದಾರೆ. 

ಈ ಬಗ್ಗೆ ಮಾಹಿತಿ ನೀಡಿದ ಆಲಮೇಲ ಪಪಂ ಮುಖ್ಯಾಧಿಕಾರಿ ಸುನೀಲ್‌ ಸಾಂಬೋಜಿ ಅವರು, ಆಲ​ಮೇಲ ಪಟ್ಟಣದಲ್ಲಿರುವ ಎಲ್ಲ ವಾರ್ಡಗಳಿಗೆ ಖುದ್ದಾಗಿ ಭೇಟಿ ನೀಡಿ ಸ್ಪಚ್ಛತೆ ಮಾಡಲು ಹೇಳುತ್ತೇನೆ. ಶುದ್ಧ ನೀರು ಪೂರೈ​ಸಲು ಸಿಬ್ಬಂದಿಗೆ ಸೂಚಿ​ಸ​ಲಾ​ಗು​ವುದು. ಚರಂಡಿ ಹಾಗೂ ಇತರೆಡೆ ಸಂಗ್ರಹವಾದ ನೀರಲ್ಲಿ ಮತ್ತು ಕೊಳಚೆ ಪ್ರದೇಶದಲ್ಲಿ ಸೊಳ್ಳೆ ನಾಶಕ ಔಷಧಿ ಸಿಂಪಡಿ​ಸುವ ಕೆಲಸ ಮಾಡ​ಲಾ​ಗು​ವುದು ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios