ವಿಜಯಪುರ[ನ.2]: ಕಾಂಗ್ರೆಸ್, ಕಮ್ಯುನಿಸ್ಟರು ದೇಶದ ಇತಿಹಾಸ ತಿರುಚಿದ್ದಾರೆ. ಅದನ್ನು ಸರಿಪಡಿಸಲು ಪಠ್ಯಕ್ರಮದಿಂದ ಟಿಪ್ಪು ಕೈ ಬಿಡಲು ಸರ್ಕಾರ ಮುಂದಾಗಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಟಿಪ್ಪು ಅನೇಕ ಸಮುದಾಯಗಳ ಮೇಲೆ ದೌರ್ಜನ್ಯ ಎಸಗಿದ್ದಾರೆ. ಅವರ ಹೆಸರು ಪಠ್ಯದಿಂದ ಕೈ ಬಿಡುವುದು ನಾಡಿನ ಘನತೆಯನ್ನು ಹೆಚ್ಚಿಸಿದಂತಾಗುತ್ತದೆ. ಇತಿಹಾಸದಲ್ಲಿ ಮಹಾರಾಣಾ ಪ್ರತಾಪ, ಪೃಥ್ವಿರಾಜ ಚವ್ಹಾಣ ಅವರು ದೇಶಕ್ಕೆ ಕೊಡುಗೆ ನೀಡಿದ್ದಾರೆ. ಇವರಿಬ್ಬರ ಹೆಸರನ್ನು ಪಠ್ಯದಲ್ಲಿ ಸೇರಿಸುವುದು ಸೂಕ್ತ ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿ ಮಾತ್ರ ಪಾಲ್ಗೊಂಡಿಲ್ಲ. ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಬಗ್ಗೆ ಅಂಬೇಡ್ಕರ ಅವರೇ ಹೇಳಿದ್ದಾರೆ. ಅಂಬೇಡ್ಕರ ವಿಚಾರಧಾರೆಗಳನ್ನು ದೇಶದ ಜನರ ಮುಂದಿಡುವುದು ಅಗತ್ಯವಾಗಿದೆ. ನೆಹರೂ ಮನೆತನಕ್ಕೆ ದೇಶದಲ್ಲಿ ಇದುವರೆಗೆ ನೀಡಿದ ಗೌರವವೇ ಸಾಕು. ಅಷ್ಟೊಂದು ಗೌರವ ನೀಡುವುದು ಅನಗತ್ಯ. ಸ್ವಾತಂತ್ರ್ಯ ಹೋರಾಟದಲ್ಲಿ ಶ್ರಮಿಸಿದ ಸುಭಾಶ್ಚಂದ್ರ ಬೋಸ್ ಅವರಿಗೂ ಗೌರವ ಸಿಗುವಂತಾಗಬೇಕು ಎಂದು ಹೇಳಿದರು.

ಸಿದ್ದರಾಮಯ್ಯ ಇತಿಹಾಸ ತಿಳಿಯಲಿ: 

ಮಾಜಿ ಸಿಎಂಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಅರ್ಧ ಇತಿಹಾಸ ತಿಳಿದುಕೊಂಡು ಮಾತನಾಡಬಾರದು. ಸ್ವಾತಂತ್ರ್ಯ ಹೋರಾಟಗಾರರು ಯಾವುದೇ ಪಕ್ಷದವರಿರಲಿ. ಅವರಿಗೆ ಗೌರವ ನೀಡಬೇಕು ಎಂದರು. ಸಿದ್ದರಾಮಯ್ಯ ಪಾದಯಾತ್ರೆ ಕುರಿತು ಮಾತನಾ ಡಿದ ಶಾಸಕ ಯತ್ನಾಳ, ಹೋರಾಟ ಮಾಡುವುದು ಅವರ ವಿವೇಚನೆಗೆ ಬಿಟ್ಟ ವಿಚಾರ. ಸಿದ್ದರಾಮಯ್ಯ ಪಾದಯಾತ್ರೆ ಬಳಿಕ ನನಗೆ ಪಕ್ಷ ಅವಕಾಶ ನೀಡಿದರೆ ನಾನು ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡುತ್ತೇನೆ. ಇಲ್ಲದಿದ್ದರೆ, ಮೂರು ಜನ ಡಿಸಿಎಂ ಹೋಗಿ ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲಿ ಎಂದು ಹೇಳಿದರು. 

ಮಹಾರಾಷ್ಟ್ರ ಹಾಗೂ ಹರಿಯಾಣ ಚುನಾವಣೆ ಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಎರಡೂ ರಾಜ್ಯ ಗಳ ಚುನಾವಣೆ ಬಿಜೆಪಿಗೆ ಪಾಠವಾಗಿದೆ. ಸ್ಥಳೀಯ ನಾಯಕರಿಗೆ ಹೈಕಮಾಂಡ್‌ ಇನ್ನು ಮೇಲೆ ಆದ್ಯತೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 17 ಜನ ಅನರ್ಹ ಶಾಸಕರು ರಾಜೀನಾಮೆ ನೀಡಿದ ಪರಿಣಾಮವಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಮೂವರು ಡಿಸಿಎಂ ಆಗಿದ್ದಾರೆ. ಅನರ್ಹಶಾಸಕರು ಬಿಜೆಪಿಗೆ ಬಂದರೆ ಅವರಿಗೆ ಟಿಕೆಟ್‌ ನೀಡಲೇಬೇಕು ಎಂದು ಒತ್ತಾಯಿಸಿದರು.

ದೇಶಕ್ಕೆ ಮೋದಿ, ಅಮಿತ್ ಶಾ ಬೇಕು. ಮೂರು, ನಾಲ್ಕನೇ ಸ್ಥಾನದಲ್ಲಿ ಸೋತವರು ಕ್ಯಾಂಪೇನ್‌ ಮಾಡಿದರೆ ಸೋಲು ಖಚಿತ. ಮಹಾರಾಷ್ಟ್ರದ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆಯಲಿಲ್ಲ. ಪಕ್ಷ ನನ್ನನ್ನು ಪ್ರಚಾರಕ್ಕೆ ಕರೆಯುತ್ತಿತ್ತು ಎಂದು ಕೊಂಡಿದ್ದೆ.ಆದರೆ, ನನಗೆ ಕರೆಯಲಿಲ್ಲ. ಹಾಗಾಗಿ ನನ್ನದೇನೂ ಕೆಲಸ ಇಲ್ಲ ಎಂದುಕೊಂಡು ಸುಮ್ಮನಾದೆ. ಜತೆಗೆ ನಮ್ಮಲ್ಲಿಂದ ಅಲ್ಲಿಗೆ ದೊಡ್ಡ ದೊಡ್ಡವರು ಪ್ರಚಾರಕ್ಕೆ ಹೋಗಿದ್ದರು. ಆದರೆ, ಇವರು ಹೋದ ಕಡೆಯೆಲ್ಲಅಭ್ಯರ್ಥಿಗಳು ಸೋತರು. ಸಂಪೂರ್ಣ ಮೆಜಾರಿಟಿ ಬರುತ್ತದೆ ಎಂದುಕೊಂಡು ಪ್ರಚಾರ ನಡೆಸಿದ್ದರು. ಆದರೆ, ಅಲ್ಲಿ ಆಗಿದ್ದೇ ಬೇರೆ ಎಂದರು.  

ಪಕ್ಷ ನೋಟಿಸ್ ನೀಡಿದ ಕುರಿತು ಪ್ರಸ್ತಾಪಿಸಿದ ಅವರು, ಉಚ್ಚಾಟನೆ ಮಾಡುವುದು ಜನರ ಕೈಯಲ್ಲಿದೆ. ಬೇರೆಯಾರ ಕೈಯಲ್ಲಿಯೂ ಇಲ್ಲ. ನಾನು ಪಕ್ಷಕ್ಕೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಮಾತನಾಡಿದ್ದೇನೆ ಎಂದರು. ವಿಜಯಪುರದಲ್ಲಿ ವೈದ್ಯಕೀಯ ಕಾಲೇಜಿಗೆ ಬೇಡಿಕೆ ಇಟ್ಟಿದ್ದೇನೆ. ಬರುವ ಮಾರ್ಚ್ ಬಜೆಟ್‌ನಲ್ಲಿ ಬರುವ ವಿಶ್ವಾಸವಿದೆ. ವಿಜಯಪುರ ನಗರದ ಎಲ್ಲ ರಸ್ತೆಗಳು ಸಿಮೆಂಟ್‌ನ ಸುಸಜ್ಜಿತ ಮಾರ್ಗಗಳಾಗಲಿವೆ. ಇನ್ನೊಂದು ವರ್ಷದಲ್ಲಿ ವಿಜಯಪುರ ಹೈಟೆಕ್ ಸಿಟಿಯಾಗಲಿದೆ ಎಂದು ಯತ್ನಾಳ ಹೇಳಿದರು.

ಮಧ್ಯಸ್ಥಿಕೆಯಿಲ್ಲದೆ ಯೋಜನೆ ಪ್ರಯೋಜನ ಪಡೆಯಿರಿ 

ನಗರದ ಶಾಪೇಟಿ ರಸ್ತೆಯಲಿರುವ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಆವರಣದಲ್ಲಿ ಶಾಸಕರ ಅನುದಾನದಡಿ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ಹಾಗೂ ವಾರ್ಡ್‌ನಂ. 35 ರ ಬಾಬು ಜಗಜೀವನರಾಮ ಕಾಲನಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ನಗರ ಶಾಸಕ ಬಸನಗೌಡ ಪಾಟೀಲಯ ತ್ನಾಳ ಶುಕ್ರವಾರ ನೆರವೇರಿಸಿದರು.

ನಂತರ ಮಾತನಾಡಿ, ನಗರದಲ್ಲಿ 24/7 ಕುಡಿಯುವ ನೀರಿನ ಪೂರೈಕೆ ಯೋಜನೆಯಡಿ ಡಿಸೆಂಬರ್ ಅಂತ್ಯದೊಳಗೆ ನೀರು ಪೂರೈಸಲಾಗುವುದು. ನಗರದಲ್ಲಿ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪುರಾತನ ಬಾವಿಗಳಿದ್ದು, ಅವುಗಳನ್ನು ಸ್ವಚ್ಛಗೊಳಿಸಿ ದಿನಬಳಕೆಗೆ ಅವಶ್ಯವಿರುವ ನೀರಿನ ಪೂರೈಕೆ ಮಾಡಲಾಗುತ್ತದೆ. ಈಗಾಗಲೇ ಹಲವು ಪುರಾತನ ಬಾವಿಗಳನ್ನು ಸ್ವಚ್ಛಗೊಳಿಸಿ, ಸುತ್ತಲೂ ಕಾಂಪೌಂಡ್ ನಿರ್ಮಿಸಿ, ಮೇಲೆ ಜಾಳಗಿ ಹಾಕಿಸಲಾಗಿದೆ. ಸಾರ್ವಜನಿಕರು ಸಹ ಅವುಗಳನ್ನೆಲ್ಲ ಸ್ವಚ್ಛವಾಗಿಟ್ಟುಕೊಂಡು ಬಳಸಿಕೊಳ್ಳುವ ಅವಶ್ಯವಿದೆ ಎಂದರು.

ನಗರದಲ್ಲಿ ಮನೆ ರಹಿತ ಕುಟುಂಬ, ಪತ್ರಾಸ್‌ ಮನೆಗಳಲ್ಲಿ ವಾಸವಿದ್ದವರು, ಗುಂಟಾ ಹೊಂದಿದವರು, ಯಾವುದೇ ರೀತಿಯ ಜಾಗ ಇಲ್ಲದವರೂ ಕೂಡ ಮನೆಗಳಿಗಾಗಿ ವಿವಿಧ ಯೋಜನೆಗಳಲ್ಲಿಅರ್ಜಿ ಸಲ್ಲಿಸಿ ಮನೆಗಳನ್ನು ಪಡೆದುಕೊಳ್ಳಬಹುದಾಗಿದೆ. ಯಾವುದೇ ವ್ಯಕ್ತಿಯ ಮಧ್ಯಸ್ಥಿಕೆ ಇಲ್ಲದೆನನ್ನ ಕಚೇರಿಗೆ ನೇರವಾಗಿ ಭೆಟಿ ನೀಡಿ ಅರ್ಜಿಸಲ್ಲಿಸಬೇಕು ಎಂದರು. 

ವಾಜಪೇಯಿ ಆವಾಸ್ ಯೋಜನೆಯಡಿ ಮನೆರಹಿತ ಕುಟುಂಬಗಳಿಗೆ ಎಸ್‌ಸಿ, ಎಸ್‌ಟಿ 1.20  ಲಕ್ಷ, ಸಾಮಾನ್ಯ ವರ್ಗದವರಿಗೆ 1.80 ಲಕ್ಷಗಳಲ್ಲಿ ಮನೆ ನೀಡಲಾಗುವುದು. ಸ್ವಂತ ಜಾಗ ಹೊಂದಿರುವವರಿಗೆ ಕಟ್ಟಡ ನಿರ್ಮಿಸಲು ಹಣಕಾಸಿನ ನೆರವು ಕಲ್ಪಿಸಲಾಗುತ್ತಿದೆ. ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಹಲವಾರು ಜನೋಪಯೋಗಿ ಕಾರ್ಯಕ್ಕೆ ಸಾರ್ವಜನಿಕರು ನೇರವಾಗಿ ಕಚೇರಿಗೆ ಭೇಟಿ ನೀಡಿ, ಸೂಕ್ತ ದಾಖಲೆ ಒದಗಿಸಿದರೆ ಅವರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು. ರಾಜೇಶ ದೇವಗಿರಿ,ಪ್ರೇಮಾನಂದ ಬಿರಾದಾರ, ಉಮೇಶ ವಂದಾಲ,ಸಂಗೀತಾ ಪೋಳ, ವಿಕ್ರಮ್ ಗಾಯಕವಾಡ,ಮಹಾದೇವ ಶಿರನಾಳ, ತಿಪ್ಪಣ್ಣ ಶಹಾಪೂರ,ಅಶೋಕ ಬೆಲ್ಲದ ಅನೇಕರಿದ್ದರು.