ಜ.24ಕ್ಕೆ ಸಾರಿಗೆ ನೌಕರರ ಮುಷ್ಕರ: ರಾಜ್ಯಾದ್ಯಂತ ಬಸ್ ಸಂಚಾರ ವ್ಯತ್ಯಯ?

6 ವರ್ಷ ಕಳೆದರೂ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮಾಡದ ಸರ್ಕಾರದ ವಿರುದ್ಧ ಮತ್ತೆ ಬೀದಿಗಿಳಿದು ಪ್ರತಿಭಟಿಸಲು ಸಾರಿಗೆ ನೌಕರರು ಮುಂದಾಗಿದ್ದಾರೆ.  ಜ. 24ರಂದು ಸಾರಿಗೆ ನೌಕರರಿಂದ ಸರ್ಕಾರದ ಗಮನ ಸೆಳೆಯಲು ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ರಾಜ್ಯಾದ್ಯಂತ ಬಸ್ ಸಂಚಾರ ವ್ಯತ್ಯಯವಾಗುವ ಸಾಧ್ಯತೆ ಇದೆ.

First Published Jan 22, 2023, 12:59 PM IST | Last Updated Jan 22, 2023, 12:59 PM IST

ಬೆಂಗಳೂರು (ಜ.22): ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮತ್ತೆ ಸಿಡಿದೆದ್ದಿದ್ದು ಬೀದಿಗಿಳಿದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಸಾರಿಗೆ ನೌಕರರ ವೇತನ ಹೆಚ್ಚಳ ವಿವಿಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾದ ಹಿನ್ನೆಲೆ ಸರ್ಕಾರದ ಧೋರಣೆ ಖಂಡಿಸಿ  ಜನವರಿ 24 ರಂದು ರಾಜ್ಯ ಸಾರಿಗೆ ನೌಕರರ ಮುಖಂಡ ಅನಂತಸುಬ್ಬರಾವ್ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದಾರೆ. ಕಳೆದ ವರ್ಷ ಹಲವಾರು ತಿಂಗಳ ನಿರಂತರ ಹೋರಾಟ ನಡೆಸಿದ್ದ ಸಾರಿಗೆ ನೌಕರರು. ನೌಕರರ ಪ್ರತಿಭಟನೆಯಿಂದ ಸಾರ್ವಜನಿಕರು ತೀವ್ರ ತೊಂದರೆಗೆ ಸಿಲುಕಿದ್ದರು. ಇದೀಗ ಮತ್ತೆ ಪ್ರತಿಭಟನೆ ನಡೆಸಲು ಮುಂದಾಗಿರುವುದು ಸರ್ಕಾರಿ ಸಾರಿಗೆಯನ್ನೇ ಅವಲಂಬಿಸಿರುವ ಪ್ರಯಾಣಿಕರನ್ನು ಚಿಂತೆಗೀಡುಮಾಡಿದೆ.

6 ವರ್ಷಗಳಿಂದ ವೇತನ ಹೆಚ್ಚಳ ಮಾಡದ ಸರ್ಕಾರ:  ಕಳೆದ  6 ವರ್ಷಗಳಿಂದ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮಾಡಿಲ್ಲ. ಈ ಹಿಂದೆ ಸರ್ಕಾರ ನೀಡಿದ್ದ ಭರವಸೆ ಹುಸಿಯಾಗಿದೆ. ಯಾವೊಂದು ಬೇಡಿಕೆಯನ್ನು ಈಡೇರಿಸಲು ಮುಂದಾಗಿಲ್ಲ. ಹೀಗಾಗಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.  ಮಂಗಳವಾರ ನಾಲ್ಕು ನಿಗಮದ ವಿಭಾಗೀಯ ಕಚೇರಿ ಮುಂದೆ ಧರಣಿ ಹಾಗೂ ಬಿಎಂಟಿಸಿ ನೌಕರರಿಂದ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಯಲಿದ್ದು, ಕಳೆದ ವರ್ಷದ ಸಾರಿಗೆ ನೌಕರರ ಸುದೀರ್ಘ ಹೋರಾಟ ಮತ್ತೆ ಮರುಕಳಿಸಲಿದೆ.