Asianet Suvarna News Asianet Suvarna News

ಮೀಸಲಾತಿ: ಪಂಚಮಸಾಲಿ ನಾಯಕರಲ್ಲೇ ಭಿನ್ನಮತ!

ಪಂಚಮಸಾಲಿ ಸಮಾಜಕ್ಕೆ 2ಡಿ ಮೀಸಲಾತಿಯನ್ನು ನೀಡಿದ್ದರೂ ಈ ಬಗ್ಗೆ ಸ್ವತಃ ಸಮುದಾಯದ ನಾಯಕರಲ್ಲೇ ಪರ ವಿರೋಧ ಕಂಡುಬರುತ್ತಿದೆ. ಇನ್ನು ಸಮುದಾಯದ ಮೀಸಲಾತಿಗೆ ರಾಜಕೀಯ ಬಣ್ಣ ಬಳಿಯಲು ಮುಂದಾಗಿದ್ದಾರೆ.

ಬೆಂಗಳೂರು/ ಬೆಳಗಾವಿ (ಏ.03): ರಾಜ್ಯದಲ್ಲಿ ಪಂಚಮಸಾಲಿ ಸಮಾಜಕ್ಕೆ 2ಡಿ ಮೀಸಲಾತಿಯನ್ನು ನೀಡಿದ್ದರೂ ಈ ಬಗ್ಗೆ ಸ್ವತಃ ಸಮುದಾಯದ ನಾಯಕರಲ್ಲೇ ಪರ ವಿರೋಧ ಕಂಡುಬರುತ್ತಿದೆ. ಇನ್ನು ಸಮುದಾಯದ ಮೀಸಲಾತಿಗೆ ರಾಜಕೀಯ ಬಣ್ಣ ಬಳಿಯಲು ಮುಂದಾಗಿದ್ದಾರೆ.

ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದ ಕಾರ್ಯಕಾರಣಿ ಸಭೆಯನ್ನು ಮಾಡಿದ ಪಂಚಮಸಾಲಿ ಮುಖಂಡರು ಮಾ. 27 ರಂದು ಸರ್ಕಾರದ ಸುತ್ತೋಲೆ ಬಗ್ಗೆ ಚರ್ಚೆ ಮಾಡಿದರು. ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಮಾಜಿ ಸಚಿವ ವಿನಯ್ ಕುಲಕರ್ಣಿ, ಮಾಜಿ ಶಾಸಕ ಎ.ಬಿ. ಪಾಟೀಲ ನೃತೃತ್ವದಲ್ಲಿ ಸಭೆ ನಡೆಸಲಾಯಿತು. ಈ ವೇಳೆ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಯಾವುದೇ ಕಾರಣಕ್ಕೂ ಸರ್ಕಾರದ ಆದೇಶವನ್ನು ಒಪ್ಪೋದಿಲ್ಲ. ಚುನಾವಣೆ ಸಂದರ್ಭದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಇದನ್ನು ನಾವೆಲ್ಲರೂ ಖಂಡಿಸಬೇಕು. ಮುಂದೆ ಸರ್ಕಾರ ಬದಲಾದಾಗ ನಮಗೆ ನ್ಯಾಯ ಸಿಗುತ್ತದೆ ಎಂದು ಹೇಳಿದರು.

ಕಾಂಗ್ರೆಸ್ಸಿಗರಿಂದ ಜಯ ಮೃತ್ಯುಂಜಯ ಸ್ವಾಮೀಜಿಗೆ ಬೆದರಿಕೆ: ಭದ್ರತೆ ಕೊಡಲು ಸಿಎಂ ಆದೇಶ

ಮೀಸಲಾತಿ ಬೇಡವೆನ್ನುವುದರ ಹಿಂದಿದೆ ರಾಜಕೀಯ ಉದ್ದೇಶ: ಇನ್ನು ಸಚಿವ ಸಿ.ಸಿ. ಪಾಟೀಲ್‌ ಅವರು ಮಾತನಾಡಿ, ಬಿಜೆಪಿ ಸರ್ಕಾರ ಕೊಟ್ಟಿರುವ ಮೀಸಲಾತಿಯನ್ನು ನೀವು ಯಾಕೆ ಒಪ್ಪಿಕೊಂಡಿದ್ದೀರಿ ಎಂದು ಕಾಂಗ್ರೆಸ್‌ ನಾಯಕರು ಸ್ವಾಮೀಜಿಗೆ ಕಿರುಕುಳ ನೀಡುತ್ತಿದ್ದಾರೆ. ಇನ್ನು ಬಿಜೆಪಿ ಮೀಸಲಾತಿ ನೀಡಲಿಲ್ಲ ಅಂದರೆ ಅದನ್ನೆ ಅಸ್ತ್ರ ಮಾಡಿಕೊಳ್ಳಲು ರೆಡಿಯಾಗಿದ್ದರು. ಇದು ವಿಜಯಾನಂದ ಕಾಶ್ಯಪ್ಪನವರು ಮತ್ತು ವಿನಯ್ ಕುಲರ್ಕಣಿಯವರ ನಡವಳಿಕೆಯಿಂದ ಗೊತ್ತಾಗುತ್ತದೆ. ಇದೀಗ ಈ ಮೀಸಲಾತಿ ಬೇಡ ಅಂತ ಅವರು ಹೇಳ್ತಿರೋದು ನೋಡಿದರೆ ಅವರ ರಾಜಕೀಯ ಉದ್ದೇಶವನ್ನ ತೋರಿಸುತ್ತದೆ ಎಂದು ಹೇಳಿದರು.