Asianet Suvarna News Asianet Suvarna News

ನಾ- ನಾಯಕಿ ಕಾರ್ಯಕ್ರಮದಲ್ಲಿ ಅವಮಾನ: ಕಾಂಗ್ರೆಸ್‌ ನಾಯಕರ ವಿರುದ್ಧ ನಫೀಸ್ ಫಜಲ್ ಕಿಡಿ

ನಾ- ನಾಯಕಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಾಜಿ ಸಚಿವೆಗೆ ಅವಮಾನ
ಕಾಂಗ್ರೆಸ್ ಪಕ್ಷದಲ್ಲಿ 40 ವರ್ಷಗಳ ಕಾಲ ದುಡಿದಿದ್ದ ನಫೀಸ್ ಫಜಲ್ ಗೆ ಅವಮಾನ
ಮಹಿಳೆಯರ ಕಾರ್ಯಕ್ರಮ ಆಯೋಜಕರ ವಿರುದ್ಧ ಮಾಜಿ ಸಚಿವೆ ನಫೀಸ್ ಫಜಲ್ ಆಕ್ರೋಶ

ಬೆಂಗಳೂರು (ಜ.22): ಮಹಿಳೆಯರಿಗಾಗಿಯೇ ನಾ- ನಾಯಕಿ ಕಾರ್ಯಕ್ರಮವನ್ನ ಕಾಂಗ್ರೆಸ್ ಆಯೋಜನೆ ಮಾಡಲಾಗಿತ್ತು. ಆದರೆ, 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದ ನನ್ನನ್ನು ವೇದಿಕೆ ಮೇಲೆ ಹತ್ತಲೂ ಬಿಡದೇ ಅವಮಾನ ಮಾಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಮುಸ್ಲಿಂ ಮಹಿಳೆಯರಿಗೆ ಹೆಚ್ಚು ಒಳಿತನ್ನು ಮಾಡಿದ್ದಾರೆ ಎಂದು ಮಾಜಿ ಸಚಿವೆ ನಫೀಸ್ ಫಜಲ್ ಹೇಳಿದ್ದಾರೆ.

ನಾ ನಾಯಕಿ ಕಾರ್ಯಕ್ರಮಕ್ಕೆ ಉಮಾಶ್ರೀ ಅವರು ನನ್ನನ್ನು ಬರುವಂತೆ ಪೋನ್ ಮಾಡಿ ಕರೆದಿದ್ದರು. ಈ ಹಿನ್ನೆಲೆಯಲ್ಲಿ ನಾನು ಕಾರ್ಯಕ್ರಮಕ್ಕೆ ಹೋಗಿದ್ದೆನು. ಆದರೆ, ಪ್ರಿಯಾಂಕ ಗಾಂಧಿಯವರಿಗೆ ಮುಸ್ಲಿಂ ಮಹಿಳೆಯರ ಬಗ್ಗೆ ನಾನು ಬರೆದಿರುವ ಪುಸ್ತಕ ಕೊಡಲು ನಾನು ವೇದಿಕೆ ಮೇಲೆ ಹೋದೆ. ಈ ವೇಳೆ ನಿಮ್ಮ ಹೆಸರು ಲಿಸ್ಟ್ ನಲ್ಲಿ ಇಲ್ಲ ಅನ್ನೋ ಕಾರಣಕ್ಕೆ ನನ್ನನ್ನು ವೇದಿಕೆ ಮೇಲೆ ಬಿಡಲಿಲ್ಲ. ಒಂದು ವಾರದ ಮುಂಚೆಯಷ್ಟೇ ಟಿಕೆಟ್ ನೀಡುವ ಫೈನಲ್ ಲಿಸ್ಟ್ ಸಿದ್ದಪಡಿಸಲು ನನ್ನನ್ನು ಸ್ವತಃ ಡಿ.ಕೆ.ಶಿವಕುಮಾರ್ ಅವರು ಕರೆದಿದ್ದರು. ಆದರೆ, ನಾನ ನಾಯಕಿ ಕಾರ್ಯಕ್ರಮದ ವೇಳೆ ನೀವು ಕಾಂಗ್ರೆಸ್‌ನಲ್ಲಿ ಇಲ್ಲ ಅಂತ ನನ್ನನ್ನು ವೇದಿಕೆ ಹತ್ತಲು ಬಿಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

'ಪ್ರಿಯಾಂಕಾ ಇರುವ ‘ನಾ ನಾಯಕಿ’ ಕಾರ್ಯಕ್ರಮಕ್ಕೆ ಪುರುಷರಿಗೆ ಪ್ರವೇಶವಿಲ್ಲ'

ಲಕ್ಷ್ಮೀ ಹೆಬ್ಬಾಳ್ಕರ್‌ ಕೆಳಗಿಳಿಸುವಂತೆ ಸೂಚಿಸಿದ್ದಾರೆ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಕೆಲವರು ವೇದಿಕೆಯಿಂದ ನನ್ನನ್ನು ಕೆಳಗೆ ಕಳುಹಿಸುವಂತೆ ಆದೇಶವನ್ನೂ ನೀಡಿದ್ದರು. ನಾನು ಪಕ್ಷದಲ್ಲಿ ಇಂದಿರಾಗಾಂಧಿಯವರು ಪ್ರಧಾನಿ ಆಗುವುದಕ್ಕೂ ಮುಂಚೆಯಿಂದಲೂ ದುಡಿದಿದ್ದೇನೆ. ನನ್ನಿಂದ ಯಾರಿಗಾದರೂ ತೊಂದರೆಯಾಗತ್ತಿರಲಿಲ್ಲ. ಕಾರ್ಯಕ್ರಮದಲ್ಲಿ ಮಹಿಳಾ ಇನ್ಸ್‌ಪೆಕ್ಟರ್‌ಗಳು ಕೈಹಿಡಿದುಕೊಂಡು ಹೊರಗಡೆ ಕಳಿಸಿದ್ದಾರೆ. ಅಷ್ಟು ವರ್ಷಗಳ ಕಾಲ ಪಕ್ಷದಲ್ಲಿ ದುಡಿದಿರುವ ನನಗೆ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. 

ಬಿಜೆಪಿಗೆ ಮತ ನೀಡುವಂತೆ ಪರೋಕ್ಷ ಸೂಚನೆ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒಂದು ಮಾತು ಹೇಳಿದ್ದಾರೆ. ಮುಸ್ಲಿಮರು ಯಾರಿಗೂ ನೋಟ್ ಬ್ಯಾಂಕ್ ಆಗಬೇಡಿ ಎಂದಿದ್ದಾರೆ.  ಬಿಜೆಪಿಯಲ್ಲಿ ಮುಸ್ಲಿಮರಿಗೂ ಅವಕಾಶ ಮಾಡಿಕೊಡಿ ಎಂದಿದ್ದಾರೆ. ಪ್ರಧಾನಿಗಳು ಮುಸ್ಲಿಂ ಮಹಿಳೆಯರಿಗೆ ತಲಾಕ್ ವಿಚಾರವಾಗಿ ಸಹಾಯ ಮಾಡಿದ್ದಾರೆ. ಬಿಜೆಪಿಗೆ ಈ ಬಾರಿ ಮತ ನೀಡಿ ಎಂದು ಪರೋಕ್ಷವಾಗಿ ತಿಳಿಸಿದ ನಫೀಸ್ ಫಜಲ್ ತಿಳಿಸಿದ್ದಾರೆ.

Video Top Stories