Asianet Suvarna News Asianet Suvarna News

ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಘೋಷಣೆ: ಕುಮಾರಸ್ವಾಮಿ ವಿರುದ್ಧ ಗರಂ ಆದ ಕಾರ್ಯಕರ್ತ!

ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಜವರಾಯೇಗೌಡ ಅವರ ಹೆಸರನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಘೋಷಣೆಯ ಬೆನ್ನಲ್ಲೇ ಜೆಡಿಎಸ್‌ ಕಾರ್ಯಕರ್ತನೊಬ್ಬ ಖುದ್ದು ಕುಮಾರಸ್ವಾಮಿ ವಿರುದ್ಧವೇ ಗರಂ ಆಗಿದ್ದಾನೆ. 

ಬೆಂಗಳೂರು (ಫೆ.07): ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಜವರಾಯೇಗೌಡ ಅವರ ಹೆಸರನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಘೋಷಣೆಯ ಬೆನ್ನಲ್ಲೇ ಜೆಡಿಎಸ್‌ ಕಾರ್ಯಕರ್ತನೊಬ್ಬ ಖುದ್ದು ಕುಮಾರಸ್ವಾಮಿ ವಿರುದ್ಧವೇ ಗರಂ ಆಗಿದ್ದಾನೆ. 

ದಾಸರಹಳ್ಳಿಯಲ್ಲಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕುಮಾರಸ್ವಾಮಿ, ಜವರಾಯೇಗೌಡ ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆ ಮಾಡಿದರು. ಈ ವೇಳೆ ಮಾಜಿ ಸಿಎಂ ವಿರುದ್ಧ ಗರಂ ಆದ ಕಾರ್ಯಕರ್ತನು, ನೀವು ಪಂಚರತ್ನ,ರಾಮನಗರ, ಮಂಡ್ಯ, ಹಾಸನ ಅಂತ ಹೋಗಿ. ನಾವು ಇಲ್ಲಿ ಬೆಳಿಗ್ಗೆ ಎದ್ದರೆ ಅವರ ಜತೆ ಹೊಡೆದಾಡಬೇಕು. ನಾನು ಲೀಡ್ ಕೊಡುಸ್ತೀನಿ ಎನ್ನುವ ಕಾರಣಕ್ಕೆ ನನ್ನ ಮತ್ತು ನನ್ನ ಹೆಂಡ್ತಿಯನ್ನ ಜೈಲಿಗೆ ಹಾಕಿದ್ದರು. ಯಾರಿಗೆ ಹೇಳಬೇಕು ನಮ್ಮ ಕಷ್ಟ..? ಜವರಾಯಿಗೌಡರು ಮೂರು ಬಾರಿ ಸೋತು ಆರ್ಥಿಕವಾಗಿ ದುರ್ಬಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ನಾವು ಗೆಲ್ಲದಿದ್ದರೆ ಊರು ಬಿಡಬೇಕಾಗುತ್ತದೆ. ಹೀಗಾಗಿ ನೀವೇ ಇಲ್ಲಿಗೆ ಬನ್ನಿ ಅಂತಿದ್ದೇವೆ ಎಂದು ಜೆಡಿಎಸ್‌ ಸಭೆಯಲ್ಲಿಯೇ ಕಾರ್ಯಕರ್ತ ಅಳಲು ತೋಡಿಕೊಂಡಿದ್ದಾನೆ. ಈ ಮೂಲಕ ಜವರಾಯೇಗೌಡರ ವಿರುದ್ಧ ಅಸಮಾಧಾನವನ್ನೂ ಹೊರ ಹಾಕಿದ್ದಾನೆ.

ಸಮಾಧಾನ ಮಾಡಿದ ಎಚ್‌ಡಿಕೆ: ಕಾರ್ಯಕರ್ತರ ಮಾತಿಗೆ ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ, ನಾನು ರಾಜ್ಯ ಸುತ್ತಿದ್ದೇನೆ. ನಿಮ್ಮ ಕ್ಷೇತ್ರದಲ್ಲಿ ಕೆಲಸ ಶುರು ಮಾಡಿ. ಪ್ರತಿ ಹಳ್ಳಿಗೂ ನಾನು ಬರ್ತಿನಿ. ಇಬ್ರಾಹಿಂ ಬರ್ತಾರೆ, ನಿಖಿಲ್ ಕುಮಾರಸ್ವಾಮಿ ಬಂದು ಪ್ರಚಾರದಲ್ಲಿ ಭಾಗವಹಿಸುತ್ತಾರೆ. ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆ ಆಗಬಾರದು. ನನ್ನ ಉಸ್ತುವಾರಿಯಲ್ಲಿ ಯಶವಂತಪುರ ಚುನಾವಣೆ ಮಾಡುತ್ತೇನೆ. ರಾಜ್ಯಕ್ಕೆ ಕುಮಾರಸ್ವಾಮಿ, ಯಶವಂತಪುರಕ್ಕೆ ಜವರಾಯಿಗೌಡ ಅಂತ ಚುನಾವಣೆ ಮಾಡೋಣ ಎಂದು ಹೇಳಿ ಸಮಾಧಾನ ಮಾಡಿದರು.