ಜನರನ್ನು ಆಕರ್ಷಿಸುತ್ತಿದೆ ವಿನೂತನ ಶಿಲೋದ್ಯಾನ..ಜಿಲ್ಲಾಡಳಿತದಿಂದ ವೀರಗಲ್ಲುಗಳ ರಕ್ಷಣಾ ಕಾರ್ಯ
ಆಧುನಿಕತೆ ಭರಾಟೆಯಲ್ಲಿ ಇತಿಹಾಸದ ಕುರುಹುಗಳು ಕಣ್ಮರೆಯಾಗುತ್ತಿವೆ. ಆದ್ರೆ ಕೋಲಾರ ಜಿಲ್ಲಾಡಳಿತ ಮಾತ್ರ ಶತ್ರುಗಳ ವಿರುದ್ಧ ಹೋರಾಡಿ ವೀರಮರಣವನ್ನಪ್ಪಿದವರನ್ನು ಜನರ ಮನಸ್ಸಲ್ಲಿ ಜೀವಂತವಾಗಿಡುವ ಕೆಲಸಕ್ಕೆ ಮುಂದಾಗಿದೆ. ಕೋಲಾರ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ವೀರಗಲ್ಲುಗಳ ಪಾರ್ಕ್ ಜನರ ಗಮನ ಸೆಳೆಯುತ್ತಿದೆ.
ಆಂಧ್ರ, ತಮಿಳುನಾಡಿಗೆ ಹೊಂದಿಕೊಂಡಿರುವ ಕೋಲಾರ ಜಿಲ್ಲೆಗೆ ಪ್ರಾಚೀನ ಇತಿಹಾಸವಿದೆ. ಕೋಲಾರ(Kolar) ಜಿಲ್ಲೆಯಲ್ಲಿ ಪಾಳೇಗಾರರು, ಸಾಮಂತ ರಾಜರುಗಳು ಆಳಿದ ಕುರುಹುಗಳಿವೆ. ವೀರ ಮರಣ ಹೊಂದಿದವರ ಸ್ಮರಣಾರ್ಥ ಸ್ಥಾಪಿಸಿದ ವೀರಗಲ್ಲುಗಳು(Veeragallus) ಚರಿತ್ರೆ ನೆನಪಿಸುತ್ತಿವೆ. ಇದು ಕೋಲಾರದ ಅರಾಬಿಕೊತ್ತನೂರು ಗ್ರಾಮ. ಬೃಹದಾಕಾರವಾದ ಬೆಟ್ಟಗಳ ಸಾಲಿಂದ ಆವೃತವಾಗಿರುವ ಈ ಗ್ರಾಮವನ್ನು ಹಿಂದೆ ಅನೇಕ ಪಾಳೇಗಾರರು ಆಳಿದ ಇತಿಹಾಸವಿದೆ. ಅಲ್ಲದೆ ಊರಿನ ಮೇಲೆ ಆಕ್ರಮಣಗೈದವರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದವರ ಸಾಹಸಗಾಥೆಗಳು ಕಲ್ಲು ಕಲ್ಲಿನಲ್ಲೂ ಅಜರಾಮರವಾಗಿ ಉಳಿದಿವೆ. ಈಗ ಎಲ್ಲೆಂದರಲ್ಲಿ ಅನಾಥವಾಗಿ ಬಿದ್ದಿದ್ದ ವೀರಗಲ್ಲುಗಳಿಗೆ ಗೌರವ ನೀಡುವ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಊರಿನಲ್ಲಿ ಶಿಲೋದ್ಯಾನ ನಿರ್ಮಿಸಿ, ವೀರಗಲ್ಲುಗಳನ್ನು ಸಂರಕ್ಷಿಸಲು ಟೊಂಕಕಟ್ಟಿ ನಿಂತಿದೆ. ಸದ್ಯ ಅರಾಬಿಕೊತ್ತನೂರು ಗ್ರಾಮದಲ್ಲಿ ನಿರ್ಮಿಸಿರುವ ಶಿಲೋದ್ಯಾನದಲ್ಲಿ ಹತ್ತಕ್ಕೂ ಹೆಚ್ಚು ವೀರಗಲ್ಲು ಮತ್ತು ಮಾಸ್ತಿಗಲ್ಲುಗಳಿವೆ. ಇವುಗಳ ಜೊತೆಗೆ ಹಿಂದಿನವರು ಬಳಸುತ್ತಿದ್ದ ಕಲ್ಲಿನ ಗಾಣ, ಚಿರತೆ ಸೆರೆ ಹಿಡಿಯಲು ಬಳಸುತ್ತಿದ್ದ ಬೋನನ್ನೂ ಇಡಲಾಗಿದೆ. ವೀರಗಲ್ಲುಗಳ ಶಿಲೋದ್ಯಾನದ ಮಾದರಿಯನ್ನು ಮೈಸೂರು ದಸರಾ ಮೆರವಣಿಗೆಯಲ್ಲೂ ಸ್ತಬ್ಧಚಿತ್ರವಾಗಿ ಪ್ರದರ್ಶಿಸಲಾಗಿದ್ದು, ಜನ ಮೆಚ್ಚುಗೆಪಡೆದುಕೊಂಡಿದೆ. ಇದರಿಂದ ಪ್ರೇರಣೆಗೊಂಡ ಕೋಲಾರ ಜಿಲ್ಲಾಡಳಿತ ಕೋಲಾರದಾದ್ಯಂತ ಇರುವ ವೀರಗಲ್ಲುಗಳನ್ನು ಸಂರಕ್ಷಣೆ ಮಾಡಲು ಪಣ ತೊಟ್ಟಿದೆ. ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ದೊರೆಯುವ ವೀರಗಲ್ಲುಗಳನ್ನು ಸಂಗ್ರಹಿಸಲು ಜಿಲ್ಲಾಡಳಿತ ಮುಂದಾಗಿದೆ.
ಇದನ್ನೂ ವೀಕ್ಷಿಸಿ: ಶಿಥಿಲಾವಸ್ಥೆ ತಲುಪಿದ ಚಿಕ್ಕಮಗಳೂರಿನ ಹಳೆಯ ಸೇತುವೆ..ಭಯದಿಂದಲೇ ವಾಹನ ಸವಾರರ ಸಂಚಾರ